Advertisement

Dengue Fever: ಲಕ್ಷಣಗಳು ಮತ್ತು ಮುನ್ನೆಚ್ಚರಿಕೆಗಳು

11:42 AM Sep 17, 2023 | Team Udayavani |

ಇತ್ತೀಚೆಗಿನ ದಿನಗಳಲ್ಲಿ ಗಮನಾರ್ಹವಾಗಿ ಹರಡುತ್ತಿರುವ ಡೆಂಗ್ಯೂ ಜ್ವರವು ಏಡಿಸ್‌ ಈಜಿಪ್ಟಿ ಎಂಬ ಸೋಂಕುಪೀಡಿತ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್‌ ಮೂಲಕ ಬರುವ ಸೋಂಕು. ಡೆಂಗ್ಯೂ ಜ್ವರ ಇರುವ ರೋಗಿಯ ರಕ್ತ ಹೀರಿದ ಸೊಳ್ಳೆಯು ಬೇರೆ ವ್ಯಕ್ತಿಗಳಿಗೆ ಕಚ್ಚುವುದರಿಂದ ಈ ವೈರಸ್‌ ಒಬ್ಬರಿಂದೊಬ್ಬರಿಗೆ ಹರಡುತ್ತದೆ. ಡೆಂಗ್ಯೂ ಜ್ವರ ಹರಡುವ ಸೊಳ್ಳೆಗಳು ಸಾಮಾನ್ಯವಾಗಿ ಹಗಲುಹೊತ್ತಿನಲ್ಲಿ ಕಡಿಯುತ್ತವೆ.

Advertisement

ಎಲ್ಲ ಡೆಂಗ್ಯೂ ಸೋಂಕುಪೀಡಿತ ವ್ಯಕ್ತಿಗಳಲ್ಲಿ ತೀವ್ರವಾದ ರೋಗಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಹೆಚ್ಚಿನ ಜನರಲ್ಲಿ ಯಾವುದೇ ರೋಗ ಲಕ್ಷಣಗಳು ಇರದೇ ಇರಬಹುದು. ಇನ್ನು ಕೆಲವು ಜನರಲ್ಲಿ ವಿಪರೀತ ಆಯಾಸ, ಮೈಕೈ ನೋವು, ಮಾಂಸಖಂಡ ಮತ್ತು ಗಂಟುಗಳ ನೋವು, ಸ್ನಾಯು ಸೆಳೆತ, ತಲೆನೋವು, ವಾಂತಿ ಇತ್ಯಾದಿ ಸಾಮಾನ್ಯ ಜ್ವರದ ಲಕ್ಷಣಗಳು ಮಾತ್ರ ಇದ್ದು, ಒಂದೆರಡು ವಾರಗಳಲ್ಲಿ ಗುಣಮುಖರಾಗಬಹುದು. ಬೆರಳೆಣಿಕೆಯಷ್ಟು ಜನರಲ್ಲಿ ಮಾತ್ರ ಜ್ವರವು ಉಲ್ಬಣಿಸಿ ತೀವ್ರವಾದ ಹೊಟ್ಟೆನೋವು, ಭೇದಿ, ರಕ್ತಸ್ರಾವ, ಉಸಿರಾಟದ ಲಕ್ಷಣಗಳು, ಅಂಗಾಂಗಗಳ ವೈಫಲ್ಯ ಮತ್ತು ಆಘಾತ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ಡೆಂಗ್ಯೂ ಸೋಂಕು ಪೀಡಿತ ಜನರ ರಕ್ತದಲ್ಲಿ ಪ್ಲೇಟ್ಲೆಟ್‌ ಸಂಖ್ಯೆ ಹಾಗೂ ಬಿಳಿರಕ್ತ ಕಣಗಳ ಸಂಖ್ಯೆ ಕಡಿಮೆಯಾಗುತ್ತದೆ ಮತ್ತು ಟ್ರಾನ್ಸ್‌ಮೈನೇಸಸ್‌ (TransaminasesAST, ALT) ಜಾಸ್ತಿಯಾಗುತ್ತದೆ. ಜ್ವರ ತೀವ್ರವಾದಲ್ಲಿ ಮತ್ತು ಸೂಕ್ತ ಚಿಕಿತ್ಸೆ ನೀಡದೆ ಇದ್ದಲ್ಲಿ, ಪ್ಲೇಟ್ಲೆಟ್‌ ಸಂಖ್ಯೆ ಅತೀ ಕಡಿಮೆಯಾಗುವುದರಿಂದ ರಕ್ತಸ್ರಾವದಂತಹ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಅಲ್ಲದೆ ರೋಗದ ಲಕ್ಷಣಗಳು ಉಲ್ಬಣಿಸಿ, ರೋಗಿಯು ಸಂಪೂರ್ಣವಾಗಿ ಗುಣಮುಖವಾಗುವ ಸಾಧ್ಯತೆಗಳು ಕಡಿಮೆಯಾಗಬಹುದು.

