Advertisement

Dengue ಭೀತಿ: ಪ್ಲೇಟ್‌ಲೆಟ್‌ ದಾಸ್ತಾನಿಗೆ ಸೂಚನೆ

02:43 AM Sep 16, 2023 | Team Udayavani |

ಬೆಂಗಳೂರು: ಡೆಂಗ್ಯೂ ಪ್ರಕರಣಗಳು ಏರುಗತಿಯಲ್ಲಿದ್ದು ರಕ್ತ ನಿಧಿಗಳಲ್ಲಿ ಪ್ಲೇಟ್‌ಲೆಟ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಆರೋಗ್ಯ ಇಲಾಖೆ ಎಲ್ಲ ಸರಕಾರಿ ರಕ್ತ ನಿಧಿಗಳಲ್ಲಿ ಪ್ಲೇಟ್‌ಲೆಟ್‌ ದಾಸ್ತಾನು ಮಾಡಿಕೊಳ್ಳಲು ಸೂಚನೆ ನೀಡಿದೆ.

Advertisement

ಬೆಂಗಳೂರು ನಗರ ಮತ್ತು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಒಂದು ತಿಂಗಳಲ್ಲಿ 3,170 ಡೆಂಗ್ಯೂ ಪ್ರಕರಣಗಳು ವರದಿಯಾಗಿವೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 2,040 ಹಾಗೂ ಇತರ ಜಿಲ್ಲೆಗಳಲ್ಲಿ ಒಟ್ಟು 1,130 ಪ್ರಕರಣ ಗಳು ವರದಿಯಾಗುವುದರ ಜತೆಗೆ ಆಸ್ಪತ್ರೆಗೆ ದಾಖಲಾ ಗುವವರ ಪ್ರಮಾಣವೂ ಹೆಚ್ಚಾಗಿದೆ. ಇದರಿಂದ ಪ್ಲೇಟ್‌ಲೆಟ್‌ಗೆ ಬೇಡಿಕೆ ಹೆಚ್ಚುತ್ತಿದೆ.

ಶೇ. 60ರಷ್ಟು ಏರಿಕೆ
ರಾಜ್ಯದಲ್ಲಿ ಪ್ರಸ್ತುತ ರಕ್ತನಿಧಿಗಳಲ್ಲಿ ಪ್ಲೇಟ್‌ಲೆಟ್‌ ಬೇಡಿಕೆ ಪ್ರಮಾಣ ಸರಿಸಮಾರು ಶೇ. 60ರಷ್ಟು ಏರಿಕೆ ಕಂಡಿದೆ. ಬೆಂಗಳೂರಿನ ರಾಷ್ಟ್ರೋತ್ಥಾನ ರಕ್ತನಿಧಿಯಲ್ಲಿ ಎರಡು ಮೂರು ತಿಂಗಳ ಹಿಂದೆ ದಿನವೊಂದಕ್ಕೆ 710 ಯೂನಿಟ್‌ ರ್‍ಯಾಂಡಮ್‌ ಡೋನರ್‌ ಪ್ಲೇಟ್‌ಲೆಟ್‌ಗೆ ಬೇಡಿಕೆ ಇತ್ತು. ಆದರೆ ಪ್ರಸ್ತುತ ದಿನವೊಂದಕ್ಕೆ ರ್‍ಯಾಂಡಮ್‌ ಡೋನರ್‌ನಿಂದ 6070 ಯೂನಿಟ್‌ ಹಾಗೂ ಸಿಂಗಲ್‌ ಡೋನರ್‌ನಿಂದ 15 ಯೂನಿಟ್‌ ಪ್ಲೇಟ್‌ಲೆಟ್‌ಗೆ ಬೇಡಿಕೆ ಇದೆ. ಇಲ್ಲಿ ಸಂಗ್ರಹಿಸಿದ ಪ್ಲೇಟ್‌ಲೆಟ್‌ಗಳನ್ನು ನಗರದ ವಿಕ್ಟೋರಿಯಾ, ವಾಣಿವಿಲಾಸ ಸಹಿತ ಸರಕಾರಿ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ ಎಂದು ರಾಷ್ಟ್ರೋತ್ಥಾನ ರಕ್ತನಿಧಿಯ ಅಧಿಕಾರಿ ಹೇಳಿದ್ದಾರೆ.

