Advertisement

ನಗರದಲ್ಲಿ ತೀವ್ರಗೊಳ್ಳುತ್ತಿದೆ ಡೆಂಗ್ಯೂ ಮಹಾಮಾರಿ; ಜನತೆ ತತ್ತರ

12:12 AM Jul 20, 2019 | mahesh |

ಮಹಾನಗರ: ನಗರ ವ್ಯಾಪ್ತಿಯಲ್ಲಿ ಡೆಂಗ್ಯೂ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದು, ಈಗಾ ಗಲೇ ಇಬ್ಬರು ಡೆಂಗ್ಯೂ ಶಂಕಿತರು ಮೃತ ಪಟ್ಟಿದ್ದಾರೆ. ಅಲ್ಲದೆ ನೂರಕ್ಕೂ ಅಧಿಕ ಮಂದಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಗರದ ಜನತೆಯಲ್ಲಿ ಆತಂಕ ಸೃಷ್ಟಿಸಿದೆ.

Advertisement

ನಗರದೆಲ್ಲೆಡೆ ವ್ಯಾಪಕವಾಗುತ್ತಿರುವ ಡೆಂಗ್ಯೂ ನಿಯಂತ್ರಣಕ್ಕೆ ಜಿಲ್ಲಾಡಳಿತ/ಮನಪಾ/ ಆರೋಗ್ಯ ಇಲಾಖೆ ಡೆಂಗ್ಯೂ ನಿರ್ಮೂಲನೆಗೆ ವಿವಿಧ ರೀತಿಯಲ್ಲಿ ಪ್ರಯತ್ನಿಸಿದರೂ ಅದು ನಿರೀಕ್ಷಿತ ಫಲ ನೀಡದೆ ಜನತೆಯನ್ನು ಮತ್ತಷ್ಟು ಚಿಂತೆಗೆ ಒಳಗಾಗಿಸಿರುವುದು ವಾಸ್ತವ. ಗುರು ವಾರದ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ಇಲ್ಲಿವರೆಗೆ ಒಟ್ಟು 404 ಡೆಂಗ್ಯೂ ಪ್ರಕರಣ ದೃಢಪಟ್ಟಿದ್ದು, ಇದರಲ್ಲಿ 253 ಪ್ರಕರಣಗಳು ಮಂಗಳೂರು ತಾಲೂಕು ವ್ಯಾಪ್ತಿಯಲ್ಲಿಯೇ ಇವೆ. ಅದರಲ್ಲಿಯೂ ಮಂಗಳೂರು ನಗರದ ಕೆಲವೊಂದು ಪ್ರದೇಶಗಳಲ್ಲಿ ಡೆಂಗ್ಯೂ ಬಾಧಿತ ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ.

ಕೆಲವೇ ದಿನದ ಹಿಂದೆ ಶಂಕಿತ ಡೆಂಗ್ಯೂ ಪೀಡಿತರಾಗಿದ್ದ ನಗರದ ಗುಜ್ಜರಕೆರೆ ಸಮೀಪದ ಸಬೀನಾ ಬಾನು ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದರು. ಈ ಕಹಿ ಘಟನೆ ಮಾಸುವ ಮುನ್ನವೇ ಇದೇ ಪರಿಸರದ 7ನೇ ತರಗತಿಯ ವಿದ್ಯಾರ್ಥಿನಿ ಶ್ರದ್ಧಾ ಕೆ. ಶೆಟ್ಟಿ ಬುಧವಾರ ಶಂಕಿತ ಡೆಂಗ್ಯೂನಿಂದ ಮೃತ ಪಟ್ಟಿದ್ದಾರೆ. ಆದರೆ ಈ ಎರಡು ಪ್ರಕರಣ ಡೆಂಗ್ಯೂ ಜ್ವರದಿಂದ ಆಗಿದೆ ಎನ್ನುವುದು ಇನ್ನಷ್ಟೇ ದೃಢಪಡಬೇಕಿದೆ. ಹೆತ್ತವರು, ಡೆಂಗ್ಯೂನಿಂದಲೇ ಮೃತಪಟ್ಟಿದ್ದಾರೆ ಎಂದು ಆರೋಪಿಸುತ್ತಿದ್ದರೂ ಸಂಬಂಧಪಟ್ಟ ಅಧಿ ಕಾರಿಗಳು ಅದನ್ನು ಒಪ್ಪಿಕೊಳ್ಳದೆ, ವೈದ್ಯ ಕೀಯ ವರದಿ ಬಂದ ಬಳಿಕವಷ್ಟೇ ಇದನ್ನು ದೃಢಪಡಿಸಲಾಗುತ್ತದೆ ಎನ್ನುತ್ತಿದ್ದಾರೆ.

