Advertisement
ಜಿಲ್ಲೆಯಲ್ಲೇ ಮೊದಲ ಬಾರಿಗೆ ಪುತ್ತೂರಿನಲ್ಲಿ ಶನಿವಾರ ಹಮ್ಮಿಕೊಂಡ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮರೀಲ್ ಸಮೀಪದ ಮಹಿಳೆಯೊಬ್ಬರು ದೂರು ನೀಡಿದ್ದು, ಅರ್ಜಿ ನೀಡಿ 4 ವರ್ಷಗಳಾಗಿವೆ. ಆದರೂ ಇದುವರೆಗೆ ನಿವೇಶನ ಸಿಕ್ಕಿಲ್ಲ ಎಂದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಜಿಲ್ಲೆಯಲ್ಲಿ ವಸತಿ ಯೋಜನೆ ಜಾರಿಗೆ ತರುವ ಆಲೋಚನೆ ಇದೆ. ಇದಕ್ಕಾಗಿ ಜಿ ಪ್ಲಸ್ 2, ಜಿ ಪ್ಲಸ್ 4 (ಸಣ್ಣ ಅಪಾರ್ಟ್‌ಮೆಂಟ್ ಮಾದರಿ) ನಿವೇಶನ ನಿರ್ಮಿಸಲಾಗುವುದು. ಹೀಗೆ ಮಾಡಿದರೆ ಒಮ್ಮೆಗೇ ಹಲವು ನಿವೇಶನಗಳನ್ನು ಮಾಡಬಹುದು ಎಂದರು.
ನಗರಸಭೆ ವ್ಯಾಪ್ತಿಯಲ್ಲಿ ಅಕ್ರಮ ಗೂಡಂಗಡಿ ನಡೆಸಲಾಗುತ್ತಿದೆ ಎಂಬ ದೂರು ಬಂದಿತ್ತು. ಈ ಬಗ್ಗೆ ಪೌರಾಯುಕ್ತೆ ರೂಪಾ ಶೆಟ್ಟಿ ಅವರಲ್ಲಿ ಪ್ರಶ್ನಿಸಿದಾಗ, ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಆದರೆ ಹಲವು ವರ್ಷಗಳಿಂದ ಇಲ್ಲಿ ವ್ಯಾಪಾರ ಮಾಡುತ್ತಿದ್ದೇವೆ ಎನ್ನುತ್ತಿದ್ದಾರೆ. ಇನ್ನೊಂದೆಡೆ ಒತ್ತಡವೂ ಬರುತ್ತಿದೆ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಅಕ್ರಮ ಎಂದರೆ ತೆರವು ಮಾಡಲೇಬೇಕು. ಬೀದಿ ಬದಿ ವ್ಯಾಪಾರಿಗಳಿಗೆ ಪ್ರತ್ಯೇಕ ಜಾಗ ಗುರುತಿಸಿ, ಅಲ್ಲಿಗೆ ಕಳುಹಿಸಿಕೊಡಿ ಎಂದರು.
