Advertisement

ಬದಿಯಡ್ಕದ ದಂತ ವೈದ್ಯ ಡಾ|ಕೃಷ್ಣಮೂರ್ತಿ ನಿಗೂಢ ಸಾವು: ಐವರು ಆರೋಪಿಗಳಿಗೆ ನ್ಯಾಯಾಂಗ ಬಂಧನ

12:35 AM Nov 13, 2022 | Team Udayavani |

ಬದಿಯಡ್ಕ: ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ನಿಗೂಢ ಸಾವಿನ ಕುರಿತು ಬದಿಯಡ್ಕ ಮತ್ತು ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದು, ಐವರು ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Advertisement

ವೈದ್ಯರು ನಾಪತ್ತೆಯಾಗುವ ಮುನ್ನ ಬದಿಯಡ್ಕದಲ್ಲಿ ನಡೆದ ಘಟನೆಗಳ ಬಗ್ಗೆ ಬದಿಯಡ್ಕ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದೇ ವೇಳೆ ವೈದ್ಯರ ಮೃತದೇಹ ಪತ್ತೆಯಾದ ಕುಂದಾಪುರ ಠಾಣೆ ವ್ಯಾಪ್ತಿಯಲ್ಲೂ ತನಿಖೆ ನಡೆಯುತ್ತಿದೆ. ಬದಿ ಯಡ್ಕದಲ್ಲಿರುವ ಕ್ಲಿನಿಕ್‌ಗೆ ನುಗ್ಗಿದ ತಂಡ ವೈದ್ಯರಿಗೆ ಬೆದರಿಕೆ ಒಡ್ಡಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ಆ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಘಟನೆಗೆ ಸಂಬಂಧಿಸಿ ಅಶ್ರಫ್‌ ಕುಂಬಾxಜೆ (42), ಮುಹಮ್ಮದ್‌ ಶಿಹಾಬುದ್ದೀನ್‌ (39) ಉಮರುಲ್‌ ಫಾರೂಕ್‌ (42), ಮುಹಮ್ಮದ್‌ ಹನೀಫ್‌ ಯಾನೆ ಅನ್ವರ್‌ (39) ಮತ್ತು ಆಲಿ ತುಪ್ಪೆಕಲ್ಲು (40) ಅವರನ್ನು ಬದಿಯಡ್ಕ ಪೊಲೀಸರು ಬಂಧಿಸಿ ಕ್ಲಿನಿಕ್‌ಗೆ ಅಕ್ರಮ ಪ್ರವೇಶ, ಬೆದರಿಕೆ, ಆತ್ಮಹತ್ಯೆಗೆ ಪ್ರೇರಣೆ ಪ್ರಕರಣ ದಾಖಲಿಸಿದ್ದರು. ವೈದ್ಯರು ಕುಂದಾಪುರ ಬಳಿ ರೈಲು ಹಳಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದರ ಹಿಂದೆ ನಿಗೂಢತೆಗಳಿವೆ ಎನ್ನಲಾಗುತ್ತಿದೆ.

ನ. 8ರಂದು ಬೆಳಗ್ಗೆ 11 ಗಂಟೆಗೆ ಮಹಿಳೆಯೊಬ್ಬಳು ತಪಾಸಣೆಗೆಂದು ಕ್ಲಿನಿಕ್‌ಗೆ ಬಂದಿದ್ದಳು. ವೈದ್ಯರು ಆಕೆ ಯೊಂದಿಗೆ ಅನುಚಿತವಾಗಿ ವರ್ತಿಸಿ ದರೆಂದು ಆರೋಪಿಸಿ ತಂಡವೊಂದು ಬಂದು ವೈದ್ಯರಿಗೆ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿರುವುದಾಗಿ ಆರೋಪ ಕೇಳಿ ಬಂದಿದೆ. ಈ ಘಟನೆಯ ಬಳಿಕ ವೈದ್ಯರು ನಾಪತ್ತೆಯಾಗಿದ್ದರು. ಪತ್ನಿ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಇದೇ ವೇಳೆ ಕುಂಬಳೆಯಲ್ಲಿ ಅವರ ಬೈಕ್‌ ಪತ್ತೆಯಾಗಿತ್ತು. ಅನಂತರ ಕುಂದಾಪುರ ಹಟ್ಟಿಯಂಗಡಿ ಗ್ರಾಮದ ಕಾಡು ಅಜ್ಜಿಮನೆಯ ರೈಲು ಹಳಿಯಲ್ಲಿ ವೈದ್ಯರ ಮೃತದೇಹ ಪತ್ತೆಯಾಗಿತ್ತು. ಅವರು ಹೇಗೆ ಕುಂದಾಪುರಕ್ಕೆ ತಲುಪಿದ್ದಾರೆಂದು ತಿಳಿದು ಬಂದಿಲ್ಲ. ಆತ್ಮಹತ್ಯೆಗೈಯುವುದಾದರೆ ಅಷ್ಟು ದೂರಕ್ಕೆ ಯಾಕಾಗಿ ಹೋಗಿದ್ದಾರೆ ಎಂಬ ಸಂಶಯ ಸೃಷ್ಟಿಯಾಗಿದೆ. ಕುಂದಾಪುರ ಪೊಲೀಸರು ಕೂಡ ತನಿಖೆ ನಡೆಸುತ್ತಿದ್ದಾರೆ.