ಗುಜ್ಜರಕೆರೆ ವ್ಯಾಪ್ತಿಯ ಗೋರಕ್ಷ ದಂಡ್‌, ಅರೆಕೆರೆಬೈಲು, ಜಲಜಮ್ಮ ಕಾಂಪೌಂಡ್‌, ಅಲೆಮಾನ್‌ ಕಾಂಪೌಂಡ್‌, ಮುಳಿಹಿತ್ಲು, ಅಂಬಾನಗರ, ಹೊಗೆಬಜಾರ್‌, ಜಪ್ಪು ಮಾರುಕಟ್ಟೆ, ಓಣಿಕೆರೆ ವ್ಯಾಪ್ತಿಯಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಅಧಿಕವಿದೆ. ಇಲ್ಲಿನ ಬಹುತೇಕ ಮನೆಗಳ ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ವ್ಯಾಪ್ತಿಯ ಸುಮಾರು 250ಕ್ಕೂ ಅಧಿಕ ಜನರಿಗೆ ಡೆಂಗ್ಯೂ ಕಾಣಿಸಿಕೊಂಡಿದ್ದು, ಕೆಲವರು ಗುಣಮುಖರಾಗಿದ್ದರೆ, ಇನ್ನೂ ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಜತೆಗೆ ಮಂಗಳೂರಿನ ಬಲ್ಮಠ, ಕೊಡಿಯಾಲ ಬೈಲು, ಕದ್ರಿ, ವೆಲೆನ್ಸಿಯಾ ಸಹಿತ ವಿವಿಧ ಭಾಗಗಳಲ್ಲಿ ಡೆಂಗ್ಯೂ ಇರುವ ಬಗ್ಗೆ ವರದಿಯಾಗಿದೆ.

Advertisement

ಡೆಂಗ್ಯೂ ಹಿನ್ನೆಲೆಯಲ್ಲಿ ಇಲ್ಲಿನ ಬಹುತೇಕ ಮನೆಗಳ ಜನರು ಕೆಲಸಕ್ಕೆ ಹೋಗದೆ ಕೆಲವು ದಿನಗಳಾಗಿವೆ. ಬಹುತೇಕ ವಿದ್ಯಾರ್ಥಿಗಳು ಕೂಡ ಜ್ವರದ ಕಾರಣದಿಂದ ಶಾಲೆಗೂ ಹೋಗುತ್ತಿಲ್ಲ. ಇಲ್ಲಿನ ಮನೆಯೊಂದ ರಲ್ಲಿ ಗಂಡ, ಹೆಂಡತಿ ಮಗುವಿದ್ದು, ಈ ಮೂವರಿಗೂ ಜ್ವರ ಬಂದು ಮನೆಯಲ್ಲಿ ಊಟ-ತಿಂಡಿ ವ್ಯವಸ್ಥೆ ಮಾಡಲು ಆಗುತ್ತಿಲ್ಲ.

