Advertisement
ಬಿಬಿಎಂಪಿ 12 ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಹಾಗೂ ಉಪಮೇಯರ್ ಸ್ಥಾನಕ್ಕೆ ಚುನಾವಣೆ ಬುಧವಾರ (ಡಿ.5) ನಡೆಯಲಿದ್ದು, ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾದ ಉಪಮೇಯರ್ ಸ್ಥಾನಕ್ಕೆ ನಾಗಪುರ ವಾರ್ಡ್‌ನ ಭದ್ರೇಗೌಡ ಅವರ ಹೆಸರೇ ಅಂತಿಮವಾಗಿದೆ ಎನ್ನಲಾಗಿದೆ. ಆದರೆ, ಸ್ಥಾಯಿ ಸಮಿತಿಗಳ ಹಂಚಿಕೆ ವಿಚಾರದಲ್ಲಿ ಇನ್ನು ಹಗ್ಗ-ಜಗ್ಗಾಟ ಮುಂದುವರಿದಿದೆ.
Related Articles
Advertisement
ಪ್ರಮುಖ ಸಮಿತಿಗೆ ಪಕ್ಷೇತರರ ಪಟ್ಟು: ರಮೀಳಾ ಉಮಾಶಂಕರ್ ಅವರ ನಿಧನದಿಂದ ತೆರವಾದ ಉಪಮೇಯರ್ ಸ್ಥಾನವನ್ನು ತಮ್ಮಲ್ಲಿ ಒಬ್ಬರಿಗೆ ನೀಡುವಂತೆ ಪಕ್ಷೇತರರು ಹಿಂದೆ ಒತ್ತಾಯಿಸಿದ್ದರು. ಅದಕ್ಕೆ ಜೆಡಿಎಸ್ ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಇದೀಗ, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಸೇರಿದಂತೆ ಪ್ರಮುಖ ಸಮಿತಿಗಳನ್ನು ನೀಡುವಂತೆ ಕಾಂಗ್ರೆಸ್ ನಾಯಕರ ದುಂಬಾಲು ಬಿದ್ದಿದ್ದಾರೆ.
ಕಾಂಗ್ರೆಸ್‌ನಲ್ಲಿ ಹೆಚ್ಚಿನ ಪೈಪೋಟಿ: ಕಾಂಗ್ರೆಸ್ ಪಾಲಿಗೆ ದೊರೆಯಲಿರುವ 4 ಸ್ಥಾಯಿ ಸಮಿತಿಗಳಿಗೆ ಕಾಂಗ್ರೆಸ್‌ನಲ್ಲಿ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಮೇಯರ್ ಸ್ಥಾನದ ಆಕಾಂಕ್ಷಿಗಳು ಹಾಗೂ ಹಿರಿಯ ಪಾಲಿಕೆ ಸದಸ್ಯರು ಸಮಿತಿ ಅಧ್ಯಕ್ಷ ಸ್ಥಾನ ಕೊಡಿಸುವಂತೆ ಆಯಾ ಕ್ಷೇತ್ರದ ಶಾಸಕರು ಹಾಗೂ ಸಂಸದರ ಹಿಂದೆ ಬಿದ್ದಿದ್ದಾರೆ. ಲಾವಣ್ಯ ಗಣೇಶ್, ಸೌಮ್ಯ ಶಿವಕುಮಾರ್, ಲತಾಕುವರ್, ಆಂಜನಪ್ಪ, ವೇಲು ನಾಯ್ಕರ್, ಜಾಕಿರ್ ಹುಸೇನ್, ಕೇಶವಮೂರ್ತಿ ಸೇರಿದಂತೆ ಹಲವರು ಪ್ರಬಲ ಆಕಾಂಕ್ಷಿಗಳಾಗಿದ್ದು, ಯಾರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕೆಂಬುದು ವರಿಷ್ಠರಿಗೆ ತಲೆನೋವಾಗಿ ಪರಿಣಮಿಸಿದೆ.
ಕಣದಿಂದ ಬಿಜೆಪಿ ಹಿಂದಕ್ಕೆ?: ಮೇಯರ್ ಚುನಾವಣೆಯಲ್ಲಿ ಆಡಳಿತ ಚುಕ್ಕಾಣಿಗಾಗಿ ಆಪರೇಷನ್ ಕಮಲ ನಡೆಸಿದರಿಂದ ಬಿಜೆಪಿ ತೀವ್ರ ಮುಖಭಂಗ ಅನುಭವಿಸಿತ್ತು. ಆ ಹಿನ್ನೆಲೆಯಲ್ಲಿ ಡಿ.5ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿ ಕಣಕ್ಕಿಳಿಯುವುದು ಅನುಮಾನವಾಗಿದೆ. ಚುನಾವಣೆಯಲ್ಲಿ ಒಟ್ಟು 260 ಮತದಾರರಿದ್ದು, 131 ಮ್ಯಾಜಿಕ್ ಸಂಖ್ಯೆಯಾಗಿದೆ. ಬಿಜೆಪಿಯು 122 ಮತದಾರರನ್ನು ಹೊಂದಿದ್ದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಹಾಗೂ ಪಕ್ಷೇತರರ ಸದಸ್ಯರು ಸೇರಿ ಒಟ್ಟು ಮತದಾರರ ಸಂಖ್ಯೆ 138 ಆಗಿರುವುದರಿಂದ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.
ಪಕ್ಷಗಳ ಬಲಾಬಲಬಿಜೆಪಿ: 122
ಕಾಂಗ್ರೆಸ್: 108
ಜೆಡಿಎಸ್: 22
ಪಕ್ಷೇತರರು: 08
ಒಟ್ಟು: 260
ಮ್ಯಾಜಿಕ್ ಸಂಖ್ಯೆ: 131