Advertisement

ಜಿಲ್ಲೆಯಲ್ಲಿ ಡೆಂಗ್ಯೂ ಹರಡುವ ಸಾಧ್ಯತೆ

10:59 PM Jun 13, 2019 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ಪ್ರಸ್ತುತ ವರ್ಷವೂ ಮಾರಕ ಡೆಂಗ್ಯೂ ವ್ಯಾಪಕವಾಗಿ ಹರಡುವ ಸಾಧ್ಯತೆಯಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ. ಇನ್‌ಸ್ಟಿಟ್ಯೂಟ್‌ ಆಫ್‌ ಹೋಮಿಯೋಪತಿಕ್‌ ಕೇರಳ ಕಾಂಞಂಗಾಡ್‌ ಯೂನಿಟ್‌ ಮತ್ತು ಯೆನಪೋಯ ಹೋಮಿಯೋಪತಿಕ್‌ ಮೆಡಿಕಲ್‌ ಕಾಲೇಜು ಸಂಯುಕ್ತವಾಗಿ ನಡೆಸಿದ ಅಧ್ಯಯನದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಡೆಂಗ್ಯೂ ಜ್ವರ ಹರಡುವ ಸಾಧ್ಯತೆಯಿದೆ ಎಂದು ಕಂಡುಕೊಂಡಿದೆ. ಈ ಹಿನ್ನೆಲೆಯಲ್ಲಿ ಐ.ಎಚ್‌.ಕೆ. ಕಾಂಞಂಗಾಡ್‌ ಯೂನಿಟ್‌ ಮತ್ತು ಯೆನಪೋಯ ಮೆಡಿಕಲ್‌ ಕಾಲೇಜು ಸಂಯುಕ್ತವಾಗಿ ಉಚಿತ ಮಲ್ಟಿ ಸ್ಪೆಷಾಲಿಟಿ ಮೆಡಿಕಲ್‌ ಶಿಬಿರಗಳನ್ನು ಆಯೋಜಿಸಲು ತೀರ್ಮಾನಿಸಿದೆ.

Advertisement

ಚಿಗೂನ್‌ಗುನ್ಯಾ, ಹಳದಿ ಜ್ವರ, ಎಚ್‌1 ಎನ್‌1 ಹರಡುವ ಸಾಧ್ಯತೆಯೂ ಇದೆ ಎಂದು ಅಧ್ಯಯನ ವರದಿಯಲ್ಲಿ ಹೇಳಿದೆ. ಕರಾವಳಿ ಮತ್ತು ಗುಡ್ಡಗಾಡು ಪ್ರದೇಶದಲ್ಲಿ ಡೆಂಗ್ಯೂ ವ್ಯಾಪಕವಾಗಿ ಹರಡುವ ಸಾಧ್ಯತೆ ಹೆಚ್ಚಿದೆ ಎಂದೂ ವರದಿಯಲ್ಲಿ ಹೇಳಿದೆ. ಅತ್ಯಂತ ಹೆಚ್ಚಿನ ಪ್ರಮಾಣದ ಬಿಸಿಲ ಬೇಗೆಯ ಬೆನ್ನಲ್ಲೇ ಇದ್ದಕ್ಕಿದ್ದಂತೆ ಮಳೆ ಸುರಿದಿರುವುದರಿಂದ ವೈರಸ್‌ ವ್ಯಾಪಕವಾಗಿ ಹರಡುವ ಸಾಧ್ಯತೆ ಅಧಿಕವಾಗಿದೆ.

ಸಾಮಾನ್ಯವಾಗಿ ಜುಲೈ, ಆಗಸ್ಟ್‌ ತಿಂಗಳಲ್ಲಿ ಡೆಂಗ್ಯೂ ಜ್ವರ ಹರಡುವುದು ಹೆಚ್ಚು. ಆದರೆ ಕಾಸರಗೋಡು ಜಿಲ್ಲೆಯಲ್ಲಿ ಮೇ ತಿಂಗಳಲ್ಲೇ ಡೆಂಗ್ಯೂ ಜ್ವರ ಕಂಡುಕೊಂಡಿ ರುವುದಾಗಿಯೂ ಕರಾವಳಿ ಪ್ರದೇಶದಲ್ಲಿ ಈಗಾಗಲೇ ಹಳದಿ ಜ್ವರ ಹರಡುತ್ತಿದೆ ಎಂದೂ ವರದಿಯಲ್ಲಿ ಸೂಚಿಸಲಾಗಿದೆ.

ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸುವವರಿಗೆ ಉಚಿತ ಲ್ಯಾಬ್‌ ಪರಿಶೋಧನೆ, ಇಸಿಜಿ, ಸ್ಕ್ಯಾನಿಂಗ್‌ ಮೊದಲಾದವುಗಳನ್ನು ಮೆಡಿಕಲ್‌ ಕಾಲೇಜಿನಲ್ಲಿ ನಡೆಸಲಾಗುವುದೆಂದು ಐ.ಎಚ್‌.ಕೆ. ಜಿಲ್ಲಾ ಅಧ್ಯಕ್ಷ ಡಾ| ಹಾರಿಸನ್‌, ಡಾ| ಜಯಶಂಕರ್‌, ಡಾ| ನಿತಾಂತ್‌ ಬಲಶ್ಯಾಂ, ಡಾ| ಎಂ.ಎಸ್‌. ಪೀತಾಂಬರನ್‌, ಡಾ| ವಿವೇಕ್‌ ಸುಧಾಕರನ್‌, ಡಾ| ಅರುಣ್‌ ಕುಮಾರ್‌, ಡಾ| ಶ್ರೀಕುಮಾರ್‌ ತಿಳಿಸಿದರು. ವಸತಿ ಸೌಕರ್ಯ, ಆಹಾರ, ಪ್ರಯಾಣ ವೆಚ್ಚವನ್ನೂ ನೀಡಲಾಗುವುದು ಎಂದಿದ್ದಾರೆ.