ಕೆಲವರು ಮನೆಯಿಂದ ಹೊರಬರಲು ಕೂಡ ಹೆದರುತ್ತಿದ್ದಾರೆ. ಜ್ವರ ಕಾಣಿಸಿಕೊಂಡ ಮನೆಯಲ್ಲಿರುವ ಇತರರಿಗೂ ಅದು ವ್ಯಾಪಿಸುತ್ತಿದೆ. ಕೆಲವು ಮನೆಯವರು ಬೀಗ ಹಾಕಿ ಇತರ ಕಡೆಗಳ ಮನೆಗೆ ತೆರಳಿದ್ದಾರೆ.

ರಾಜ್ಯ ರಾಜಕೀಯದ ತಳಮಳ ನಡೆಯುತ್ತಿರುವ ಕಾರಣದಿಂದ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಸಹಿತ ಜನಪ್ರತಿನಿಧಿಗಳು ಬೆಂಗಳೂರಿನಲ್ಲೇ ಬಾಕಿಯಾಗಿದ್ದಾರೆ. ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಆಡಳಿತವಿಲ್ಲದೆ ಮೇಯರ್‌-ಕಾರ್ಪೊರೇಟರ್‌ ಕೂಡ ಇಲ್ಲದೆ ಜನರಿಗೆ ಸಮಸ್ಯೆ ಹೇಳಿಕೊಳ್ಳಲು ಜನಪ್ರತಿನಿಧಿಗಳೇ ಕೈಗೆ ಸಿಗದಂತಹ ಪರಿಸ್ಥಿತಿ ಎದುರಾಗಿದೆ.

‘9 ಮನೆಗಳಲ್ಲಿ 19 ಜನರಿಗೆ ಡೆಂಗ್ಯೂ’
ಜಲಜಮ್ಮ ಕಾಂಪೌಂಡ್‌ನ‌ ನಿವಾಸಿ ಆಶಾ ಅವರು ‘ಸುದಿನ’ ಜತೆಗೆ ಮಾತನಾಡಿ, ‘ಇಲ್ಲಿ 9 ಮನೆಗಳ ಪೈಕಿ 19 ಜನರಿಗೆ ಡೆಂಗ್ಯೂ ಇದೆ. ಕೆಲವರು ಆಸ್ಪತ್ರೆಯಲ್ಲಿದ್ದರೆ-ಇನ್ನೂ ಕೆಲವರು ಮನೆಯಲ್ಲಿದ್ದಾರೆ. ಈಗ ನನ್ನ ಸಣ್ಣ ಮಗಳಿಗೂ ಜ್ವರ ಬಂದಿದೆ. ಅಂತೂ ಈ ವ್ಯಾಪ್ತಿಯಲ್ಲಿ ಆತಂಕ ಮನೆ ಮಾಡಿದೆ’ ಎನ್ನುತ್ತಾರೆ.

‘ಜ್ವರ ಕಡಿಮೆಯಾದರೆ ಸಾಕು’
ಸ್ಥಳೀಯರಾದ ಕುಸುಮಾ ಮಾತನಾಡಿ, ‘ಈ ವ್ಯಾಪ್ತಿಯಲ್ಲಿ ಜ್ವರದಿಂದಾಗಿ ಎಲ್ಲ ಕಡೆ ಆತಂಕ ಇದೆ. ಜಿಲ್ಲಾಧಿಕಾರಿ, ಪಾಲಿಕೆ ಆಯುಕ್ತರು, ಇತರ ಅಧಿಕಾರಿಗಳು ಗುರುವಾರ ಈ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ. ಜತೆಗೆ ಪಾಲಿಕೆಯ ಆರೋಗ್ಯ ಟೀಮ್‌ ಕೂಡ ಇಲ್ಲಿ ಭೇಟಿ ನೀಡಿ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಫಾಗಿಂಗ್‌ ಕೂಡ ಮನೆಗಳ ವ್ಯಾಪ್ತಿಯಲ್ಲಿ ನಡೆಸುತ್ತಿದ್ದಾರೆ. ಜ್ವರ ಕಡಿಮೆ ಆದರೆ ಸಾಕು’ ಎನ್ನುತ್ತಾರೆ.

ಗುಜ್ಜರಕೆರೆಯಲ್ಲ.. ಡೆಂಗ್ಯೂ ಕೆರೆ!
ಸ್ಥಳೀಯರಾದ ನೇಮು ಕೊಟ್ಟಾರಿ ಮಾತನಾಡಿ, ‘ಗುಜ್ಜರಕೆರೆಯ ಅಸಮರ್ಪಕ ವ್ಯವಸ್ಥೆಯಿಂದಾಗಿಯೇ ಈ ವ್ಯಾಪ್ತಿಯಲ್ಲಿ ಡೆಂಗ್ಯೂ ಪ್ರಮಾಣ ಅಧಿಕವಾಗಿದೆ. ಅಲ್ಲೊಂದು-ಇಲ್ಲೊಂದು ಮಾತ್ರ ಎಂಬಂತಿದ್ದ ಡೆಂಗ್ಯೂ ಈಗ ಇಡೀ ಗುಜ್ಜರಕೆರೆ ವ್ಯಾಪ್ತಿಯ ಸುತ್ತಮುತ್ತಲಿನ ಪ್ರದೇಶವನ್ನು ವ್ಯಾಪಿಸಿದೆ. ಜನರು ಜ್ವರದಿಂದ ತತ್ತರಿಸುವಂತಾಗಿದೆ. ಗುಜ್ಜರಕೆರೆ ಎಂಬುದು ಈಗ ಡೆಂಗ್ಯೂ ಕೆರೆಯಾಗಿ ಬದಲಾಗಿದೆ’ ಎನ್ನುತ್ತಾರೆ.

ಡೆಂಗ್ಯೂ ಹೇಗೆ ಬಂತು?
ಸ್ಥಳೀಯರಾದ ತಾರಾನಾಥ್‌ ಬೋಳಾರ ಅವರ ಪ್ರಕಾರ, ಮಳೆ ನೀರು ನಿಲ್ಲುವ ಖಾಲಿ ಜಾಗಗಳ ಬಗ್ಗೆ ಪಾಲಿಕೆಯವರು ಯಾವ ಕ್ರಮವನ್ನೂ ಕೈಗೊಂಡಿಲ್ಲ. ಗುಜ್ಜರಕೆರೆ ವ್ಯಾಪ್ತಿಯಲ್ಲಿ ಶಾಶ್ವತವಾಗಿ ಆರೋಗ್ಯ ತಂಡವೊಂದನ್ನು ನೇಮಿಸಬೇಕು. ಈ ವ್ಯಾಪ್ತಿಯಲ್ಲಿ ಅಧಿಕವಾಗಿ ಡೆಂಗ್ಯೂ ಬರಲು ಕಾರಣ ಏನು ಎಂಬ ಬಗ್ಗೆಯೂ ಆರೋಗ್ಯ ಇಲಾಖೆಯವರು ಪರಿಶೀಲಿಸಬೇಕು.

