ಹನೂರು: ತಾಲೂಕಿನ ಹೂಗ್ಯಂ ಗ್ರಾಪಂ ಅಧ್ಯಕ್ಷರ ವಿರುದ್ಧ ಸದಸ್ಯರು ಮಂಡಿಸಿದ ಅವಿಶ್ವಾಸ ನಿರ್ಣಯಕ್ಕೆ ಜಯವಾಗಿದ್ದು, ಅಧ್ಯಕ್ಷೆ ರಾಜೇಶ್ವರಿ ಅವರನ್ನು ಪದಚ್ಯುತಿಗೊಳಿಸಲಾಗಿದೆ.
20 ಸದಸ್ಯ ಬಲದ ಪಂಚಾಯ್ತಿ ಅಧ್ಯಕ್ಷೆಯಾಗಿ ರಾಜೇಶ್ವರಿ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ, ಅಧ್ಯಕ್ಷರಾದ ಬಳಿಕ ಆಡಳಿತ ವೈಫಲ್ಯ ಮತ್ತು ಕಾರ್ಯ ವೈಖರಿಯಿಂದ ಬೇಸತ್ತ 14 ಸದಸ್ಯರು ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಅವಕಾಶ ಕಲ್ಪಿಸುವಂತೆ ಎಸಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆ ಕ್ರಮ ಕೈಗೊಂಡಿದ್ದ ಎಸಿ ನಿಖೀತಾ ಚಿನ್ನಸ್ವಾಮಿ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ 14 ಸದಸ್ಯರು ಹಾಜರಾಗಿ ಅವಿಶ್ವಾಸ ನಿರ್ಣಯದ ಪರವಾಗಿ ಅಧ್ಯಕ್ಷರ ವಿರುದ್ಧವಾಗಿ ಮತ ಚಲಾವಣೆ ಮಾಡಿದರು.
ಪದಚ್ಯುತೆ ಅಧ್ಯಕ್ಷೆ ರಾಜೇಶ್ವರಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿದ್ದರು. ಸಭೆಯಲ್ಲಿ ಉಪಾಧ್ಯಕ್ಷೆ ಚಿತ್ರಾ, ಷಣ್ಮುಗಂ, ಗಣೇಶ್, ನಾಗರಾಜು, ಸರೋಜಾ, ಮಾದಯ್ಯ, ಅಂಕಮ್ಮ, ಬಸವ, ವೆಂಕಟಪ್ಪಶೆಟ್ಟಿ, ಜಯಮ್ಮ, ಸಿದ್ದರಾಜು, ರಾಜೇಂದ್ರನ್, ಪೂಂಗೊಡಿ, ಪಾರ್ವತಿ ಉಪಸ್ಥಿತರಿದ್ದರು.
ಅವಿಶ್ವಾಸ ಸಭೆಗೆ ಅಧ್ಯಕ್ಷೆ ರಾಜೇಶ್ವರಿ, ರೂಪಾ, ಮಾದನಾಯ್ಕ, ಮೀನಾಕ್ಷಿ, ಜಡೇಮಾಡಿ, ಕಾಮರಾಜು ಗೈರು ಹಾಜರಾಗಿದ್ದರು. ಅವಿಶ್ವಾಸ ನಿರ್ಣಯ ಹಿನ್ನೆಲೆ ರಾಮಾಪುರ ಸಿಪಿಐ ಮನೋಜ್‌ಕುಮಾರ್ ಮತ್ತು ಸಿಬ್ಬಂದಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರು.