Advertisement

ಅಧೀನ ಕಾರ್ಯದರ್ಶಿ ಆದೇಶಕ್ಕಿಲ್ಲ ಬೆಲೆ

05:45 PM Mar 09, 2018 | |

ಇಂಡಿ: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ ವರ್ಗಾವಣೆ ಆದೇಶಕ್ಕೆ ವಿಜಯಪುರ ಜಿಲ್ಲೆಯಲ್ಲಿ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ.

Advertisement

ದಿನಾಂಕ 02-02-2018ರಂದೇ ಇಂಡಿ ತಾಲೂಕಿನ ಪ್ರಸ್ತುತ ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಟಿ. ತಳಕೇರಿ ಅವರಿಗೆ ಇಂಡಿ ತಾಲೂಕಿನಿಂದ ವರ್ಗಾವಣೆಗೊಳಿಸಿ ಸಿಟಿಇ ಜಮಖಂಡಿಗೆ ಸ್ಥಳ ನಿಯುಕ್ತಿಗೊಳಿಸಿ ಆದೇಶಿಸಿದ್ದರೂ ತಮ್ಮ ಜಾಗ ಖಾಲಿ ಮಾಡದೆ ಇಂದಿನವರೆಗೂ ಸರಕಾರದ ಆದೇಶ ಪಾಲನೆಯಾಗಿಲ್ಲ ಎಂಬುದು ಆದೇಶಕ್ಕೆ ಕಿಮ್ಮತ್ತಿಲ್ಲ ಎಂಬಂತಾಗಿದೆ.

ಕೇಂದ್ರ ಚುನಾವಣೆ ಆಯೋಗದ ಶಿಫಾರಸಿನಂತೆ 2018ರ ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ ಪ್ರಯುಕ್ತ ಕೇಂದ್ರ ಚುನಾವಣಾ ಆಯೋಗದ ಆದೇಶ ಸಂಖ್ಯೆ 437/6/1/ಐಎನ್‌ ಎಸ್‌ಟಿ/ಇಸಿಐ/ಎಫ್‌ಉಎನ್‌ಸಿಟಿ/ಎಮ್‌ ಸಿಸಿ/2018 ದಿ. 17-01-2018ರ ಪ್ರಕಾರ 3 ವರ್ಷ ಮೇಲ್ಪಟ್ಟ ಅಥವಾ ಏಪ್ರೀಲ್‌ 2018ಕ್ಕೆ 3 ವರ್ಷ ಸೇವಾ ಅವಧಿ ಪೂರ್ಣಗೊಳಿಸಲಿರುವ ಅಥವಾ ಸ್ವಂತ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೊಳಿಸಿ ಕ್ರಮಸಂಖ್ಯೆ 15ರಲ್ಲಿ ಜೆ.ಟಿ. ತಳಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಅವರನ್ನು ವರ್ಗಾವಣೆಗೊಳಿಸಿ ಸ್ಥಳ ನಿಯುಕ್ತಿಗೊಳಿಸಿದ್ದರೂ, ಬಿಡುಗಡೆಗೊಳ್ಳದೇ
ಸರಕಾರದ ಅಧೀನ ಕಾರ್ಯದರ್ಶಿ ಟಿ.ಡಿ. ನಾಗೇಂದ್ರ ಅವರ ಆದೇಶವನ್ನು ಧಿಕ್ಕರಿಸಲಾಗಿದೆ.

ಚುನಾವಣೆ ನಿಮಿತ್ತ ವರ್ಗಾವಣೆಗೊಳಿಸಿದ ಸದರಿ ಅಧಿಕಾರಿ ಬಿಡುಗಡೆ ಹೊಂದಿದ ಹಾಗೂ ಕರ್ತವ್ಯಕ್ಕೆ ಹಾಜರಾದ ಬಗ್ಗೆ ಜಿಲ್ಲಾಧಿಕಾರಿಗಳು/ಜಿಲ್ಲಾ ಚುನಾವಣಾ ಅಧಿಕಾರಿಗಳು ಹಾಗೂ ಜಿಲ್ಲಾಮಟ್ಟದ ಶಿಕ್ಷಣಾಧಿ ಕಾರಿಗಳು ಹಾಗೂ ಆಯುಕ್ತರು ಗಮನ ಹರಿಸದೇ ಇರುವುದು ಸಾರ್ವಜನಿಕರಲ್ಲಿ ಸೋಜಿಗ ಉಂಟು ಮಾಡಿದೆ.

