Advertisement

ಸ್ನೇಹಿತನನ್ನು ರಕ್ಷಿಸಿದ  ಬುದ್ಧಿವಂತ ಮೊಲ

11:55 PM Jun 19, 2021 | Team Udayavani |

ಒಂದು ಕಾಡಿಗೆ ಹೊಸದಾಗಿ ಬಣ್ಣದ ಜಿಂಕೆಯೊಂದು ವಲಸೆ ಬಂದಿತ್ತು. ಭೀಕರ ದುರಂತದಲ್ಲಿ ತನ್ನ ತಂದೆ, ತಾಯಿ, ಬಂಧುಬಳಗವನ್ನೆಲ್ಲ ಕಳೆದುಕೊಂಡಿದ್ದ ಜಿಂಕೆ ಹೊಸ ಕಾಡಿನಲ್ಲಿ ಸಾಕಷ್ಟು ಅಲೆದಾಡಿತು. ಕೊನೆಗೆ ಒಂದು ಹುಲ್ಲುಗಾವಲು ಪ್ರದೇಶವನ್ನು ತನ್ನ ವಾಸಕ್ಕೆಂದು ಆಯ್ದುಕೊಂಡಿತು. ಎಂದು ಕಂಡಿರದ ಬಣ್ಣದ ಜಿಂಕೆಯನ್ನು ನೋಡಿದ ಹುಲ್ಲುಗಾವಲು ಪ್ರದೇಶದಲ್ಲಿ ವಾಸ ಮಾಡುತ್ತಿದ್ದ ಇತರ ಪ್ರಾಣಿಗಳು ಅದರ ಸ್ನೇಹ ಮಾಡಲು ತಾಮುಂದು, ನಾಮುಂದು ಎಂದು ಬರತೊಡಗಿದವು. ಆದರೆ ಹೊಸ ಪ್ರದೇಶದಲ್ಲಿ ಯಾರನ್ನೂ ನಂಬುವ ಹಾಗಿಲ್ಲ ಎಂದುಕೊಂಡ ಜಿಂಕೆ ತನ್ನ ಮನೆಯ ನಿರ್ಮಾಣ ಮಾಡಿತು. ಜಿಂಕೆಯ ನೋವನ್ನು ಅರಿತು ಅದಕ್ಕೆ ಸಾಥ್‌ ನೀಡಿದ ಮೊಲ ಅದರ ಅತ್ಯುತ್ತಮ ಸ್ನೇಹಿತನಾಯಿತು.

Advertisement

ಜಿಂಕೆ ಮತ್ತು ಮೊಲ ಒಟ್ಟಿಗೆ ಆಹಾರ ಸಂಗ್ರಹಿಸುತ್ತಿದ್ದವು. ಇನ್ನೇನು ಮಳೆಗಾಲ ಸಮೀಪವಿದ್ದರಿಂದ ಜಿಂಕೆಯ ಮನೆಯಲ್ಲಿ ಮೊಲವೂ ತನಗೆ ಬೇಕಾದ ಆಹಾರಗಳನ್ನು ದಾಸ್ತಾನು ಇರಿಸಿತು. ಹೀಗಾಗಿ ಮೊಲ ಮತ್ತು ಜಿಂಕೆ ಒಟ್ಟಿಗೆ ವಾಸಿಸ ತೊಡಗಿದರು. ಕೆಲವು ದಿನಗಳ ಬಳಿಕ ಮೊಲಕ್ಕೆ ದೂರದ ಸ್ನೇಹಿತನಿಂದ ಪತ್ರ ಬಂದಿತು. ತನ್ನ ಆರೋಗ್ಯ ಸರಿಯಿಲ್ಲದ ಕಾರಣ ಬೇಗ ಬಂದು ಕಾಣು ಎಂದಿದ್ದರಿಂದ ಮೊಲ ಅವಸರವಸರವಾಗಿ ಹೊರಟು ನಿಂತಿತು. ಸ್ನೇಹಿತನಿಗೆ ಬೇಕಾದ ಹಣ್ಣು, ತರಕಾರಿಗಳ ಜತೆಗೆ ಜಿಂಕೆ ಕೊಟ್ಟ ಒಂದಷ್ಟು ವಸ್ತುಗಳನ್ನು ತನ್ನೊಂದಿಗೆ ಒಯ್ದಿತು. ಸ್ನೇಹಿತ ಆರೋಗ್ಯ ತುಂಬಾ ಹದಗೆಟ್ಟಿದ್ದರಿಂದ ಕೆಲಕಾಲ ಮೊಲ ಅಲ್ಲೇ ನಿಂತಿತು. ವಾರ ಕಳೆಯುವಷ್ಟರಲ್ಲಿ ಮಳೆಗಾಲ ಆರಂಭವಾಯಿತು. ಸ್ನೇಹಿತನೂ ಹುಷಾರಾಗಿದ್ದರಿಂದ ಮೊಲ ತಾನು ಜಿಂಕೆಯ ಬಳಿ ಹೋಗಬೇಕು ಎಂದು ಸ್ನೇಹಿತನಿಗೆ ಹೇಳಿ ಹೊರಟಿತು. ದಾರಿಯಲ್ಲಿ  ಹುಲಿಯೊಂದು ಎದುರಾಯಿತು. ಮೊಲ ಮತ್ತು ಜಿಂಕೆಯ ಸ್ನೇಹದ ಬಗ್ಗೆ ಕೇಳಿದ್ದ ಹುಲಿಗೆ ಜಿಂಕೆಯನ್ನು ತಿನ್ನುವ ಆಸೆಯಾಗಿತ್ತು. ಅದಕ್ಕೆ ಮೊಲವನ್ನು ಹೇಗಾದರೂ ಮಾಡಿ ತನ್ನ ಬಲೆಗೆ ಬೀಳಿಸಬೇಕು ಎಂದುಕೊಂಡಿತು.

