Advertisement
ಹತ್ತು ವರ್ಷಗಳ ಅನಂತರ ಫೇಸಬುಕ್‌ಲ್ಲಿ ಮತ್ತೆ ಒಂದಾದರು. ಈ ಪುನರ್ಮಿಲನ ಇಬ್ಬರಿಗೂ ಸಂತೋಷದಾಯಕವಾಗಿತ್ತು. ಮತ್ತಿನ್ನೇನು ಪ್ರತೀ ದಿನವೂ ಶುಭಮುಂಜಾವಿನಿಂದ ಹಿಡಿದು ಶುಭರಾತ್ರಿಯವರೆಗೂ ಸಂಭಾಷಣೆ.
Related Articles
Advertisement
ಶಶಿ: ಹೂಂ, ಮುಖ ನೆನಪ ಆಗವಲ್ತು, ಅವಾ ಪ್ರೋಫೈಲ್ ಪಿಕ್ಚರ್‌ನೂ ಹಾಕಿಲ್ಲ. ಹೋಗ್ಲಿ ಬಿಡು, ಹೆಂಗಾದ್ರೂ ನಾನು ಅಕ್ಸೆಪ್ಟ ಮಾಡಲ್ಲ.
ಸುಮಿ: ಯಾಕಲೇ??
ಶಶಿ: ಏನ ಮಾಡಲಿ ವಾ, ನನ್ನ ಗಂಡ ಅವ ಯಾರು ಇವ ಯಾರು, ಅವನ್ ಜತಿಗೆ ಮಕ್ಕೊಂಡಿದ್ದೆನೂ? ಅಂತಾನ. ಎಲ್ಲಿ ಲೊಟ್ಟಿ, ಬ್ಯಾಡ.. ಬ್ಯಾಡ.
ಸುಮಿ: ಏನ ಹೇಳಾಕತ್ತೀ ನೀನು ಹಿಂಗ ಮಾತಾಡತಾರ?!!! ನಾ ಆಗಿದ್ದರ ಒಂದು ಕುತಿಗಿ ಹಿಚುಕ್ಕೊಂಡ ಸಾಯತಿದ್ದೆ ಇಲ್ಲ ಡೈವೋರ್ಸ್ ಕೊಟ್ಟು ನನ್ನ ಪಾಡಿಗೆ ನಾ ಇರತಿದ್ದೆ.
ಶಶಿ: ಆ ಧೈರ್ಯ ಉಳಿದಿಲ್ಲ ಲೇ….
ಸುಮಿ : ಏ.. ನನಗ ನಂಬಾಕ ಆಗವಲ್ತು ಬಿಡು, ಹೆಂಗಿದ್ದಾಕಿ ಹೆಂಗಾದಿ ನೀನು!!
ಶಶಿ: ಏನ್ ಮಾಡೋದವಾ ಜೀವನ ಎಲ್ಲ ಕಲಿಸತೈತಿ ನೋಡು.
ಸುಮಿ: ಹೂಂ, ಅದೂ ಖರೇನ ಐತಿ. ಆದರ ನಿಮ್ಮ ಯಜಮಾನರ ನೋಡಾಕ ಭಾಳ ಚಲೋ ಅದಾರವಾ.
ಶಶಿ: ಅಯ್ಯ !! ತಗೊಂಡು ಏನ ಮಾಡತಿ, ಮನಸ್ಸು ಬರೊಬ್ಬರಿ ಇಲ್ಲ.
ಸುಮಿ: ಮೂರು ಮಕ್ಕಳ ಆಗಿಂದ ಏನಲೇ ಕಥಿ ನಿಮ್ಮದು.
