Advertisement

ಐವರು ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ

12:15 PM Sep 08, 2018 | Team Udayavani |

ಬೆಂಗಳೂರು: ಅಮಾಯಕನನ್ನು ಅಕ್ರಮವಾಗಿ ಲಾಕಪ್‌ನಲ್ಲಿಟ್ಟು ಹಲ್ಲೆ ನಡೆಸಿ, ಬೂಟು ನೆಕ್ಕಿಸಿ ಅಮಾನವೀಯವಾಗಿ ನಡೆದುಕೊಂಡಿದ್ದರು ಎನ್ನಲಾದ ಪ್ರಕರಣ ಸಂಬಂಧ ಇನ್ಸ್‌ಪೆಕ್ಟರ್‌ ಸೇರಿ ಐವರು ಪೊಲೀಸ್‌ ಸಿಬ್ಬಂದಿ ತಲೆ ಮೇಲೆ ಇಲಾಖಾ ವಿಚಾರಣೆ ಕತ್ತಿ ತೂಗುತ್ತಿದೆ.

Advertisement

2015ರ ಏಪ್ರಿಲ್‌ 6ರಂದು ರವೀಂದ್ರ ರಾಮನ್‌ ಎಂಬವವರನ್ನು ರಾಜಾಜಿನಗರ ಠಾಣೆಗೆ ಕರೆದುಕೊಂಡು ಹೋಗಿ ಲಾಕಪ್‌ನಲ್ಲಿಟ್ಟು ಅಮಾನವೀಯವಾಗಿ ನಡೆಸಿಕೊಂಡ ದೂರಿನ ಸಂಬಂಧ ವಿಚಾರಣೆ ಪೂರ್ಣಗೊಳಿಸಿರುವ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ರೂಪಕುಮಾರ್‌ ದತ್ತಾ, ಆರೋಪಿತ ಐವರು ಪೊಲೀಸ್‌ ಸಿಬ್ಬಂದಿ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ಆದೇಶಿಸಿದ್ದಾರೆ.

ವ್ಯಕ್ತಿಯೊಬ್ಬನನ್ನು ಅಕ್ರಮವಾಗಿ ವಶದಲ್ಲಿರಿಸಿಕೊಂಡು, ಹಲ್ಲೆನಡೆಸಿ ಕರ್ತವ್ಯಲೋಪ ಎಸಗಿರುವ ಆರೋಪ ಆಯೋಗ ನಡೆಸಿದ ತನಿಖೆಯಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ರಾಜಾಜಿನಗರ ಠಾಣೆಯ ಆಗಿನ ಇನ್ಸ್‌ಪೆಕ್ಟರ್‌ ಎನ್‌.ರಮೇಶ್‌, ಪಿಎಸ್‌ಐಗಳಾದ ಎಚ್‌.ಎ ಮಂಜು, ಎಂವಿ ರಾಮಯ್ಯ, ಎಎಸ್‌ಐಗಳಾದ ಡಿ.ಕೆ ರಾಮಯ್ಯ, ಎಲ್‌.ರಮೇಶ್‌ ವಿರುದ್ಧ ಇಲಾಖಾ ವಿಚಾರಣೆ ನಡೆಸಲು ರಾಜ್ಯ ಪೊಲೀಸ್‌ ಮಹಾನಿರ್ದೇಶಕರಿಗೆ ಸೆ.1ರಂದು ಶಿಫಾರಸು ಮಾಡಿದ್ದಾರೆ.

ಅಲ್ಲದೆ, ದೂರುದಾರ ರವೀಂದ್ರ ರಾಮನ್‌ ಅವರಿಗೆ ಪರಿಹಾರವಾಗಿ ಒಂದು ಲಕ್ಷ ರೂ. ನೀಡಬೇಕು. ಆರೋಪಿತ ಪೊಲೀಸ್‌ ಅಧಿಕಾರಿಗಳ ವಿರುದ್ಧ ಇಲಾಖಾ ವಿಚಾರಣೆ ಪೂರ್ಣಗೊಂಡ ಬಳಿಕ ಅವರ ವೇತನದಿಂದಲೇ ಈ ಮೊತ್ತವನ್ನು ಕಡಿತಗೊಳಿಸಬೇಕು ಎಂದು ಗೃಹ ಇಲಾಖೆಗೆ ಆದೇಶಿಸಿದ್ದು, ಈ ಆದೇಶವನ್ನು ಮುಂದಿನ ಆರು ವಾರಗಳಲ್ಲಿ ಪಾಲಿಸಲು ಮತ್ತು ಅನುಪಾಲನಾ ವರದಿ ಸಲ್ಲಿಸಲು ಸೂಚಿಸಲಾಗಿದೆ.