Related Articles
ಕೊಳ್ತಿಗೆ ಗ್ರಾ.ಪಂ.ನಲ್ಲಿ ಸಿಬಂದಿ ಕೊರತೆ ಇದೆ. ಎರಡು ವರ್ಷಗಳಿಂದ ಕೆಲಸ ಬಾಕಿ ಇದೆ. ಹುದ್ದೆ ಭರ್ತಿ ಮಾಡಿ ಎಂದು ಮನವಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಪಿಡಿಒ ಅವರನ್ನು ಕರೆದು ವಿಚಾರಿಸಿದಾಗ, ಸಿಬಂದಿ ನೇಮಕಾತಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು. ಈ ಬಗ್ಗೆ ಮಾತನಾಡಿದ ಉದಯ ಭಟ್, ಅನುಕಂಪದ ಆಧಾರದಲ್ಲಿ ವ್ಯಕ್ತಿಯೊಬ್ಬರಿಗೆ ಈ ಹುದ್ದೆಯನ್ನು ನೀಡಬೇಕಾಗಿತ್ತು. ಆದರೆ ಗ್ರಾ.ಪಂ. ಆಡಳಿತ ಬೇರೊಬ್ಬರ ನೇಮಕಾತಿ ಮಾಡಲು ಮುಂದಾಗಿತ್ತು. ಇದಕ್ಕೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ ಎಂದರು. ಜಿ.ಪಂ. ಸಿಇಒ ಸೆಲ್ವಮಣಿ ಆರ್. ಮಾತನಾಡಿ, ತಡೆಯಾಜ್ಞೆ ತರಲಾಗಿದೆ ಎಂದು ಸುಮ್ಮನೆ ಕುಳಿತುಕೊಳ್ಳುವುದು ಸರಿಯಲ್ಲ. ಇದನ್ನು ಜಿ.ಪಂ. ಗಮನಕ್ಕೆ ತಂದು, ವಕೀಲರ ಮೂಲಕ ಫೈಟ್ ಮಾಡಬೇಕಿತ್ತು. ತಕ್ಷಣ ತಡೆಯಾಜ್ಞೆ ತೆರವು ಮಾಡಿ, ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದರು.
Advertisement
ಕುಡಿಯುವ ನೀರು ಕಟ್ಮೋನಪ್ಪ ಮಾತನಾಡಿ, ಕುಡಿಯುವ ನೀರಿನ ಸಂಪರ್ಕವನ್ನು ಕೊಳ್ತಿಗೆ ಗ್ರಾ.ಪಂ. ಕಡಿತ ಮಾಡಿದೆ. ಈ ಬಗ್ಗೆ ಠಾಣೆಗೆ, ಗ್ರಾ.ಪಂ.ಗೆ ದೂರು ನೀಡಿದ್ದೇನೆ ಎಂದರು. ಪ್ರತಿಕ್ರಿಯಿಸಿದ ಶಾಸಕ ಸಂಜೀವ ಮಠಂದೂರು, ಕುಡಿಯುವ ನೀರಿಗಾಗಿ ಓರ್ವ ಜನಸಾಮಾನ್ಯ ಜಿಲ್ಲಾಧಿಕಾರಿವರೆಗೆ ಬಂದಿದ್ದಾರೆ ಎಂದರೆ ಪಿಡಿಒಗಳು ಏನು ಮಾಡುತ್ತಿದ್ದಾರೆ? ಇದು ತೀರಾ ಗಂಭೀರ ವಿಚಾರ ಎಂದರು. ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಕಾನೂನು ಹೋರಾಟ ಮಾಡುತ್ತಿದ್ದಾರೆ, ಅದು ಪ್ರತ್ಯೇಕವಾಗಿ ಇರಲಿ. ಆದರೆ ಯಾವುದೇ ಕಾರಣಕ್ಕೂ ಕುಡಿಯುವ ನೀರು ಕಡಿತ ಮಾಡಬಾರದು. ತತ್‌ಕ್ಷಣವೇ ಸಂಪರ್ಕ ನೀಡಿ ಎಂದು ಆದೇಶಿಸಿದರು. ಜನಪ್ರತಿನಿಧಿಗಳ ಸೀಟೇ ಬೇಕು!
