ಚೆನ್ನೈ:ಸ್ಮಶಾನಕ್ಕೆ ತೆರಳಲು ದಾರಿ ಕೊಡುವುದಿಲ್ಲ ಎಂದು ಮೇಲ್ಜಾತಿ ಜನರು ಅಡ್ಡಿಪಡಿಸಿದ ಪರಿಣಾಮ ದಲಿತ ವ್ಯಕ್ತಿಯ ಶವವನ್ನು ಸೇತುವೆ ಮೇಲಿಂದ ಹಗ್ಗ ಕಟ್ಟಿ ಕೆಳಗಿಳಿಸಿ ಅಂತ್ಯಸಂಸ್ಕಾರಕ್ಕೆ ಹೊತ್ತೊಯ್ಯುತ್ತಿರುವ ಘಟನೆ ತಮಿಳುನಾಡಿನ ವೆಲ್ಲೂರ್ ಜಿಲ್ಲೆಯಲ್ಲಿ ನಡೆದಿದ್ದು, ಈ ವೀಡಿಯೋ ತುಣುಕು ಇದೀಗ ಭಾರೀ ವೈರಲ್ ಆಗಿದೆ.
ಹಗ್ಗದ ಮೂಲಕ ಸ್ಟ್ರೇಚರ್ ಸಹಿತ ದಲಿತ ವ್ಯಕ್ತಿ ಶವವನ್ನು ಸುಮಾರು 20 ಅಡಿ ಆಳದ ಸೇತುವೆ ಮೇಲಿನಿಂದ ನಿಧಾನಕ್ಕೆ ಕೆಳಗಿಳಿಸುತ್ತಿದ್ದು, ಈ ಸಂದರ್ಭದಲ್ಲಿ ಶವದ ಮೇಲೆ ಹಾಕಿದ್ದ ಹೂವಿನ ಹಾರ ತುಂಡಾಗಿ ಕೆಳಗೆ ಬೀಳುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.
ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ಕುಪ್ಪನ್(65ವರ್ಷ) ದಲಿತ ವ್ಯಕ್ತಿ ಸಾವನ್ನಪ್ಪಿದ್ದರು. ಇದೀಗ ಘಟನೆ ಕುರಿತ ವೀಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಸೇತುವೆ ಕೆಳಗೆ ನಿಂತಿದ್ದ ಜನರ ಶವವನ್ನು ಇಳಿಸಿಕೊಂಡು ಅಂತ್ಯಸಂಸ್ಕಾರ ನಡೆಸುವ ಸ್ಥಳದತ್ತ ಕೊಂಡೊಯ್ಯುತ್ತಿರುವ ಘಟನೆ ವೆಲ್ಲೂರಿನ ನಾರಾಯಣಪುರಂ ಗ್ರಾಮದಲ್ಲಿ ನಡೆದಿದ್ದು, ಈ ಸಂದರ್ಭದಲ್ಲಿ ಸೆರೆಹಿಡಿದಿದ್ದ ವೀಡಿಯೋ ತುಣುಕು ಆನ್ ಲೈನ್ ತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಾಣಿಯಂಬಾಡಿ ತಾಲೂಕಿನಲ್ಲಿರುವ ದಲಿತ ಕಾಲೋನಿಗೆ ಅಂತ್ಯ ಸಂಸ್ಕಾರ ನಡೆಸಲು ಯಾವುದೇ ಸ್ಮಶಾನ ಇಲ್ಲ. ಇದೇ ನಮ್ಮ ಸ್ಮಶಾನ. ಹೀಗಾಗಿ ಪ್ರತಿ ಬಾರಿ ನಾವು ಶವವನ್ನು ಸೇತುವೆ ಮೇಲಿನಿಂದ ಕೆಳಗಿಳಿಸಿ ಅಂತ್ಯಸಂಸ್ಕಾರ ನಡೆಸುತ್ತೇವೆ ಎಂದು ಮೃತ ಸಂಬಂಧಿಯೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇಲ್ಲಿರುವ ಸ್ಮಶಾನಕ್ಕೆ ತೆರಳಲು ಮೇಲ್ವರ್ಗದ ಜನರ ಜಾಗದಿಂದ ತೆರಳಬೇಕು. ಆದರೆ ಈಗ ಆ ಜಾಗದ ಸುತ್ತ ಬೇಲಿಯನ್ನು ನಿರ್ಮಿಸಿದ್ದಾರೆ. ನಾವು ಕೇಳಿದರೂ ನಮಗೆ ದಾರಿ ಕೊಡುವುದಿಲ್ಲ ಎಂಬುದು ಮೇಲ್ವರ್ಗದ ಜನರ ವಾದವಾಗಿದೆ. ಈ ನಿಟ್ಟಿನಲ್ಲಿ ನಮಗೆ ಬೇರೆ ದಾರಿ ಇಲ್ಲದೆ ಸೇತುವೆ ಮೇಲಿನಿಂದ ಶವ ಕೆಳಗಿಸಿ ಹೊತ್ತೊಯ್ಯುವುದಾಗಿ ಮತ್ತೊಬ್ಬ ಗ್ರಾಮಸ್ಥ ವಿಜಯ್ ತಿಳಿಸಿದ್ದಾರೆ.