ಮೊಲದ ಸಮೀಪ ಬಂದ ಹುಲಿ, ನೀನು ಇಷ್ಟು ದಿನ ಎಲ್ಲಿ ಹೋಗಿದ್ದೆ. ಅಲ್ಲಿ ಜಿಂಕೆ ನಿನ್ನ ಆಹಾರವನ್ನೆಲ್ಲ ತಿಂದು ಖಾಲಿ ಮಾಡಿದೆ ಎಂದಿತು. ಮೊಲಕ್ಕೆ ಹುಲಿಯ ಮಾತನ್ನು ನಂಬಲಾಗಲಿಲ್ಲ. ಆದರೂ ಮನೆಗೆ ಹೋದ ಮೇಲೆ ಖಾತ್ರಿ ಪಡಿಸಿಕೊಂಡರಾಯಿತು ಎಂದುಕೊಂಡು ಸುಮ್ಮನೆ ಹೆಜ್ಜೆ ಹಾಕಿತು. ಆಗ ಹುಲಿ ತನ್ನ ಮಾತು ಮುಂದುವರಿಸುತ್ತ ಜಿಂಕೆಯನ್ನು ನಂಬ ಬೇಡ. ಈಗಾಗಲೇ ಅದು ತನ್ನ ಊರಿನಲ್ಲಿ ಅಪ್ಪ, ಅಮ್ಮ, ಬಂಧುಬಳಗವನ್ನೆಲ್ಲ ಅಲ್ಲಿಯ ರಾಜ ಸಿಂಹಕ್ಕೆ ಬಲಿಕೊಟ್ಟಿದೆ. ಆ ಸಿಂಹಕ್ಕೆ ಈ ಕಾಡಿನ ಪ್ರಾಣಿಗಳನ್ನು ತಿನ್ನುವ ಆಸೆಯಾಗಿದೆ. ಅದಕ್ಕಾಗಿ ಜಿಂಕೆಯನ್ನು ಇಲ್ಲಿಗೆ ಕಳುಹಿಸಿದೆ. ನೀನು ಈಗಾಗಲೇ ಆ ಸಿಂಹಕ್ಕೆ ಆಹಾರವಾಗಬೇಕಿತ್ತು. ಆದರೆ ಸ್ನೇಹಿತನ ಬಳಿಗೆ ಹೋಗಿದ್ದರಿಂದ ಬಚಾವ್‌ ಆದೆ. ನಿಮ್ಮ ಪಕ್ಕದ ಮನೆಯಲ್ಲಿದ್ದ ದನವೊಂದು ನಾಪತ್ತೆಯಾಗಿದೆ. ಎಲ್ಲರೂ ಅದು ಜಿಂಕೆಯೊಂದಿಗೆ ಹೋಗುತ್ತಿರುವುದನ್ನು ನೋಡಿದ್ದರು ಎಂದಿತು.

