Advertisement

ಡೆಂಗ್ಯೂ ವ್ಯಾಪಕ: ಸರಕಾರಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ರೋಗಿಗಳ ಸಾಲು !

11:05 PM Jul 26, 2019 | mahesh |

ಮಹಾನಗರ: ನಗರದಲ್ಲಿ ಡೆಂಗ್ಯೂ ಜ್ವರದ ಸಂಖ್ಯೆ ದಿನೇದಿನೇ ಹೆಚ್ಚುತ್ತಿದ್ದರೆ, ಇತ್ತ ಸಾಮಾನ್ಯ ಜ್ವರಕ್ಕೂ ಭಯಭೀತರಾಗಿ ಸಾರ್ವಜನಿಕರು ಜ್ವರ ಪರೀಕ್ಷೆ ಮಾಡಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ಸರಕಾರಿ ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ಹೊರರೋಗಿಗಳ ಸಂಖ್ಯೆ ಹೆಚ್ಚಳದ ಒತ್ತಡದಿಂದಾಗಿ, ಸರತಿ ಸಾಲಿನಲ್ಲಿ ಕಾದರೂ ಪರೀಕ್ಷೆ ಮಾಡಿಸಿಕೊಳ್ಳ ಲಾಗದೆ ಜನ ವಾಪಸಾ ಗಬೇಕಾದ ಪರಿಸ್ಥಿತಿ ನಿರ್ಮಾಣ ವಾಗಿದೆ.

Advertisement

ನಗರದ ಪ್ರಮುಖ ಸರಕಾರಿ ಆಸ್ಪತ್ರೆಗಳಿಗೆ ಡೆಂಗ್ಯೂ ಸಂಬಂಧ ತಪಾಸಣೆಗೆ ತೆರಳಿದಾಗ, ತುರ್ತಾಗಿ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಅಸಹಾಯ ಕರಾಗಿ ವಾಪಾಸ್‌ ಹೋಗುತ್ತಿರುವುದಾಗಿ ಅನೇಕ ರೋಗಿಗಳು ಇದೀಗ ಉದಯವಾಣಿಗೆ ಕರೆ ಮಾಡಿ ಅವಲತ್ತುಕೊಂಡಿದ್ದಾರೆ. ಹೀಗಾಗಿ, ನಗರದಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸರಕಾರಿ ಆಸ್ಪತ್ರೆಗಳಲ್ಲಿ ರೋಗಿಗಳ ತುರ್ತು ಚಿಕಿತ್ಸೆಗೆ ಹೆಚ್ಚಿನ ವೈದ್ಯರು, ಸಿಬಂದಿ, ಅದಕ್ಕೆ ಪೂರಕವಾದ ಸೌಲಭ್ಯಗಳನ್ನು ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ಈ ಬಗ್ಗೆ ಅಧಿಕಾರಿಗಳಲ್ಲಿ ವಿಚಾರಿಸಿದರೆ, ರೋಗಿಗಳಿಗೆ ಸಮಸ್ಯೆಯಾಗದಂತೆ ಎಲ್ಲ ರೀತಿಯ ವ್ಯವಸ್ಥೆಗಳನ್ನು ಆಸ್ಪತ್ರೆಗಳಲ್ಲಿ ಮಾಡಲಾಗಿದೆ. ಅವಸರ ಮಾಡದೇ, ಸ್ಪಂದಿಸಬೇಕು ಎಂದು ತಿಳಿಸಿದ್ದಾರೆ.