ಈ ರೋಗಲಕ್ಷಣಗಳ ತೀವ್ರತೆಯು ವೈರಾಣುವಿನ ಕಾಯಿಲೆ ಉಂಟುಮಾಡುವ ಸಾಮರ್ಥ್ಯ ಮತ್ತು ವ್ಯಕ್ತಿಯ ರೋಗನಿರೋಧಕ ಅಥವಾ ಪ್ರತಿರಕ್ಷಣ ಸ್ಥಿತಿಯ ಮೇಲೆ ಅವಲಂಬಿತವಾಗಿರುತ್ತದೆ. ಆದುದರಿಂದ ತತ್‌ಕ್ಷಣ ಒದಗಿಸುವ ಸೂಕ್ತವಾದ ಪೂರಕ ಚಿಕಿತ್ಸೆ ಮತ್ತು ಸರಿಯಾದ ರೀತಿಯ ಆರೋಗ್ಯ ನಿರ್ವಹಣೆ- ಇವೆರಡೂ ಡೆಂಗ್ಯೂ ರೋಗಲಕ್ಷಣಗಳ ತೀವ್ರತೆಯನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ವೈದ್ಯರೊಂದಿಗೆ ಸಮಾಲೋಚಿಸದೇ ಸ್ವಯಂ ಔಷಧ ತೆಗೆದುಕೊಳ್ಳಲು ನಿರ್ಧರಿಸುವುದು ತಪ್ಪು ಮತ್ತು ಇದು ರೋಗದ ಉಲ್ಬಣಕ್ಕೆ ಕಾರಣವಾಗಬಹುದು.

ಹೆಚ್ಚು ಕಡಿಮೆ ಜ್ವರದ ಲಕ್ಷಣಗಳು ಒಂದೇ ರೀತಿಯಾಗಿರುವುದರಿಂದ ಡೆಂಗ್ಯೂ ಜ್ವರವನ್ನು ಪ್ರಯೋಗಾಲದ ಪರೀಕ್ಷೆಯಿಂದ ದೃಢೀಕರಿಸುವುದು ಬಹಳ ಅಗತ್ಯ. ಆದ್ದರಿಂದ ಯಾವುದೇ ರೀತಿಯ ಜ್ವರ ಬಂದಾಗ ಕಡೆಗಣಿಸದೆ ವೈದ್ಯರನ್ನು ಭೇಟಿಯಾಗಿ ನಿರ್ದಿಷ್ಟವಾದ ರಕ್ತ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಸುರಕ್ಷೆಯ ದೃಷ್ಟಿಯಿಂದ ಉತ್ತಮ. ಡೆಂಗ್ಯೂ ಜ್ವರವನ್ನು ಖಚಿತಪಡಿಸಲು ನಿರ್ದಿಷ್ಟ ರೀತಿಯ ಪರೀಕ್ಷೆಗಳು ಲಭ್ಯವಿರುತ್ತವೆ. ಎನ್‌ಎಸ್‌ 1 ಆ್ಯಂಟಿಜನ್‌ ಟೆಸ್ಟ್ (NS1 antigen test) ಮಾಡಿಸುವುದರಿಂದ ಆರಂಭದ ಹಂತದಲ್ಲಿಯೇ ಜ್ವರವನ್ನು ಡೆಂಗ್ಯೂ ಜ್ವರ ಎಂದು ದೃಢೀಕರಿಸಬಹುದು. ರೋಗದ ತೀವ್ರ ಹಂತದಲ್ಲಿ ಹಾಗೂ ರೋಗದ ಲಕ್ಷಣಗಳು ಕಡಿಮೆಯಾದ ಹಂತದಲ್ಲಿ ಕೂಡ ಇತರ ನಿರ್ದಿಷ್ಟ ಡೆಂಗ್ಯೂ ಪರೀಕ್ಷೆಗಳನ್ನು ಮಾಡಿಸಿಕೊಳ್ಳಬಹುದು.‌