ನಿವಾರಣೆಗೆ ಉಪಾಯಗಳು
ಡೆಂಗ್ಯೂವನ್ನು ನಿವಾರಿಸಲು ಇರುವ ಅತ್ಯುತ್ತಮ ನಿವಾರಣೋಪಾಯ ಎಂದರೆ ಅದು ಸೊಳ್ಳೆಗಳಿಂದ ಕಡಿಸಿ ಕೊಳ್ಳದೆ ಇರುವುದಾಗಿದೆ. ಸೊಳ್ಳೆ ಪರದೆಗಳು ಮತ್ತು ಮನೆಯಿಂದ ಹೊರಗೆ ಇರುವ ಸಂದರ್ಭದಲ್ಲಿ ಉದ್ದ ತೋಳಿನ ಬಟ್ಟೆಗಳನ್ನು, ಸಾಕ್ಸ್‌ಗಳನ್ನು ಮತ್ತು ಬೂಟ್‌ಗಳನ್ನು ಧರಿಸುವ ಮೂಲಕ ಡೆಂಗ್ಯೂವನ್ನು ನಿವಾರಿಸಿಕೊಳ್ಳ ಬಹುದು. ಏಡಿಸ್‌ ಈಜಿಪ್ಟಿ ಸೊಳ್ಳೆಗಳು ಹೂಕುಂಡಗಳು, ನೀರಿನ ತೊಟ್ಟಿಗಳು, ಟೈರ್‌ಗಳಲ್ಲಿ ಸಂತಾನೋತ್ಪತ್ತಿಯನ್ನು ಮಾಡುತ್ತವೆ. ಇದರ ಮೊಟ್ಟೆಗಳು ಒಣ ಸ್ಥಿತಿಯಲ್ಲಿಯೇ ಒಂದು ವರ್ಷದವರೆಗೆ ಜೀವಿಸುತ್ತವೆ. ನಿಮ್ಮ ಮನೆಯ ಅಕ್ಕ-ಪಕ್ಕ ಸೊಳ್ಳೆಗಳು ಮೊಟ್ಟೆಗಳನ್ನು ಇಡಲು ಅವಕಾಶ ಇರುವ ಕುಂಡಗಳು, ಟೈರ್‌ಗಳು ಮತ್ತಿತರ ವಸ್ತು ಮತ್ತು ಸ್ಥಳಗಳನ್ನು ಸ್ವತ್ಛ ಮಾಡಿ, ನೀರು ನಿಲ್ಲದಂತೆ ಮಾಡುವ ಮೂಲಕ ಸೊಳ್ಳೆಗಳನ್ನು ನಿಯಂತ್ರಿಸಬಹುದು.

Advertisement

ಲಕ್ಷಣಗಳು
ಡೆಂಗ್ಯೂ ಸೋಕಿದವರಿಗೆ ತೀವ್ರವಾದ ತಲೆನೋವು ಇರುತ್ತದೆ. ತಲೆಭಾರ ಇರುತ್ತದೆ. ಜ್ವರ ಬರುತ್ತಾ, ಬಿಡುತ್ತಾ ಇರುತ್ತದೆ. ಒಂದೊಂದು ಸಲ ಜ್ವರದ ತೀವ್ರತೆ 104 ಡಿಗ್ರಿ ಫ್ಯಾರನ್‌ ಹೀಟ್‌ ವರೆಗೂ ಹೆಚ್ಚಾಗಬಹುದು. ಈ ರೀತಿ ನಿತ್ಯ ಆಗುತ್ತಿದ್ದರೆ ಕೂಡಲೆ ವೈದ್ಯರನ್ನು ಭೇಟಿಯಾಗಬೇಕು. ಕೀಲು ನೋವು, ಸ್ನಾಯುಗಳ ನೋವು ಹೆಚ್ಚಾಗಿ ಇರುತ್ತದೆ. ಮೂಗಿನಿಂದ ರಕ್ತಸ್ರಾವ ಆಗುತ್ತಿರುತ್ತದೆ. ಕಾಯಿಲೆ ತೀವ್ರಗೊಂಡರೆ ಈ ರಕ್ತಸ್ರಾವ ಅಧಿಕವಾಗಿರುತ್ತದೆ. ಡೆಂಗ್ಯೂ ಸೋಕಿದವರಿಗೆ ಬಾಯಿ ಒಣಗುತ್ತಿರುತ್ತದೆ. ದಾಹವಾಗುತ್ತಿರುತ್ತದೆ. ಹೊಟ್ಟೆಯಲ್ಲಿ ಸ್ವಲ್ಪ ನೋವು, ವಾಂತಿ ಬರುವಂತೆ, ವಾಂತಿ ಆಗುತ್ತಿರುವಂತೆ, ಭೇದಿ ಸಮಸ್ಯೆಗಳೂ ಕಾಣಿಸಿಕೊಳ್ಳುತ್ತವೆ.

Advertisement

Udayavani is now on Telegram. Click here to join our channel and stay updated with the latest news.

Next