ನಗರದಲ್ಲಿ ತಿಂಗಳ ಅವಧಿಯಲ್ಲಿ ಡೆಂಗ್ಯೂ ಜ್ವರ ವ್ಯಾಪಿಸಿದ್ದು ಹದಿನೈದು ದಿನಗಳಲ್ಲಿ ಮೂವರು ಡೆಂಗ್ಯೂ ಜ್ವರದ ಹಿನ್ನೆಲೆ ಮತ್ತು ಓರ್ವ ಬಾಲಕ ಶಂಕಿತ ಡೆಂಗ್ಯೂ ಜ್ವರದಿಂದ ಮೃತಪಟ್ಟಿದ್ದಾನೆ. ಕಳೆದೊಂದು ವಾರದ ಅವಧಿಯಲ್ಲಿ 225ಕ್ಕೂ ಹೆಚ್ಚು ಮಂದಿ ಡೆಂಗ್ಯೂ ಜ್ವರದಿಂದ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ; ಪಡೆಯುತ್ತಿದ್ದಾರೆ. ಈ ಪೈಕಿ ಬಹುತೇಕರು ಮಂಗಳೂರಿನ ವರು. ಇದ ರಿಂದಾಗಿ ನಗರದ ಜನತೆಯಲ್ಲಿ ಸಹಜವಾಗಿಯೇ ಡೆಂಗ್ಯೂ ಜ್ವರದ ಬಗ್ಗೆ ಆತಂಕ ಆವರಿಸಿದೆ.

ಹೆಚ್ಚುತ್ತಿದೆ ಡೆಂಗ್ಯೂ ಪ್ರಕರಣ
ಕದ್ರಿ ಕಂಬಳ ಕೋಸ್‌ಮೋಸ್‌ ಲೇನ್‌ನಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು, ಈ ಭಾಗದ ಬಹುತೇಕ ನಿವಾಸಿಗಳು ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದಾರೆ. ಡೆಂಗ್ಯೂ ಹರಡುವ ಸೊಳ್ಳೆಗಳ ಉತ್ಪತ್ತಿಗೆ ಪೂರಕವಾದ ವಾತಾವರಣ ಈ ಭಾಗದಲ್ಲಿದ್ದು, ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದು ಅಲ್ಲಿನ ನಿವಾಸಿ ಪತ್ರಿಕೆಗೆ ತಿಳಿಸಿದ್ದಾರೆ.

ಎಂಪಿಡಬ್ಲ್ಯು ಕಾರ್ಯಕರ್ತರಿಗೂ ಡೆಂಗ್ಯೂ?
ಡೆಂಗ್ಯೂ ನಿಯಂತ್ರಣ ನಿಟ್ಟಿನಲ್ಲಿ ಮನೆಮನೆ ಭೇಟಿ, ತಪಾಸಣೆಗೆ ಜಿಲ್ಲಾಡಳಿತ, ಆರೋಗ್ಯ ಇಲಾಖೆಯು ವಿವಿಧೋದ್ದೇಶ ಕಾರ್ಯಕರ್ತರನ್ನು ಬಳಕೆ ಮಾಡಿಕೊಂಡಿದೆ. ದಿನಕ್ಕೆ ಹಲವಾರು ಮನೆಗಳಿಗೆ ಈ ಕಾರ್ಯಕರ್ತರು ಭೇಟಿ ನೀಡಿ ಡೆಂಗ್ಯೂಗೆ ಕಾರಣವಾಗುವ ವಾತಾವರಣವಿದೆಯೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಡೆಂಗ್ಯೂ ಬಾಧಿತ ಪ್ರದೇಶಗಳಿಗೂ ಈ ಕಾರ್ಯಕರ್ತರು ಹೋಗಿರುವುದರಿಂದ ಕೆಲವು ವಿವಿಧೋದ್ದೇಶ ಕಾರ್ಯಕರ್ತರಲ್ಲಿಯೂ ಡೆಂಗ್ಯೂ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ. ವಿವಿಧೋದ್ದೇಶ ಕಾರ್ಯಕರ್ತರೋರ್ವರು “ಉದಯವಾಣಿ’ಗೆ ನೀಡಿರುವ ಮಾಹಿತಿ ಪ್ರಕಾರ, “ಯಾವುದೇ ಸುರಕ್ಷತೆ ಕ್ರಮಗಳಿಲ್ಲದೆ ಡೆಂಗ್ಯೂ ನಿಯಂತ್ರಣ-ಪರಿಶೀಲನೆಗಾಗಿ ಕಳುಹಿಸಲಾಗುತ್ತಿದೆ. ತನಗೂ ಸಹಿತ ಹಲವರಿಗೆ ಜ್ವರ ಕಾಣಿಸಿಕೊಂಡಿದೆ. ಕೆಲವರು ಡೆಂಗ್ಯೂವಿನಿಂದ ಬಳಲುತ್ತಿದ್ದಾರೆ. ತಾನು ಜ್ವರ ಪರೀಕ್ಷೆ ಮಾಡಿಸಿಕೊಳ್ಳಲು ವೆನಾÉಕ್‌ ಆಸ್ಪತ್ರೆಗೆ ತೆರಳಿದ್ದಾಗ ಅಲ್ಲಿ ಸರತಿ ಸಾಲಿನಲ್ಲಿ ನಿಂತು ಕಾದರೂ ಕೊನೆಗೂ ತಪಾಸಣೆ ನಡೆಸಲಾಗದೆ ವಾಪಸಾಗಬೇಕಾಯಿತು’ ಎಂದು ಅಸಮಾಧಾನ ತೋಡಿಕೊಂಡಿದ್ದಾರೆ.