ಮೊಲ ಏನೂ ಉತ್ತರಿಸಲಿಲ್ಲ. ಜಿಂಕೆಯ ಮನೆ ಹತ್ತಿರವಾಗುತ್ತಿದ್ದಂತೆ ಹುಲಿ ಹೊರಟುಹೋಯಿತು. ಮನೆಗೆ ಬಂದ ಮೊಲಕ್ಕೆ ತನ್ನ ಆಹಾರದಲ್ಲಿ ಸ್ವಲ್ಪ ಕಡಿಮೆಯಾಗಿರುವುದು ಕಂಡಿತು. ಹೊರಗೆ ಹೋಗಿದ್ದ ಜಿಂಕೆ ಮನೆಗೆ ಬಂದಾಗ ಮೊಲ ಇರುವುದು ಕಂಡು ತುಂಬಾ ಖುಷಿಯಾಯಿತು. ಅದು ನೀನಲ್ಲದೆ ನನಗೆ ತುಂಬಾ ಬೇಸರವಾಗಿತ್ತು. ಬಹಳ ದಿನಗಳು ಎಲ್ಲೂ ಹೋಗಲಿಲ್ಲ. ಆದರೆ ಮೊನ್ನೆ ಪಕ್ಕದ ಮನೆಯಲ್ಲಿದ್ದ ದನ ಜೀಜಾ ನನ್ನ ಕರೆದಿದ್ದಳು. ಅವಳಿಗೆ ಮಕ್ಕಳು ತುಂಬಾ ತೊಂದರೆ ಕೊಡುತ್ತಿದ್ದಾರಂತೆ. ಅದಕ್ಕಾಗಿ ಮನೆ ಬಿಟ್ಟು ಹೋಗುವೆ ಎನ್ನುತ್ತಿದ್ದಳು. ನಾನು ಅವಳನ್ನು ಪಕ್ಕದೂರಿನ ಕಾಡಿಗೆ ಕಳುಹಿಸಿದೆ‌. ಅಲ್ಲಿ ನನ್ನ ಸ್ನೇಹಿತೆ ಲಕ್ಷಿ$¾à ಇದ್ದಾಳೆ. ಅವಳ ಬಳಿಗೆ ಹೋಗು ಎಂದೆ. ಹಾಗೆ ಅವಳು ಹೊರಟು ಹೋದಳು ಎಂದಿತು. ಆದರೆ ಮೊಲಕ್ಕೆ ಅನುಮಾನ. ಸರಿ ನಾವು ಪಕ್ಕದೂರಿಗೆ ಹೋಗಿ ಬರೋಣವೇ ಎಂದಿತು. ಆಗ ಜಿಂಕೆ ಇವತ್ತು ಬೇಡ ಎರಡು ದಿನ ಬಿಟ್ಟು ಹೋಗೋಣ ಎಂದಿತು. ಈಗ ಮೊಲಕ್ಕೆ ಮತ್ತಷ್ಟು ಅನುಮಾನ ಹೆಚ್ಚಾಗತೊಡಗಿತು.

ಕೂಡಲೇ ಮೊಲ ಹುಲಿಯ ಬಳಿ ಬಂದು ವಿಷಯ ತಿಳಿಸಿತು. ಆಗ ಹುಲಿ ಮೊಲ ತನ್ನ ಬಲೆಗೆ ಬಿತ್ತು ಎಂದುಕೊಂಡಿತು. ಅದು ನೀನು ಜಿಂಕೆಯನ್ನು ಕರೆದುಕೊಂಡು ಬೆಟ್ಟದ ಮೇಲಿನ ಗುಹೆಯ ಬಳಿ ಬಾ. ನಾವಿಬ್ಬರೂ ಸೇರಿ ಅದನ್ನು ಕೊಂದು ಬಿಡೋಣ ಎಂದಿತು. ಮೊಲ ಆಯ್ತು ಎಂದು ಹೇಳಿ ಹೊರಟಿತು. ಮನೆಗೆ ಬಂದಾಗ ತನ್ನ ಆಹಾರದಲ್ಲಿ ಮತ್ತಷ್ಟು ಕಾಣೆಯಾಗಿರುವುದು ಗಮನಕ್ಕೆ ಬಂತು. ಆದರೂ ಅದು ಜಿಂಕೆಯನ್ನು ಪ್ರಶ್ನಿಸಲು ಹೋಗಲಿಲ್ಲ.