ಶಶಿ: ಏನ ಹೇಳಲಿ, ಜೀವನ ಬ್ಯಾಡ ಅನ್ನಿಸಿ ಬಿಟ್ಟೈತಿ. ನಾನು ಒಬ್ಬಕಿ ಈ ಮನ್ಯಾಗ ಅದನಿ ಅಂತ ಯಾರೂ ಪರಿಗಣಿಸೋದಿಲ್ಲ. ಇವರ ಮನ್ಯಾಗ ಎಲ್ಲಾರೂ ಡಾಕ್ಟರ್ ಗಳು ನಾನೊಬ್ಬಳೇ ಎಮ್ .ಸಿ.ಎ ಮಾಡಿದವಳು, ಹಾಗಾಗಿ ಎಲ್ರೂ ನನ್ನನ್ನ ಎಸೆಸೆಲ್ಸಿ ಫೇಲ್ ಅಂತಾ ಕರೀತಾರೆ.
ಸುಮಿ: ಅಯ್ಯೋ! ಇದೊಳ್ಳೆ ಕಥೆ ಆಯಿತಲ್ಲ, ಹಾಗಿದ್ದರೆ ಡಾಕ್ಟರ್ ಇದ್ದವಳನ್ನೇ ಮದುವೆಯಾಗಬೇಕಿತ್ತು ಅವರು.
ಶಶಿ: ಸಿಗಬೇಕಲ್ಲ, ಇವರಿಗೆ ವೃತ್ತಿಯಲ್ಲಿರೋರು ಬ್ಯಾಡಂತ. ಅವರು ಹೇಳಿದಂಗ ಕೇಳಕೋಂಡ ಮನ್ಯಾಗ ಇರೋರು ಬೇಕಾಗಿತ್ತಂತ. ಡಾಕ್ಟರ್ ಇರೋರು ಒಪ್ಪಬೇಕಲ್ಲ. ನನಗೂ ಮೊದ್ಲು ಜಾಬ್ ಮಾಡಬಹುದು ಅಂದ್ರು. ಮದುವೆ ಆದ ಮೇಲೆ ಒಂದಲ್ಲ ಒಂದು ಕಾರಣದಿಂದ ಬೇಡ ಅಂದ್ರು. ಹಂಗ ಮಕ್ಕಳು ದೊಡ್ಡವರಾಗಲಿ ಅಂತ ಬಿಟ್ಟೆ. ಈಗ ಹೋಗಬೇಕಂದ್ರ ಅನುಭವ ಕೇಳತಾರ. ಏನೇ ಅನ್ನು ನನ್ನ ಜಾಬ್ ಮಾಡೋ ಆಸೆ ಈಡೇರಲಿಲ್ಲ ನೋಡು.
ಸುಮಿ: ಪ್ರಯತ್ನ ಬಿಡಬ್ಯಾಡ ಅಷ್ಟ. ಸಿಗತೇತಿ ತೊಗೊ, ಇನ್ನೂ ಟೈಮ್ ಐತಿ.
ಶಶಿ: ಹೂಂ, ನೋಡೋಣ ಬಿಡು , ಹಣೆಬರಹದಾಗ ಏನ ಐತಿ ಅದ ಆಕ್ಕೆತಿ. ಮತ್ತ ನೀ ಹೇಂಗದಿ ಹೇಳು. ಸುಮಿ: ನಂದು ಕಥಿ, ಸಣ್ಣದೇನಿಲ್ಲ ಬಿಡು. ಎಲ್ಲ ಸರಿ ಐತಿ ಅನಕೊಂತ ಹೋಗೋದಷ್ಟ. ಶಶಿ: ಹಂಗ್ಯಾಕ ಅಂತಿ, ಏನಾತು? ಸುಮಿ: ಮಕ್ಕಳು ಭಾಳ ತಡ ಆಗಿ ಹುಟ್ಟಿದವು, ತಡ ಆದ್ರ ಏನಾತು ಹುಟ್ಟಿದವಲ್ಲ ಅನ್ನೊದೊಂದ ಸಮಾಧಾನ. ಆದ್ರ ಅವು ಹುಟ್ಟೋತನ ಎಲ್ಲರ ಟೀಕೆ ಟಿಪ್ಪಣಿ ಕೇಳಿ ಕೇಳಿ ಸಾಕಾಗಿ ಹೋಗಿತ್ತ. ಈಗ ಚಂದಾಗಿ ಕಾಳಜಿ ಮಾಡಬೇಕಲ್ಲ ಅಂತ, ನೌಕರಿ ಬಿಟ್ಟೆ. ರೊಕ್ಕ ಬರೊದು ಬಂದಾತಲ್ಲ ಅಂತ ಮನ್ಯಾಗ ಗದ್ದಲಾನ ಗದ್ದಲಾ. ಮತ್ತ ಒಂದ ವರ್ಷದ ಅಂತರದಾಗ ಮಕ್ಕಳು ಹುಟ್ಟಿದವು. ನಂದೂ ಆರೋಗ್ಯ ನೋಡ್ಕೊಬೇಕು,ಮಕ್ಕಳನೂ ನೋಡ್ಕೊಬೇಕು, ಅದಕ್ಕ ನೌಕರಿ ಬಿಟ್ ಬಿಟ್ಟೆ. ಶಶಿ: ಹೌದು ಬಿಡು ಮತ್ತ, ಖರೆ ಐತಿ, ಚಲೊ ಮಾಡಿ ನೀನು. ಸ್ವಲ್ಪ ದಿನ ಆಗಿಂದ ಅವರ ಸುಮ್ನ ಆಗ್ತಾರ ಬಿಡು. ಸುಮಿ: ಹೂಂ ಹಂಗ ಅನಕೊಂತ ಹೊಂಟೆನಿ ನೋಡ. ಶಶಿ: ಅಲ್ಲಲೇ, ಆ ರೇಖಾ ಡೈವೋರ್ಸ್ ಮಾಡಿದ್ಳೇ ನು?? ಸುಮಿ: ಯಾರು?? ರೇಖಾ ಪಾಟೀಲ?? ಅಯ್ಯ ಅಕಿದೇನ ಕೇಳತಿ ಬಿಡು, ಎಲ್ಲ ಬಂಗಾರದಂಗ ಇತ್ತು.
ಹುಚ್ಚಿ ಐತಿ ಅದು, ಹಿಂಗ ಮಾಡಬಾರದಾಗಿತ್ತು ಅಕಿ. ಅಲ್ಲ ಒಂದ ಕಸ ಹೊಡಿ ಅಂದ್ರೂ ಬೇಜಾರ ಮಾಡ್ಕೊಂಡರ ಏನ ಮಾಡ್ತಿ. ಶಶಿ: ಹಂಗ !! ಸುಮಿ: ಹೂಂ, ನಮ್ ಕಾಕಾನ ಮಗಳು ಅಕಿ ಮನಿ ಬಾಜೂನ ಅದಾಳ, ಅಕಿ ಎಲ್ಲ ಹೇಳತಾಳ. ರೇಖಾನ ಅತ್ತಿ, ಮಾವ ಭಾಳ ಚಲೊ ಅಂತ. ಆದ್ರ ಮನ್ಯಾಗ ಎಲ್ಲ ಬರೊಬ್ಬರಿ ಇರಬೇಕು ಅಂತಾರ. ಇಕಿ ಮೊದ್ಲೆ… ಮೈಗಳ್ಳಿ, ಕೆಲಸ ಮಾಡಾಕ ಆಗಾಂಗಿಲ್ಲ. ತ್ರಾಸ ಕೊಡತಾರ ಅನಕೊಂತ ಡೈವೋರ್ಸ್ ಕೊಟ್ಟಬಿಟ್ಟಳು. ಶಶಿ: ಅಯ್ಯ!, ನಮಗ ಸಿಕ್ಕಂಥಾ ಜನ ಸಿಗಬೇಕಿತ್ತ ಅಕಿಗೆ. ಮನಿ ಕೆಲಸಾ ತ್ರಾಸ ಆಕ್ಕೆತಿ ಅಂದ್ರ, ಆ ಮನಿ ಬ್ಯಾರೆದೊರ ಮನಿ ಏನ?. ನಮ್ಮನಿ ಅಂತ ತಿಳಕೊಂಡರ ಎಲ್ಲ ಸಮಸ್ಯ ಬಗಿ ಹರಿತಾವ ನೋಡ. ಸುಮಿ: ತಿಳಕೊಳಬೇಕಲ್ಲ, ಈಗಿನ ಕಾಲದಾಗ ಬರೇ ಇದ ನಡ್ಯಾಕತ್ತೇತಿ. ಎಲ್ಲಿ ನೋಡಿದ್ರೂ ಡೈವೋರ್ಸ್ ಆಗಿದ್ದ ಹುಡುಗೂರು ಹುಡಗ್ಯಾರು. ತಮಗ ಸರಿ ಅನಸಲಿಲ್ಲ ಅಂದರ ಬಿಟ್ಟ ಬ್ಯಾರೆದೋರನ ಮಾಡ್ಕೊತಾರ, ಎರಡನೇ ಮದವಿ ಅಂದರ ಆಶ್ಚರ್ಯ ಪಡತಿದ್ದವಿ, ಈಗ ಮೂರನೇ ಮದವಿನೂ ಆಗಾಕತ್ತಾವ.. ಶಶಿ: ಎಂಥಾ ಕಾಲ ಬಂತು ನೋಡು, ಒಂದ ತರದಿಂದ ಖರೆ ಐತಿ , ಎಲ್ರೂ ಅವರವರ ಜೀವನದಾಗ ಚಂದಾಗಿ ಇರಬೇಕು. ಇರೋದು ಒಂದು ಜೀವನ. ಇನ್ನೊಂದು ಥರದಿಂದ ನೋಡಿದರ ನಾವು ಬರ್ತಾ ಬರ್ತಾ ಜೀವನದ ಮೌಲ್ಯಗಳನ್ನು ಮರೀತಾ ಇದೀವೇನೋ ಅನಸಾಕತ್ತೇತಿ. ಸುಮಿ: ಹೂಂ, ಒಂದ ಹೆಚ್ಚು ಕಡ್ಮಿ ಆದರೂ ಹೊಂದಿಕೊಂಡ ಹೋಗಬೇಕು ನೋಡು. ಮೊದಲ ಹಿರಿಯರು ಅಂದರ ಭಾಳ ಗೌರವ ಇರತಿತ್ತು ಅವರ ಹೇಳಿದಂಗ ಮನಿ ನಡೀತಿತ್ತು. ಈಗ ಒಂದೆರಡು ಅಕ್ಷರ ಕಲಿತ ಚಿಕ್ಕ ಪುಟ್ಟ ಮಕ್ಕಳೂ ತಿರುಗಿ ಮಾತಾಡ್ತಾವ. ಆಗ ಜೀವನದ ಮೌಲ್ಯಗಳನ್ನು ಪ್ರತೀ ಹಂತದಲ್ಲೂ ಹೇಳ್ ತಿದ್ದರು, ಈಗ ಎಲ್ಲರೂ ಭಾಳ ಬಿಜಿ ಇರ್ತಾರ, ಇವನ್ನೆಲ್ಲ ಹೇಳಿಕೊಡಾಕ ಟೈಮ್ ಇಲ್ಲಾ. ಅಷ್ಟೇ ಅಲ್ಲ ಇವನ್ನೆಲ್ಲ ಇವತ್ತಿನ ತಂದೆ-ತಾಯಿಯರು ಮರೆತ ಬಿಟ್ಟಾರ ಅಂದ್ರೂ ತಪ್ಪಿಲ್ಲ. ಇನ್ನ ಮುಂದಿನ ಪೀಳಿಗೆ ಹೆಂಗ ಇರ್ತೇತೋ ಗೊತ್ತಿಲ್ಲ. ಶಶಿ: ಹೌದು