Advertisement

24×7 ಲಭ್ಯ
ಈ ಬಗ್ಗೆ ವೆನಾಲಾಕ್‌ ವೈದ್ಯಕೀಯ ಅಧೀಕ್ಷಕಿ ಡಾ| ರಾಜೇಶ್ವರಿ ದೇವಿ ಅವರಲ್ಲಿ ವಿಚಾರಿಸಿದಾಗ, ವೆನಾಲಾಕ್‌ ಆಸ್ಪತ್ರೆಯ ಮೆಡಿಸಿನ್‌ ಹೊರ ರೋಗಿ ವಿಭಾಗಕ್ಕೆ ದಿನವೊಂದಕ್ಕೆ ಸುಮಾರು 300ಕ್ಕೂ ಹೆಚ್ಚು ರೋಗಿಗಳು ಬರುತ್ತಿದ್ದು, ಈ ಪೈಕಿ ಶೇ. 60 ಮಂದಿ ಜ್ವರಕ್ಕಾಗಿಯೇ ಆಗಮಿಸುತ್ತಾರೆ. ಜ್ವರ ಪರೀಕ್ಷೆಗೆ ಬಂದ ರೋಗಿಗಳಿಗೆ ಆಸ್ಪತ್ರೆಯಲ್ಲಿರುವ ಮಲೇರಿಯ ಕ್ಲಿನಿಕ್‌ನಲ್ಲಿ ಮಲೇರಿಯ, ಡೆಂಗ್ಯೂ, ಎಚ್‌1ಎನ್‌1, ಇಲಿಜ್ವರಗಳ ತಪಾಸಣೆ ಮಾಡಲಾಗುತ್ತದೆ. ಕ್ಲಿನಿಕ್‌ನಲ್ಲಿ ನಾಲ್ವರು ಟೆಕ್ನೀಶಿಯನ್‌ಗಳಿದ್ದು, 24×7ಲಭ್ಯರಿರುತ್ತಾರೆ. ಜ್ವರ ತಪಾಸಣೆ, ಔಷಧಕ್ಕಾಗಿ ಬರುವ ಯಾವುದೇ ರೋಗಿಗಳನ್ನು ತಪಾಸಣೆ ಮಾಡದೇ ಕಳುಹಿಸುವುದಿಲ್ಲ. ಜನರಿಗೆ ಎಲ್ಲ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿದೆ. ಆದರೆ ಜನ ಅವಸರ ಮಾಡಬಾರದು ಎಂದಿದ್ದಾರೆ.

