Advertisement

ಸೊಳ್ಳೆ ನಿಯಂತ್ರಿಸಿದರೆ ಡೆಂಘೀ ಮುಕ್ತ

09:20 PM Jul 30, 2019 | Lakshmi GovindaRaj |

ಚಿಕ್ಕಬಳ್ಳಾಪುರ: ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಉತ್ತಮ ಸ್ಥಿತಿಯಲ್ಲಿ ನಿರ್ವಹಣೆ ಮಾಡಿ ಸೊಳ್ಳೆಗಳನ್ನು ನಿಯಂತ್ರಿಸಿದಲ್ಲಿ ಡೆಂಘೀ ಜ್ವರದಿಂದ ಮುಕ್ತರಾಗಬಹುದು. ಡೆಂಘೀ ಜ್ವರ ನಿಯಂತ್ರಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಯಾವುದೇ ಜ್ವರ ಬಂದರೂ ಮೊದಲು ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯೋಗೇಶ್‌ಗೌಡ ತಿಳಿಸಿದರು.

Advertisement

ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಮರ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಜಿಲ್ಲಾಸ್ಪತ್ರೆಯ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಡೆಂಘೀ ವಿರೋಧಿ ಮಾಸಾಚರಣೆ ಪ್ರಯುಕ್ತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಜನ ಜಾಗೃತಿ ಜಾಥಾಗೆ ಹಸಿರು ನಿಶಾನೆ ತೋರಿ ಅವರು ಮಾತನಾಡಿದರು.

ಡೆಂಘೀ ಪ್ರಕರಣಗಳ ಹೆಚ್ಚಳ: ಜಿಲ್ಲೆಯಲ್ಲಿ ಇತ್ತೀಚೆಗೆ ಡೆಂಘೀ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿದೆ. ಹಾಗಾಗಿ ಈ ರೋಗವನ್ನು ನಿಯಂತ್ರಿಸಲು ನೀರಿನ ತೊಟ್ಟಿ, ಹಳೆಯ ಟೈರು, ಮಣ್ಣಿನ ಮಡಿಕೆ ಹಾಗೂ ನೀರು ನಿಲ್ಲುವ ಸ್ಥಳಗಳನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ವಾರಕ್ಕೊಮ್ಮೆ ಮನೆಯಲ್ಲಿರುವ ಡ್ರಂ, ಬ್ಯಾರಲ್‌, ಬಿಂದಿಗೆ, ಸಿಮೆಂಟ್‌ ತೊಟ್ಟಿಗಳಲ್ಲಿರುವ ನೀರು ಖಾಲಿ ಮಾಡಿ ಒಣಗಿಸಿ ಮತ್ತೆ ನೀರು ಭರ್ತಿ ಮಾಡಿಕೊಳ್ಳಬೇಕು.

ಮಳೆ ನೀರು ಸಂಗ್ರಹಣೆಯಾಗುವಂತಹ ಬಿಸಾಡಿದ ಟೈರುಗಳು, ತೆಂಗಿನ ಚಿಪ್ಪುಗಳು, ಪ್ಲಾಸ್ಟಿಕ್‌ ಕಪ್ಪುಗಳು, ಒಡೆದ ಮಡಿಕೆಗಳನ್ನು ಸೂಕ್ತ ವಿಲೇವಾರಿ ಮಾಡಬೇಕು ಹಾಗೂ ಈಡೀಸ್‌ ಸೊಳ್ಳೆಗಳು ಉತ್ಪತ್ತಿಯಾಗದಂತೆ ಎಚ್ಚರ ವಹಿಸಿ ಸೊಳ್ಳೆಯ ಕಚ್ಚುವಿಕೆಯನ್ನು ತಪ್ಪಿಸಲು ಹಗಲು, ರಾತ್ರಿ ವೇಳೆಯಲ್ಲಿ ಸೊಳ್ಳೆಯ ಪರದೆ, ಸೊಳ್ಳೆಬತ್ತಿ ಹಾಗೂ ಪೂರ್ಣವಾದ ಉಡುಪುಗಳನ್ನು ಧರಿಸಬೇಕು ಎಂದರು.

