Advertisement

ಮರುಭೂಮಿಯ ಕಣ್ಣು!

09:27 AM Mar 29, 2019 | mahesh |

“ಗೋಡೆಗಳಿಗೆ ಕಿವಿಗಳಿರುತ್ತವೆ’ ಎಂಬ ನಾಣ್ಣುಡಿಯನ್ನು ನೀವು ಕೇಳಿರುತ್ತೀರಿ. ಇನ್ನು ಕೆಲವರು ತಮಗೆ ತಲೆಯ ಹಿಂದೆಯೂ ಕಣ್ಣಿದೆ ಎಂದು ಹೇಳುವುದನ್ನೂ ಕೇಳಿರಬಹುದು. ಜಗತ್ತಿನ ಅತಿ ದೊಡ್ಡ ಮರುಭೂಮಿ ಸಹರಾಗೂ ಒಂದು ಕಣ್ಣಿದೆ ಎಂಬ ಸಂಗತಿ ನಿಮಗೆ ಗೊತ್ತಾ? ಅದನ್ನು ಅಂತರಿಕ್ಷದಿಂದ ನೋಡಲು ಗಗನಯಾನಿಗಳು ಕಾತರದಿಂದ ಕಾಯುತ್ತಾರೆ!

Advertisement

ರಾತ್ರೋ ರಾತ್ರಿ ಹಸಿರು ಹೊಲ ಗದ್ದೆಗಳಲ್ಲಿ ಸೃಷ್ಟಿಯಾಗುತ್ತಿದ್ದ ನಿಗೂಢ ಕ್ರಾಪ್‌ ಸರ್ಕಲ್‌ಗ‌ಳ ಫೋಟೋಗಳನ್ನು ನೀವು ನೋಡಿರಬಹುದು. ಎಕರೆಗಟ್ಟಲೆ ಪ್ರದೇಶದಲ್ಲಿ ಸೃಷ್ಟಿಯಾಗುತ್ತಿದ್ದ ವಿವಿಧ ಆಕಾರಗಳ ಕ್ರಾಪ್‌ ಸರ್ಕಲ್‌ಅನ್ನು ಹತ್ತಿರದಿಂದ ಇಲ್ಲವೇ ನೆಲಮಟ್ಟದಿಂದ ನೋಡಲಾಗದು. ತುಂಬಾ ದೂರದಿಂದ, ಅಥವಾ ಆಕಾಶದಿಂದ ನೋಡಿದಾಗಲಷ್ಟೇ ಕ್ರಾಪ್‌ ಸರ್ಕಲ್‌ನ ಪೂರ್ಣ ಚಿತ್ರ ಕಾಣುವುದು. ಇದೇ ರೀತಿಯ ಆಕಾಶದಿಂದಲೇ ಎಲ್ಲರೂ ನೋಡಲಿಚ್ಚಿಸುವ ಪ್ರದೇಶ ಸಹರಾ ಮರುಭೂಮಿಯ ಕಣ್ಣಿನದು!

ರಚನೆ ಹೇಗಾಯ್ತು?
ಸಹರಾ ಮರುಭೂಮಿಯಲ್ಲಿ ಕಂಡುಬರುವ “ರೈಚಾಟ್‌ ಆಕೃತಿಗಳು’ ಅಂತರಿಕ್ಷದಿಂದ ನೋಡಿದಾಗ ನಮ್ಮನ್ನು ಹಿಂಬಾಲಿಸುವ ಗೂಳಿಯ ಕಣ್ಣಿನಂತೆ ಕಾಣುತ್ತವೆ. ಗಗನಯಾನಿಗಳು ಈ ಸಹರಾ ಕಣ್ಣನ್ನು ಅಂತರಿಕ್ಷದಿಂದ ನೋಡಲು ಕಾತರಿಸುತ್ತಾರೆ. ಅಲ್ಲಿಂದ ಅವರಿಗೆ ಸುಮಾರು 40ಕಿ.ಮೀ. ವ್ಯಾಸದ ಹಾರುವ ತಟ್ಟೆಯ ನಿಲ್ದಾಣದಂತೆ ನಯನ ಮನೋಹರವಾಗಿ ಕಾಣುತ್ತದೆ. ಆಫ್ರಿಕಾದ ಮೌರಿಟೇನಿಯಾ ದೇಶದಲ್ಲಿದೆ ಈ ಪ್ರದೇಶ. ಆ ಜಾಗದ ಹೆಸರು “ಔದಾನೆ’. ಇದು ಸಾವಿರ ವರ್ಷಗಳಷ್ಟು ಹಳೆಯ ಪುರಾತನ ಕಾಲದ ಸಹರಾ ವೆಸ್ಟ್‌ಲ್ಯಾಂಡ್‌ನ‌ ತುದಿಯಲ್ಲಿರುವ ಒಂದು ಪ್ರದೇಶ. ಸಹರಾ ಮರುಭೂಮಿಯ ಸಮೀಪದಲ್ಲಿರುವ ಈ ಗುಡ್ಡಗಾಡು ಪ್ರದೇಶದಲ್ಲಿ ಲಕ್ಷಾಂತರ ವರ್ಷಗಳ ಹಿಂದೆ ಜ್ವಾಲಾಮುಖೀಯು ತಣ್ಣಗಾಗಿ ವರ್ತುಲಾಕಾರದಲ್ಲಿ ಆಕರ್ಷಕ ಕಲ್ಲಿನ ರೂಪ ತಾಳಿವೆ ಎಂದು ಹೇಳುತ್ತಾರೆ.