32 ಆರೋಗ್ಯ ಕೇಂದ್ರಗಳು
ನಗರದಲ್ಲಿ ಒಟ್ಟು 30 ಪ್ರಾಥಮಿಕ ಆರೋಗ್ಯ ಕೇಂದ್ರ, 2 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿಯೂ ಜನರ ಆರೋಗ್ಯ ದೃಷ್ಟಿಯಿಂದ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ವೈದ್ಯರ ಸೇವೆ, ತಪಾಸಣೆ ಸದಾ ಲಭ್ಯವಿರುತ್ತದೆ. ಜ್ವರ ಬಂದ ತತ್‌ಕ್ಷಣ ಅದನ್ನು ಡೆಂಗ್ಯೂ ಎಂಬುದಾಗಿ ಜನ ಪರಿಗಣಿಸಬಾರದು. ಅನಗತ್ಯವಾಗಿ ಡೆಂಗ್ಯೂ ಕಾರ್ಡ್‌ ಟೆಸ್ಟ್‌ ಮಾಡಬಾರದೆಂಬ ಸರಕಾರದ ನಿರ್ದೇಶನವಿರುವ ಹಿನ್ನೆಲೆಯಲ್ಲಿ ಜ್ವರ ಪರೀಕ್ಷೆಗೆ ಬಂದ ರೋಗಿಗೆ ಮಲೇರಿಯ, ಇತರ ಪರೀಕ್ಷೆಗಳನ್ನು ಮಾಡುತ್ತೇವೆ. ಯಾವುದೂ ಇಲ್ಲವೆಂದಾದಲ್ಲಿ ಬಳಿಕ ವೈದ್ಯಕೀಯ ನಿಯಮಕ್ಕೆ ಅನುಸಾರವಾಗಿ ಡೆಂಗ್ಯೂ ಪರೀಕ್ಷೆ ಮಾಡಲಾಗುತ್ತದೆ ಎಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ| ನವೀನ್‌ಕುಮಾರ್‌ ತಿಳಿಸಿದ್ದಾರೆ.

ಶಿಬಿರ ನಡೆಯುತ್ತಿದೆ; ಯುಪಿಎಚ್‌ಸಿಗೆ ತೆರಳಿ
ಜ್ವರ ತಪಾಸಣೆಗೆ ಜನರಿಗೆ ಆರೋಗ್ಯ ಇಲಾಖೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ. ಈಗಾಗಲೇ ಡೆಂಗ್ಯೂ ಕಾಣಿಸಿಕೊಂಡ ಮಂಗಳಾದೇವಿ, ಗುಜ್ಜರಕೆರೆ, ಅರೆಕೆರೆಬೈಲು ಪ್ರದೇಶಗಳಲ್ಲಿ ವಿಶೇಷ ತಪಾಸಣೆ ಶಿಬಿರಗಳನ್ನು ತೆರೆಯಲಾಗಿದ್ದು, ವೈದ್ಯಕೀಯ ಕಾಲೇಜುಗಳ ಸಹಕಾರದೊಂದಿಗೆ ಶಿಬಿರ ಮುನ್ನಡೆ ಯುತ್ತಿದೆ. ಜ್ವರ ಬಂದಾಗ ಕೇವಲ ವೆಲಾಕ್‌ ಆಸ್ಪತ್ರೆ ಅಲ್ಲ; ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ (ಯುಪಿಎಚ್‌ಸಿ) ತೆರಳಿ ತಪಾಸಣೆ ನಡೆಸಿ. ಸಾಮಾನ್ಯ ಜ್ವರವನ್ನು ಯಾವುದೇ ಕಾರಣಕ್ಕೂ ಡೆಂಗ್ಯೂ ಜ್ವರ ಎಂಬುದಾಗಿ ಸಾರ್ವಜನಿಕರು ನಿರ್ಧರಿಸಬಾರದು. ಆತಂಕಕ್ಕೊಳಗಾಗಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳುವ ಅವಶ್ಯವಿಲ್ಲ. ವೈದ್ಯರೇ ಯಾವ ಜ್ವರ ಎಂದು ಪರೀಕ್ಷಿಸಿ ನಿರ್ಧರಿಸುತ್ತಾರೆ. ವೈದ್ಯರ ಸಲಹೆಯಂತೆಯೇ ಸಾರ್ವಜನಿಕರು ಮುಂದುವರಿಯಬೇಕು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌ ಮನವಿ ಮಾಡಿದ್ದಾರೆ.

