Advertisement

ದಂತ ವೈದ್ಯ ಡಾ|ಕೃಷ್ಣಮೂರ್ತಿ ಸಾವಿನ ಪ್ರಕರಣ: ಕನ್ನಡಕ, ಚಪ್ಪಲಿ, ಬೆಲ್ಟ್ ಪತ್ತೆ; ಬ್ಯಾಗ್‌ಗಾಗಿ ಹುಡುಕಾಟ

12:39 AM Nov 20, 2022 | Team Udayavani |

ಕುಂದಾಪುರ: ಬದಿಯಡ್ಕದ ಹಿರಿಯ ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿಗೆ ಸಂಬಂಧಿಸಿ ಕುಂದಾಪುರ ಪೊಲೀಸರು ತನಿಖೆ ಮುಂದುವರಿಸಿದ್ದು, ಸಾವು
ಸಂಭವಿಸುವ ಮುನ್ನ ಕುಂದಾಪುರದಿಂದ ಬಸ್ಸಿನಲ್ಲಿ ಸಿದ್ದಾಪುರದ ಕಡೆಗೆ ಸಂಚರಿಸಿದ್ದರು ಎನ್ನಲಾಗುತ್ತಿದೆ. ಅವರು ಬ್ಯಾಗ್‌ ಹೊಂದಿದ್ದರು ಎನ್ನುವುದು ಶಾಸ್ತ್ರೀ ಸರ್ಕಲ್‌ನಲ್ಲಿರುವ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಆದರೆ ಅದು ಇನ್ನೂ ಪತ್ತೆಯಾಗಿಲ್ಲ.

Advertisement

ನ. 8ರಂದು ಬದಿಯಡ್ಕದ ತಮ್ಮ ಕ್ಲಿನಿಕ್‌ನಿಂದ ನಾಪತ್ತೆಯಾಗಿದ್ದ ವೈದ್ಯರ ಛಿದ್ರಗೊಂಡ ದೇಹವು ಕುಂದಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯಲ್ಲಿಯ ರೈಲು ಹಳಿಯಲ್ಲಿ ನ. 9ರಂದು ಪತ್ತೆಯಾಗಿತ್ತು. ನ. 10ರಂದು ಅವರ ಪುತ್ರಿಯ ಸಹಿತ ಕುಟುಂಬಿಕರು ಮೃತದೇಹವನ್ನು ಗುರುತಿಸಿದ್ದರು.

ರೈಲು ನಿಲ್ದಾಣದ ದಾರಿ ವಿಚಾರಿಸಿದ್ದರು ಕುಂದಾಪುರಕ್ಕೆ ಕೆಎಸ್ಸಾರ್ಟಿಸಿ ಬಸ್‌ ಮೂಲಕ ಬಂದ ಕೃಷ್ಣಮೂರ್ತಿ ಅವರು ಕುಂದಾಪುರ ಬಸ್‌ ನಿಲ್ದಾಣ ತಲುಪಿದ್ದು, ಬಳಿಕ ಶಾಸ್ತ್ರಿ ಸರ್ಕಲ್‌ಗೆ ಬಂದು ಸಾರ್ವಜನಿಕರೊಬ್ಬರ ಬಳಿ ಮೂಡ್ಲಕಟ್ಟೆಯ ರೈಲು ನಿಲ್ದಾಣಕ್ಕೆ ಹೋಗುವ ದಾರಿಯ ಬಗ್ಗೆ ವಿಚಾರಿಸಿದ್ದರು. ಬಳಿಕ ಸಿದ್ದಾಪುರ ಕಡೆಗೆ ತೆರಳುವ ಖಾಸಗಿ ಬಸ್ಸಿನಲ್ಲಿ ತೆರಳಿರುವುದು ಸಿಸಿ ಕೆಮರಾದಲ್ಲಿ ಸೆರೆಯಾಗಿದೆ. ಮೂಡ್ಲಕಟ್ಟೆ ಅಥವಾ ದಾರಿ ಮಧ್ಯೆ ಎಲ್ಲಿಯೋ ಇಳಿದು ಅಲ್ಲಿಂದ ರೈಲು ಹಳಿಯಲ್ಲಿಯೇ ಹಟ್ಟಿಯಂಗಡಿಯವರೆಗೆ ನಡೆದು ಹೋಗಿರಬಹುದೇ ಅನ್ನುವ ಶಂಕೆ ವ್ಯಕ್ತವಾಗಿದೆ.

ಕೆಲವು ಸೊತ್ತುಗಳು ಪತ್ತೆ
ರೈಲು ಹಳಿಯ ಮರು ಪರಿಶೀಲನೆ ವೇಳೆ ಕೃಷ್ಣಮೂರ್ತಿ ಅವರು ಧರಿಸಿದ್ದ ಕನ್ನಡಕ, ಚಪ್ಪಲಿ ಹಾಗೂ ಬೆಲ್ಟ್ ಪತ್ತೆಯಾಗಿದೆ. ಅವರು ತಂದಿದ್ದ ಬ್ಯಾಗ್‌ ಸಿಕ್ಕರೆ ಅದರಲ್ಲಿ ಡೆತ್‌ನೋಟ್‌ ಏನಾದರೂ ಬರೆದಿಟ್ಟಿರಬಹುದೇ? ಅಥವಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದಾದರೂ ಮಹತ್ವವಾದ ಸುಳಿವು ಸಿಗಬಹುದೇ ಅನ್ನುವ ಕಾರಣಕ್ಕಾಗಿ ಆ ಬ್ಯಾಗ್‌ಗಾಗಿ ಪೊಲೀಸರಿಂದ ತೀವ್ರ ಶೋಧ ನಡೆಯುತ್ತಿದೆ ಎನ್ನಲಾಗಿದೆ.

ಈ ಬಗ್ಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹಾಕೆ ಅಕ್ಷಯ್‌ ಮಚ್ಚಿಂದ್ರ ಅವರು ಕುಂದಾಪುರದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ, ತನಿಖೆ ಹಂತ ದಲ್ಲಿರುವುದರಿಂದ ಈಗಲೇ ಏನು ಹೇಳಲು ಆಗುವುದಿಲ್ಲ. ಪೂರ್ಣವಾದ ಬಳಿಕವೇ ಮಾಹಿತಿ ನೀಡಲಾಗುವುದು ಎಂದಿದ್ದಾರೆ.

Advertisement

ಪೈವಳಿಕೆ: ಮೆರವಣಿಗೆ ಮಾಡಿದ 56 ಮಂದಿ ವಿರುದ್ಧ ಕೇಸು ದಾಖಲು
ಮಂಜೇಶ್ವರ: ಡಾ| ಕೃಷ್ಣಮೂರ್ತಿ ಅವರ ನಿಗೂಢ ಸಾವಿನ ಕುರಿತು ಸಮಗ್ರ ತನಿಖೆ ನಡೆಸಬೇಕೆಂದು ಆಗ್ರಹಿಸಿ ಪೈವಳಿಕೆಯಲ್ಲಿ ನಡೆದ ಮೆರವಣಿಗೆಯ ಹಿನ್ನೆಲೆಯಲ್ಲಿ ಮಂಜೇಶ್ವರ ಪೊಲೀಸರು 56 ಮಂದಿಯ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ. ಅವರ ಮೇಲೆ ಸಾರಿಗೆ ಅಡಚಣೆ ಸೃಷ್ಟಿಸಿರುವ ಆರೋಪ ಹೊರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next