Advertisement

ಉಪ ಚುನಾವಣೆಗೆ ಒಳಪೆಟ್ಟಿನ ಬೇಗುದಿ

01:24 AM Apr 29, 2019 | Team Udayavani |

ಹುಬ್ಬಳ್ಳಿ: ರಾಜ್ಯದಲ್ಲಿ ಲೋಕಸಭೆ ಚುನಾವಣೆ ಬಿರುಸು ಸದ್ಯಕ್ಕೆ ಮುಕ್ತಾಯವಾಗಿರುವಂತೆ, ಮೇ 19 ರಂದು ನಡೆಯಲಿರುವ 2 ಕ್ಷೇತ್ರಗಳ ಉಪ ಚುನಾವಣೆಗೆ ಪಕ್ಷಗಳ ಸಿದ್ಧತೆ ಜೋರಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟ ಮತ್ತು ಬಿಜೆಪಿ ನಡುವೆ ನೇರ ಹೋರಾಟ ನಡೆಯಲಿದೆ. ಪೂರಕವಾಗಿ ಎರಡು ಕಡೆಯಲ್ಲೂ ಅಭ್ಯರ್ಥಿಗಳಿಗೆ ಒಳಪೆಟ್ಟಿನ ಭೀತಿ ಕಾಡತೊಡಗಿದೆ.

Advertisement

ಪೌರಾಡಳಿತ ಸಚಿವರಾಗಿದ್ದ ಸಿ.ಎಸ್‌. ಶಿವಳ್ಳಿ ಅಕಾಲಿಕ ನಿಧನದಿಂದ ಧಾರವಾಡ ಜಿಲ್ಲೆ ಕುಂದಗೋಳ ವಿಧಾನ ಸಭೆ ಕ್ಷೇತ್ರ ಮತ್ತು ಕಾಂಗ್ರೆಸ್‌ ಶಾಸಕರಾಗಿದ್ದ ಡಾ| ಉಮೇಶ ಜಾಧವ್‌ ಅವರ ರಾಜೀನಾಮೆಯಿಂದ ಕಲಬುರಗಿ ಜಿಲ್ಲೆ ಚಿಂಚೋಳಿ ಕ್ಷೇತ್ರಕ್ಕೆ ತೆರವಾಗಿದ್ದ ಸ್ಥಾನಕ್ಕೆ ಉಪ ಚುನಾವಣೆ ಎದುರಾಗಿದೆ. ಕುಂದಗೋಳದಲ್ಲಿ ಕಾಂಗ್ರೆಸ್‌ ಮತ್ತು ಚಿಂಚೋಳಿಯಲ್ಲಿ ಬಿಜೆಪಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿವೆ.

ಕುಂದಗೋಳದಲ್ಲಿ ಸಿ.ಎಸ್‌. ಶಿವಳ್ಳಿ ಅವರ ಪತ್ನಿ ಕುಸುಮಾವತಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದರೆ, ಬಿಜೆಪಿ ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ್‌ ಅವರನ್ನು ಮತ್ತೂಮ್ಮೆ ಕಣ ಕ್ಕಿಳಿ ಸುವುದಾಗಿ ಅಧಿಕೃತವಾಗಿ ಪ್ರಕಟಿಸಿದೆ. ಚಿಂಚೋಳಿ ಕ್ಷೇತ್ರದಲ್ಲಿ ಡಾ| ಉಮೇಶ ಜಾಧವ್‌ ಪುತ್ರ ಡಾ| ಅವಿನಾಶ ಜಾಧವ್‌ ಬಿಜೆಪಿ ಅಭ್ಯರ್ಥಿ. ಲೋಕಸಭೆ ಚುನಾವಣೆ ವೇಳೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ವಲಸೆ ಬಂದ ಕಲಬುರಗಿ ಜಿ.ಪಂ. ಮಾಜಿ ಉಪಾಧ್ಯಕ್ಷ ಸುಭಾಷ್‌ ರಾಠೊಡ್‌ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಕೂಟದ ಹುರಿಯಾಳು.