ಪ್ರಕರಣ ಏನು?: 2015ರ ಏ.6ರಂದು ಸಂಜೆ ರಾಜಾಜಿನಗರ ಸಂಚಾರ ಠಾಣೆ ಮುಖ್ಯ ಪೇದೆ ಚಿಕ್ಕಣ್ಣ ನೀಡಿದ ದೂರಿನ ಮೇರೆಗೆ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳದೆ ಪಿಎಸ್‌ಐ ಮಂಜು ಹಾಗೂ ಇತರೆ ಸಿಬ್ಬಂದಿ, ರವೀಂದ್ರ ರಾಮನ್‌ ಅವರನ್ನು ಠಾಣೆಗೆ ಕರೆಸಿಕೊಂಡು ಅಕ್ರಮವಾಗಿ ವಶದಲ್ಲಿ ಇರಿಸಿಕೊಂಡು ಹಲ್ಲೆ ನಡೆಸಿದ್ದಲ್ಲದೆ, ಬೂಟು ನೆಕ್ಕಿಸಿದ್ದರು.

Advertisement

ಅಲ್ಲದೆ, ತೀವ್ರ ಸ್ವರೂಪದ ಹಲ್ಲೆಗೆ ಒಳಗಾಗಿದ್ದ ರವೀಂದ್ರ ರಾಮನ್‌, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ನಂತರ ಏಪ್ರಿಲ್‌ 11ರಂದು ರವೀಂದ್ರ ರಾಮನ್‌ರನ್ನು ಭೇಟಿ ಮಾಡಿದ ಅಂದಿನ ಇನ್ಸ್‌ಪೆಕ್ಟರ್‌ ಎನ್‌.ರಮೇಶ್‌ ದೂರು ಸ್ವೀಕರಿಸಿದ್ದರು. ಆದರೆ, ಸಿಬ್ಬಂದಿ ವಿರುದ್ಧ ಯಾವುದೇ ಕ್ರಮ ಜರುಗಿಸಿರಲಿಲ್ಲ.

ಹಲ್ಲೆಯಿಂದಾಗಿ ಕಾಲಿನ ಹಿಂಬದಿ ಮೂಳೆ ಮುರಿದಿದೆ ಹಾಗೂ ಬಲಗೈ ಬೆರಳುಗಳು ಮುರಿದಿವೆ ಎಂದು ರವೀಂದ್ರ ರಾಮನ್‌ ದೂರಿನಲ್ಲಿ ತಿಳಿಸಿದ್ದರೂ ಪರಿಗಣಿಸದ ಇನ್ಸ್‌ಪೆಕ್ಟರ್‌, ಸಾಮಾನ್ಯ ಗಾಯಗಳಿಗೆ ಅನ್ವಯವಾಗುವ ರೀತಿ ಎಫ್ಐಆರ್‌ ದಾಖಲಿಸಿಕೊಂಡು ಕರ್ತವ್ಯ ಲೋಪ ಎಸಗಿದ್ದಾರೆ ಎಂದು ತನಿಖೆ ನಡೆಸಿದ್ದ ಆಯೋಗದ ಡಿವೈಎಸ್‌ಪಿ ತಮ್ಮ ವರದಿಯಲ್ಲಿ ತಿಳಿಸಿದ್ದರು.

ಆರೋಪಿತ ಅಧಿಕಾರಿಗಳು ಈಗ ಎಲ್ಲಿದ್ದಾರೆ?: ಆರೋಪಿತ ಅಧಿಕಾರಿಗಳ ಪೈಕಿ ಇನ್ಸ್‌ಪೆಕ್ಟರ್‌ ರಮೇಶ್‌ ಸದ್ಯ ಸಿಸಿಬಿ ಕೇಂದ್ರ ಕಚೇರಿ, ಬಸವೇಶ್ವರ ನಗರ ಠಾಣೆಯಲ್ಲಿ ಪಿಎಸ್‌ಐ ಮಂಜು ಕಾರ್ಯನಿರ್ವಹಿಸುತ್ತಿದ್ದು, ಪಿಎಸ್‌ಐ ಡಿ.ಕೆ ರಾಮಯ್ಯ ನಿವೃತ್ತರಾಗಿದ್ದಾರೆ. ಉಳಿದವರು ಬೇರೆ ಠಾಣೆಗಳಿಗೆ ವರ್ಗಾವಣೆಯಾಗಿದ್ದಾರೆ ಎಂದು ತಿಳಿದು ಬಂದಿದೆ.

* ಮಂಜುನಾಥ್‌ ಲಘುಮೇನಹಳ್ಳಿ 

Advertisement

Udayavani is now on Telegram. Click here to join our channel and stay updated with the latest news.

Next