ಡೆಂಗ್ಯೂ ನಿಯಂತ್ರಣಕ್ಕೆ ಹೀಗೆ ಮಾಡಿ
– ಆತಂಕ ಸೃಷ್ಟಿಸಿದ ಡೆಂಗ್ಯೂ
-404 ಡೆಂಗ್ಯೂ ಪ್ರಕರಣ ದಾಖಲು
-ಜಿಲ್ಲಾಡಳಿತದಿಂದ ಪೂರ್ವ ಸಿದ್ಧತೆ
-ನಿಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡಬೇಕು.
-ಡೆಂಗ್ಯೂ ಜ್ವರಕ್ಕೆ ಒಳಗಾದವರು ಸೊಳ್ಳೆ ಪರದೆಯನ್ನು ಉಪಯೋಗಿಸಬೇಕು.
-ಹಗಲಿನಲ್ಲಿ ವಿಶ್ರಾಂತಿ ಪಡೆಯುವ ಮಕ್ಕಳು, ಗರ್ಭಿಣಿ, ಬಾಣಂತಿ ಹಾಗೂ ವಯಸ್ಸಾದವರು ಸೊಳ್ಳೆ ಪರದೆ ಬಳಸಬೇಕು.
-ಮನೆಯ ಪರಿಸರದಲ್ಲಿ ಸ್ವಚ್ಛತೆ ಘನತ್ಯಾಜ್ಯ ಸಮರ್ಪಕ ವಿಲೇವಾರಿ, ನೀರು ಸಂಗ್ರಹಿಸುವಾಗ ಭದ್ರವಾದ ಮುಚ್ಚಳ ಅಳವಡಿಕೆ, ನೀರು ನಿಂತ ಸ್ಥಳಗಳಿಗೆ ವಾರದಲ್ಲಿ ಒಂದು ಸಲ ಟೆಮೊಫಾಸ್‌ ರಾಸಾಯನಿಕ ಸಿಂಪಡಣೆ ಮಾಡುವುದು ಇತ್ಯಾದಿ ಕ್ರಮಗಳನ್ನು ಕೈಗೊಂಡಾಗ ಸೊಳ್ಳೆ ಬೆಳವಣಿಗೆ ನಿಯಂತ್ರಿಸಬಹುದು.

-ನೀರಿನ ತೊಟ್ಟಿಗಳು, ಡ್ರಂ, ಬ್ಯಾರಲ್ ಹಾಗೂ ಟ್ಯಾಂಕ್‌ಗಳನ್ನು ಭದ್ರವಾಗಿ ಮುಚ್ಚಿಡಿ.

-ಮನೆಯ ಮೇಲೆ ಮತ್ತು ಸುತ್ತಲಿನ ಮಳೆಯ ನೀರು ಸಂಗ್ರಹವಾಗುವಂತಹ ಪ್ಲಾಸ್ಟಿಕ್‌ ವಸ್ತುಗಳು, ಟೈರ್‌ಗಳು, ಒಡೆದ ತೆಂಗಿನ ಚಿಪ್ಪು ಇತ್ಯಾದಿಗಳನ್ನು ತತ್‌ಕ್ಷಣವೇ ವಿಲೇವಾರಿ ಮಾಡಬೇಕು.

-ಏರ್‌ಕೂಲರ್‌, ಹೂವಿನಕುಂಡ, ಫೈರ್‌ ಬಕೆಟ್, ರೆಫ್ರಿಜರೇಟರ್‌ನ ಹಿಂಭಾಗ ಇತ್ಯಾದಿಗಳ ನೀರನ್ನು ಪ್ರತೀ ವಾರ ಖಾಲಿ ಮಾಡಿ ಒಣಗಿಸಿ ಮತ್ತೆ ಭರ್ತಿ ಮಾಡಬೇಕು.

-ವಿಶೇಷವಾಗಿ ಸೊಳ್ಳೆ ಕಚ್ಚದಂತೆ ತುಂಬು ತೋಳಿನ ಬಟ್ಟೆ, ಮೈ ಮೇಲೆ ಬೇವಿನ ಎಣ್ಣೆ ಅಥವಾ ಔಷಧ ಹಚ್ಚಿಕೊಳ್ಳಬಹುದು.