ಇತ್ತೀಚಿಗೆ ವಿಜಯಪುರ ನಗರ ಹಾಗೂ ಚಡಚಣ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯಗಳಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿ ಪ್ರಭಾರ ವಹಿಸಿಕೊಂಡಿದ್ದನ್ನು ಇಲ್ಲಿ ಗಮನಿಸಬಹುದಾಗಿದೆ.

Advertisement

ಸುತ್ತೋಲೆ ಅನುಸಾರ ಈಗಾಗಲೇ ಮೂರುವರೆ ವರ್ಷ ಪ್ರಭಾರವಿದ್ದ ಬಿಇಒ ಜೆ.ಟಿ. ತಳಕೇರಿ ಅವರು ಬಿಡುಗಡೆಗೊಳ್ಳಬೇಕು. ಇಂಡಿ ಬಿಇಒಗೆ ನಿಯುಕ್ತಿಗೊಂಡ ಬಸವರಾಜ ತಳವಾರ ಅವರು ಬಂದು ಕರ್ತವ್ಯಕ್ಕೆ ಹಾಜರಾಗಬೇಕು ಎಂಬುದು ಶಿಕ್ಷಣ ಚಿಂತಕರ ಅಭಿಪ್ರಾಯವಾಗಿದೆ.

ಚುನಾವಣೆ ನಿಮಿತ್ತ ವರ್ಗಾವಣೆಗೊಂಡ ಅಧಿಕಾರಿಗಳು ತಕ್ಷಣ ಜಾಗ ಖಾಲಿ ಮಾಡಿ ಚುನಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಯಲು ಅನುವುಮಾಡಿ ಕೊಡಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ.

ಬಿಇಒ ಅವರಿಗೆ ವರ್ಗಾವಣೆ ಆದೇಶವಿದೆ. ಆದರೆ ಇದುವರೆಗೂ ಅವರು ಏಕೆ ಬಿಡುಗಡೆ ಹೊಂದಿಲ್ಲ ಎಂಬುದು ಗೊತ್ತಾಗಿಲ್ಲ. ಇಂಡಿಗೆ ವರ್ಗಾವಣೆಗೊಂಡ ಅಧಿಕಾರಿ ಬರುವವರೆಗೂ ತಳಕೇರಿ ಅವರು ಇಂಡಿಯಲ್ಲಿಯೇ ಕಾರ್ಯ ಮಾಡಲು ಅವಕಾಶವಿದೆ.
ಪಿ.ಟಿ. ಬೊಂಗಾಳೆ ಉಪ ನಿರ್ದೇಶಕರು, ಸಾ.ಶಿ. ಇಲಾಖೆ ವಿಜಯಪುರ

ವಿಧಾನಸಭೆ ಚುನಾವಣೆ ನಿಮಿತ್ತ ಚುನಾವಣಾ ಆಯೊಗದ ಆದೇಶದಂತೆ ವರ್ಗಾವಣೆಗೊಂಡಿರುವ ಅಧಿಕಾರಿಗಳು ತಕ್ಷಣ ಬಿಡುಗಡೆಗೊಳ್ಳಬೇಕು. ಆದರೆ ಏಪ್ರಿಲ್‌ 2ರಂದು ಆದೇಶ ಹೊರಡಿಸಿದ್ದರೂ ಇದುವರೆಗೂ ಬಿಡುಗಡೆಗೊಂಡಿಲ್ಲ ಎಂದರೆ ಏನರ್ಥ? ಇದರಲ್ಲಿ ರಾಜಕೀಯ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳ ಕೈವಾಡವಿದೆ. ವರ್ಗಾವಣೆಯಾದವರು ಬಿಡುಗಡೆಗೊಳ್ಳಬೇಕು. ಇಲ್ಲಿ ನಿಯೋಜನೆಗೊಳ್ಳಬೇಕಾದವರು ಹಾಜರಾಗಿ ಕೆಲಸ ಮಾಡಬೇಕು. 
ಡಾ| ಸಾರ್ವಭೌಮ ಬಗಲಿ, ಮಾಜಿ ಶಾಸಕ

ಉಮೇಶ ಬಳಬಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next