Advertisement

ಚಿತ್ತ ಚಂಚಲತೆಯನ್ನು ಧಮನಿಸಲು ಯೋಗದಿಂದ ಸಹಾಯ: ಡಾ|ಲಕ್ಷ್ಮೀನಾರಾಯಣ ಶಣೈ

11:07 PM Jul 01, 2021 | Team Udayavani |

ಫ್ರಾಂಕ್ರ್ಟ್ :ರೈನ್‌ಮೈನ್‌ ಕನ್ನಡ ಸಂಘದಿಂದ ಜನವರಿಯಿಂದ ಪ್ರತೀ ವಾರಾಂತ್ಯದಲ್ಲಿ ಭಾಗೀರಥಿ ಕನ್ನಡತಿ ಅವರ ಮಾರ್ಗದರ್ಶನದಲ್ಲಿ ಯೋಗ ತರಗತಿಗಳನ್ನು ನಡೆಸುತ್ತಿದ್ದು, ಜೂ. 20ರಂದು ಭಾನುವಾರ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಾಯಿತು.

Advertisement

ಆರಂಭದಲ್ಲಿ  ಯೋಗ ತರಗತಿಯ ಬಗ್ಗೆ ಹಲವಾರು ಮಂದಿ ತಮ್ಮ ಅನುಭವಗಳನ್ನು ಹಂಚಿಕೊಂಡಿರುವ ವಿಡಿಯೋ ತುಣುಕುಗಳನ್ನು ಪ್ರಸಾರ ಮಾಡಲಾಯಿತು.

ಬಳಿಕ ಕಾರ್ಯಕ್ರಮದ ಮುಖ್ಯ ಅಭ್ಯಾಗತರಾಗಿ ಉಪಸ್ಥಿತರಿದ್ದ ಮೈಸೂರಿನ ಸರಕಾರಿ ಆಯುರ್ವೇದ ರಿಸರ್ಚ್‌ ಸೆಂಟರ್‌ನ ಸಹಾಯಕ ನಿರ್ದೇಶಕರಾದ ಡಾ| ಲಕ್ಷ್ಮೀನಾರಾಯಣ ಶಣೈ ಅವರು ಮಾತನಾಡಿ, “ಯೋಗಃ ಕರ್ಮಸು ಕೌಶಲಂ’ ಎಂದರೆ ವೃತ್ತಿ ಜೀವನದಲ್ಲಿ ಯಶಸ್ಸು ಸಾಧಿಸಲು ಯೋಗ ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ತಿಳಿಸಿದರು.

ನಾವು ಕರ್ಮವನ್ನಷ್ಟೇ ಮಾಡಬೇಕು. ಅದರ ಫ‌ಲದ ಬಗ್ಗೆ ಚಿಂತಿಸಬಾರದು. ಕಡೆಗೆ ನಮಗೆ ಉತ್ತಮ ಫ‌ಲವೇ ಸಿಗುತ್ತದೆ. “ಮರ್ಕಟಸ್ಯ ಸುರಾಪಾನಂ’ ಎಂಬ ಶ್ಲೋಕದಂತೆ ನಮ್ಮ ಮನಸ್ಸು ಸದಾ ಚಂಚಲವಾಗಿರುತ್ತದೆ. ನಮ್ಮ ಮನಸ್ಸು ನಮ್ಮ ಅಧೀನದಲ್ಲಿರಬೇಕು, ಚಿತ್ತದ ಚಂಚಲತೆಯನ್ನು ಧಮನಗೊಳಿಸಬೇಕೆಂದರೆ ಅದಕ್ಕೆ ಯೋಗ ಸಹಾಯ ಮಾಡುತ್ತದೆ ಎಂದು ವಿವರಿಸಿದರು.