ಡೆಂಗ್ಯೂ ಜ್ವರದ ಲಕ್ಷಣ
ಇದ್ದಕ್ಕಿಂದ್ದಂತೆ ತೀವ್ರ ಜ್ವರ, ಹಣೆಭಾಗದಲ್ಲಿ ನೋವು, ಮಾಂಸಖಂಡ/ ಕೀಲುಗಳಲ್ಲಿ ವಿಪರೀತ ನೋವು, ಮೈ ಮೇಲೆ ಕೆಂಪು ಗಂಧೆಗಳು, ರಕ್ತಸ್ರಾವದ ಲಕ್ಷಣ, ಕೆಂಪಾದ ಮೂತ್ರ, ಮಲ ಕಪ್ಪಾಗಿದ್ದಲ್ಲಿ, ವಾಕರಿಕೆ, ವಾಂತಿ ಇದಲ್ಲಿ ತತ್‌ಕ್ಷಣ ಆಸ್ಪತ್ರೆ ಯನ್ನು ಸಂಪರ್ಕಿಸಬೇಕು. ಜ್ವರದ ರೋಗ ಲಕ್ಷಣಗಳು ಕಂಡುಬಂದಲ್ಲಿ ಹತ್ತಿರದ ಸರಕಾರಿ ಆಸ್ಪತ್ರೆಯನ್ನು ಭೇಟಿ ಮಾಡಿ ಉಚಿತ ಚಿಕಿತ್ಸೆ ಪಡೆಯಬಹುದು. ಮಾಹಿತಿಗೆ ಆರೋಗ್ಯ ಸಹಾಯವಾಣಿ 104ಕ್ಕೆ ಕರೆ ಮಾಡಿ ಮಾಹಿತಿ ಪಡೆಯಬಹುದು. ಎಲಿಸಾ ಪರೀಕ್ಷೆ ಮೂಲಕ ರೋಗ ಪತ್ತೆಹಚ್ಚಬಹುದು.

ಡೆಂಗ್ಯೂ ಹೇಗೆ ಬರುತ್ತದೆ?
ಡೆಂಗ್ಯೂ ಜ್ವರ ವೈರಸ್‌ನಿಂದ ಉಂಟಾಗುವ ಕಾಯಿಲೆ. ಇದು ಸೋಂಕು ಹೊಂದಿದ ಈಡಿಸ್‌ ಈಜಿಪ್ಟೈ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಸ್ವಚ್ಛ ನೀರಿನಲ್ಲಿ ಸಂತಾನಾಭಿವೃದ್ಧಿ ಮಾಡುತ್ತವೆ. ಹಗಲು ಹೊತ್ತಿನಲ್ಲಿ ಮನುಷ್ಯರನ್ನು ಕಚ್ಚುತ್ತವೆ.

ಮನೆಯ ಒಳಗಡೆ ಫಾಗಿಂಗ್‌

ಡೆಂಗ್ಯೂ ನಿಯಂತ್ರಣಕ್ಕೆ ಪಾಲಿಕೆ ವಿಶೇಷ ಗಮನ ನೀಡಿದೆ. ನಗರದಲ್ಲಿ 200 ಟೀಮ್‌ಗಳನ್ನು ಮಾಡಿ ಮನೆ ಮನೆಗೆ ಭೇಟಿ ನೀಡಿ ಅರಿವು ಮೂಡಿಸುವ ಕಾರ್ಯ ನಡೆಸಲಾಗುತ್ತಿದೆ. ಮನೆಯ ಒಳಗಡೆಯೂ ಫಾಗಿಂಗ್‌ ನಡೆಸುವ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಸುಮಾರು 10 ಫಾಗಿಂಗ್‌ ಮೆಷಿನ್‌ ತರಿಸಲಾಗುತ್ತಿದೆ. ವಿಶೇಷವಾಗಿ ಸೊಳ್ಳೆ ನಿಯಂತ್ರಣದ ನಿಟ್ಟಿನಲ್ಲಿ ಸಾರ್ವಜನಿಕರ ಸಹಭಾಗಿತ್ವವೇ ಮುಖ್ಯ.
– ಮಹಮ್ಮದ್‌ ನಝೀರ್‌, ಆಯುಕ್ತರು-ಮನಪಾ
Advertisement

Udayavani is now on Telegram. Click here to join our channel and stay updated with the latest news.

Next