Advertisement
ಇದಕ್ಕೆ ಕಾರಣಗಳೂ ಇಲ್ಲದಿಲ್ಲ. ಚುನಾವಣಾ ಸಿದ್ಧತೆಯ ಆರಂಭದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಬಾರಿ ಒಬ್ಬರಿಗೆ ಒಂದೇ ಕ್ಷೇತ್ರ ಎಂಬ ಘೋಷಣೆ ಮಾಡಿ, ಇದಕ್ಕೆ ಪ್ರತಿಯೊಬ್ಬರೂ ಬದ್ಧವಾಗಿರಬೇಕೆಂದು ತಾಕೀತು ಮಾಡಿದ್ದರು.
ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧಿಸುವುದು ಇದೀಗ ಅನಿವಾರ್ಯ ಎಂಬಂತಾಗಿದೆ. ಏಕೆಂದರೆ, ಹಾಲಿ ಶಾಸಕ, ತಮ್ಮ ಪುತ್ರ ಯತೀಂದ್ರರಿಗೆ ಸುಲಭವಾಗಿ ಸಿಗಬಹುದಾಗಿದ್ದ ವರುಣಾ ಟಿಕೆಟ್ ತಪ್ಪಿಸಿರುವುದರಿಂದ ಅವರಿಗಾಗಿ ವರುಣಾವನ್ನು ಕಾಪಿಟ್ಟುಕೊಳ್ಳುವುದು ಸಿದ್ದರಾಮಯ್ಯಗೆ ಅನಿವಾರ್ಯವಾಗಿದೆ. ಇದಕ್ಕಾಗಿ ಮತ್ತೂಂದು ಕ್ಷೇತ್ರದಿಂದ ಗೆಲ್ಲುವುದು ಮಗನ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಅನಿವಾರ್ಯವೂ ಆಗಿದೆ.
ಆದ್ದರಿಂದ ಹಿಂದೆ ಘೋಷಿಸಿದಂತೆ ಕೋಲಾರದಿಂದಲೂ ಸ್ಪರ್ಧಿಸುವ ತಮ್ಮ ಬಯಕೆಯನ್ನು ವರುಣಾ ಟಿಕೆಟ್ ಖಚಿತಗೊಂಡ ಮೇಲೂ ವ್ಯಕ್ತಪಡಿಸುತ್ತಲೇ ಇದ್ದಾರೆ.
Related Articles
Advertisement
ರಾಜ್ಯಉಸ್ತುವಾರಿ ರಣದೀಪ್ ಸುರ್ಜೇವಾಲಾರ ಭಾಷಣ ಆರಂಭಿಸುವ ಮುನ್ನ ಇಡೀ ಸಭಾಂಗಣದಲ್ಲಿ ಎದ್ದು ನಿಂತ ನೂರಾರು ಕಾರ್ಯಕರ್ತರು ಸಿದ್ದರಾಮಯ್ಯಪರ ಘೋಷಣೆಗಳನ್ನು ಮೊಳಗಿಸುತ್ತಾ ಸಿದ್ದರಾಮಯ್ಯ ಕೋಲಾರ ಸ್ಪರ್ಧೆಯನ್ನು ಖಚಿತಪಡಿಸಬೇಕೆಂದು ಆಗ್ರಹಿಸಿದ್ದಾರೆ.
ಆದರೆ, ರಣದೀಪ್ ಸುರ್ಜೇವಾಲಾ ಕೋಲಾರದಿಂದ ಸಿದ್ದರಾಮಯ್ಯ ಸ್ಪರ್ಧೆ ಕುರಿತು ಚಕಾರವೆತ್ತದೆ, ತಮ್ಮ ಭಾಷಣವನ್ನು ಕೇವಲ ರಾಹುಲ್ ಗಾಂಧಿ ಸತ್ಯಮೇವ ಜಯತೇ ಕಾರ್ಯಕ್ರಮ ಯಶಸ್ವಿಗೊಳಿಸುವ ಕೋರಿಕೆಗೆ ಸೀಮಿತಗೊಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಕಾರ್ಯಕರ್ತರ ಒತ್ತಾಯದ ನಡುವೆ ಮತ್ತದೇ ರೀತಿಯಲ್ಲಿ ಕೋಲಾರದಿಂದ ಸ್ಪರ್ಧಿಸಲು ತಮಗೆ ಮನಸಿದೆ, ಆದರೆ, ಈ ನಿರ್ಧಾರವನ್ನು ಹೈಕಮಾಂಡ್ ತೆಗೆದುಕೊಳ್ಳಬೇಕು ಎಂಬ ಮಾತುಗಳನ್ನು ಪುನರುತ್ಛರಿಸಿದ್ದಾರೆ.