ಕಣ್ಣಿನ ಹುಡುಕಾಟ
ಫ್ರಾನ್ಸಿಸ್‌ ಟಪೋನ್‌ ಎಂಬ ಪ್ರವಾಸಿಯೊಬ್ಬ ಈ ಸಹರಾ ಕಣ್ಣನ್ನು ಅರಸಿ ಹೋದ ಘಟನೆ ಸ್ವಾರಸ್ಯಕರವಾದುದು. ಈತ ಅಲಿಯಾನ್‌ ಡಿ. ಅಸೋಗಿ ಎನ್ನುವ ಒಬ್ಬ ಮಾರ್ಗದರ್ಶಿಯ ಜೊತೆ ಟ್ರಕ್‌ ಒಂದರಲ್ಲಿ ಈ ಸಹರಾ ಕಣ್ಣನ್ನು ನೋಡಲು ಹೋಗುತ್ತಾನೆ. ಈ ಮಾರ್ಗದರ್ಶಿ ಅಲಿಯಾನ್‌ಗೆ ಸಹರಾ ಮರುಭೂಮಿಯಲ್ಲಿ ಸುತ್ತಾಡಿ ಸಾಕಷ್ಟು ಅನುಭವವಿರುತ್ತದೆ. ಈ ಹಿಂದೆ ಒಂದೆರಡು ಬಾರಿ ಪ್ರವಾಸಿಗರನ್ನು ಆ ಜಾಗಕ್ಕೆ ಆತ ಕರೆದೊಯ್ದಿರುತ್ತಾನೆ. ಆದರೆ ಈ ಬಾರಿ ಮಾತ್ರ ಆತನಿಗೆ ಆ ಜಾಗವನ್ನು ಪತ್ತೆ ಮಾಡಲು ಆಗಿರಲಿಲ್ಲ. ಪ್ರವಾಸಿ ಪ್ರಾನ್ಸಿಸ್‌ ಹತಾಶನಾಗಿ ಹಿಂದಿರುಗುತ್ತಾನೆ. ಫ್ರಾನ್ಸಿನ್‌ನ ಯಾತ್ರೆ ವಿಫ‌ಲವಾದರೂ ಅದೊಂದು ಅಪೂರ್ವ ಅನುಭವ ಎಂದು ದಾಖಲಿಸುತ್ತಾನೆ. ಕೆಲವಾರಗಳ ನಂತರ ಜಿಪಿಎಸ್‌ ಸಹಾಯದಿಂದ ತಾನು “ಸಹರಾ ಐ’ ಪ್ರದೇಶವನ್ನು ಗುರುತಿಸಿದ.

‘ಸಹರಾ ಐ’ ಪ್ರವಾಸ ಅತ್ಯಂತ ರೋಚಕವಾದುದು ಮತ್ತು ಅವಿಸ್ಮರಣೀಯವಾದುದು. ಬದುಕಿನ ವರ್ತುಲಗಳಲ್ಲಿ ಸಿಲುಕಿ ಬೇಸರವೆನಿಸಿದಾಗ ಇಂಥ ಅಪೂರ್ವ ಕೌತುಕಗಳು ನಮ್ಮ ಅನುಭವದ ಒಳಗಣ್ಣು ತೆರೆದೀತು!

Advertisement

ಮುಳುಗುವವನಿಗೆ ಹುಲ್ಲುಕಡ್ಡಿಯಾದ ಓಯೆಸಿಸ್‌
ಅಲ್ಲಿರುವ ಒಂದೇ ಒಂದು ಓಯಸಿಸ್‌ನಿಂದಾಗಿ ಸ್ಥಳೀಯರು ಒಂದಿಷ್ಟು ಖರ್ಜೂರದ ಮರಗಳನ್ನು ಬೆಳೆಯಲು ಸಾಧ್ಯವಾಗಿದೆ. ಇಲ್ಲದಿದ್ದರೆ ಇಡೀ ಪ್ರದೇಶ ಬಂಜರು ಭೂಮಿಯಾಗಿ. ಓದಾನೆ ಪ್ರದೇಶವನ್ನು ಯುನೆಸ್ಕೊ ಜಾಗತಿಕ ಪ್ರವಾಸಿ ತಾಣವನ್ನಾಗಿ ಗುರುತಿಸಿದೆ. ಹಲವು ವರ್ಷಗಳ ಹಿಂದೆ ನಾಗರಿಕತೆ ಶೈಶವಾವಸ್ಥೆಯಲ್ಲಿದ್ದಾಗ ಈ ಪ್ರದೇಶ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತಂತೆ. ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಇಲ್ಲಿನವರು ಅದ್ವಿತೀಯ ಸಾಧನೆ ಮಾಡಿದ ದಾಖಲೆಗಳನ್ನು ಹೊಂದಿವೆ.

ಟಿ.ಪಿ.ಶರಧಿ, ಬೆಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next