ಸುಗಮವಾಗಿ ಸಭೆ ನಡೆಸುವ ಹಿನ್ನೆಲೆಯಲ್ಲಿ ಜನಪ್ರತಿಧಿಗಳಿಗೆ, ಸಾರ್ವಜನಿಕರಿಗೆ, ಮನವಿದಾರರಿಗೆ, ಅಧಿಕಾರಿಗಳಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿತ್ತು. ಆದರೆ ಅಂಬೇಡ್ಕರ್ ತತ್ವ ರಕ್ಷಣ ವೇದಿಕೆಯ ಪ್ರಮುಖರು ಜನಪ್ರತಿನಿಧಿಗಳ ಸಾಲಿನಲ್ಲೇ ಕುಳಿತು, ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾದರು. ಗ್ರಾಮಕರಣಿಕರು, ಕಂದಾಯ ನಿರೀ ಕ್ಷಕರು, ಉಪತಹಶೀಲ್ದಾರ್, ಸಹಾಯಕ ಆಯುಕ್ತರು ಬಳಿ ಬಂದು ತಮಗೆ ಕಾಯ್ದಿರಿಸಿದ ಆಸನದಲ್ಲಿ ಕುಳಿತು ಕೊಳ್ಳುವಂತೆ ಮನವಿ ಮಾಡಿಕೊಂಡರು. ಬಳಿಕ ಬಂದ ಜನಪ್ರತಿನಿಧಿಗಳು ಮನವಿದಾರರ ಆಸನದಲ್ಲಿ ಕುಳಿತುಕೊಳ್ಳಬೇಕಾಯಿತು. ಡಂಪಿಂಗ್ ಯಾರ್ಡ್
ರಾಮಚಂದ್ರ ನೆಕ್ಕಿಲು ವಿಷಯ ಪ್ರಸ್ತಾವಿಸಿ, ಡಂಪಿಂಗ್ ಯಾರ್ಡ್ ಸಮಸ್ಯೆ ಅತಿರೇಕಕ್ಕೆ ಹೋಗಿದೆ ಎಂದರು. ಪ್ರತಿಕ್ರಿಯಿಸಿದ ಪೌರಾಯುಕ್ತೆ ರೂಪಾ ಶೆಟ್ಟಿ, ಡಂಪಿಂಗ್ ಯಾರ್ಡ್ ಸ್ಥಳಾಂತರಕ್ಕೆ ಜಾಗದ ಕೊರತೆ ಇದೆ. ಡಂಪಿಂಗ್ ಯಾರ್ಡ್ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದು, ಯಾವುದೇ ಸಮಸ್ಯೆ ಇಲ್ಲ. ಇದರ ಅಭಿವೃದ್ಧಿಗಾಗಿ 4.5 ಕೋಟಿ ರೂ. ಅನುದಾನ ಬಿಡುಗಡೆ ಆಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. 3 ದಶಕಗಳ ಹಿಂದೆ ಈ ಡಂಪಿಂಗ್ ಯಾರ್ಡ್ ನಿರ್ಮಿಸಲಾಗಿದೆ. ಆಗ ಅಲ್ಲಿ ಯಾವುದೇ ಮನೆಗಳು ಇರಲಿಲ್ಲ. ಇದೀಗ ಸುತ್ತಮುತ್ತ ಇರುವ ಮನೆಗಳಿಗೆ ಹಕ್ಕುಪತ್ರವೇ ಇಲ್ಲ ಎಂದರು. ಇದಕ್ಕೆ ಉತ್ತರಿಸಿದ ಸಭಿಕರೊಬ್ಬರು, ಕಚೇರಿಯೊಳಗೆ ಕುಳಿತ ಅಧಿಕಾರಿಗಳಿಗೆ ಕೊಳೆತ ವಾಸನೆ ಹೇಗೆ ಬರಲು ಸಾಧ್ಯ? ಸುತ್ತಲಿನ ಮನೆಯವರಿಗೆ ಮಾತ್ರ ಈ ವಾಸನೆ ಬಡಿಯುತ್ತಿದೆ ಎಂದರು. ಮುಂದುವರಿಸಿದ ರಾಮಚಂದ್ರ ನೆಕ್ಕಿಲು, ಡಂಪಿಂಗ್ ಯಾರ್ಡ್ ಸುತ್ತಮುತ್ತ 1500 ಜನ ವಾಸವಾಗಿದ್ದಾರೆ. ಪ್ಲಾಸ್ಟಿಕ್ ಕ್ಯಾನ್ಸರ್‌ಕಾರಕ ಎನ್ನುವ ನಾವು, ಅದೇ ಪ್ಲಾಸ್ಟಿಕನ್ನು ರಾಶಿ ಹಾಕಲಾಗುತ್ತಿದ್ದೇವೆ. ಸರಿಯಾಗಿ ವಿಲೇ ಆಗುತ್ತಿಲ್ಲ. ಮನೆ ಇಲ್ಲ ಎನ್ನುವುದು ಸುಳ್ಳು ಎಂದ ಅವರು, ಪೌರಾಯುಕ್ತರ ಹೇಳಿಕೆಯನ್ನು ಖಂಡಿಸಿದರು. ಜಿಲ್ಲಾಧಿಕಾರಿ ಮಾತನಾಡಿ, ಸಮಸ್ಯೆ ಇರುವುದು ನಿಜ. ಆದರೆ ಇದಕ್ಕೊಂದು ಪರಿಹಾರವನ್ನು ಸಾರ್ವಜನಿಕರೇ ನೀಡಿ ಎಂದರು. ಮಾತನಾಡಿದ ಇಸಾಕ್ ಸಾಲ್ಮರ, ಈ ಡಂಪಿಂಗ್ ಯಾರ್ಡನ್ನು ಕಠಾರಕ್ಕೆ ಶಿಫ್ಟ್ ಮಾಡಬಹುದು ಎಂದರು. ನಗರಸಭೆಯ ತ್ಯಾಜ್ಯವನ್ನು ಗ್ರಾಮಾಂತರಕ್ಕೆ ಶಿಫ್ಟ್ ಮಾಡುವುದು ಬೇಡ ಎಂದು ಆರ್.ಸಿ. ನಾರಾಯಣ್ ಹೇಳಿದರು. ಈ ವಿಚಾರ ಚರ್ಚೆಗೆ ಗ್ರಾಸವಾಯಿತು. ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ, ಪರಿಹಾರ ನೀಡಲು ಕೇಳಿದ್ದೇನಷ್ಟೇ. ಈ ರೀತಿಯ ವ್ಯರ್ಥ ಚರ್ಚೆ ಸರಿಯಲ್ಲ. ಈ ವಿಚಾರದ ಬಗ್ಗೆ ಇನ್ನೊಮ್ಮೆ ಮಾತಾನಾಡುವ ಎಂದರು. ತುಳು ಒಂತೆ ಬರ್ಪುಂಡು!
ಕುಡಿಯುವ ನೀರಿನ ವಿಷಯದಲ್ಲಿ ದೂರುದಾರರು ತುಳುವಿನಲ್ಲಿ ವಿಷಯ ಮಂಡಿಸಿದರು. ವೇದಿಕೆಯಲ್ಲಿದ್ದ ಎಲ್ಲ ಅಧಿಕಾರಿಗಳು ಮುಖ- ಮುಖ ನೋಡಿಕೊಂಡರೇ ಹೊರತು ಉತ್ತರ ಕೊಡಲು ಸಾಧ್ಯವಾಗಲಿಲ್ಲ. ಆಗ ಸಭೆಯಲ್ಲಿ, ಜಿಲ್ಲಾಧಿಕಾರಿಗೆ ತುಳು ಬರುವುದಿಲ್ಲ ಎಂದು
ಧ್ವನಿಯೊಂದು ಕೇಳಿಬಂದಿತು. ತಕ್ಷಣ ಉತ್ತರಿಸಿದ ಜಿಲ್ಲಾಧಿಕಾರಿ ಶಶಿಕಾಂತ್ ಸೆಂಥಿಲ್, ‘ಒಂತೆ ಬರ್ಪುಂಡು ತುಳು’ ಎಂದರು. ಜಿಲ್ಲಾಧಿಕಾರಿ ಅವರ ಪ್ರತಿಕ್ರಿಯೆಗೆ ಸಭಿಕರು ಚಪ್ಪಾಳೆ ತಟ್ಟಿದರು.