ನೀರು ನಿಲ್ಲದಂತೆ ಎಚ್ಚರ ವಹಿಸಿ: ಈಡಿಸ್‌ ಈಜಿಪೈ ಸೊಳ್ಳೆ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ರೋಗ ಹರಡಲಿದ್ದು, ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವತ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ ಹಾಗೂ ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ. ಆದ್ದರಿಂದ ಸೊಳ್ಳೆಗಳ ಸಂತತಿ ತಡೆಗಟ್ಟಲು ಸಾರ್ವಜನಿಕರು ತಮ್ಮ ಮನೆಯ ಪರಿಸರದಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು ಎಂದರು.

Advertisement

ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ: ಡೆಂಘೀ ಜ್ವರಕ್ಕೆ ಯಾವುದೇ ನಿರ್ದಿಷ್ಟ ಔಷಧ ಅಥವಾ ಲಸಿಕೆ ಇಲ್ಲ. ರೋಗ ಲಕ್ಷಣಗಳಿಗನುಸಾರವಾಗಿ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆಯಬಹುದು. ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆಯನ್ನು ಉಚಿತವಾಗಿ ಪಡೆಯಬಹುದು. ಜಿಲ್ಲಾ ಆಸ್ಪತ್ರೆ ಪ್ರಯೋಗಾಲಯದಲ್ಲಿ ಡೆಂಘೀ ಜ್ವರ ಪತ್ತೆ ಹಚ್ಚಲು ವಿಶೇಷ ರಕ್ತ ಪರೀಕ್ಷೆ ಉಚಿತವಾಗಿ ಲಭ್ಯವಿರುತ್ತದೆ. ರೋಗ ಪೀಡಿತರು ವೈದ್ಯರ ಚಿಕಿತ್ಸೆಯೊಂದಿಗೆ ಹೆಚ್ಚು ದ್ರವ ರೂಪದ ಆಹಾರಗಳನ್ನು ಗಂಜಿ, ಒಆರ್‌ಎಸ್‌, ಎಳನೀರು, ಹಣ್ಣಿನ ರಸಗಳನ್ನು ಸೇವಿಸಿ ವಿಶ್ರಾಂತಿ ಪಡೆದಲ್ಲಿ ರೋಗ ನಿಯಂತ್ರಣ ಸುಲಭ ಸಾಧ್ಯವಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಪ್ರಕಾಶ್‌, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಎಚ್‌.ಎಸ್‌ ಮಹೇಶ್‌, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಧಾ, ಆರೋಗ್ಯ ಸುರಕ್ಷಿತ ಅಧಿಕಾರಿ ಜಿ.ಹರೀಶ್‌ ಉಪಸ್ಥಿತರಿದ್ದರು.

ಕರಪತ್ರ ಹಂಚಿ ಜಾಗೃತಿ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಗರದ ಜಿಲ್ಲಾಸ್ಪತ್ರೆಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ಜನ ಜಾಗೃತಿ ಜಾಥಾ ನಡೆಸಿ ಡೆಂಘೀ ಜ್ವರಕ್ಕೆ ಕಾರಣವಾಗಿರುವ ಅಂಶಗಳ ಬಗ್ಗೆ ಹಾಗೂ ಜ್ವರ ನಿಯಂತ್ರಣಕ್ಕೆ ಕೈಗೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಬಗ್ಗೆ ಕರಪತ್ರಗಳನ್ನು ಹಂಚಿ ಅರಿವು ಮೂಡಿಸಲಾಯಿತು. ಆರೋಗ್ಯ ಇಲಾಖೆ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು, ನರ್ಸಿಂಗ್‌ ವಿದ್ಯಾರ್ಥಿಗಳು ನಗರದ ಪ್ರಮುಖ ರಸ್ತೆಗಳಲ್ಲಿ ಜಾಥಾ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next