Advertisement

ನಾನು ಬಹಳ ದಿನವಾಗಿದೆ ಅಕ್ಕಪಕ್ಕದ ಮನೆಯವರನ್ನು ಮಾತನಾಡಿಸಿಕೊಂಡು ಬರುವೆ ಎಂದು ಹೇಳಿ ಮೊಲ ಹೊರಟಿತು. ಜಿಂಕೆ ಏನೂ ಹೇಳಲಿಲ್ಲ. ಮೊದಲು ಇಲಿರಾಯನ ಮನೆಗೆ, ಅನಂತರ ಗೂಳಿಯ ಮನೆಗೆ, ಬಳಿಕ ಒಂಟಿಸಲಗದ ಮನೆಗೆ ಹೋಗಿ ಕ್ಷೇಮ ಸಮಾಚಾರ ವಿಚಾರಿಸಿಕೊಂಡು ಬಂತು. ಮರುದಿನ ಪಕ್ಕದೂರಿನ ಕಾಡಿಗೆ ಹೊರಡಲು ಮೊಲ ಮತ್ತು ಜಿಂಕೆ ಸಿದ್ಧವಾಯಿತು. ಮೊಲ ಹೇಳಿತು ಬೆಟ್ಟದ ಮೇಲಿನಿಂದ ಪಕ್ಕದ ಕಾಡಿಗೆ ದಾರಿ ಹತ್ತಿರವಿದೆ. ನಾನು ಬಹಳಷ್ಟು ಬಾರಿ ಹೋಗಿದ್ದೇನೆ. ಅಲ್ಲಿಂದಲೇ ಹೋಗೋಣ ಎಂದಿತು. ಸರಿ ಎಂದು ಹೇಳಿ ಜಿಂಕೆ ಮೊಲವನ್ನು ಹಿಂಬಾಲಿಸಿತು. ಬೆಟ್ಟದ ಮೇಲೆ ಬಂದಾಗ ಹುಲಿ ಒಂದು ಪೊದೆಯಲ್ಲಿ ಅವಿತುಕೊಂಡು ಜಿಂಕೆಯ ಮೇಲೆ ಎರಗಲು ಸಿದ್ಧವಾಗಿತ್ತು. ಅಷ್ಟರಲ್ಲಿ ಅಲ್ಲಿಗೆ ಇಲಿ ಬಂದು ನೀವು ದಾರಿ ತಪ್ಪಿದ್ದೀರಿ ಎಂದಿತು. ಆಗ ಮೊಲ ಸರಿ ಹಾಗಾದರೆ ನಮಗೆ ಸರಿಯಾದ ದಾರಿ ತೋರಿಸಿ ಎಂದಿತು. ಆಗ ಅದು ಪಕ್ಕದಲ್ಲಿದ್ದ ಒಂದು ಹೊಂಡದ ಬಳಿ ಕರೆದುಕೊಂಡು ಹೋಗಿ ಜಿಂಕೆ ಮತ್ತು ಮೊಲವನ್ನು ಅದಕ್ಕೆ ದೂಡಿತು. ಜಿಂಕೆಗೆ ಏನಾಗುತ್ತಿದೆ ಎಂದು ಅರ್ಥವಾಗುವ ಮೊದಲೇ ಹುಲಿರಾಯ ಅಲ್ಲಿ ಕಾಣಿಸಿಕೊಂಡು ಜಿಂಕೆಯನ್ನು ತಿನ್ನುವ ಬಗ್ಗೆ ಮಾತನಾಡ ತೊಡಗಿತು. ಆಗ ಮೊಲ ಮೊದಲು ನನ್ನ ಇಲ್ಲಿಂದ ಮೇಲೆತ್ತು ಎಂದಿತು.

