Advertisement
ಒಂದು ಮಗುವಿಗೆ ನಾಮಕರಣ ಮಾಡುವಾಗ ನಾವು ಎಷ್ಟು ಯೋಚಿಸುತ್ತೇವೆಯೋ ಅಷ್ಟೇ ಪರಿಣಾಮ ಆ ಮಗುವಿನ ಭವಿಷ್ಯದ ಮೇಲೆ ಆಗುತ್ತದೆ ಎಂದರೆ ಆಶ್ಚರ್ಯವಾಗಬಹುದು. ಪುರಾತನ ಕಾಲದಿಂದ ನಡೆದು ಬಂದ ಪದ್ಧತಿಯ ಪ್ರಕಾರ ಅಜ್ಜನ ಹೆಸರು ಮೊಮ್ಮಗನಿಗೆ ಹಾಕುತ್ತಿದ್ದರು ಮತ್ತು ಈಗಲೂ ಹಾಕುತಿದ್ದಾರೆ. ಅದೇ ರೀತಿ ಅಜ್ಜಿಯ ಹೆಸರನ್ನು ಮೊಮ್ಮಗಳಿಗೆ ಇಡುವುದೂ ಸರ್ವೇ ಸಾಮಾನ್ಯ. ಇದೇ ರೀತಿ ಇನ್ನೊಬ್ಬ ಅಜ್ಜನ (ಅಮ್ಮನ ಅಪ್ಪ) ಹೆಸರನ್ನು ಎರಡನೇ ಮಗನಿಗೆ ಇಡುವುದು, ಇನ್ನೊಬ್ಬ ಅಜ್ಜಿಯ ಹೆಸರನ್ನು ಎರಡನೇ ಮಗಳಿಗೆ ಇಡುವುದು ಕೂಡ ಸಾಮಾನ್ಯ.
Related Articles
Advertisement
ನಾನು ನಮ್ಮ ಮಗಳ ಹೆಸರಿನ ಹಿನ್ನೆಲೆಯನ್ನು ಅವಳಿಗೆ ಹೇಳಿದಾಗ ಆಕೆಗೆ ತುಂಬಾ ಹೆಮ್ಮೆಯಾಯಿತು. ತನ್ನ ಹೆಸರು ಬರಿಯ ವ್ಯಕ್ತಿಯನ್ನು ಗುರುತಿಸುವ ಕ್ರಮ ಮಾತ್ರವಲ್ಲ, ಆ ಹೆಸರಿನ ವ್ಯಕ್ತಿ ಹೇಗೆ ಕೃತಿಯಲ್ಲಿ ಅವಳ ಹೆಸರಿಗೆ ತಕ್ಕಂತೆ ನಡೆದುಕೊಂಡಳು ಎಂದು ಹೆಮ್ಮೆ ಪಡುವಂತೆ ಮಾಡಿತು. ಇನ್ನೊಂದು ಕತೆ ಕೂಡ ಹೆಸರಿನ ಪ್ರಭಾವ ವ್ಯಕ್ತಿಯ ಜೀವನದ ಮೇಲೆ ಯಾವರೀತಿ ಪರಿಣಾಮ ಮಾಡುತ್ತದೆಯಂದು ತೋರಿಸುತ್ತದೆ.