ಇಲ್ಲಿ ವೈದ್ಯರನ್ನು ಭೇಟಿಯಾಗಿ
ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಅಡ್ಯಾರ್‌, ಅತುರ್‌ಕೆಮ್ರಾಲ್‌, ಅಂಬ್ಲಿಮೊಗರು, ಬಜಪೆ, ಬೋಂದೆಲ್‌, ಬೋಳಿಯಾರ್‌, ಬೆಳ್ವಾಯಿ, ಗಂಜಿಮಠ, ಕಟೀಲು, ಕಾಟಿಪಳ್ಳ, ಕಲ್ಲುಮುಂಡ್ಕೂರು, ಕುಡುಪು, ಕೊಂಪದವು, ಕುಪ್ಪೆಪದವು, ಕೋಟೆಕಾರ್‌, ನಾಟೆಕಲ್‌, ನೆಲ್ಲಿಕಾರ್‌, ಪಾಲಡ್ಕ, ಶಿರ್ತಾಡಿ, ಉಳ್ಳಾಲ. ಸಮುದಾಯ ಆರೋಗ್ಯ ಕೇಂದ್ರಗಳು: ಮೂಲ್ಕಿ, ಮೂಡುಬಿದಿರೆ. ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು: ಕಸಬ ಬೆಂಗ್ರೆ, ಜೆಪ್ಪು, ಅತ್ತಾವರ-ಪಡೀಲ್‌, ಕುಂಜತ್ತಬೈಲ್‌- ಕೂಳೂರು, ಸುರತ್ಕಲ್‌, ಕದ್ರಿ-ಲೇಡಿಹಿಲ್‌, ಎಕ್ಕೂರು, ಶಕ್ತಿನಗರ, ಬಂದರು, ಕುಳಾಯಿ.

ಜು. 28: ಡ್ರೈವ್‌ ಡೇ ಆಚರಣೆ
ಡೆಂಗ್ಯೂವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮನೆಮನೆಗಳಲ್ಲಿ ಜು. 28ರಂದು ಡ್ರೈವ್‌ ಡೇ ಆಚರಿಸಲು ಜಿಲ್ಲಾಡಳಿತ ಮತ್ತು ಪಾಲಿಕೆ ಮನವಿ ಮಾಡಿವೆ. ಮನೆ ಸುತ್ತಮುತ್ತ ತೆಂಗಿನ ಚಿಪ್ಪು, ಬಕೆಟ್‌, ಪ್ಲಾಸ್ಟಿಕ್‌, ಹೂಕುಂಡ ಅಥವಾ ಇತರ ಕಡೆಗಳಲ್ಲಿ ನೀರು ನಿಂತರೆ ಆ ನೀರನ್ನು ಚೆಲ್ಲಿ ಶುಚಿಗೊಳಿಸುವ ಮೂಲಕ ಡೆಂಗ್ಯೂ ನಿರ್ಮೂಲನೆಗೆ ಜನರು ಸಹಕರಿಸಬೇಕು. ಆ ನಿಟ್ಟಿನಲ್ಲಿ ಬೆಳಗ್ಗೆ 9ರಿಂದ 12 ಗಂಟೆಯವರೆಗೆ ಡ್ರೈವ್‌ ಡೇ ಆಚರಿಸಬೇಕು ಎಂದು ಜಿಲ್ಲಾಧಿಕಾರಿಯವರು ಮನವಿ ಮಾಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಜಿಲ್ಲಾಧಿಕಾರಿ ಶಶಿಕಾಂತ್‌ ಸೆಂಥಿಲ್‌ ಅವರ ಮನೆಯಲ್ಲಿ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಬಳಿಕ ಜಿಲ್ಲೆಯಾದ್ಯಂತ ಪ್ರತಿ ಮನೆ, ವಸತಿ ಸಂಕೀರ್ಣ, ಮಳಿಗೆ, ಆಸ್ಪತ್ರೆಗಳು, ಸಂಘ ಸಂಸ್ಥೆಗಳ ಕಟ್ಟಡ, ಸಾರ್ವಜನಿಕ ಸ್ಥಳಗಳು ಸಹಿ ತ ಪ್ರತಿಯೊಂದು ಕಡೆಗಳಲ್ಲೂ ಸ್ವತ್ಛತಾ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಮನವಿ ಮಾಡಿದೆ.

