Advertisement

ಶಿಕ್ಷಣ ಇಲಾಖೆ ಆದೇಶ ಹಿಂಪಡೆಯಲು ಆಗ್ರಹ

09:36 PM Jan 19, 2022 | Team Udayavani |

ಕಲಬುರಗಿ: ಸರ್ಕಾರಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಕುರಿತು ಜ.14ರಂದು ರಾಜ್ಯ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶ ಹಿಂದಕ್ಕೆ ಪಡೆಯಬೇಕು. ಎಲ್ಲ ಉಪನ್ಯಾಸಕರಿಗೆ ಸೇವಾ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹುಬ್ಬಳ್ಳಿ ನಿವಾಸಿದ ಎದುರು ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘಟನೆಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ| ಜಗಪ್ಪ ತಳವಾರ ತಿಳಿಸಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊಸ ಆದೇಶದ ಅನ್ವಯ ರಾಜ್ಯಾದ್ಯಂತ ಈಗಿರುವ 14,500 ಜನ ಅತಿಥಿ ಉಪನ್ಯಾಸಕರ ಪೈಕಿ 8,500ಕ್ಕೂ ಅಧಿಕ ಉಪನ್ಯಾಸಕರು ಕೆಲಸ ಕಳೆದುಕೊಂಡು ಬೀದಿಗೆ ಬೀಳುತ್ತಾರೆ. ಇದೊಂದು ಅತಿಥಿ ಉಪನ್ಯಾಸಕರಿಗೆ ಮರಣ ಶಾಸನವಾಗಿದೆ. ಆದ್ದರಿಂದ ಇದನ್ನು ಹಿಂಪಡೆಯುವ ವರೆಗೂ ಹೋರಾಟ ನಿರಂತರವಾಗಿ ಮುಂದುವರಿಯಲಿದೆ.

ಮುಖ್ಯಮಂತ್ರಿ ನಿವಾಸ ಇಲ್ಲವೇ ತುಮಕೂರಿನ ಸಿದ್ಧಗಂಗಾ ಮಠದ ಎದುರು ಧರಣಿ ಕುಳಿತು ಸರ್ಕಾರವನ್ನು ಎಚ್ಚರಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಸೇವಾ ಭದ್ರತೆ ಮತ್ತು ಸೇವಾ ವಿಲೀನತೆಗೆ ಆಗ್ರಹಿಸಿ ಈಗಾಗಲೇ ಕಳೆದ ಒಂದೂವರೆ ತಿಂಗಳಿಂದ ರಾಜ್ಯಾದ್ಯಂತ ತರಗತಿ ಬಹಿಷ್ಕರಿಸಿ ಹೋರಾಟ ನಡೆಸಲಾಗುತ್ತಿದೆ. ಆದರೆ, ಸಂಕ್ರಾಂತಿ ದಿನದಂದು ಸರ್ಕಾರ ಹೊಸ ಆದೇಶ ಹೊರಡಿಸಿ ಈಗಿರುವ ಎಂಟು ಗಂಟೆಗಳ ಕಾರ್ಯಭಾರವನ್ನು 15 ಗಂಟೆಗಳಿಗೆ ಹೆಚ್ಚಿಸಿ, ವೇತನವನ್ನು ದುಪ್ಪಟ್ಟು ಮಾಡಿ, ಅತಿಥಿ ಉಪನ್ಯಾಸಕರಿಗೆ ಸಿಹಿ ನೀಡಿದ್ದೇವೆ ಎಂದು ಹೇಳುತ್ತಿದೆ. ಇದು ಸಿಹಿ ಅಲ್ಲ, ಅವೈಜ್ಞಾನಿಕ, ಅಮಾನವೀಯ ಮತ್ತು ಅಸಂವಿಧಾನಿಕವಾದ ನಡೆಯಾಗಿದೆ. ಇಬ್ಬರು ದುಡಿಯುವ ಸ್ಥಳದಲ್ಲಿ ಒಬ್ಬರನ್ನೇ ನೇಮಿಸಿ, ಇಬ್ಬರಿಗೆ ಕೊಡುವ ವೇತನವನ್ನೇ ಒಬ್ಬರಿಗೆ ನೀಡಿ ವೇತನ ಹೆಚ್ಚು ಮಾಡಿದ್ದೇವೆ ಎನ್ನುವುದು ಉನ್ನತ ಶಿಕ್ಷಣ ಸಚಿವರ ನಯವಂಚನೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರ ಉದ್ಯೋಗ ಸೃಷ್ಟಿಸಬೇಕು ಎಂಬುವುದು ಸಂವಿಧಾನಿಕ ಆಶಯವಾಗಿದೆ. ಆದರೆ, ಸರ್ಕಾರ ಅನೇಕ ವರ್ಷಗಳಿಂದ ಜೀತದಾಳುಗಳಂತೆ ಸೇವೆ ಸಲ್ಲಿಸಿದ ಅತಿಥಿ ಉಪನ್ಯಾಸಕರ ಉದ್ಯೋಗವನ್ನೇ ಕಸಿಯತೊಡಗಿದೆ. ಇದು ಖಂಡನೀಯವಾಗಿದ್ದು, ತಕ್ಷಣವೇ ಉನ್ನತ ಶಿಕ್ಷಣ ಇಲಾಖೆ ಹೊರಡಿಸಿರುವ ಅವೈಜ್ಞಾನಿಕ ಆದೇಶ ಹಿಂಪಡೆದು 14,500 ಜನ ಅತಿಥಿ ಉಪನ್ಯಾಸಕರಿಗೆ ಸೇವಾ ವೀಲಿನತೆ ಮಾಡುವುದರ ಮೂಲಕ ನ್ಯಾಯ ಒದಗಿಸಿಕೊಡಬೇಕು. ಈಗ ಹೊಸದಾಗಿ ಕರೆದಿರುವ ಹೊಸ ನೇಮಕಾತಿಯ ಆನ್‌ ಲೈನ್‌ ಅರ್ಜಿ ಕೂಡಲೇ ರದ್ದು ಪಡಿಸಿಬೇಕು. ಅತಿಥಿ ಉಪನ್ಯಾಸಕರಿಗೆ ಇದುವರೆಗೂ ಯಾವುದೇ ಸೌಲಭ್ಯ ಮತ್ತು ಸರಿಯಾಗಿ ವೇತನ ಕೊಡದೇ ಇರುವುದರಿಂದ ಕಳೆದ ಎರಡು ವರ್ಷಗಳ ಅವಧಿಯಲ್ಲಿ ಸುಮಾರು 165 ಜನ ಉಪನ್ಯಾಸಕರು ಮರಣ ಹೊಂದಿದ್ದು, ಇವರೆಲ್ಲ ಕುಟುಂಬಕ್ಕೆ ತಲಾ 10 ಲಕ್ಷ ರೂ. ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ವಿಭಾಗೀಯ ಅಧ್ಯಕ್ಷ ವಿಜಯಕುಮಾರ ಕಾಂಬಳೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ| ಜ್ಞಾನಮಿತ್ರ ಬಿ., ಜಿಲ್ಲಾ ಸಂಯೋಜಕ ಸುಧಾಕರ ದೇಶಪಾಂಡೆ, ರವೀಂದ್ರ ನರುಣಿ, ಸುಭಾಷಚಂದ್ರ ನಾಯಕ, ಡಾ| ವೀರೇಂದ್ರ ಕುಮಾರ ಇದ್ದರು

 

Advertisement
Advertisement

Udayavani is now on Telegram. Click here to join our channel and stay updated with the latest news.

Next