ಕೊಲೆ: ಬಿಜೆಪಿ ಆರೋಪ
ಡಾ| ಕೃಷ್ಣಮೂರ್ತಿ ಸಾವು ಸಂಭವಿಸಿರುವುದು ಆತ್ಮಹತ್ಯೆ ಯಿಂದಲ್ಲ. ಬದಲಾಗಿ ಕೊಲೆ ಯಾಗಿದೆ ಎಂದು ಬಿಜೆಪಿ ಕೇರಳ ರಾಜ್ಯ ಕಾರ್ಯದರ್ಶಿ ನ್ಯಾಯವಾದಿ ಕೆ. ಶ್ರೀಕಾಂತ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್‌ ರೈ, ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್‌ ನಾರಂಪಾಡಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ವೈದ್ಯರು ಮಾನಹಾನಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬ ಪ್ರಚಾರ ಸತ್ಯಕ್ಕೆ ದೂರವಾಗಿದೆ ಎಂದಿದ್ದಾರೆ.

Advertisement

ಪ್ರಕರಣದ ಹಿಂದೆ…
ಕಳೆದ ಮೂರು ದಶಕಗಳಿಂದ ಬದಿಯಡ್ಕದಲ್ಲಿ ದಂತ ಚಿಕಿತ್ಸಾಲಯ ನಡೆಸುತ್ತಿರುವ ಡಾ| ಕೃಷ್ಣಮೂರ್ತಿ ವಿರುದ್ಧ ಯಾವುದೇ ಆರೋಪ ಇದುವರೆಗೂ ಕೇಳಿ ಬಂದಿಲ್ಲ.

ಪರಂಪರಾಗತವಾಗಿ ವೈದ್ಯ ಕುಟುಂಬದ ಸದಸ್ಯರಾಗಿರುವ ಅವರ ಕ್ಲಿನಿಕ್‌ನಲ್ಲಿ ಚಿಕಿತ್ಸೆಗೆ ಬಂದ ಮಹಿಳೆಯನ್ನು ಅವಮಾನಿಸಿರುವುದಾಗಿ ಹೇಳಿದ ದಿನಾಂಕ ಅಕ್ಟೋಬರ್‌ 26 ಆಗಿದೆ. ಇದೇ ಮಹಿಳೆ ಮತ್ತೆ ಅದೇ ಡಾಕ್ಟರ್‌ ಬಳಿಗೆ ನವೆಂಬರ್‌ 5ರಂದು ಚಿಕಿತ್ಸೆಗಾಗಿ ಬಂದಿರುವುದಾಗಿ ದೂರಿನಲ್ಲಿ ಹೇಳುತ್ತಿದ್ದು, ಅದು ಸತ್ಯಕ್ಕೆ ನಿಲುಕುವಂಥದ್ದಲ್ಲ. ಅಲ್ಲದೆ ಮಹಿಳೆಯ ದೂರು ನೀಡಿರುವುದು, ಪೊಲೀಸರು ಇದನ್ನು ದಾಖಲಿಸುವುದು ಹಲವು ದಿನಗಳು ಕಳೆದ ಬಳಿಕ
ಅಂದರೆ ನ. 9ರಂದು.ಈ ನಡುವಿನ ಅವಧಿಯಲ್ಲಿ ತಂಡವೊಂದು ಕ್ಲಿನಿಕ್‌ಗೆ ಬಂದು ವೈದ್ಯರಿಗೆ ಬೆದರಿಸಿದ್ದು, ಅದೇ ಕಾರಣದಿಂದ ವೈದ್ಯರು ಕಾಣೆಯಾಗಿರುವುದು ಸ್ಪಷ್ಟವೆಂದು ಬಿಜೆಪಿ ತಿಳಿಸಿದೆ.

ಕುಂದಾಪುರ ರೈಲು ನಿಲ್ದಾಣದಿಂದ 5 ಕಿ.ಮೀ. ದೂರದಲ್ಲಿ ಮೃತದೇಹ ಪತ್ತೆಯಾಗಿರುವುದು ಕೂಡ ನಿಗೂಢವಾಗಿದೆ. ಅವರು ರೈಲಿನಲ್ಲಿ ಹೋಗಿದ್ದರೆ ಕುಂದಾಪುರದಲ್ಲಿ ಇಳಿದು ಅನ್ಯ ವಾಹನ ಸಾಗದ, ನಡೆದೇ ಹೋಗಬೇಕಾದ ಅಷ್ಟು ದೂರದ ದಾರಿಯನ್ನು ನಡೆದೇ ಕ್ರಮಿಸಿ ಆತ್ಮಹತ್ಯೆ ಮಾಡಿಕೊಳ್ಳುವ ಅಗತ್ಯವಿತ್ತೇ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ.

