ಬಹ್ರೈನ್: ಇಪ್ಪತ್ತರ ಸಂಭ್ರಮದಲ್ಲಿರುವ ಅನಿವಾಸಿ ಮೊಗವೀರ ಸಮುದಾಯದ ಸಂಘಟನೆಯಾದ “ಮೊಗವೀರ್ಸ್ ಬಹ್ರೈನ್’ ನೂತನ ಆಡಳಿತ ಮಂಡಳಿಯು ಅಸ್ತಿತ್ವಕ್ಕೆ ಬಂದ ನಿಟ್ಟಿನಲ್ಲಿ ಸಂಘಟನೆಯ ಪ್ರಥಮ ಕಾರ್ಯಕ್ರಮವಾಗಿ “ಭಜನ ಸಂಭ್ರಮ’ ಎನ್ನುವ ಕಾಯಕ್ರಮವನ್ನು ಇಲ್ಲಿನ ಕರ್ನಾಟಕ ಸೋಶಿಯಲ್ ಕ್ಲಬ್‌ನ ಸಭಾಂಗಣದಲ್ಲಿ ಆಯೋಜಿಸಿದ್ದರು.
ಮೊಗವೀರ ಬಾಂಧವರು ಮಾತ್ರವಲ್ಲದೆ ಇಲ್ಲಿನ ವಿವಿಧ ಕರ್ನಾಟಕ ಮೂಲದ ಸಂಘ-ಸಂಸ್ಥೆಗಳ ಪದಾಧಿಕಾರಿಗಳು , ಸದಸ್ಯರೂ ಸೇರಿದಂತೆ ನೂರಾರು ಜನರು ಈ ಭಕ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಮೊಗವೀರ್ಸ್ ಬಹ್ರೈನ್ ಸಂಘಟನೆಯ ನೂತನವಾಗಿ ಆಯ್ಕೆಗೊಂಡಿರುವ ಅಧ್ಯಕ್ಷೆ ಶಿಲ್ಪಾ ಶಮಿತ್ ಕುಂದರ್ ಅವರು ಮೊದಲ್ಗೊಂಡು ಆಡಳಿತ ಮಂಡಳಿಯ ಇತರ ಪದಾಧಿಕಾರಿಗಳು, ಸಮುದಾಯದ ಹಿರಿಯರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಸೇರಿ ಜ್ಯೋತಿ ಬೆಳಗಿಸುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮೊಗವೀರ್ಸ್ ಬಹ್ರೈನ್ ಭಜನ ತಂಡದಿಂದ ಭಜನೆ, ಕುಣಿತ ಭಜನೆಯೊಂದಿಗೆ ಆರಂಭವಾದ ಭಜನ ಸಂಭ್ರಮ ಕಾರ್ಯಕ್ರಮ ದ್ವೀಪದ ಇತರ ಭಜನ ತಂಡಗಳಾದ ಯಕ್ಷ ಭಜನ ಸಂಗಮ, ಬಹ್ರೈನ್ ಬಿಲ್ಲವಾಸ್, ಭಕ್ತಿ ವೃಕ್ಷ, ಓಂಕಾರ, ರಿದಂ ಡ್ಯಾನ್ಸರ್ಸ್ ತಂಡಗಳ ಭಜನೆ, ಕುಣಿತ ಭಜನೆಯೊಂದಿಗೆ ನೆರೆದವರನ್ನು ಮಧ್ಯಾಹ್ನದ ವರೆಗೂ ಭಕ್ತಿಯ ಕಡಲಲ್ಲಿ ತೇಲಾಡಿಸಿತು. ಭಜನ ಕಾರ್ಯಕ್ರಮದ ಅನಂತರ ಶ್ರೀ ಉಚ್ಚಿಲ ಮಹಾಲಕ್ಷ್ಮೀಯಮ್ಮ, ಬೆಣ್ಣೆಕುದ್ರು ಶ್ರೀ ಕುಲಮಹಾಸ್ತಿಯಮ್ಮ ಹಾಗೂ ಮೊಗವೀರ ಕುಲಗುರು ಮಾಧವ ಮಂಗಳ ಪೂಜಾರ್ಯರಿಗೆ ಮಹಾ ಮಂಗಳಾರತಿ ನಡೆಯಿತು.
ಗಣೇಶ್ ಭಟ್ ಹಾಗೂ ರಾಜೇಶ್ ಮೆಂಡನ್ ಅವರು ಪೂಜಾ ವಿಧಿ ವಿಧಾನಗಳನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟರು. ಸಂಘಟನೆಯ ಅಧ್ಯಕ್ಷೆಯಾದ ಶಿಲ್ಪಾ ಶಮಿತ್ ಕುಂದರ್ ಅವರು ಮಾತನಾಡಿ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಾ ಇಪ್ಪತ್ತರ ವಾರ್ಷಿಕೋತ್ಸವದ ಈ ಅವಸರದಲ್ಲಿ ಎಲ್ಲರ ಪ್ರೋತ್ಸಾಹ, ಸಹಕಾರ ಸಂಘಟನೆಗೆ ಅತ್ಯಗತ್ಯ ಎಂದರು. ತೀರ್ಥ,ಪ್ರಸಾದವನ್ನು ಸ್ವೀಕರಿಸಿದ ಅನಂತರ ಮಹಾಪ್ರಸಾದದ ಅಂಗವಾಗಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿತ್ತು. ದಿವ್ಯಾ ಚಂದ್ರ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.
ವರದಿ: ಕಮಲಾಕ್ಷ ಅಮೀನ್