ಜನರಿಗೆ ಗಾಬರಿ ಬೇಡ
ಡೆಂಗ್ಯೂ ಜ್ವರದ ಸಂಖ್ಯೆ ಕಡಿಮೆ ಯಾಗುತ್ತಿದೆ. ಇಲ್ಲಿವರೆಗೆ ಸುಮಾರು 480 ಜನ ದಾಖ ಲಾಗಿದ್ದರು; 400ರಷ್ಟು ಜನ ಆಸ್ಪತ್ರೆಗಳಿಂದ ಬಿಡುಗಡೆಗೊಂಡು ಆರೋಗ್ಯ ದಿಂದಿದ್ದಾರೆ. ಜ್ವರ ತಪಾಸಣೆಗೆ ಜನರಿಗೆ ಯಾವುದೇ ತೊಂದರೆ ಆಗಿಲ್ಲ.
– ಶಶಿಕಾಂತ್‌ ಸೆಂಥಿಲ್‌, ಜಿಲ್ಲಾಧಿಕಾರಿ

ಸಮಸ್ಯೆ ಇದ್ದರೆ ನಮಗೆ ವಾಟ್ಸಪ್‌ ಮಾಡಿ
ನಗರದಲ್ಲಿ ಡೆಂಗ್ಯೂ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ “ಸುದಿನ’ ಕೂಡ ಜಾಗೃತಿ ಮೂಡಿಸುವ ಜತೆಗೆ ನಗರವಾಸಿಗಳಿಗೆ ತಮ್ಮ ಸಮಸ್ಯೆ-ಪರಿಹಾರ ಮಾರ್ಗೋ ಪಾಯಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಲು ವೇದಿಕೆ ನೀಡುತ್ತಿದೆ. ಆ ಮೂಲಕ, ಜನರು ಕೂಡ ಡೆಂಗ್ಯೂ ವ್ಯಾಪಕವಾಗುವುದನ್ನು ತಡೆಗಟ್ಟುವುದಕ್ಕೆ ತಮ್ಮ ಜವಾಬ್ದಾರಿ ಮೆರೆಯುವುದು ಆವಶ್ಯಕ. ನಗರದಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಕಂಡುಬಂದರೆ ಆ ಬಗ್ಗೆ ಸೂಕ್ತ ವಿವರದೊಂದಿಗೆ ಫೋಟೋ ತೆಗೆದು ಕಳುಹಿಸಬಹುದು. ಅಲ್ಲದೆ ಕೆಳ ಹಂತದ ಅಧಿಕಾರಿಗಳಿಂದ ಸಮಸ್ಯೆಗೆ ಸೂಕ್ತ ಸ್ಪಂದನೆ ದೊರೆಯದಿದ್ದರೂ ಆ ಬಗ್ಗೆ ಗಮನಕ್ಕೆ ತಂದರೆ ಉನ್ನತ ಅಧಿಕಾರಿಗಳ ಗಮನಸೆಳೆಯುವ ಪ್ರಯತ್ನ ಮಾಡಲಾಗುವುದು. 9900567000

Advertisement

Udayavani is now on Telegram. Click here to join our channel and stay updated with the latest news.

Next