ರಾಷ್ಟ್ರಕವಿ ಕುವೆಂಪು ಅವರು ಬರೆದ ಒಂದು ಹಾಡು ತುಂಬಾ ಜನಪ್ರಿಯವಾಗಿತ್ತು ಅನಿಕೇತನ ಎಂಬ ಹಾಡು. ಒಂದು ಯುವ ದಂಪತಿ ಅವರ ಮಗನಿಗೆ ಅನಿಕೇತನ ಎಂಬ ಹೆಸರಿಟ್ಟರು. ಆ ಹುಡುಗ ದೊಡ್ಡವನಾದಾಗ ಯಾರೋ ಗೆಳೆಯರು ಅನಿಕೇತನ ಎಂದರೆ ಮನೆಯಿಲ್ಲದವನು ಎಂದು ಹೇಳಿದಾಗ ಆ ದಂಪತಿಗೆ ತುಂಬಾ ಬೇಸರವಾಯಿತು, ಹೋಗಿ ಹೋಗಿ ಮಗನಿಗೆ ಮನೆಯಿಲ್ಲದವನು ಎಂದು ಹೆಸರಿಟ್ಟೆವಲ್ಲ ಎಂದು. ಒಂದು ದಿನ ಅವರು ಒಬ್ಬ ಯೋಗಿಗಳನ್ನು ಭೇಟಿ ಮಾಡಿ ತಮ್ಮ ದುಃಖವನ್ನು ತೋಡಿಕೊಂಡರು. ಆಗ ಆ ಯೋಗಿಗಳು ಹೇಳಿದ ಮಾತುಗಳನ್ನು ಕೇಳಿ ಅವರ ದುಃಖ ನಿವಾರಣೆಯಾಯಿತು. ಆ ಯೋಗಿ ಹೇಳಿದ ಪ್ರಕಾರ, ಅನಿಕೇತನ ಎಂದರೆ ಮನೆಯಿಲ್ಲದವನು ಅಂತ ಹೌದು. ಆದರೆ ದೇವರಿಗೂ ಮನೆಯಿಲ್ಲ, ಇಡಿಯ ವಿಶ್ವವೇ ಅವನಾಗಿರುವಾಗ ಅವನಿಗೆ ಪ್ರತ್ಯೇಕ ಮನೆಯ ಅಗತ್ಯವೇ ಇಲ್ಲ. ಹಾಗಾಗಿ ಅನಿಕೇತನ ಎಂಬ ಹೆಸರು ಅತ್ಯಂತ ಒಳ್ಳೆಯ ಹೆಸರು ಎಂದು. ಆ ದಂಪತಿ ಬಹಳ ಸಂತೋಷ ಪಟ್ಟು ಹಿಂದಿರುಗಿದರು.
ನನ್ನ ಪರಿಚಯದ ಒಬ್ಬ ಎಂಜಿನಿಯರ್ ಅವರ ಹೆಸರು ಮಿಸ್ಟರ್ ರಾಂಗ್ ಎಂದಾಗಿತ್ತು. ಸಣ್ಣ ವಯಸ್ಸಿನಿಂದಲೇ ಆ ಹೆಸರನ್ನು ಧರಿಸಿಕೊಂಡು ಜೀವಿಸಬೇಕಾದರೆ ಆ ವ್ಯಕ್ತಿಗೆ ಎಷ್ಟು ಕಷ್ಟವಾಗಿರಬೇಕೆಂದು ನಮಗೆ ಅರ್ಥವಾಗಬಹುದು. ಇನ್ನೊಂದು ಉದಾಹರಣೆಯಲ್ಲಿ, ಒಂದು ಭಾಷೆಯಲ್ಲಿ ಚೆನ್ನಾಗಿರುವ ಹೆಸರು ಇನ್ನೊಂದು ಭಾಷೆಯಲ್ಲಿ ಆಭಾಸವಾಗಿರುತ್ತದೆ. ಉದಾಹರಣೆಗೆ ಚಾಗ್ರಿನ್ ಎನ್ನುವ ಹೆಸರು. ಹೀಬ್ರೂ ಭಾಷೆಯಲ್ಲಿ ಈ ಹೆಸರು ಒಳ್ಳೆಯ ಅರ್ಥಪೂರ್ಣವಾಗಿದ್ದರೆ ಆಂಗ್ಲ ಭಾಷೆಯಲ್ಲಿ ಅಷ್ಟೊಂದು ಚೆನ್ನಾಗಿರುವುದಿಲ್ಲ.
ಇನ್ನೊಂದು ಚಂದದ ಹೆಸರು ತನ್ವಿ. ಇದರ ಅರ್ಥ ಚೆಲುವೆಯೆಂದು. ಇದು ದುರ್ಗಾ ದೇವಿಯ ಹೆಸರು ಹೌದು. ಈ ಮಗು ದೊಡ್ಡವಳಾಗುವಾಗ ತನ್ನ ಹೆಸರನ್ನು ಅಭಿಮಾನದಿಂದ ಹೊತ್ತು ಬರಲು ಸಾಧ್ಯ. ನಮ್ಮ ಮಗಳು ಅಪರ್ಣ ಮತ್ತು ಅಳಿಯ ಹರಿತ್ಸ ನಮ್ಮ ಮೊಮ್ಮಗನಿಗೆ ಬೇರೆ ಕೆಲವು ಹೆಸರುಗಳ ಜತೆಗೆ ಆಕಾಶ್ ಎನ್ನುವ ಹೆಸರನ್ನೂ ಸೇರಿಸಿದ್ದರು. ಕುಟುಂಬದ ಇತರ ಹಿರಿಯರ ಅಭಿಪ್ರಾಯವನ್ನು ಕೇಳಿಕೊಂಡು ಕೊನೆಗೆ ಆಕಾಶ್ ಎಂಬ ಹೆಸರನ್ನು ಆಯ್ಕೆ ಮಾಡಿದರು.
