Advertisement

ನಾಲ್ಕೂವರೆ ತಿಂಗಳಲ್ಲಿ 104 ಡೆಂಗ್ಯೂ ಪ್ರಕರಣ

11:38 AM May 17, 2019 | keerthan |

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ನಾಲ್ಕೂವರೆ ತಿಂಗಳ ಅವಧಿಯಲ್ಲಿ 56 ಡೆಂಗ್ಯೂ ಪ್ರಕರಣ ವರದಿಯಾಗಿದ್ದರೆ ಉಡುಪಿ ಜಿಲ್ಲೆಯಲ್ಲಿ ಈ ಅವಧಿಯಲ್ಲಿ 48 ಪ್ರಕರಣಗಳು ವರದಿಯಾಗಿವೆ.

Advertisement

ದ.ಕ. ಜಿಲ್ಲೆಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಡೆಂಗ್ಯೂ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿರುವಂತೆ ಕಾಣುತ್ತಿದೆ. 2018ರ ಜನವರಿಯಿಂದ ಮೇ ತಿಂಗಳವರೆಗೆ 84 ಪ್ರಕರಣ ಜಿಲ್ಲೆಯಲ್ಲಿ ಪತ್ತೆಯಾಗಿತ್ತು. ಅದೇ 2019ರಿಂದ ಮೇ 15ರ ವರೆಗೆ ಜಿಲ್ಲೆಯಲ್ಲಿ ಒಟ್ಟು 56 ಡೆಂಗ್ಯೂ ದೃಢಪಟ್ಟಿವೆ.

ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ಜಿ.ಪಂ. ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದ.ಕ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮಕೃಷ್ಣ ಅವರು, 2018ರಲ್ಲಿ ಜನವರಿಯಿಂದ ಡಿಸೆಂಬರ್‌ ವರೆಗೆ ಜಿಲ್ಲೆಯಲ್ಲಿ ಒಟ್ಟು 584 ಡೆಂಗ್ಯೂ ಪ್ರಕರಣಗಳು ವರದಿ ಯಾಗಿದ್ದವು. ಕಳೆದ ವರ್ಷ ಮೇ ತಿಂಗಳಿನಲ್ಲಿ ಒಟ್ಟು 46 ಮಂದಿಗೆ ಡೆಂಗ್ಯೂ ಬಾಧಿಸಿತ್ತು. ಈ ವರ್ಷ ಮೇ ತಿಂಗಳಲ್ಲಿ 15ನೇ ತಾರೀಕಿನವರೆಗೆ 9 ಪ್ರಕರಣಗಳು ವರದಿಯಾಗಿವೆ. 2016ರಲ್ಲಿ 460 ಮಂದಿಯಲ್ಲಿ ರೋಗ ಪತ್ತೆಯಾಗಿದ್ದರೆ 2017ರಲ್ಲಿ ಗಣನೀಯ ಇಳಿಮುಖವಾಗಿ 136 ಪ್ರಕರಣಗಳು ವರದಿಯಾಗಿದ್ದವು. ಆದರೆ 2018ರಲ್ಲಿ ಪ್ರಕರಣಗಳಲ್ಲಿ ಹೆಚ್ಚಳವಾಗಿ 584 ಮಂದಿ ಬಾಧಿತರಾಗಿದ್ದರು ಎಂದರು.

ಉಡುಪಿ ಜಿಲ್ಲೆಯಲ್ಲಿ 2018ರಲ್ಲಿ 228 ಡೆಂಗ್ಯೂ ಪ್ರಕರಣ ವರದಿಯಾ ಗಿದ್ದರೆ ಈ ವರ್ಷದ ಆರಂಭದಿಂದ ಇಲ್ಲಿ ತನಕ 48 ಪ್ರಕರಣ ವರದಿಯಾಗಿವೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಓಂ ಪ್ರಕಾಶ್‌ ಕಟ್ಟಿಮನಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈ ವರ್ಷ 37 ಮಂದಿ ಡೆಂಗ್ಯೂ ಪೀಡಿತರಾಗಿದ್ದು, ಜಿಲ್ಲೆಯ ಇತರ ಭಾಗಗಳಿಗೆ ಹೋಲಿಸಿದರೆ ಅತೀ ಹೆಚ್ಚು ಪ್ರಕರಣಗಳಾಗಿವೆ. ಉಳಿದಂತೆ ಮಂಗಳೂರು ತಾಲೂಕಿನಲ್ಲಿ 9, ಬಂಟ್ವಾಳದಲ್ಲಿ 7, ಬೆಳ್ತಂಗಡಿಯಲ್ಲಿ 2, ಸುಳ್ಯದಲ್ಲಿ ಒಂದು ಪ್ರಕರಣ ವರದಿ ಯಾಗಿವೆ. ಪುತ್ತೂರಿನಿಂದ ಡೆಂಗ್ಯೂಗೆ ಸಂಬಂಧಪಟ್ಟಂತೆ ಯಾವುದೇ ಪ್ರಕರಣ ಗಳು ವರದಿಯಾಗಿಲ್ಲ ಎಂದರು. ಜಿಲ್ಲಾ ರೋಗವಾಹಕ ಅಶ್ರಿತ ರೋಗ  ಗಳ (ಮಲೇರಿಯಾ) ಡಾ| ನಿಯಂತ್ರ ಣಾಧಿಕಾರಿ ಅರುಣ್‌ ಕುಮಾರ್‌ ಮಾತನಾಡಿ, ಡೆಂಗ್ಯೂ ನಿಯಂತ್ರಣ ಕುರಿತಂತೆ ಅವಶ್ಯ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದೆ ಎಂದರು.