ಆಗ ಹುಲಿ, ಜಿಂಕೆಯೊಂದಿಗೆ ನಿನ್ನನ್ನು ಸೇರಿಸಿ ತಿನ್ನುವೆ. ಅಷ್ಟು ಸುಲಭವಾಗಿ ಬಿಟ್ಟು ಬಿಡುತ್ತೇನೆ ಎಂದುಕೊಂಡೆಯಾ? ಎರಡು ದಿನ ನನಗೆ ಭರ್ಜರಿ ಭೋಜನ ಎಂದಿತು. ಹುಲಿಯ ಕುತಂತ್ರ ಬುದ್ಧಿಯ ಅರಿವಾದ ಮೊಲ, ನಮ್ಮನ್ನು ತಿನ್ನಬೇಕಾದರೆ ಮೊದಲು ನೀನು ಇಲ್ಲಿಗೆ ಬರಬೇಕಲ್ಲವೇ ಎಂದಿತು. ಈಗೋ ನಾನು ಬಂದೆ ಎಂದು ಹೇಳಿ ಹುಲಿ ಹೊಂಡಕ್ಕೆ ಹಾರಿತು. ಅಷ್ಟರಲ್ಲಿ ಜಿಂಕೆಯನ್ನು ಆನೆಯೊಂದು ಮೇಲೆತ್ತಿತು. ಮೊಲ ಸಣ್ಣ ಬಿಲದಲ್ಲಿ ತೂರಿಕೊಂಡು ಮೇಲೆ ಬಂದಿತು. ಮೇಲೆ ಬಂದ ಮೊಲ, ನನಗೆ ಮೊದಲೇ ನಿನ್ನ ಮೇಲೆ ಅನುಮಾನವಿತ್ತು. ಆದರೆ ಅದನ್ನು ಸ್ಪಷ್ಟಪಡಿಸಿಕೊಳ್ಳಬೇಕಿತ್ತು. ಅದಕ್ಕಾಗಿ ನಾನು ಇಲಿಯ ಮನೆಗೆ ಹೋದೆ. ಅಲ್ಲಿ ನನ್ನ ಆಹಾರಗಳು ಬಿದ್ದುಕೊಂಡಿದ್ದನ್ನು ನೋಡಿದೆ. ಆಗ ತಿಳಿಯಿತು ಇಲಿಯೇ ನನ್ನ ಆಹಾರಗಳನ್ನು ಕದ್ದುಕೊಂಡು ಹೋಗಿದೆ ಎಂದು. ಆದರೆ ಅದರ ಸಹಾಯ ಬೇಕಿದ್ದರಿಂದ ನಾನು ಅವರನ್ನು ಕ್ಷಮಿಸಿ ಇಲ್ಲಿ ಹೊಂಡ ತೋಡಿ ನಾನು ಹೊರ ಬರಲು ಬಿಲವನ್ನು ಮಾಡುವಂತೆ ಹೇಳಿದ್ದೆ.

ಅಂತೆಯೇ ಅದು ಮಾಡಿತ್ತು. ಬಳಿಕ ಒಂಟಿಸಲಗ, ಗೂಳಿಯ ಸಹಾಯವೂ ಬೇಕಾಗುತ್ತದೆ ಎಂದುಕೊಂಡು ಅವರ ಬಳಿಗೂ ಹೋದೆ. ಅದರ ಪರಿಣಾಮ ಇವತ್ತು ಜಿಂಕೆಯನ್ನು ರಕ್ಷಿಸಲು ಸಾಧ್ಯವಾಯಿತು. ಪಕ್ಕದ ಕಾಡಿನಲ್ಲಿ ಜೀಜಾ ಚೆನ್ನಾಗಿದ್ದಾಳೆ ಎಂಬುದನ್ನು ನಾನು ಪಾರಿವಾಳದಿಂದ ಕೇಳಿ ತಿಳಿದುಕೊಂಡೆ. ಜಿಂಕೆ ಮತ್ತು ನನ್ನ ನಡುವೆ ಅನುಮಾನದ ಬೀಜ ಬಿತ್ತುವಂತೆ ಮಾಡಿದ ನಿನಗೆ ತಕ್ಕ ಶಿಕ್ಷೆ ಕೊಡುತ್ತೇನೆ ಎಂದು ಹೇಳಿ ಮೊಲ ಆನೆ ಮತ್ತು ಗೂಳಿಗೆ ಹೊಂಡವನ್ನು ಮುಚ್ಚುವಂತೆ ಹೇಳಿತು. ಒಂದು ದೊಡ್ಡ ಕಲ್ಲಿನಿಂದ ಅವುಗಳನ್ನು ಹೊಂಡವನ್ನು ಮುಚ್ಚಿದವು. ಹುಲಿರಾಯನಿಗೆ ತನ್ನ ತಪ್ಪಿನ ಅರಿವಾಯಿತು. ಅದು ಅಲ್ಲೇ ತನ್ನ ಪ್ರಾಣವನ್ನು ಕಳೆದುಕೊಂಡಿತು.

ಇದನ್ನೆಲ್ಲ ನೋಡಿಕೊಂಡಿದ್ದ ಜಿಂಕೆಗೆ ತನ್ನ ಸ್ನೇಹಿತನ ಬಗ್ಗೆ ಅಪಾರ ಗೌರವ ಮೂಡಿತು. ಜತೆಗೆ ಆನಂದ ಬಾಷ್ಪವೂ ಹರಿಯಿತು. ಈಗ ಇಲಿ, ಗೂಳಿ, ಆನೆಯೂ ಅದರ ಸ್ನೇಹಿತರಾದರು.

Advertisement

Udayavani is now on Telegram. Click here to join our channel and stay updated with the latest news.

Next