ಊರಿನಿಂದಲೇ ಓಡಿಸುವ ಯತ್ನ?
ವೈದ್ಯರ ಕುಟುಂಬವನ್ನು ಊರಿನಿಂದ ಓಡಿಸಬೇಕೆಂಬ ದುರಾಲೋಚನೆ ಇಡೀ ಪ್ರಕರಣದ ಹಿಂದೆ ಇದ್ದು, ಆ ನಿಟ್ಟಿನಲ್ಲೂ ಸಮಗ್ರ ತನಿಖೆ ನಡೆಸಿ ವಾಸ್ತವ ಬಹಿರಂಗಪಡಿಸಬೇಕೆಂದು ಬಿಜೆಪಿ ಮುಖಂಡರು ಆಗ್ರಹಿಸಿದ್ದಾರೆ.

ಪತ್ನಿ ನೀಡಿದ್ದ ದೂರಿನ ವಿಚಾರಣೆಯೇ ನಡೆಸಿಲ್ಲ
ವೈದ್ಯರ ನಾಪತ್ತೆ ಘಟನೆಗೂ ಕೆಲವು ದಿನಗಳ ಮೊದಲು ಪತ್ನಿ ಪ್ರೀತಿ ಕೃಷ್ಣ ಮೂರ್ತಿ ಅವರು ತಂಡವೊಂದು ಹಣಕ್ಕಾಗಿ ಪತಿಗೆ ಬೆದರಿಕೆ ಹಾಕಿದೆ ಎಂದು ದೂರು ನೀಡಿದ್ದರೂ ಪೊಲೀಸರು ತನಿಖೆ ನಡೆಸಿಲ್ಲ ಎಂದು ಆರೋಪಿಸಿದ್ದಾರೆ.

ವಿಹಿಂಪ ವಿರುದ್ಧ ಪ್ರಕರಣ ದಾಖಲು
ನ. 11ರಂದು ಬದಿಯಡ್ಕ ದಲ್ಲಿ ಅನುಮತಿ ರಹಿತವಾಗಿ ಮೆರವಣಿಗೆ ನಡೆಸಲಾಗಿದೆ ಎಂಬ ಆರೋಪದಲ್ಲಿ ವಿಹಿಂಪ ನೇತಾರರಾದ ಹರೀಶ್‌ ನಾರಂಪಾಡಿ, ಹರೀಶ್‌ ಗೋಸಾಡ, ಅವಿನಾಶ್‌, ಭಾಸ್ಕರ, ಅನಿಲ್‌ ಕುಮಾರ್‌ ಸಹಿತ 100 ಮಂದಿ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಡಾ| ಕೃಷ್ಣಮೂರ್ತಿ ನಿಗೂಢ ಸಾವಿಗೆ ಕಾರಣರಾದವರನ್ನು ಬಂಧಿಸಿ ಕಠಿನ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿ ವಿಹಿಂಪ ನೇತೃತ್ವದಲ್ಲಿ ಮೆರವಣಿಗೆ ನಡೆಸಲಾಗಿತ್ತು.

ಉನ್ನತ ಮಟ್ಟದ ತನಿಖೆ ಆಗ್ರಹಿಸಿ ಕರ್ನಾಟಕ ಗೃಹಸಚಿವರಿಗೆ ಮನವಿ
ಮಂಗಳೂರು: ದಂತ ವೈದ್ಯ ಡಾ| ಕೃಷ್ಣಮೂರ್ತಿ ಸರ್ಪಂಗಳ ಅವರ ಸಾವು ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡುವಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರಿಗೆ ವಿಶ್ವಹಿಂದೂ ಪರಿಷತ್‌ ಮನವಿ ಸಲ್ಲಿಸಿದೆ.

ಇದೊಂದು ಕೊಲೆಯಂಬ ಸಂಶಯ ವ್ಯಕ್ತವಾಗಿದ್ದು ಕೇರಳದ ಬದಿಯಡ್ಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೆ ಕೇರಳದ ಪೊಲೀಸರ ತನಿಖೆಯ ಮೇಲೆ ವಿಶ್ವಾಸವಿಲ್ಲದ ಕಾರಣ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ವಿಎಚ್‌ಪಿ ಪ್ರಾಂತ ಸಹ ಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಅವರು ಮನವಿಯಲ್ಲಿ ತಿಳಿಸಿದ್ದಾರೆ. ಶಾಸಕರಾದ ವೇದವ್ಯಾಸ ಕಾಮತ್‌, ಡಾ| ಭರತ್‌ ಶೆಟ್ಟಿ, ಬಿಜೆಪಿ ಜಿಲ್ಲಾ ವಕ್ತಾರ ಜಗದೀಶ್‌ ಶೇಣವ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next