ಕಾರವಾರ: ವೀರಯೋಧ ವಿಜಯಾನಂದ ನಾಯ್ಕರ ಮನೆಗೆ ರಾಜ್ಯದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ರವಿವಾರ ಬೆಳಗ್ಗೆ 10:20ಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಬಿಎಸ್‌ಎಫ್ ಯೋಧರು ದೇಶದ ಒಳಗಿನ ಮತ್ತು ಗಡಿ ಭದ್ರತೆಗೆ ಹಗಲಿರುಳು ಜೀವ ಒತ್ತೆ ಇಟ್ಟು ಸೇವೆ ಮಾಡುತ್ತಾರೆ. ಅವರ ತ್ಯಾಗ ಬಲಿದಾನ ಸದಾ ಸ್ಮರಣೀಯ ಎಂದರು. ದೇಶಕ್ಕಾಗಿ ನಿಮ್ಮ ಮಗ ಪ್ರಾಣ ನೀಡಿದ್ದಾನೆ. ಇದನ್ನು ನಾವು ಮರೆಯುವುದಿಲ್ಲ ಎಂದರು. ಕುಟುಂಬ ವರ್ಗದಲ್ಲಿ ವಿಜಯಾನಂದ ಸಹೋದರ ಆದಿತ್ಯಾ ಬಿರ್ಲಾ ಕಂಪನಿಯಲ್ಲಿ ಗುತ್ತಿಗೆ ಆಧಾರದ ನೌಕರಿಯಲ್ಲಿದ್ದು, ಅದನ್ನು ಕಂಪನಿ ಮಾಲಕರ ಜೊತೆ ಮಾತನಾಡಿ ಕಾಯಂ ಮಾಡಿಸಲು ಪ್ರಯತ್ನಿಸುವುದಾಗಿ ಸಚಿವ ದೇಶಪಾಂಡೆ ಹೇಳಿದರು. ಕುಟುಂಬದವರಿಗೆ ದುಃಖ ಸಹಿಸುವಂತೆ ಸಚಿವರು ಸಾಂತ್ವನ ಹೇಳಿದರು.
ಶಂಕಿತ ಮಾವೋವಾದಿಗಳು ಜು.9 ರಂದು ಸೋಮವಾರ ಬೆಳಗ್ಗೆ ಸ್ಫೋಟಿಸಿದ ಸುಧಾರಿತ ನೆಲ ಬಾಂಬ್‌ಗ ಇಬ್ಬರು ಬಿಎಸ್‌ಎಫ್ ಯೋಧರು ಹುತಾತ್ಮರಾಗಿದ್ದರು. ಕಾರವಾರದ ವಿಜಯಾನಂದ ಸುರೇಶ್ ನಾಯ್ಕ (28) ಇದೇ ರ್ಘಟನೆಯಲ್ಲಿ ಹುತಾತ್ಮರಾದ ಬಿಎಸ್‌ಎಫ್ ಯೋಧರಾಗಿದ್ದರು. ಛತ್ತೀಸ್‌ಗಡದ ಬಸ್ತರ್ ವಿಭಾಗದ ಕಾಂಕೇರ್ ಎಂಬಲ್ಲಿ ಮಾವೋವಾದಿಗಳ ಹುಡುಕಾಟದ ಕಾರ್ಯಾಚರಣೆಯಲ್ಲಿ ವಿಜಯಾನಂದ ನಾಯ್ಕ ವೀರಮರಣ ಅಪ್ಪಿದ್ದರು.
15 ರಂದು ಭೂಮಿ ನೀಡುವ ಸಾಧ್ಯತೆ:ವೀರ ಮರಣ ಅಪ್ಪಿದ ಸೈನಿಕರ ಕುಟುಂಬಕ್ಕೆ ಭೂಮಿ ನೀಡುವ ಕುರಿತು ಕಾನೂನಿನಲ್ಲಿರುವ ಅವಕಾಶಗಳನ್ನು ಪರಿಶೀಲಿಸಿ, ಸಾಧ್ಯವಿದ್ದಲ್ಲಿ ಇದೇ ಆ.15 ರಂದು ವಿಜಯಾನಂದ ನಾಯ್ಕ ಕುಟುಂಬದವರಿಗೆ ಭೂಮಿಯ ಹಕ್ಕುಪತ್ರ ಹಸ್ತಾಂತರಿಸುವ ಸಾಧ್ಯತೆಗಳನ್ನು ಪರಿಶೀಲಿಸಲು ಜಿಲ್ಲಾಡಳಿತಕ್ಕೆ ಸಚಿವರು ಮೌಖೀಕ ಸೂಚನೆ ನೀಡಿದ್ದಾರೆಂದು ಕೋಮಾರಪಂಥ ಸಮಾಜದ ಗಣ್ಯರೊಬ್ಬರು ಸುಳಿವು ನೀಡಿದರು. ಈ ಸಂದರ್ಭದಲ್ಲಿ ಸಮಾಜದ ಗಣ್ಯರಾದ ಮಾಧವ ನಾಯ್ಕ, ಪ್ರಭಾಕರ ಮಾಳ್ಸೇಕರ್, ಮೋಹನ್ ನಾಯ್ಕ, ಸುರೇಶ್ ನಾಯ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ಪುತ್ಥಳಿ ಸ್ಥಾಪಿಸಲು ಮನವಿ: ಯೋಧ ವಿಜಯಾನಂದ ನಾಯ್ಕ ಕುಟುಂಬದವರು ಕಾರವಾರದ ರಾಕ್ ಗಾರ್ಡನ್‌ನಲ್ಲಿ ವೀರಯೋಧ ವಿಜಯಾನಂದ ನಾಯ್ಕರ ಪುತ್ಥಳಿ ಸ್ಥಾಪಿಸುವಂತೆ ಜಿಲ್ಲಾಡಳಿತ ಹಾಗೂ ಮಾಧ್ಯಮದ ಬಳಿ ಬೇಡಿಕೆ ಇಟ್ಟಿದ್ದಾರೆ.