Advertisement

5 ಲಕ್ಷದವರೆಗಿನ ಠೇವಣಿ ವಿಮೆ ಮರುಪಾವತಿ

01:06 PM Nov 30, 2021 | Team Udayavani |

ಬೆಂಗಳೂರು: ಶ್ರೀ ಗುರುರಾಘವೇಂದ್ರ ಕೋ ಆಪರೇಟಿವ್‌ ಬ್ಯಾಂಕ್‌ನ ಠೇವಣಿದಾರರಿಗೆ, ಕೇಂದ್ರ ಸರ್ಕಾರ ಸಿಹಿಸುದ್ದಿಯನ್ನು ನೀಡಿದ್ದು, 5 ಲಕ್ಷ ರೂ. ವರೆಗಿನ ಠೇವಣಿ ವಿಮೆ ಮೊತ್ತವನ್ನು ಮರುಪಾವತಿ ಮಾಡುವ ಮೂಲಕ ಬಡ ಹಾಗೂ ಮಧ್ಯಮ ವರ್ಗದ ಸಾವಿರಾರು ಕುಟುಂಬಗಳ ನೆರವಿಗೆ ತ್ವರಿತವಾಗಿ ಸ್ಪಂದಿಸಿದ್ದು ಶ್ಲಾಘನೀಯ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.

Advertisement

ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರ ಒಂದೇ ದಿನದಲ್ಲಿ, 12,014 ಠೇವಣಿದಾರರಿಗೆ, ಠೇವಣಿ ಖಾತರಿ ಸಾಲ ಖಾತರಿ ನಿಗಮ (ತಿದ್ದುಪಡಿ) ಮಸೂದೆ -2021 ರ ಅನ್ವಯ 401 ಕೋಟಿ ರೂ. ಗಳಷ್ಟು ಮೊತ್ತ ಠೇವಣಿದಾರರ ಖಾತೆಗಳಿಗೆ ವಿಮಾ ಮೊತ್ತ ಸಂದಾಯವಾಗಿದೆ.

ಉಳಿದ ಠೇವಣಿದಾರರಿಗೆ ಈ ವಾರದಲ್ಲಿ ಮೊತ್ತ ಸಂದಾಯವಾಗಲಿದೆ ಎಂದರು. ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನ ಠೇವಣಿ ದಾರರ ಸಂಕಷ್ಟಕ್ಕೆ ಆರಂಭದಿಂದಲೇ ತುರ್ತಾಗಿ ಸ್ಪಂದಿಸಿದ ನರೇಂದ್ರ ಮೋದಿ ಸರ್ಕಾರ ಹಾಗೂ ಕೇಂದ್ರದ ಹಣಕಾಸು ಸಚಿವರು, ಬಡ, ಮಧ್ಯಮ ವರ್ಗದ ಠೇವಣಿದಾರರ ಹಿತಾಸಕ್ತಿಗೆ ಪೂರಕವಾದ ಕ್ರಮಗಳನ್ನು ತೆಗೆದುಕೊಂಡು, ಕೋ ಆಪರೇಟಿವ್‌ ಬ್ಯಾಂಕ್‌ಗಳನ್ನು ಇನ್ನಷ್ಟು ಪಾರದರ್ಶಕತೆ ಹಾಗೂ ವೃತ್ತಿಪರತೆ ತರುವ ನಿಟ್ಟಿನಲ್ಲಿ ತ್ವರಿತಗತಿಯಲ್ಲಿ ಶ್ರಮಿಸಿದ್ದು ಗಮನಾರ್ಹ.

ಇದನ್ನೂ ಓದಿ;- ಅಸ್ಸಾಂ ಸಿಎಂ ಭೇಟಿಯಾದ ಅಶ್ವತ್ಥ ನಾರಾಯಣ

2020 ರಲ್ಲಿ ಠೇವಣಿದಾರರ ವಿಮೆ ಮೊತ್ತವನ್ನು 1 ಲಕ್ಷ ರೂ. ಗಳಿಂದ 5 ಲಕ್ಷಕ್ಕೆ ಏರಿಸಿ, ಅದೇ ವರ್ಷದಲ್ಲಿ 1949ರ ಬ್ಯಾಂಕಿಂಗ್‌ ರೆಗ್ಯುಲೇಶನ್‌ ಆಕ್ಟ್ಗೆ ತಿದ್ದುಪಡಿ ತಂದು, ಎಲ್ಲ ಕೋ ಆಪರೇಟಿವ್‌ ಬ್ಯಾಂಕ್‌ ಗಳನ್ನು ರಿಸರ್ವ್‌ ಬ್ಯಾಂಕ್‌ನ ನಿಬಂಧನೆಗಳು ಹಾಗೂ ನಿಯಮಾವಳಿಗಳ ಅಡಿಗೆ ತಂದಿದ್ದು ಕೇಂದ್ರ ಸರ್ಕಾರದ ಬಡ ಹಾಗೂ ಮಧ್ಯಮ ವರ್ಗದ ಕುಟುಂ ಬಗಳ ನೆರವಿಗೆ ನಿಂತಿದ್ದು ಗಣನೀಯ ಸಾಧನೆ.

