ಬೆಂಗಳೂರು: ಪ್ರಕರಣವೊಂದರಲ್ಲಿ ಪರಿಶಿಷ್ಟ ಜಾತಿಯ ಯುವಕನನ್ನು ಠಾಣೆಗೆ ಕರೆದೊಯ್ದು ಹಲ್ಲೆ ನಡೆಸಿದಲ್ಲದೆ, ಮೂತ್ರ ನೆಕ್ಕಿಸಿದ ಆರೋಪ ಹೊತ್ತಿರುವ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡು ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಅರ್ಜುನ್‌ಗೆ ನಿರೀಕ್ಷಣ ಜಾಮೀನು ನೀಡಲು ಹೈಕೋರ್ಟಿನ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್‌ಕುಮಾರ್ ಅವರ ಏಕ ಸದಸ್ಯ ನ್ಯಾಯಪೀಠ ನಿರಾಕರಿಸಿತು.
ಆರೋಪಿಯ ಕೃತ್ಯ ಹೀನಾಯ ವಾಗಿದೆ. ಪ್ರಕರಣದ ತನಿಖೆ ಪ್ರಗತಿಯಲ್ಲಿದ್ದು, ಈ ಹಂತದಲ್ಲಿ ಜಾಮೀನು ನೀಡಲಾಗದು ಎಂದು ನ್ಯಾಯಪೀಠ ಹೇಳಿದೆ.
ಎಸ್‌ಐ ವಿರುದ್ಧ ಆರೋಪ:
ಮಹಿಳೆಯೊಬ್ಬರಿಗೆ ಕರೆ ಮಾಡಿ ಅನುಚಿತವಾಗಿ ವರ್ತಿಸಿದ ಆರೋಪ ಸಂಬಂಧ ಚಿಕ್ಕಮಗಳೂರು ಜಿಲ್ಲೆಯ ಕಿರುಗುಂಡ ಗ್ರಾಮದ ಪುನೀತ್ ಎಂಬ ಯುವಕನನ್ನು ಮೇ 10ರಂದು ಠಾಣೆಗೆ ಕರೆದೊಯ್ದಿದ್ದ ಅರ್ಜುನ್, ಬಟ್ಟೆ ಬಿಚ್ಚಿಸಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿದ್ದರು. ಅಲ್ಲದೆ, ತೊಡೆಯ ಹತ್ತಿರ ಕಬ್ಬಿಣದ ರಾಡ್ ಇರಿಸಿ ಮನಬಂದಂತೆ ಹಲ್ಲೆ ನಡೆಸಿದಲ್ಲದೆ ಮೂತ್ರ ನೆಕ್ಕಿಸಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಅರ್ಜುನ್‌ನನ್ನು ಅಮಾನತು ಮಾಡಿದ ಸರಕಾರ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿತ್ತು.