Advertisement

575 ಮಲೇರಿಯಾ ಪ್ರಕರಣ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2019ರ ಜನವರಿಯಿಂದ ಎಪ್ರಿಲ್‌ವರೆಗೆ 75579 ಮಂದಿಯ ರಕ್ತ ಪರೀಕ್ಷೆ ಮಾಡಲಾಗಿದ್ದು ಒಟ್ಟು 575 ಮಂದಿಯಲ್ಲಿ ಮಲೇರಿಯಾ ರೋಗ ಪತ್ತೆಯಾಗಿದೆ. ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಗರಿಷ್ಠ ಪ್ರಕರಣಗಳು ಪತ್ತೆಯಾಗಿದ್ದು ಒಟ್ಟು 544 ಮಂದಿ ಬಾಧಿತರಾಗಿದ್ದರು ಎಂದು ಡಾ| ಅರುಣ್‌ ವಿವರಿಸಿದರು. ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ಪ್ರವೀಣ್‌ ಉಪಸ್ಥಿತರಿದ್ದರು.

ಕೋಡಿಂಬಾಳದಲ್ಲಿ ಹಲವರಿಗೆ ಡೆಂಗ್ಯೂ
ಕಡಬ: ಕೋಡಿಂಬಾಳ ಗ್ರಾಮದ ಕೆಲ ಪ್ರದೇಶಗಳಲ್ಲಿ ಶಂಕಿತ ಡೆಂಗ್ಯೂ ಜ್ವರ ಪೀಡಿತರಾಗಿದ್ದಾರೆ. ಗುರುವಾರ ಆರೋಗ್ಯ ಇಲಾಖೆಯ ಸಿಬಂದಿ ಹಾಗೂ ಆಶಾ ಕಾರ್ಯ ಕರ್ತೆಯರು ಜ್ವರ ಪೀಡಿತ ಪ್ರದೇಶಗಳ ಮನೆಗಳಿಗೆ ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿ ಜ್ವರ ಪೀಡಿತರ ಚಿಕಿತ್ಸೆಗೆ ಮಾರ್ಗದರ್ಶನ ನೀಡಿದ್ದಾರೆ.
ಕೋಡಿಂಬಾಳದ ಪಾಲಪ್ಪೆ, ಮುಳಿಯ, ಕೊಠಾರಿ, ಉದೇರಿ ಪ್ರದೇಶಗಳಲ್ಲಿ ಜ್ವರ ಹೆಚ್ಚಾಗಿ ಕಾಣಿಸಿಕೊಂಡಿದೆ. ಕಡಬ ಸರಕಾರಿ ಆಸ್ಪತ್ರೆಯಲ್ಲಿ ಈ ಬಾರಿ ಡೆಂಗ್ಯೂ ಜ್ವರದ ಯಾವುದೇ ಪ್ರಕರಣ ದೃಢಪಟ್ಟಿಲ್ಲವಾದರೂ ಆಸ್ಪತ್ರೆಯ ಪ್ರಯೋಗಾಲಯದಲ್ಲಿ ತಪಾಸಣೆ ಮಾಡಿದ ರಕ್ತದ ಮಾದರಿಗಳ ಪ್ರಕಾರ ಸುಮಾರು 15-20 ಮಂದಿ ಶಂಕಿತ ಡೆಂಗ್ಯೂ ಪೀಡಿತರನ್ನು ಪತ್ತೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next