ಸಿದ್ದರಾಮಯ್ಯರ ಈ ಮಾತುಗಳ ಅರ್ಥ ಬಹಳ ಸ್ಪಷ್ಟವಾಗಿದೆ. ಹೈಕಮಾಂಡ್ ತಮಗೆ ವರುಣಾ ದಾರಿ ತೋರಿಸಿದೆ, ಹಾಗೆಯೇ ಕೋಲಾರದ ಸ್ಪರ್ಧೆಯ ಕುರಿತು ತೀರ್ಮಾನ ತೆಗೆದುಕೊಂಡು ಅವಕಾಶ ಕಲ್ಪಿಸಲಿ ಎಂಬುದಾಗಿದೆ.ಜೊತೆಗೆ ಕೋಲಾರ ಕಾಂಗ್ರೆಸ್‌ನ ಎರಡು ಗುಂಪುಗಳಲ್ಲಿ ಒಂದಾಗಿರುವ ರಮೇಶ್‌ಕುಮಾರ್ ಗುಂಪು ಸಿದ್ದರಾಮಯ್ಯ ಕೋಲಾರ ಸ್ಪರ್ಧೆ ವಿಚಾರದಲ್ಲಿ ಸಾಕಷ್ಟು ಘೋಷಣೆಗಳನ್ನು ಈಗಾಗಲೇ ಮೊಳಗಿಸಿತ್ತು. ಸಿದ್ದರಾಮಯ್ಯ ವರುಣಾದತ್ತ ಮುಖ ಮಾಡಿದ ಸಂದರ್ಭದಲ್ಲಿ ಈ ಗುಂಪು ನಿರಾಸೆಗೊಳಗಾಗಿತ್ತು. ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ ಕೋಲಾರದ ಟಿಕೆಟ್ ಯಾರಿಗೂ ಘೋಷಣೆಯಾಗದಿರುವ ಅವಕಾಶವನ್ನು ಸದುಪಯೋಗಿಸಿಕೊಂಡ ರಮೇಶ್‌ಕುಮಾರ್ ಬಣವು ಕೋಲಾರದಿಂದ ಎರಡನೇ ಕ್ಷೇತ್ರವಾಗಿ ಸಿದ್ದರಾಮಯ್ಯ ಸ್ಪರ್ಧಿಸಬೇಕೆಂದು ಪಕ್ಷದ ಒಳಗೆ, ಹೊರಗೆ ಸಮಯ, ಅವಕಾಶ ಸಿಕ್ಕಾಗಲೆಲ್ಲಾ ಒತ್ತಡ ಹೇರುತ್ತಲೇ ಇದ್ದಾರೆ.
ಡಿ.ಕೆ.ಶಿವಕುಮಾರ್ ಈ ಒತ್ತಡಕ್ಕೆ ಸ್ಥಳೀಯವಾಗಿ ಸೊಪ್ಪು ಹಾಕಿದಂತೆ ಕಾಣಿಸುತ್ತಿಲ್ಲ. 2ನೇ ಪಟ್ಟಿಯನ್ನು ಅಂತಿಮಗೊಳಿಸಿ ಹೈಕಮಾಂಡ್ ಸ್ಕ್ರೀನಿಂಗ್ ಕಮಿಟಿಗೆ ಕಳುಹಿಸಿದ್ದೇವೆ, ತಾವು ಹಿಂದೆ ಹೇಳಿದಂತೆ ಒಬ್ಬರಿಗೆ ಒಂದೇ ಕ್ಷೇತ್ರ ಎಂಬ ಹೇಳಿಕೆಗೆ ಬದ್ಧವಾಗಿರುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯರಿಗೆ ಎರಡು ಕ್ಷೇತ್ರಗಳಲ್ಲಿ ಅವಕಾಶ ಕಲ್ಪಿಸಿದರೆ ಅದು ಹೈಕಮಾಂಡ್‌ಗೆ ಬಿಟ್ಟಿದ್ದು ಎಂಬರ್ಥದ ಮಾತುಗಳನ್ನಾಡಿದ್ದಾರೆ.
ಇದೀಗ ಮೂಲಗಳ ಪ್ರಕಾರ ಎರಡನೇ ಪಟ್ಟಿಯಲ್ಲಿ ಕೋಲಾರಕ್ಕೆ ಸಿದ್ದರಾಮಯ್ಯ ಹೆಸರು ನಮೂದಿಸಲಾಗಿದೆ. ಒಂದು ವೇಳೆ ಸಿದ್ದರಾಮಯ್ಯರಿಗೆ ಹೈಕಮಾಂಡ್ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸದಿದ್ದರೆ ಮತ್ಯಾರಿಗೆ ಕೋಲಾರ ಟಿಕೆಟ್ ನೀಡಬೇಕು ಎಂಬ ಅಂಶಗಳನ್ನು ಹೈಕಮಾಂಡ್‌ಗೆ ಕಳುಹಿಸಲಾಗಿದೆಯೆಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಬೆಳವಣಿಗೆಗಳು ಆಗುತ್ತಿದ್ದರೂ ಸಿದ್ದರಾಮಯ್ಯ ಕೋಲಾರದಿಂದ ಎರಡನೇ ಕ್ಷೇತ್ರವಾಗಿ ಸ್ಪರ್ಧಿಸಬೇಕೆಂಬ ವಿಚಾರದಲ್ಲಿ ಮಾಜಿ ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಗುಂಪು ಪ್ರತಿಕ್ರಿಯೆ ನೀಡುತ್ತಿಲ್ಲ. ಶನಿವಾರ ಸಿದ್ದರಾಮಯ್ಯ ಪರ ಘೋಷಣೆಗಳನ್ನು ಕೂಗುತ್ತಿದ್ದ ಸಭೆಯಲ್ಲಿಯೂ ಕೆ.ಎಚ್.ಮುನಿಯಪ್ಪ ಮತ್ತವರ ಬೆಂಬಲಿಗರದು ಮೂಕ ಪ್ರೇಕ್ಷಕರಾಗಿದ್ದರಷ್ಟೆ. ಕಾಂಗ್ರೆಸ್‌ನ ಎರಡನೇ ಪಟ್ಟಿ ಪ್ರಕಟವಾಗುವವರೆಗೂ ಸಿದ್ದರಾಮಯ್ಯರ ಕೋಲಾರ ಸ್ಪರ್ಧೆ ವಿಚಾರ ಬಹುಕೋನಗಳ ಚರ್ಚಾಸ್ಪದ ವಿಚಾರವಾಗಿಯೇ ಮುಂದುವರಿಯುವ ಸಾಧ್ಯತೆಯಿದೆ. -ಕೆ.ಎಸ್.ಗಣೇಶ್