Advertisement

ಹಿಂದುಳಿದ ವರ್ಗಗಳ ಇಲಾಖೆ ಸಿಬ್ಬಂದಿಗೆ ಮುಂಬಡ್ತಿ ನೀಡಲು ಒತ್ತಾಯ

12:26 PM Jun 30, 2019 | Team Udayavani |

ಕಾರವಾರ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ನಿಲಯ ಮೇಲ್ವಿಚಾರಕರಿಗೆ ಕಚೇರಿ ಹಾಗೂ ವಿಸ್ತರಣಾಧಿಕಾರಿಗಳ ಹುದ್ದೆಗೆ ಮುಂಬಡ್ತಿ ನೀಡುವಂತೆ ಜಿಲ್ಲೆಯ ವಿವಿಧ ತಾಲೂಕುಗಳ ಮೇಲ್ವಿಚಾರಕರು ಇಲಾಖೆಯ ಜಿಲ್ಲಾ ಅಧಿಕಾರಿ ಬಸವರಾಜ ಬಡಿಗೇರ ಮುಖಾಂತರ ಆಯುಕ್ತರಿಗೆ ಮನವಿ ಸಲ್ಲಿಸಿದರು.

Advertisement

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ತಾಲೂಕು ವಿಸ್ತರಣಾಧಿಕಾರಿ ಹುದ್ದೆಗೆ ಪ್ರಥಮ ದರ್ಜೆ ಸಹಾಯಕರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆದರೆ ಅನೇಕ ವರ್ಷಗಳಿಂದ ಹಾಸ್ಟೆಲ್ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಮುಂಬಡ್ತಿ ನೀಡುತ್ತಿಲ್ಲ. ಹೀಗಾಗಿ ಕರ್ತವ್ಯದಲ್ಲಿ ಹಿರಿತನ ಹೊಂದಿರುವ ತಮಗೂ ಮುಂಬಡ್ತಿ ನೀಡುವಂತೆ ಮೇಲ್ವಿಚಾರಕರು ರಾಜ್ಯಾದ್ಯಂತ ಮನವಿ ನೀಡುವ ಮೂಲಕ ಆಗ್ರಹಕ್ಕೆ ಮುಂದಾಗಿದ್ದಾರೆ.

ಇಲಾಖೆಯಲ್ಲಿ ಅನುಷ್ಠಾನ ಹಂತದಲ್ಲಿ ತೀರಾ ಮುಖ್ಯ ಕರ್ತವ್ಯ ನಿರ್ವಹಿಸುತ್ತಿರುವ ನಿಲಯ ಮೇಲ್ವಿಚಾರಕರನ್ನು ಹೊರತುಪಡಿಸಿ ಉಳಿದೆಲ್ಲರಿಗೆ ಮುಂಬಡ್ತಿ ನೀಡಲಾಗುತ್ತಿದೆ. 2016-17ರಲ್ಲಿ ಎಸ್‌.ಡಿ.ಎ. ಹುದ್ದೆಯಿಂದ ಎಫ್‌.ಡಿ.ಎ. ಹುದ್ದೆಗೆ ಮುಂಬಡ್ತಿ ಹೊಂದಿದವರಿಗೆ ಈಗ ಪುನಃ ಮುಂಬಡ್ತಿಗೆ ಇಲಾಖೆ ಕಾರ್ಯಪ್ರವೃತ್ತವಾಗಿದೆ. 30 ವರ್ಷಗಳಿಂದಲೂ ನಿಷ್ಠೆಯಿಂದ ನಿಲಯ ಮೇಲ್ವಿಚಾರಕರಾಗಿ ಪ್ರಥಮ ದರ್ಜೆ ಸಹಾಯಕರ ವೇತನ ಶ್ರೇಣಿಯಲ್ಲೇ ಕಾರ್ಯನಿರ್ವಹಿಸುತ್ತಿದ್ದೇವೆ. ಹಾಲಿ ಮುಂಬಡ್ತಿ ಪ್ರಕ್ರಿಯೆ ತಡೆಹಿಡಿದು ಮುಂಬಡ್ತಿ ಪ್ರಕ್ರಿಯೆಯಲ್ಲಿ ನಿಲಯ ಮೇಲ್ವಿಚಾರಕರಿಗೂ ಕೂಡ ಎಫ್‌ಡಿಎಗಳ ಜೊತೆಗೆ ಕಚೇರಿ ಅಧೀಕ್ಷಕರು, ತಾಲೂಕು ವಿಸ್ತರಣಾಧಿಕಾರಿ ಹುದ್ದೆಗೆ ಮುಂಬಡ್ತಿ ನೀಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಶಿವಾನಂದ ನಾಯ್ಕ, ಕೆ.ಕೆ. ಗಣಪತಿ, ಮಲ್ಲಿಕಾರ್ಜುನ ಗೌಡ್ರು, ಜಗದೀಶ ನಾಯ್ಕ, ಮಂಜುಳಾ, ವೀಣಾ ನಾಯಕ, ನರಸಿಂಹ ಪಟಗಾರ, ರಾಜು ನಾಯ್ಕ, ರಾಮದಾಸ ನಾಯ್ಕ, ಸುಕ್ರು ಗೌಡ ಹಾಗೂ ಇನ್ನಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next