Advertisement

ಸೊಳ್ಳೆ ನಿಯಂತ್ರಣ ಮುಖ್ಯ

ಡೆಂಗ್ಯೂ ಜ್ವರದ ಹರಡುವಿಕೆಯನ್ನು ತಡೆಗಟ್ಟಲು ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯ. ಸೊಳ್ಳೆಗಳು ನಿಂತ ನೀರಿನಲ್ಲಿ ಮೊಟ್ಟೆ ಇಟ್ಟು ಸಂತಾನೋತ್ಪತ್ತಿ ಮಾಡುತ್ತವೆ. ಆದುದರಿಂದ ಸೊಳ್ಳೆಗಳ ಉತ್ಪತ್ತಿಯನ್ನು ನಿಯಂತ್ರಿಸಲು ಎಲ್ಲಿಯೂ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು ಅಥವಾ ನೀರು ನಿಲ್ಲುವಂತಹ ಯಾವುದೇ ರೀತಿಯ ವಸ್ತುಗಳನ್ನು ಹೊರಗೆ ಎಸೆಯದೆ ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳಬೇಕು. ಮನೆಯ ಕಿಟಕಿಗಳಿಗೆ ಸೊಳ್ಳೆ ಪರದೆಗಳನ್ನು ಬಳಸಬಹುದು. ಕೈಕಾಲುಗಳಿಗೆ ಸೊಳ್ಳೆ ನಿವಾರಕವನ್ನು ಹಚ್ಚಬಹುದು. ಆದರೆ ಮಕ್ಕಳಲ್ಲಿ ಯಾವುದೇ ಸೊಳ್ಳೆ ನಿವಾರಕಗಳನ್ನು ಬಳಸುವಾಗ ವೈದ್ಯರ ಸಲಹೆ ಮತ್ತು ತಯಾರಕರ ಸೂಚನೆಗಳನ್ನು ತಪ್ಪದೆ ಅನುಸರಿಸಬೇಕು. ಸೊಳ್ಳೆಕಡಿತದಿಂದ ಸುರಕ್ಷಿತವಾಗಿರಲು ಮೈ ಮುಚ್ಚುವಂತಹ ಬಟ್ಟೆಗಳನ್ನು ಧರಿಸಬೇಕು. ಮಲಗುವಾಗ ಸೊಳ್ಳೆ ಪರದೆಯನ್ನು ಉಪಯೋಗಿಸುವುದು ಉತ್ತಮ.

ಪ್ರತಿಯೊಬ್ಬರೂ ಡೆಂಗ್ಯೂ ಎಂಬ ಮಾರಕ ಜ್ವರ ಹರಡುವ ರೀತಿ ಮತ್ತು ಡೆಂಗ್ಯೂ ಹರಡದಂತೆ ತಡೆಗಟ್ಟುವ ವಿಧಾನಗಳನ್ನು ಅರ್ಥ ಮಾಡಿಕೊಂಡು, ಸುತ್ತಮುತ್ತಲಿನ ಪರಿಸರವನ್ನು ಸ್ವತ್ಛವಾಗಿಟ್ಟು ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.

ಸದಾನಂದ ನಾಯಕ್‌,

ಲ್ಯಾಬೋರೇಟರಿ ಟೆಕ್ನಾಲಜಿಸ್ಟ್,

ಕೆಎಂಸಿ, ಮಾಹೆ, ಮಣಿಪಾಲ

-ಡಾ| ಕುಸುಮಾಕ್ಷಿ ನಾಯಕ್‌

ಅಸೋಸಿಯೇಟ್‌ ಪ್ರೊಫೆಸರ್‌

ಪ್ರಯೋಗಾಲಯ ವಿಭಾಗ,

ಎಂಸಿಎಚ್‌ಪಿ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್‌ ವಿಭಾಗ, ಕೆಎಂಸಿ, ಮಂಗಳೂರು)

Advertisement

Udayavani is now on Telegram. Click here to join our channel and stay updated with the latest news.