ಯಾರಿಗೆ ಪ್ಲೇಟ್‌ಲೆಟ್‌ ಅಗತ್ಯ?
ರಕ್ತದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ ತೀವ್ರವಾಗಿ ಇಳಿಕೆಯಾಗುವುದು ಡೆಂಗ್ಯೂ ಜ್ವರದ ಒಂದು ಲಕ್ಷಣ. ಸಾಮಾನ್ಯವಾಗಿ ಪ್ಲೇಟ್‌ಲೆಟ್‌ ಸಂಖ್ಯೆ 10 ಸಾವಿರಕ್ಕಿಂತ ಕಡಿಮೆಯಾದವರಿಗೆ ಮಾತ್ರ ಪ್ಲೇಟ್‌ಲೆಟ್‌ ಸಹಿತ ರಕ್ತ ನೀಡಲಾಗುತ್ತದೆ.

5 ದಿನ ಅವಧಿ
ರಾಜ್ಯದ ಸರಕಾರಿ ರಕ್ತನಿಧಿಗಳಲ್ಲಿ ಪ್ಲೇಟ್‌ಲೆಟ್‌ ಕೊರತೆಯಿಲ್ಲ. ರಕ್ತದಾನ ಶಿಬಿರಗಳು ನಿರಂತರವಾಗಿ ನಡೆಯುತ್ತಿದ್ದು, ಇದೇ ವೇಳೆ ರ್‍ಯಾಂಡಮ್‌ ಪ್ಲೇಟ್‌ಲೆಟ್‌ ಸಂಗ್ರಹಿಸಲಾಗುತ್ತಿದೆ. ಆದರೆ ಇದನ್ನು ಕೇವಲ 5 ದಿನಗಳ ವರೆಗೆ ದಾಸ್ತಾನು ಇರಿಸಿಕೊಳ್ಳಲು ಸಾಧ್ಯ.

Advertisement

ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ರಕ್ತನಿಧಿ ಕೇಂದ್ರದಲ್ಲಿ ರಕ್ತ ಹಾಗೂ ಪ್ಲೇಟ್‌ಲೆಟ್‌ ಶೇಖರಿಸಿಡುವಂತೆ ಸೂಚನೆ ನೀಡಲಾಗಿದೆ ಎಂದು ರಕ್ತ ಸುರಕ್ಷೆ ಮತ್ತು ಎಸ್‌ಟಿಐ ಉಪನಿರ್ದೇಶಕ ಡಾಣ ಡಿ. ಜಯರಾಜು “ಉದಯವಾಣಿ’ಗೆ ತಿಳಿಸಿದರು.

ಭಯ ಬೇಡ!
ನಿರಂತರವಾಗಿ ರಕ್ತದಾನ ಶಿಬಿರಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ದಿನದಲ್ಲಿ ಪ್ಲೇಟ್‌ಲೆಟ್‌ ಕೊರತೆ ಎದುರಾಗುವ ಸಾಧ್ಯತೆಗಳು ಕಡಿಮೆ ಯಾಗಲಿವೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಪ್ರಸ್ತುತ ಸರಕಾರಿ ರಕ್ತನಿಧಿಗಳಲ್ಲಿ ಪ್ಲೇಟ್‌ಲೆಟ್‌ ಕೊರತೆ ಇಲ್ಲ. ಡೆಂಗ್ಯೂ ನಿಯಂತ್ರಣಕ್ಕೆ ಸಂಬಂಧಿಸಿ ಈಗಾಗಲೇ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುತ್ತೋಲೆ ಹೊರಡಿಸಲಾಗಿದೆ. ಮೈಸೂರು, ತುಮಕೂರು, ಮಂಗಳೂರು ಮಹಾನಗರ ಪಾಲಿಕೆಗೆ ಸೆ. 16ರಂದು ಡೆಂಗ್ಯೂ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಸುತ್ತೋಲೆ ಹೊರಡಿಸಲಾಗುತ್ತದೆ.
-ಡಾ| ರಣದೀಪ್‌, ಆರೋಗ್ಯ ಇಲಾಖೆ ಆಯುಕ್ತ

ಪ್ರಸ್ತುತ ಪ್ಲೇಟ್‌ಲೆಟ್‌ ಬೇಡಿಕೆ ಒಂದು ತಿಂಗಳಿನಿಂದ ಭಾರೀ ಏರಿಕೆಯಾಗಿದೆ. ನಿತ್ಯ ಸಂಗ್ರಹಿಸಲಾಗುವ 70 ಯೂನಿಟ್‌
ಪ್ಲೇಟ್‌ಲೆಟ್‌ಗಳು 24 ತಾಸುಗಳ ಒಳಗೆ ಖಾಲಿಯಾಗುತ್ತಿವೆ.
-ಅನುರಾಧಾ ಜೆ.
ರಾಷ್ಟ್ರೋತ್ಥಾನ ರಕ್ತನಿಧಿ

-  ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next