Advertisement

ಆರ್ಥಿಕತೆ ಪುನಶ್ಚೇತನ: ಜಪಾನ್ ರಾಯಭಾರಿ ಜತೆ ಡಿಸಿಎಂ ಮಾತುಕತೆ

09:55 PM Jun 22, 2020 | Hari Prasad |

ಬೆಂಗಳೂರು: ಕೋವಿಡ್ 19 ಬಳಿಕ ಟೋಕಿಯೋದಿಂದ ಮತ್ತಷ್ಟು ಹೂಡಿಕೆಯನ್ನು ಆಕರ್ಷಿಸುವ ನಿಟ್ಟಿನಲ್ಲಿ ಉಪ ಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಅವರು ದಿಲ್ಲಿಯ ಜಪಾನ್ ರಾಯಭಾರಿ ಕಚೇರಿಯ ಹಿರಿಯ ಅಧಿಕಾರಿಗಳ ಜತೆ ಸೋಮವಾರ ಮಾತುಕತೆ ನಡೆಸಿದರು.

Advertisement

ಐಟಿ- ಬಿಟಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಮಣ ರೆಡ್ಡಿ, ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಐಟಿ‌ ನಿರ್ದೇಶಕಿ ಮೀನಾ ನಾಗರಾಜ್, ಜಪಾನ್ ರಾಯಭಾರಿ ಕಚೇರಿಯ ಮುಖ್ಯಸ್ಥ ಶಿಂಗೋ ಮಿಮಯಾಮಟೋ ಸಂವಾದದಲ್ಲಿ ಪಾಲ್ಗೊಂಡಿದ್ದರು.

ವಾಣಿಜ್ಯ, ಕೈಗಾರಿಕೆ ಕ್ಷೇತ್ರಗಳಲ್ಲಿ ಕರ್ನಾಟಕ- ಜಪಾನ್ ನಡುವೆ ಅತ್ಯಂತ ವಿಶ್ವಾಸಪೂರ್ಣವಾಗಿರುವ ಗಾಢ ಬಾಂಧವ್ಯವಿದ್ದು ಅದನ್ನು ಮುಂದೆಯೂ ಮುಂದುವರೆಸಿಕೊಂಡು ಹೋಗುವುದು ಸರ್ಕಾರದ ಇಚ್ಚೆಯಾಗಿದೆ ಎಂದು ಡಾ.ಅಶ್ವತ್ಥ ನಾರಾಯಣ ಅವರು ಜಪಾನ್ ಪ್ರತಿನಿಧಿಗಳ ಗಮನಕ್ಕೆ ತಂದರು.

ರಾಜ್ಯದಲ್ಲಿ ಕೋವಿಡ್ 19 ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ತಪಾಸಣೆ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಗಳು ಇಲ್ಲ. ಸರ್ಕಾರ ಪರಿಣಾಮಕಾರಿಯಾಗಿ ನಿರ್ವಹಿಸುತ್ತಿದ್ದು, ಜಪಾನ್ ಉದ್ಯೋಗಿಗಳು ಧೈರ್ಯವಾಗಿ ರಾಜ್ಯದಲ್ಲಿ ತಮ್ಮ ಚಟುವಟಿಕೆಯಲ್ಲಿ ತೊಡಗಬಹುದು ಎಂದು ಭರವಸೆ ನೀಡಿದರು.

ಹೆಲ್ಪ್ ಡೆಸ್ಕ್
ರಾಜ್ಯದಲ್ಲಿ ಉತ್ತಮ ಆರೋಗ್ಯ ಸೌಲಭ್ಯಗಳ ಜತೆಗೆ ವಾಣಿಜ್ಯ ಹಾಗೂ ಕೈಗಾರಿಕೆಗೆ ಬೇಕಾದ ಅತ್ಯುತ್ತಮ ಪೂರಕ ವಾತಾವರಣವಿದೆ. ವಿಶೇಷವಾಗಿ ಜಪಾನ್ ’ಹೆಲ್ಪ್ ಡೆಸ್ಕ್’ತೆರೆಯಲಾಗುತ್ತಿದೆ. ಕೈಗಾರಿಕೆ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರೇ ಇದರ ನೇತೃತ್ವ ವಹಿಸುವರು. ಇದರ ಮುಖೇನ ಯಾವುದೇ ಸಮಸ್ಯೆ ಇದ್ದರೂ ಅತ್ಯಂತ ತ್ವರಿತವಾಗಿ ಬಗೆಹರಿಯಲಿದೆ ಎಂದು ಡಿಸಿಎಂ ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next