Advertisement

ಕೋಟಿ ಖರ್ಚು ಮಾಡಿದರೂ ಗೆಲ್ಲುವ ವಿಶ್ವಾಸವಿಲ್ಲ

12:21 AM Jan 30, 2023 | Team Udayavani |

ಶಿವಾನಂದ ಕೌಜಲಗಿ, ಮಾಜಿ ಶಾಸಕ
ನನ್ನ ಚುನಾವಣೆಯಾಗಿದ್ದು ಕೇವಲ 30 ಸಾವಿರ ರೂ.ಗಳಲ್ಲಿ. ಈಗಿನ ಚುನಾವಣೆಗೆ 30 ಸಾವಿರದ ಮುಂದೆ ಮತ್ತೆ ನಾಲ್ಕು ಶೂನ್ಯ ಸೇರಿಸಿ. ಅಂದರೆ ಕನಿಷ್ಠ 30 ಕೋಟಿ. ಇಷ್ಟಾದರೂ ಚುನಾವಣೆ ಗೆಲ್ಲುವ ವಿಶ್ವಾಸ ಇಲ್ಲ. ಇದು ಈಗಿನ ಚುನಾವಣೆಯ ವಾಸ್ತವ ಸ್ಥಿತಿ.

Advertisement

ಈಗಿನ ಚುನಾವಣೆ ವ್ಯವಸ್ಥೆ ಬಗ್ಗೆ ಮಾತನಾಡಲು ಮನಸ್ಸಿಲ್ಲ. ಧೈರ್ಯವೂ ಸಾಲುತ್ತಿಲ್ಲ. ಒಳ್ಳೆಯ ಕೆಲಸ ಮಾಡಿದ್ದೇನೆ. ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆಂದು ಹೇಳುವ ಧೈರ್ಯ ಯಾರಿಗೂ ಇಲ್ಲ. ಅಂತಹ ವಿಶ್ವಾಸವೂ ಕಾಣುವುದಿಲ್ಲ. ಪ್ರಾಮಾಣಿಕತೆ, ನಿಷ್ಠೆ ಎಲ್ಲವೂ ಮರೆಯಾಗಿವೆ. ರಾಜಕಾರಣದ ಒಳಸುಳಿ ಯಾರಿಗೂ ಅರ್ಥವಾಗದ ರೀತಿಯಲ್ಲಿ ತಿರುಗುತ್ತಲೇ ಇದೆ.

ಮೂರು ಬಾರಿ ಶಾಸಕರಾಗಿ, ಸಚಿವರಾಗಿ ಒಮ್ಮೆ ಸಂಸದರಾಗಿ ಅಷ್ಟೇ ಏಕೆ ರಾಜಕೀಯ ಕ್ಷೇತ್ರದಲ್ಲಿ ಒಬ್ಬ ಹಿರಿಯಣ್ಣನಾಗಿ ಗುರುತಿಸಿ ಕೊಂಡಿರುವ ಬೆಳಗಾವಿ ಜಿಲ್ಲೆಯ ಬೈಲ ಹೊಂಗಲದ ಮಾಜಿ ಶಾಸಕ ಶಿವಾನಂದ ಕೌಜಲಗಿ ಅವರ ಸುದೀರ್ಘ‌ ರಾಜಕಾರಣದಲ್ಲಿನ ಅನುಭವದ ಮಾತಿದು.

70 ವಸಂತಗಳನ್ನು ದಾಟಿರುವ ಶಿವಾನಂದ ಕೌಜಲಗಿ ಈಗ ರಾಜಕಾರಣದಿಂದ ಬಹಳ ದೂರ ಸರಿದಿದ್ದಾರೆ. ಪುತ್ರ ಹಾಗೂ ಶಾಸಕ ಮಹಾಂತೇಶ ಕೌಜಲಗಿ ಅವರಿಗೆ ತಮ್ಮ ರಾಜಕೀಯದ ಹತ್ತಾರು ರೀತಿಯ ಅನುಭವದ ಧಾರೆ ಎರೆದಿದ್ದಾರೆ. ಆದರೆ ರಾಜಕೀಯದ ಸವಿಯ ಮಾತನ್ನು ಅವರು ಬಿಟ್ಟಿಲ್ಲ. ಮರೆತಿಲ್ಲ. ಸುದೀರ್ಘ‌ ರಾಜಕೀಯದ ಭಂಡಾರವೇ ಅವರಲ್ಲಿದೆ.

ನನ್ನ ತಂದೆ ರಾಜಕಾರಣದಲ್ಲಿದ್ದಾಗ ಅವರೂ ಸಹ ಮೂರು ಬಾರಿ ಶಾಸಕರಾಗಿದ್ದರು. ಅವರ ಕಾಲದಲ್ಲಿ ಚುನಾವಣೆ ಪ್ರಚಾರ, ಹಣ ಖರ್ಚು ಮಾಡುವುದು ಗೊತ್ತೇ ಇರಲಿಲ್ಲ. 1967ರ ಚುನಾವಣೆ ಸಂದರ್ಭದಲ್ಲಿ ತಮ್ಮ ತಂದೆ ಸ್ಪರ್ಧೆ ಮಾಡಿದಾಗ ಕಾಂಗ್ರೆಸ್‌ನಿಂದ ಇಡೀ ಜಿಲ್ಲೆಗೆ ಪ್ರಚಾರಕ್ಕಾಗಿ 5000 ರೂ. ಬಂದಿತ್ತು. ಅದರಲ್ಲಿ ತಂದೆಯ ಕ್ಷೇತ್ರಕ್ಕೆ ಪ್ರಚಾರಕ್ಕಾಗಿ ಬಂದಿದ್ದು 300 ರೂ. ಮಾತ್ರ. ಇದರಲ್ಲೇ ಅವರು ಚುನಾವಣೆ ಮಾಡಿದರು. ಗೆದ್ದು ಬಂದರು. ಆಗ ನಮ್ಮ ತಂದೆ ಚುನಾವಣೆಗೆ ಖರ್ಚು ಮಾಡಿದ್ದು ಕೇವಲ 2500 ರೂ. ಮಾತ್ರ. ಆಗೆಲ್ಲ ವ್ಯಕ್ತಿಯ ಮೇಲೆ ಚುನಾವಣೆ ನಡೆಯುತ್ತಿತ್ತು.

Advertisement

ಆಗಿನ ಚುನಾವಣೆಗೂ ಈಗಿನ ಚುನಾವಣೆಗೂ ಬಹಳ ವ್ಯತ್ಯಾಸ ಇದೆ. ಹೋಲಿಕೆಯೇ ಆಗಲ್ಲ. ಆಗ ವ್ಯಕ್ತಿ ನೋಡಿ ಮತ ಹಾಕುತ್ತಿದ್ದರು. ಮೆರಿಟ್‌ ಆಧಾರದ ಮೇಲೆ ಮತದಾರರು ಅಭ್ಯರ್ಥಿಯನ್ನು ಗುರುತಿಸುತ್ತಿದ್ದರು. ಹೈಕಮಾಂಡ್‌ ಸಹ ನಮ್ಮ ಸಾಮರ್ಥ್ಯ, ಜನರ ಜತೆಗಿನ ಸಂಬಂಧವನ್ನು ಅಳೆದು ತೂಗಿ ಟಿಕೆಟ್‌ ನೀಡುತ್ತಿತ್ತು. ಈಗ ಅಂತಹ ವಾತಾವರಣ ಉಳಿದಿಲ್ಲ. ಒಳ್ಳೆಯ ಕೆಲಸ ಮಾಡಿದ್ದರೂ ಗೆಲ್ಲುವ ವಿಶ್ವಾಸ ಅಭ್ಯರ್ಥಿಗಳಲ್ಲಿ ಕಾಣುತ್ತಿಲ್ಲ.

ಮುಂದೆ 1985ರಿಂದ ನಾನು ಜನತಾ ಪಕ್ಷದಿಂದ ಮೊದಲ ಬಾರಿಗೆ ಬೈಲಹೊಂಗಲ ಕ್ಷೇತ್ರದಿಂದ ಕಣಕ್ಕಿಳಿದೆ. ಕಾಂಗ್ರೆಸ್‌ ಅಭ್ಯರ್ಥಿ ಬಾಳೇಕುಂದರಗಿ ವಿರುದ್ಧ ಸುಮಾರು 31 ಸಾವಿರ ಮತಗಳ ಅಂತರದಿಂದ ಸುಲಭವಾಗಿ ಗೆದ್ದು ಬಂದೆ. 1989ರ ಚುನಾವಣೆ ನಿಜಕ್ಕೂ ನನಗೆ ಬಹಳ ಪ್ರತಿಷ್ಠೆಯಾಗಿತ್ತು. ಜನತಾ ದಳದಿಂದ ಸ್ಪರ್ಧೆ ಮಾಡಿದ್ದ ನನ್ನ ಎದುರು ಆಗ ಕಾಂಗ್ರೆಸ್‌ನಿಂದ ಘಟಾನುಘಟಿ ನಾಯಕ ಪಿ.ಬಿ.ಪಾಟೀಲ ಕಣದಲ್ಲಿದ್ದರು. ಎಲ್ಲೋ ಒಂದು ಕಡೆ ಹೆದರಿಕೆ ಇತ್ತು.