ಸ್ವಪಕ್ಷೀಯರ ಹೊಡೆತ ಭೀತಿ
ಕುಂದಗೋಳದಲ್ಲಿ 18 ಆಕಾಂಕ್ಷಿಗಳನ್ನು ಹಿಂದಿಕ್ಕಿ ಟಿಕೆಟ್‌ ಪಡೆಯುವಲ್ಲಿ ಕುಸುಮಾವತಿ ಯಶಸ್ವಿಯಾಗಿ ದ್ದಾರೆ. ಅವರಿಗೆ ಟಿಕೆಟ್‌ ನೀಡಿದರೆ ಅಭ್ಯಂತರ ವಿಲ್ಲ ಎಂದಿದ್ದ ಕೆಲವು ಮುಖಂಡರು ಈಗ ಭಿನ್ನರಾಗ ಹಾಡಿದ್ದಾರೆ. ಕೆಲವು ಅಹಿಂದ ಮುಖಂಡರು ಬಂಡಾಯದ ಕಹಳೆ ಯೂದಿದ್ದಾರೆ. ಭಿನ್ನಮತ ಶಮನಕ್ಕೆ ಸಚಿವ ಸತೀಶ ಜಾರಕಿಹೊಳಿ ಅವರಿಗೆ ಹೊಣೆ ವಹಿಸಲಾಗಿದ್ದರೂ ಅವರ ಎದುರೇ ಕೆಲವು ನಾಯಕರು ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ಸ್ಥಿತಿಯೂ ಭಿನ್ನವಾಗಿಲ್ಲ. ಎಸ್‌.ಐ. ಚಿಕ್ಕನಗೌಡರ್‌ ಅವರಿಗೆ ಟಿಕೆಟ್‌ ನೀಡಿದ್ದರಿಂದ ಮುನಿಸಿಕೊಂಡಿರುವ ಎಂ.ಆರ್‌. ಪಾಟೀಲ್‌ ಮತ್ತು ಬೆಂಬಲಿಗರು ಒಳ ಹೊಡೆತ ನೀಡುವ ಭೀತಿ ಎದುರಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ಬಗೆ ಬಗೆಯಾಗಿ ಹರಿದಾಡುತ್ತಿದೆ. ಉಭಯ ಪಕ್ಷಗಳಲ್ಲಿನ ಅಸಮಾಧಾನ ಶಮನಗೊಳ್ಳದಿದ್ದರೆ ಅಭ್ಯರ್ಥಿಗಳು ಒಳಪೆಟ್ಟಿನ ನೋವು ಅನುಭವಿಸಬೇಕಾಗುತ್ತದೆ.

Advertisement

ಚಿಂಚೋಳಿಯಲ್ಲಿ ಡಾ| ಉಮೇಶ್‌ ಜಾಧವ್‌ ಸಹೋದರ ರಾಮಚಂದ್ರ ಜಾಧವ್‌ಗೆ ಬಿಜೆಪಿ ಟಿಕೆಟ್‌ ಘೋಷಣೆಯಾಗಿ ಅನಂತರ ಉಮೇಶ್‌ ಜಾಧವ್‌ ಪುತ್ರ ಪುತ್ರ ಡಾ| ಅವಿನಾಶ್‌ ಜಾಧವ್‌ಗೆ ಟಿಕೆಟ್‌ ನೀಡಿದ್ದು, ಸುನಿಲ್‌ ವಲ್ಯಾಪುರೆ ಅವರನ್ನು ಕೆರಳಿಸಿದೆ. ಪಕ್ಷದ ವಿರುದ್ಧ ಬಂಡೇಳುವುದಿಲ್ಲ ಎಂದು ಹೇಳುತ್ತಿದ್ದರೂ ಒಳಪೆಟ್ಟು ನೀಡುವ ಆತಂಕ ತಳ್ಳಿ ಹಾಕುವಂತಿಲ್ಲ.

ಕಾಂಗ್ರೆಸ್‌ನಲ್ಲಿ ಅನೇಕ ಟಿಕೆಟ್‌ ಆಕಾಂಕ್ಷಿಗಳು ಇದ್ದರೂ ಇತ್ತೀಚೆಗಷ್ಟೆ ಬಿಜೆಪಿಯಿಂದ ಕಾಂಗ್ರೆಸ್‌ಗೆ ಬಂದ ಸುಭಾಶ್‌ ರಾಠೊಡ್‌ಗೆ ಮಣೆ ಹಾಕಿರುವುದು ಅಸಮಾಧಾನಕ್ಕೆ ಕಾರಣವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ನಡುವೆ ಟಿಕೆಟ್‌ ಶೀತಲ ಸಮರದಲ್ಲಿ ಖರ್ಗೆ ಕೈ ಮೇಲಾಗಿದೆ.

ಡಾ| ಉಮೇಶ್‌ ಜಾಧವ್‌ ಸಹೋದರನಿಗಿಂತ ಪುತ್ರ ವ್ಯಾಮೋಹ ತೋರಿರುವುದನ್ನು ಕಾಂಗ್ರೆಸ್‌ ಅಸ್ತ್ರವಾಗಿ ಬಳಸಲು ಮುಂದಾಗಿದೆ. ಪುತ್ರನಿಗೆ ಟಿಕೆಟ್‌ ಕೊಡಿಸಿ, ಸಹೋದರನಿಗೂ ಅನ್ಯಾಯ ಮಾಡಿದ್ದಾರೆ ಎಂದು ಕಾಂಗ್ರೆಸ್‌ ನಾಯಕರು ಡಾ| ಉಮೇಶ್‌ ಜಾಧವ ವಿರುದ್ಧ ಆರೋಪಕ್ಕೆ ಮುಂದಾಗಿದ್ದಾರೆ.

ನಾಳೆ ಕಾಂಗ್ರೆಸ್‌ ಸಮಾನ ಮನಸ್ಕ ಶಾಸಕರ ಸಭೆ
ಲೋಕಸಭೆ ಚುನಾವಣೆಗೆ ಮತದಾನ ಮುಕ್ತಾಯವಾಗುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ ಮತ್ತೆ ಅತೃಪ್ತರ ಸಭೆ ಆರಂಭವಾಗುತ್ತಿದೆ. ಆರಂಭದಿಂದಲೂ ಸಿಎಂ ಕುಮಾರಸ್ವಾಮಿ ವಿರುದ್ಧ ಆರೋಪ ಮಾಡುತ್ತ ಬಂದಿರುವ ಯಶವಂತಪುರ ಶಾಸಕ ಎಸ್‌.ಟಿ. ಸೋಮಶೇಖರ್‌ ಮತ್ತೆ ಎ.30ರಂದು ಪಕ್ಷದ ಸಮಾನ ಮನಸ್ಕ ಶಾಸಕರ ಸಭೆ ಕರೆದಿದ್ದಾರೆ.

ಇಂದು ನಾಮಪತ್ರ ಸಲ್ಲಿಕೆ
ಚಿಂಚೋಳಿ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಸುಭಾಷ್‌ ರಾಠೊಡ್‌ ಮತ್ತು ಕುಂದಗೋಳ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕುಸುಮಾವತಿ ಶಿವಳ್ಳಿ ಅವರಿಗೆ ರವಿವಾರ “ಬಿ’ಫಾರಂ ನೀಡ ಲಾಗಿದ್ದು, ಸೋಮವಾರ ಅವರಿಬ್ಬರೂ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ಅಲ್ಲದೆ ಕುಂದಗೋಳ ಕ್ಷೇತ್ರ ದಲ್ಲಿ ಬಿಜೆಪಿಯಿಂದ ಎಸ್‌.ಐ. ಚಿಕ್ಕನಗೌಡರ ಹಾಗೂ ಚಿಂಚೋಳಿಯಲ್ಲಿ ಅವಿನಾಶ ಜಾಧವ್‌ಗೆ ಟಿಕೆಟ್‌ ನೀಡಲಾಗಿದ್ದು, ಅವರೂ ಸೋಮವಾರ ತಮ್ಮ ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆಗೆ ಸೋಮವಾರವೇ ಕೊನೆಯ ದಿನ, ಮೇ 19ರಂದು ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next