“ಯೋಗಃ ಚಿತ್ತವೃತ್ತಿ ನಿರೋಧಃ’ ಯೋಗ ಚಿತ್ತವೃತ್ತಿಗಳನ್ನು ತೆಗೆದು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಕೌಶಲಕ್ಕೆ ಯೋಗವೇ ರಹದಾರಿ. ಜ್ಞಾನವೇ ಶಕ್ತಿ. ಹಾಗಾಗಿ ಕ್ರಿಯಾ ಯೋಗದ ಮೂಲಕ ಏಕಾಗ್ರತೆ, ಜ್ಞಾನ, ಕೌಶಲಗಳನ್ನು ಹೆಚ್ಚಿಸಿ ಧನಾತ್ಮಕ ಕಾರ್ಯಗಳ ಮೂಲಕ ನಾವು ಯಶಸ್ಸನ್ನು ಪಡೆಯಬಹುದು. ಯೋಗದಿಂದ ಉತ್ತಮ ಸಮಾಜ, ಸದೃಢ ದೇಶದ ನಿರ್ಮಾಣ ಸಾಧ್ಯ. ಅದಲ್ಲದೆ ವಿದ್ಯಾರ್ಥಿಗಳಿಗೆ ಏಕಾಗ್ರತೆ, ವೃತ್ತಿಪರರಿಗೆ ಕೌಶಲತೆ, ಸ್ತ್ರೀ, ವೃದ್ಧರಿಗೆ ಆರೋಗ್ಯ ವೃದ್ಧಿಸಿ ಧನಾತ್ಮಕ ಲಾಭ ದೊರಕಿಸುತ್ತದೆ. ಯೋಗವನ್ನು ಕ್ರಮಬದ್ಧವಾಗಿ ಮಾಡುವುದರಿಂದ ಕೊರೊನಾದಿಂದ ಗುಣಮುಖರಾಗಲು ಸಾಧ್ಯ. ಹಾಗಾಗಿ ಆರೋಗ್ಯಕರ ಬದುಕು ಯೋಗದಲ್ಲಿ ಹುಡುಕು ಎಂಬುದರ ಬಗ್ಗೆ ಅವರು ತಿಳಿಸಿಕೊಟ್ಟರು.

Advertisement

ಸಾಗರದಾಚೆ ಕನ್ನಡದ ಕಂಪನ್ನು ಹರಡುತ್ತಿರುವ ಜರ್ಮನಿಯ ರೈನ್‌ ಮೈನ್‌ ಕನ್ನಡ ಸಂಘ ಹಾಗೂ ಎಲ್ಲ  ಕನ್ನಡಿಗರಿಗೂ ಮೆಚ್ಚುಗೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ವಿಶ್ವನಾಥ ಬಾಳೇಕಾಯಿ ಅವರು ಎಲ್ಲರಿಗೂ ವಂದನೆಗಳನ್ನು ತಿಳಿಸಿದರು.

ಅನಂತರ ಯೋಗ ಕಲಿಸುವಲ್ಲಿ 20 ವರ್ಷಕ್ಕಿಂತ ಹೆಚ್ಚಿನ ಅನುಭವವನ್ನು ಹೊಂದಿರುವ ಯೋಗಗುರು ಡಾ| ಭಾಗೀರಥಿ ಕನ್ನಡತಿ ಅವರು ಮಾತನಾಡಿ, ಯೋಗ ಒಂದು ಅನುಭವ ಅದನ್ನು ನಾವು ಅನುಭವಿಸಬೇಕು.

ಜೀವನದಲ್ಲಿ ಎಲ್ಲರಿಗೂ ಮುಂದೆ ಗುರಿ ಹಿಂದೆ ಗುರು ಬಹಳ ಮುಖ್ಯ. ನಾವು ಯಾವುದೇ ನಿರೀಕ್ಷೆಗಳಿಲ್ಲದೇ ನಿರಂತರ ಯೋಗ ಸಾಧನೆ ಮಾಡುತ್ತಾ ಹೋದಾಗ ನಮಗೆ ಸಂತೋಷ ಸಿಗುತ್ತದೆ. ಇದು ನಮ್ಮ 7ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಿನ ದೇಶಗಳಿಗೆ ಯೋಗ ತಲುಪಿದೆ ಎಂದು ತಿಳಿಸಿ, ಅಂತಿಮವಾಗಿ ಸೂರ್ಯ ನಮಸ್ಕಾರವನ್ನು ಮಾಡಿಸುವುದರ ಮೂಲಕ ಕಾರ್ಯಕ್ರಮ ಮುಕ್ತಾಯವಾಯಿತು.

ವರದಿಶೋಭಾ ಚೌಹಾನ್‌,  ಫ್ರಾಂಕ್ರ್ಟ್

Advertisement

Udayavani is now on Telegram. Click here to join our channel and stay updated with the latest news.

Next