Advertisement

ಸಾರಿಗೆ ಇಲಾಖೆ; ಸ್ಮಾರ್ಟ್‌ಕಾರ್ಡ್‌ ತತ್ವಾರ; ತಿಂಗಳುಗಟ್ಟಲೆ ಕಾದರೂ ಸಿಗದ ಆರ್‌ಸಿ, ಡಿಎಲ್‌

12:50 AM Nov 09, 2022 | Team Udayavani |

ಮಂಗಳೂರು: ಸಾರಿಗೆ ಇಲಾಖೆಯಲ್ಲಿ ಸ್ಮಾರ್ಟ್‌ ಕಾರ್ಡ್‌ಗಳ ಕೊರತೆ ಉಲ್ಬಣಿಸಿದ್ದು, ಚಾಲನ ಪರವಾನಿಗೆ ಮತ್ತು ಹೊಸ ವಾಹನ ಖರೀದಿ ಮಾಡುವ ಗ್ರಾಹಕರು ಸ್ಮಾರ್ಟ್‌ ಕಾರ್ಡ್‌ಗಾಗಿ ತಿಂಗಳುಗಟ್ಟಲೆ ಕಾಯುವಂತಾಗಿದೆ.

Advertisement

ಮಂಗಳೂರು ಆರ್‌ಟಿಒ ಕಚೇರಿಯಲ್ಲಿ 5,600 ಆರ್‌ಸಿ ಮತ್ತು 1,300 ಡಿಎಲ್‌ ಸ್ಮಾರ್ಟ್‌ ಕಾರ್ಡ್‌ ಪ್ರಿಂಟ್‌ಗೆ ಬಾಕಿ ಇದೆ. ರಾಜ್ಯದ ಬಹುತೇಕ ಆರ್‌ಟಿಒಗಳಲ್ಲಿ 2-3 ತಿಂಗಳಿನಿಂದ ಸ್ಮಾರ್ಟ್‌ಕಾರ್ಡ್‌ಗಾಗಿ ಇಲಾಖೆಗೆ ಅಲೆದಾಡುತ್ತಿದ್ದಾರೆ.

“ಇಂದು-ನಾಳೆ’ ಎಂದು ಸ್ಥಳೀಯ ಅಧಿಕಾರಿಗಳು ಸಾಗ ಹಾಕುತ್ತಿದ್ದಾರೆಯೇ ವಿನಾ ಸ್ಮಾರ್ಟ್‌ ಕಾರ್ಡ್‌ ಲಭ್ಯತೆಗೆ ಪರಿಹಾರ ಮಾತ್ರ ದೊರಕಿಲ್ಲ.

ನಿಯಮಗಳ ಪ್ರಕಾರ 15 ದಿನದೊಳಗೆ ಸ್ಮಾರ್ಟ್‌ ಕಾರ್ಡ್‌ ನೀಡಬೇಕಿದ್ದರೂ ಇಲಾಖೆಗೆ ಕಾರ್ಡ್‌ ಸಮರ್ಪಕವಾಗಿ ಲಭ್ಯವಾಗದೆ ಜನರು ತಿಂಗಳುಗಟ್ಟಲೆ ಕಾಯುವಂತಾಗಿದೆ.