ನೋಡ, ಇವನ್ನೆಲ್ಲಾ ನೋಡಿದ್ರ ಜೀವನದ ಮೌಲ್ಯಗಳು ಭಾಳ ಮಹತ್ವದ ಪಾತ್ರ ನಿರ್ವಹಿಸತಾವ. ನಮ್ಮ ಮಕ್ಕಳಿಗೆ ಕಲಿಸಬೇಕು. ಸುಮಿ: ಬರೇ ನಿನ್ನ ಮಕ್ಕಳಿಗೆ ಯಾಕ ಕಲಿಸ್ತಿ ಕ್ಲಾಸ್ ಚಾಲು ಮಾಡಿ ಬಿಡು. ಬ್ಯಾರೆ ಮಕ್ಕಳೂ ಬರತಾರ. ಫೀ ಇಡೋದ ಬಿಡಬ್ಯಾಡ, ಹೆಂಗದ್ರೂ ಜೀವನದಾಗ ಏನರ ಮಾಡಬೇಕಂತಿ. ಇದನ್ನ ಚಾಲೂ ಮಾಡಕೊ. ಶಶಿ: ಅಯ್ಯ, ಕ್ಲಾಸ್ ಚಾಲೂ ಮಾಡಿದರ ಮುಗೀತು ಮನಿ ಬಿಟ್ಟ ಓಡಿಸ್ತಾರ ನನ್ನ. ರೊಕ್ಕ ತೊಗೊಂಡರಂತೂ, ನಾಕ ಪುಡಿಗಾಸಿಗೆ ಇದನ್ನ ಚಾಲೂ ಮಾಡಿಯೇನ ಅಂತಾರ. ಸುಮಿ: ಅದನ್ನೆಲ್ಲಾ ಬಿಡು, ಸುಮ್ಮನ ಚಾಲೂ ಮಾಡ ನೀನು, ಒಳ್ಳೆ ಕೆಲಸಕ್ಕ ಯಾಕ ಹಿಂಜರಿತಿ. ಇಂಥ ಸವಾಲುಗಳನ್ನ ಜೀವನದಾಗ ಎದುರಿಸಲೇ ಬೇಕು. ಇಲ್ಲ ಅಂದ್ರ ಏನೂ ಸಾಧನೆ ಮಾಡಾಕ ಆಗಾಂಗಿಲ್ಲ. ಅಷ್ಟಕ್ಕೂ ಮನೆಲಿ ಯಾರಿಗೂ ತೊಂದರೆ ಆಗದಂಗ ನೋಡಕೋ. ನಿನಗ ಇದು ಬಾಳ ಕಷ್ಟ ಆಕ್ಕೆತಿ ಆದ್ರ ಒಂದ್ ಸಲ ನಿನಗ ಹಿಡಿತ ಸಿಕ್ಕತಂದ್ರ ಮುಂದ ಎಲ್ಲ ಸರಿ ಹೊಕ್ಕೆತಿ. -ಆರು ವರ್ಷಗಳ ಅನಂತರ
ಸುಮಿ: ಲೇ ಶಶಿ , ನಿನ್ನ ಭೇಟ್ಟಿ ಆಗಬೇಕಂದ್ರ ಯಾವ ಟೈಮಿಗೆ ಬರಬೇಕು ಹೇಳು. ಶಶಿ: ಬೇಕಾದಾಗ ಬಾ ನೀನು, ಈಗ ಮನಿಗೆ ಯಾರ ಬಂದ್ರೂ ಹತ್ತ ನಿಮಿಷ ಭೇಟ್ಟಿ ಆಕ್ಕೆನಿ. ಬಾಕಿ ಎಲ್ಲ ನಮ್ಮ ಅತ್ತಿಯವರು ನೋಡಕೋತಾರ. ಕೆಲಸಕ್ಕ ಆಳುಗಳ ಅದಾರ. ಮೊದಲಿನಂಗಿಲ್ಲಾ, ಎಲ್ಲ ಬದಲಿ ಆಗೇತಿ. ನಿನ್ನ ದಿನಕ್ಕ ಸಾವಿರ ಸಲ ನೆನಸ್ಕೊತೇನಿ. ಅವತ್ತ ನೀನು ನನಗ ಈ ಮಾರ್ಗದರ್ಶನ ನೀಡಿರಲಿಲ್ಲ ಅಂದ್ರ ನನ್ನ ಜೀವನ ಇನ್ನೂ ಹಂಗ….