ಗೌಡರ ಮಾತಿಗೆ ಬೆಲೆ ಇತ್ತು: ಈ ಚುನಾವಣೆಯಲ್ಲಿ ನಾನು ಮಾಡಿದ ವೆಚ್ಚ ಕೇವಲ 30 ಸಾವಿರ ರೂ. ಮಾತ್ರ. ಪ್ರಚಾರ ಶೈಲಿ ಬಹಳ ವಿಶೇಷವಾಗಿತ್ತು. ಪ್ರಚಾರಕ್ಕೆ ಒಂದೇ ಗಾಡಿ ಇತ್ತು. ಈ ಗಾಡಿಯಲ್ಲಿ ಮೂವರು ಹಿರಿಯರು ಹೋಗುವುದು. ಪ್ರತಿಯೊಂದು ಊರಿನಲ್ಲಿ ಅಲ್ಲಿನ ಗೌಡರ ಜತೆ ಸಭೆ ಮಾಡಿ ಮನವಿ ಮಾಡಿಕೊಳ್ಳುವುದು ನಮ್ಮ ಪ್ರಚಾರದ ವಿಶೇಷ. ಆಗ ಊರಿನ ಗೌಡರ ಮಾತಿಗೆ ಬಹಳ ಬೆಲೆ ಇತ್ತು. ಗೌಡರು ಹೇಳಿದರೆ ಅದೇ ಅಂತಿಮ. ಪ್ರಚಾರಕ್ಕೆ ಹೋದ ಸಮಯದಲ್ಲಿ ನಾವು ಚಹಾ ಮತ್ತು ಚುರುಮುರಿಯಲ್ಲೇ ಕಾರ್ಯಕ್ರಮ ಮುಗಿಸುತ್ತಿದ್ದೆವು. ಮತದಾರರೂ ಸಹ ಹೆಚ್ಚಿನದೇನನ್ನೂ ಅಪೇಕ್ಷಿಸುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಯಾರೂ ಗೌಡರ ಮಾತು ಮೀರುತ್ತಿರಲಿಲ್ಲ.

ಚುನಾವಣೆ ಸಮಯದಲ್ಲಿ ದೊಡ್ಡ ಮಟ್ಟದಲ್ಲಿ ಕಾರ್ಯಕರ್ತರ ಪಡೆ ಇರಲೇ ಇಲ್ಲ. ಅಂತಹ ಪರಿಸ್ಥಿತಿಯೂ ಇರಲಿಲ್ಲ. ಪ್ರತಿಯೊಂದು ಊರಿನಲ್ಲಿ ನಮ್ಮ ಅಭಿಮಾನಿಗಳೇ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದರು. ನಮ್ಮ ಪರ ಕೆಲಸ ಮಾಡಿದವರು ಯಾವತ್ತೂ ಏನನ್ನೂ ಅಪೇಕ್ಷೆ ಪಟ್ಟು ಕೇಳಲಿಲ್ಲ. ನಾವು ಅವರ ಕೆಲಸ ಮಾಡಿದ್ದರಿಂದ ಅವರೂ ಸಹ ನಮ್ಮ ಬಗ್ಗೆ ಗೌರವ ಭಾವನೆ ಬೆಳೆಸಿಕೊಂಡಿದ್ದರು.

ಇನ್ನು ಮತದಾರರು ತಮ್ಮ ಊರಿನ ಹಿರಿಯರ ಮಾತು ಮೀರುತ್ತಿರಲಿಲ್ಲ. ಒಂದು ಹಳ್ಳಿಯಲ್ಲಿ ನಾವು ಸಭೆ ಮಾಡಿದರೆ 100 ಜನರನ್ನೂ ಮೀರುತ್ತಿರಲಿಲ್ಲ. ದಿನಕ್ಕೆ ಸುಮಾರು 10 ಹಳ್ಳಿಗಳ ಸುತ್ತಾಟ. ಈಗ ಹಾಗಿಲ್ಲ. ಕಾರ್ಯಕರ್ತರಿಗೆ, ಮತದಾರರಿಗೆ ಎಲ್ಲ ವ್ಯವಸ್ಥೆ ಮಾಡಬೇಕು. ಸಣ್ಣಪುಟ್ಟ ಸಭೆಗಳಿಂದ ಆಗುವ ಪರಿಣಾಮ ಬಹಳ ಕಡಿಮೆ. ಚುನಾವಣೆಯಲ್ಲಿ ಹಣದ ಹೊಳೆಯೇ ಹರಿಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಯಾರಿಗೂ ಏನೂ ಮಾಡಲು ಆಗುತ್ತಿಲ್ಲ. ಮುಖ್ಯಮಂತ್ರಿ ಜೆ.ಎಚ್‌. ಪಟೇಲ್‌ ಆಡಳಿತದ ಅನಂತರ ಎಲ್ಲವೂ ಬದಲಾಯಿತು. ರಾಜಕೀಯಕ್ಕೆ ಹೊಸ ಬಣ್ಣ ಅಂಟಿಕೊಂಡಿತು. ನಿಷ್ಠೆ ಮತ್ತು ಪ್ರಾಮಾಣಿಕತೆ ಜಾಗದಲ್ಲಿ ಹಣದ ಆಟ ಆರಂಭವಾಯಿತು ಎಂಬುದು ಶಿವಾನಂದ ಕೌಜಲಗಿ ಅಭಿಪ್ರಾಯ.

Advertisement

Udayavani is now on Telegram. Click here to join our channel and stay updated with the latest news.

Next