ಹೊಸ ವಾಹನ ಖರೀದಿಸಿದವರು ಸ್ಮಾರ್ಟ್‌ಕಾರ್ಡ್‌ಗಾಗಿ ಪರಿತಪಿಸುತ್ತಿದ್ದಾರೆ. ಒಂದೊಂದು ಆರ್‌ಟಿಒ ಕಚೇರಿಯ ಬೇಡಿಕೆಯ ಮೇರೆಗೆ ಬೆಂಗಳೂರಿನ ಸಾರಿಗೆ ಇಲಾಖೆಯು ಡ್ರೈವಿಂಗ್‌ ಲೈಸೆನ್ಸ್‌ (ಡಿಎಲ್‌) ಹಾಗೂ ಆರ್‌ಸಿಗೆ ಖಾಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ನಿಯಮಿತವಾಗಿ ಕಳುಹಿಸುತ್ತದೆ. ಹೊರಗುತ್ತಿಗೆ ಸಂಸ್ಥೆಯ ಮೂಲಕ ಇದರ ನಿರ್ವಹಣೆ ನಡೆಯುತ್ತದೆ. ಸಾರಿಗೆ ಇಲಾಖೆ ಕೇಂದ್ರ ಕಚೇರಿ ಸಹಿತ ಆರ್‌ಟಿಒ ಕಚೇರಿಯಲ್ಲಿ ಸಂಸ್ಥೆಯ ಸಿಬಂದಿ ಕೆಲಸ ನಿರ್ವಹಿಸುತ್ತಾರೆ. ಪ್ರತೀ ಆರ್‌ಟಿಒ ಕಚೇರಿಯ ಅಧಿಕಾರಿಗಳು ಎಲ್ಲ ಪರಿಶೀಲನೆಯ ಬಳಿಕ ಅಂತಿಮಗೊಳಿಸಿ ಡ್ರೈವಿಂಗ್‌ ಲೈಸನ್ಸ್‌, ಆರ್‌ಸಿ ಪ್ರಿಂಟ್‌ಗಾಗಿ ಸಂಬಂಧಪಟ್ಟ ಸಂಸ್ಥೆಯ ಕಂಪ್ಯೂಟರ್‌ಗೆ ವಿವರಗಳನ್ನು ಆನ್‌ಲೈನ್‌ ಮೂಲಕ ಕಳುಹಿಸುತ್ತಾರೆ. ಅವರು ಕಾರ್ಡ್‌ ಪ್ರಿಂಟ್‌ ಮಾಡಿ ಸಾರಿಗೆ ಇಲಾಖೆಗೆ ನೀಡುತ್ತಾರೆ. ಪ್ರಿಂಟರ್‌, ರಿಬ್ಬನ್‌, ಸಿಬಂದಿ ಎಲ್ಲವೂ ಗುತ್ತಿಗೆದಾರ ಸಂಸ್ಥೆಯೇ ನೋಡಿಕೊಳ್ಳುತ್ತದೆ. ಆದರೆ ಬೆಂಗಳೂರಿನಿಂದ ಖಾಲಿ ಸ್ಮಾರ್ಟ್‌ ಕಾರ್ಡ್‌ ಲಭ್ಯವಿಲ್ಲದ ಕಾರಣ ಪ್ರಿಂಟ್‌ ಮಾಡಲು ಆಗದೆ ಆರ್‌ಟಿಒ ಕಚೇರಿಯಲ್ಲಿ ನಿತ್ಯ ವಾಹನ ಮಾಲಕರು ದೂರು ನೀಡುತ್ತಿದ್ದಾರೆ.

Advertisement

ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ “ಉದಯವಾಣಿ’ಗೆ ಪ್ರತಿಕ್ರಿಯಿಸಿ, ಸಾರಿಗೆ ಇಲಾಖೆಯಿಂದ ಸ್ಮಾರ್ಟ್‌ಕಾರ್ಡ್‌ ಲಭ್ಯವಾಗದೆ ಹಲವು ವಾಹನ ಸವಾರರಿಗೆ ಸಮಸ್ಯೆಯಾಗಿದೆ. ಹೊಸ ವಾಹನ ಖರೀದಿ ಮಾಡಿದವರು ಸ್ಮಾರ್ಟ್‌ಕಾರ್ಡ್‌ಗಾಗಿ ಅಲೆದಾಡುತ್ತಿದ್ದಾರೆ. ನಾನು ಹೊಸ ವಾಹನ ಖರೀದಿಸಿ ನೋಂದಣಿ ಆಗಿ ತಿಂಗಳು ಆದರೂ ಸ್ಮಾರ್ಟ್‌ ಕಾರ್ಡ್‌ ಆರ್‌ಸಿ ಇನ್ನೂ ಬಂದಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳಲ್ಲಿ ಇದಕ್ಕೆ ಉತ್ತರವಿಲ್ಲ ಎಂದಿದ್ದಾರೆ.