Advertisement

ಈ ವರ್ಷದ ಆಗಸ್ಟ್‌ನಲ್ಲಿ ಕೇಂದ್ರ ಸರಕಾರ, 1961ರ ಠೇವಣಿ ಖಾತರಿ ಮತ್ತು ಸಾಲ ಖಾತರಿ ನಿಗಮ ಮಸೂದೆಗೆ ತಿದ್ದುಪಡಿ ತಂದು, ಬ್ಯಾಂಕ್‌ಗಳು ದಿವಾಳಿ ಹೊಂದಿದ 90 ದಿನಗಳ ಒಳಗಾಗಿ, ಠೇವಣಿದಾರರಿಗೆ 5 ಲಕ್ಷ ರೂ. ಗಳ ಠೇವಣಿ ವಿಮಾ ಮೊತ್ತ ಸಂದಾಯಗೊಳಿಸುವ ಕಾಯ್ದೆಯನ್ನು ಜಾರಿಗೆ ತಂದಿರುವುದರಿಂದ ಅಮೂಲಾಗ್ರ ಬದಲಾವಣೆಗೆ ಕಾರಣವಾಗಿದ್ದು, ಇದರಿಂದ ಶೇ 98.3ರಷ್ಟು ಠೇವಣಿದಾರರಿಗೆ ಅನುಕೂಲವಾಗಲಿದ್ದು, ಶೇ 50.9 ರಷ್ಟು ಠೇವಣಿ ಮೊತ್ತಕ್ಕೆ ಸುರಕ್ಷತೆ ದೊರಕಲಿದೆ ಎಂದು ಸಂಸದ ತೇಜಸ್ವಿ ಸೂರ್ಯ ವಿವರಿಸಿದರು.

ಶ್ರೀ ಗುರು ರಾಘವೇಂದ್ರ ಬ್ಯಾಂಕ್‌ನಲ್ಲಿನ ಹಲವು ಅಕ್ರಮಗಳನ್ನು ಗಮನಿಸಿ ಆರ್‌ ಬಿ ಐ, ಜನವರಿ 10 2020 ರಂದು ನಿಬಂಧನೆಗಳಿಗೆ ಒಳಪಡಿಸಿ ನಿರ್ಬಂಧಗಳನ್ನು ಹೇರಿತ್ತು. ಈ ಬ್ಯಾಂಕ್‌ನಲ್ಲಿ ಒಟ್ಟು 43,619 ಠೇವಣಿದಾರರಿದ್ದು, ಇದರಲ್ಲಿ 33,390 ರಷ್ಟು ಜನರು 5 ಲಕ್ಷ ರೂ. ವರೆಗೆ ಠೇವಣಿ ಮಾಡಿದ್ದರು.

ಬ್ಯಾಂಕ್‌ ನ ಒಟ್ಟು ಠೇವಣಿ 2403.21 ಕೋಟಿ ರೂ. ಗಳಷ್ಟು ಇದ್ದರೆ, ನೀಡಿರುವ ಸಾಲದ ಮೊತ್ತವು 1438,00 ಕೋಟಿ ರೂ. ಗಳಷ್ಟಿದೆ. ನಿವ್ವಳ ಕಾರ್ಯನಿರ್ವಹಿಸದ ಸ್ವತ್ತು ಗಳ ಮೊತ್ತವು, 2020 ರ ಮಾರ್ಚ್‌ 31ರ ವರೆಗೆ 1438.00 ಕೋಟಿ ರೂ. ಗಳಷ್ಟು ಇದ್ದು, ಕೇವಲ 27 ಸಾಲಗಾರರಿಂದ 927 ಕೋಟಿ ರೂ. ಗಳಷ್ಟು ಮೊತ್ತ ಹಂಚಿಕೆಯಿಂದ ಬ್ಯಾಂಕ್‌ಗೆ ಶೇ.70 ರಷ್ಟು ಕಾರ್ಯನಿರ್ವಹಿಸದ ಸ್ವತ್ತಾಗಿ ಪರಿವರ್ತನೆಯಾಗಿದ್ದು ದುರಂತ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next