ಇರತಿತ್ತು. ನಿನ್ನ ಸಲಹೆಯಿಂದ ನನ್ನ ಜೀವನದ ದಿಕ್ಕು ಬದಲಾತು. ಸುಮಿ: ಓ ..ಹೋ….ಹೋ…. ಸಾಕು ಬಿಡ, ನಾನೇನ ಹಂಗ.. ಹೇಳಿದೆ, ಹೇಳಿದಂಗ ಮಾಡಿದವರು ಯಾರು? – ನೀನು, ನಿನ್ನ ಜೀವನ ನೀ ರೂಪಿಸಕೊಂಡಿ. ಭಾಳ ಖುಷಿ ಆಕ್ಕೆತಿ ನೀನು ಖುಷಿಯಾಗಿದ್ದನ್ನ ನೋಡಿದರ. ಇನ್ನೊಂದು ಹೇಳಬೇಕು ಅನಕೊಂಡಿದ್ದೆ, ನೀನು ನಿನ್ನ ಕ್ಲಾಸ್ ನ್ಯಾಗ ಹೇಳೋದನ್ನ ವೀಡಿಯೋ ಮಾಡಿ ವಾಟ್ಯಾಆ್ಯಪ್, ಇನ್ ಸ್ಟಾಗ್ರಾಂ, ಫೇಸಬುಕ್ ನ್ಯಾಗ ಯಾಕ ಹಾಕಬಾರದು?? ಇದರಿಂದ ಇನ್ನೂ ಭಾಳ ಜನ ಸದುಪಯೋಗ ಪಡಕೊಬಹುದು. ಶಶಿ: ಹೌದು, ನಂಗೂ ಈ ವಿಚಾರ ಬಂದಿತ್ತು, ನೀ ಮನೀಗ ಬಾ ಮಾತಾಡೋಣಂತ. ಹೀಗೇ ಸುಮಿ ಮತ್ತು ಶಶಿ ಒಬ್ಬರಿಗೊಬ್ಬರು ಪ್ರೋತ್ಸಾಹಿಸುತ್ತಾ ಜೀವನವನ್ನು ಸುಂದರವಾಗಿಸುವಲ್ಲಿ ಯಶಸ್ವಿಯಾಗುತ್ತಾರೆ. ಹೀಗೆ ನಮ್ಮ ಜೀವನದಲ್ಲಿಯೂ ಮಾರ್ಗದರ್ಶನ ಮತ್ತು ಪ್ರೋತ್ಸಾಹ ನೀಡುವವರು ಸಿಕ್ಕರೆ ನಮ್ಮ ಜೀವನವೂ ಸಫಲವಾಗುವುದು. ಆದರೆ ಅಂಥವರು ಸಿಗಲಿ ಅಂತ ಕಾಯುವುದು ಬೇಡ. ನಾವೇ ಏಕೆ ಅವರ ಹಾಗೆ ಆಗಬಾರದು? ಬನ್ನಿ ಇನ್ನು ಮೇಲೆ ನಮ್ಮ ಸುತ್ತಮುತ್ತಲಿನವರನ್ನು ಪ್ರೋತ್ಸಾಹಿಸೋಣ. ದ್ವೇಷ ಅಸೂಯೆಗಳನ್ನು ಬಿಟ್ಟು ಅವರ ನಗುವಲ್ಲಿ ನಮ್ಮ ಯಶಸ್ಸನ್ನು ಕಾಣೋಣ. *ಜಯಾ ಛಬ್ಬಿ, ಮಸ್ಕತ್