“ಚಾಲನ ಪರವಾನಿಗೆ ಪರೀಕ್ಷೆಗೆ ಹಾಜರಾಗಿ ಉತ್ತೀರ್ಣನಾಗಿದ್ದೇನೆ. ಆದರೆ 2 ತಿಂಗಳು ಕಳೆದರೂ ಸ್ಮಾರ್ಟ್‌ ಕಾರ್ಡ್‌ ಮಾತ್ರ ಬಂದಿಲ್ಲ. ಈ ಬಗ್ಗೆ ಸಾರಿಗೆ ಇಲಾಖಾ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸ್ಮಾರ್ಟ್‌ ಕಾರ್ಡ್‌ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ಸರಕಾರದ ಎಲ್ಲ ವ್ಯವಸ್ಥೆ ಸುಧಾರಣೆ ಆಗಿದ್ದರೂ ಸಾರಿಗೆ ಇಲಾಖೆಯ ಸಮಸ್ಯೆ ಮಾತ್ರ ಪರಿಹಾರ ಕಾಣುತ್ತಿಲ್ಲ ಎನ್ನುತ್ತಾರೆ ಮಂಗಳೂರಿನ ಶಿವಕುಮಾರ್‌.

ತಡವಾಗಿ ಬಂದ ಕಾರ್ಡ್‌ ತಲುಪುವುದೂ ತಡ!
ಒಂದೆಡೆ ಸ್ಮಾರ್ಟ್‌ಕಾರ್ಡ್‌ ವಿಳಂಬವಾದರೆ, ಮತ್ತೊಂದೆಡೆ ಡಿಎಲ್‌, ಆರ್‌ಸಿ ಕಾರ್ಡ್‌ಗಳನ್ನು ಜನರಿಗೆ ತಲಪಿಸುವ ವ್ಯವಸ್ಥೆಯೂ ವಿಳಂಬವಾಗುತ್ತಿದೆ. ಅಂಚೆ ಮೂಲಕ ಕಾರ್ಡ್‌ ನೀಡುವ ಬಗ್ಗೆ ಜನರಿಂದಲೇ ಅಂಚೆ ವೆಚ್ಚವಾಗಿ 50 ರೂ. ಪಡೆಯಲಾಗುತ್ತದೆ. ಆದರೆ ಇದನ್ನು ಅಂಚೆ ಇಲಾಖೆಗೆ ವರ್ಗಾಯಿಸುವ ಸಂಬಂಧ ಕೆಲವು ತಾಂತ್ರಿಕ ಸಮಸ್ಯೆ ಉಂಟಾಗಿ ಫಲಾನುಭವಿಗಳಿಗೆ ಕಾರ್ಡ್‌ ಲಭ್ಯವಾಗುತ್ತಿಲ್ಲ. ಈ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಆರ್‌ಟಿಒ ಅಧಿಕಾರಿಗಳು ತಿಳಿಸಿದರೂ ಸ್ಮಾರ್ಟ್‌ಕಾರ್ಡ್‌ ಮಾತ್ರ ತಡವಾಗಿದೆ.

ಸ್ಮಾರ್ಟ್‌ಕಾರ್ಡ್‌ ಹಂಚಿಕೆ ಸಮಸ್ಯೆ ಇತ್ತು. ಆದರೆ ಈಗ ಸೂಕ್ತ ಪ್ರಮಾಣದಲ್ಲಿ ಕಾರ್ಡ್‌ ಹಂಚಲು ಕ್ರಮ ಕೈಗೊಳ್ಳಲಾಗುತ್ತಿದ್ದು, ಎಲ್ಲ ಕಚೇರಿಗಳಿಗೆ ತಲುಪಿಸಲಾಗುವುದು. ಕೆಲವೇ ದಿನದಲ್ಲಿ ಸಮಸ್ಯೆ ಪರಿಹಾರ ಆಗಲಿದೆ.
– ಪುರುಷೋತ್ತಮ್‌, ಅಡಿಷನಲ್‌ ಕಮಿಷನರ್‌, ಇ-ಗವರ್ನೆನ್ಸ್‌, ಸಾರಿಗೆ

Advertisement

Udayavani is now on Telegram. Click here to join our channel and stay updated with the latest news.

Next