ಆಕಾಶ್ ಎನ್ನುವ ಹೆಸರನ್ನು ಆಯ್ಕೆ ಮಾಡಲು ಅನೇಕ ಕಾರಣಗಳ ಜತೆಗೆ ಈ ಕೆಳಗಿನ ಕಾರಣಗಳೂ ಸೇರಿದ್ದವು. 1. ವಿಶಾಲ, ಅನಂತ, ಗುರುತರ ಎನ್ನುವ ಗುಣಗಳನ್ನು ಹೊಂದಿದ ಹೆಸರು ಆಕಾಶ. 2. ಮನುಷ್ಯ ಶರೀರ ಪಂಚಭೂತಗಳಾದ ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಇವುಗಳಿಂದ ಮಾಡಲ್ಪಟ್ಟಿದ್ದು ಆಕಾಶವೆಂದರೆ ಇವುಗಳಲ್ಲಿ ಶ್ರೇಷ್ಠ ಸ್ಥಾನವನ್ನು ಪಡೆದ ಅಂಶ. 3. ಆಕಾಶವೆಂದ ಕೂಡಲೇ ನಮಗೆ ಮನಸ್ಸಿಗೆ ಬರುವುದು ಹಕ್ಕಿಗಳು, ನಕ್ಷತ್ರಗಳು, ಸೂರ್ಯ ಮತ್ತು ಚಂದ್ರರು. 4. ಆಕಾಶವೆಂದರೆ ಕೇವಲ ನಾವು ಕಾಣಬಹುದಾದ ಭೂಮಿಯ ಮೇಲೆ ಕಾಣುವ ಭಾಗ ಮಾತ್ರವಲ್ಲ, ಗ್ರಹಗಳ ಮತ್ತು ನಕ್ಷತ್ರಗಳ ನಡುವಣ ವಿಶಾಲ ಅಂತರಿಕ್ಷ. ಈ ಮೇಲಣ ದೃಷ್ಟಿಕೋನದಿಂದ ನೋಡಿದರೆ ಆಕಾಶ ಅನಂತ ಮತ್ತು ಸರ್ವಾಂತರ್ಯಾಮಿ ಭಗವಂತನನ್ನೇ ಮನಸ್ಸಿಗೆ ತೋರಿಸುತ್ತದೆ.
ಮಕ್ಕಳಿಗೆ ಸಣ್ಣವರಿರುವಾಗ ಪ್ರೀತಿಯಿಂದ, ಪುಟ್ಟ, ಮುದ್ದು ಎಂದೆಲ್ಲ ಕೂಗುವುದು ಸ್ವಾಭಾವಿಕ. ಹಾಗೆಯೇ ದೇವರುಗಳ ಹೆಸರುಗಳನ್ನಿಡುವುದೂ ವಾಡಿಕೆ. ಹಾಗೆಯೇ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮದಿಂದ
ಆಯ್ದ ದೇವಿಯ ಹೆಸರುಗಳನ್ನೂ ಇಡುವ ಉದಾಹರಣೆಗಳು ಅನೇಕ. ಕೊನೆಯಲ್ಲಿ ಇಷ್ಟು ಮಾತ್ರ ಖಂಡಿತ, ಮಗು ಬೆಳೆದು ದೊಡ್ಡವನಾದಾಗ ಅಥವಾ ದೊಡ್ಡವಳಾದಾಗ ತನಗಿಟ್ಟ ಹೆಸರನ್ನು ಹೆಮ್ಮೆಯಿಂದ ತಲೆಯೆತ್ತಿ ಧರಿಸುವಂತಾಗಿರಬೇಕು.
ಬಾಳಿಕೆ ರಾಮ ಭಟ್,
ಮಾಂಟ್ರಿಯಾಲ್, ಕೆನಡಾ