Advertisement

ವಸ್ತ್ರಸಂಹಿತೆ ಪರಿಶೀಲನೆ: ಶಿಕ್ಷಣ ಇಲಾಖೆ

10:55 PM Jan 26, 2022 | Team Udayavani |

ಬೆಂಗಳೂರು: ಉಡುಪಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿರುವ ಪ್ರಕರಣದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ, ಹಿಜಾಬ್‌ ಧರಿಸುವುದು ಮತ್ತು ವಸ್ತ್ರ ಸಂಹಿತೆ (ಕಾಲೇಜುಗಳಲ್ಲಿನ ಡ್ರೆಸ್‌ಕೋಡ್‌) ಕುರಿತು ಇತರ ರಾಜ್ಯಗಳಲ್ಲಿರುವ ನಿಯಮಗಳನ್ನು ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದೆ.

Advertisement

ಉಡುಪಿ ಕಾಲೇಜಿನಲ್ಲಿ ಹಿಜಾಬ್‌ ಧರಿಸುವ ಪ್ರಕರಣ ಸೂಕ್ಷ್ಮ ಹಾಗೂ ಧಾರ್ಮಿಕ ವಿಚಾರವಾಗಿರುವುದರಿಂದ ಸದ್ಯಕ್ಕೆ ಇಲಾಖೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಕಾಲೇಜಿನಲ್ಲಿ ಹಿಂದಿನ ಸಮವಸ್ತ್ರ ಹಾಗೂ ವಸ್ತ್ರ ಸಂಹಿತೆಯನ್ನು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.

ಅದರಂತೆ ವಿದ್ಯಾರ್ಥಿಗಳು ಪಾಲನೆ ಮಾಡಬೇಕಾಗಿದೆ. ರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಿಲ್ಲ. ಆದರೆ, ಉಡುಪಿ ಕಾಲೇಜಿನಲ್ಲಿ ನಿಗದಿತ ಸಮವಸ್ತ್ರದಲ್ಲಿ ಕಾಲೇಜಿಗೆ ಹಾಜರಾಗಬೇಕು ಎನ್ನುವ ನಿಯಮವಿದೆ. ಅದರ ಪ್ರಕಾರ ನಡೆಯಬೇಕು ಎಂದು ಅಲ್ಲಿನ ಪ್ರಾಂಶುಪಾಲರು ತಿಳಿಸಿದ್ದರು ಎನ್ನಲಾಗಿದೆ. ಈ ಮಧ್ಯೆ, ವಿದ್ಯಾರ್ಥಿನಿಯರು ತಮ್ಮ ಆಯ್ಕೆಯ ವಸ್ತ್ರ ಧರಿಸಲು ಅನುಮತಿ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಉನ್ನತ ಮಟ್ಟದ ಸಮಿತಿ ರಚನೆ
ವಿವಿಧ ರಾಜ್ಯಗಳ ಪದವಿಪೂರ್ವ ಕಾಲೇಜುಗಳಲ್ಲಿರುವ ಸಮವಸ್ತ್ರ ನೀತಿಸಂಹಿತೆಯನ್ನು ಪರಿಶೀಲಿಸಿ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ನೀಡಿರುವ ತೀರ್ಪುಗಳನ್ನು ಅವಲೋಕಿಸಿ ರಾಜ್ಯದ ಎಲ್ಲ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಸಮವಸ್ತ್ರ ಅಥವಾ ವಸ್ತ್ರಸಂಹಿತೆ ನಿಗದಿಗೊಳಿಸುವ ಸಂಬಂಧ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಸಮಿತಿಯು ಅಧ್ಯಯನ ನಡೆಸಿ ಸಲ್ಲಿಸುವ ಶಿಫಾರಸುಗಳನ್ನು ಪರಿಶೀಲಿಸಿ ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next