Advertisement

Dengue ತುರ್ತುಸ್ಥಿತಿ: ಸಂಸದ ಡಾ.ಸಿ.ಎನ್‌. ಮಂಜುನಾಥ್‌ ಸಲಹೆ

12:15 AM Jul 07, 2024 | Team Udayavani |

ಬೆಂಗಳೂರು: ಡೆಂಗ್ಯೂ ನಿಯಂತ್ರಣಕ್ಕೆ ಕೋವಿಡ್‌ ಮಾದರಿಯಲ್ಲಿ ಚಿಕಿತ್ಸಾ ವ್ಯವಸ್ಥೆ ಆಗಬೇಕು. ಸರಕಾರ ತತ್‌ಕ್ಷಣವೇ ರಾಜ್ಯದಲ್ಲಿ “ವೈದ್ಯಕೀಯ ತುರ್ತು ಪರಿಸ್ಥಿತಿ’ (ಮೆಡಿಕಲ್‌ ಎಮರ್ಜೆನ್ಸಿ) ಘೋಷಿಸಬೇಕು ಎಂದು ಸಂಸದ ಡಾ. ಸಿ.ಎನ್‌. ಮಂಜುನಾಥ್‌ ಆಗ್ರಹಿಸಿದ್ದಾರೆ.

Advertisement

ಡೆಂಗ್ಯೂ ಜ್ವರ ನಿಯಂತ್ರಣ ಎಂದರೆ ಸೊಳ್ಳೆಗಳ ನಿಯಂತ್ರಣ. ಡೆಂಗ್ಯೂ ಕಾಯಿಲೆಗೆ ನಿರ್ದಿಷ್ಟವಾದ ಚಿಕಿತ್ಸೆ ಇಲ್ಲ. ಸೊಳ್ಳೆಗಳ ನಿಯಂತ್ರಣ ಬಹಳ ಮುಖ್ಯ. ಇಲ್ಲವಾದರೆ ಮಾರಕ ಕಾಯಿಲೆಗಳಾದ ಚಿಕೂನ್‌ ಗುನ್ಯಾ, ಝೀಕಾ ವೈರಸ್‌ ಹರಡಬಹುದು ಎಂದು ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಅವರು ಎಚ್ಚರಿಸಿದರು. ಡೆಂಗ್ಯೂಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದ ಡಾ. ಮಂಜುನಾಥ್‌, ಇದರ ನಿಯಂತ್ರಣಕ್ಕಾಗಿ ರಾಜ್ಯ ಸರಕಾರಕ್ಕೆ ಹತ್ತಾರು ಸಲಹೆಗಳನ್ನು ನೀಡಿದ್ದಾರೆ.

ಪ್ರಮುಖ ಸಲಹೆಗಳೇನು?
– ಡೆಂಗ್ಯೂಗೆ ಕೋವಿಡ್‌ ಮಾದರಿ ಚಿಕಿತ್ಸಾ ವ್ಯವಸ್ಥೆ ಜಾರಿಗೆ ತರಬೇಕು.
– ರಾಜ್ಯ ಮಟ್ಟದಲ್ಲಿ ಕಾರ್ಯಪಡೆ ರಚಿಸಬೇಕು.
– ಡೆಂಗ್ಯೂ ಪರೀಕ್ಷೆಗೆ ಹೆಚ್ಚಿನ ಹಣ ವಸೂಲಿ ಮಾಡುವ ಲ್ಯಾಬ್‌ಗಳನ್ನು ಮುಚ್ಚಬೇಕು.
– ಸ್ಲಂ, ವಠಾರದಂತಹ ಜನನಿಬಿಡ ಪ್ರದೇಶಗಳಲ್ಲಿ ಸೊಳ್ಳೆ ಪರದೆ ಉಚಿತವಾಗಿ ಹಂಚಬೇಕು.
– ಅರ್ಧಕ್ಕೆ ನಿಂತ ನಿರ್ಮಾಣ ಕಾಮಗಾರಿ ಪೂರ್ಣಗೊಳಿಸಿ ಸೊಳ್ಳೆ ಉತ್ಪತ್ತಿ ಆಗದಂತೆ ನೋಡಿಕೊಳ್ಳಬೇಕು.
– ಶಾಲಾ-ಕಾಲೇಜುಗಳಿಗೆ ಸುತ್ತೋಲೆ ಕಳುಹಿಸಿ ಆಡಳಿತ ಮಂಡಳಿಗಳ ಜತೆ ಸಭೆ ನಡೆಸಬೇಕು.

ಐಸಿಯುನಲ್ಲಿ ಸರಕಾರ: ಅಶ್ವತ್ಥನಾರಾಯಣ್‌
ಬಿಜೆಪಿ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ್‌ ಮಾತನಾಡಿ, ರಾಜ್ಯ ಸರಕಾರ ದಿವಾಳಿಯ ಅಂಚಿನಲ್ಲಿದೆ. ಸರಕಾರ, ಆರೋಗ್ಯ ಇಲಾಖೆ ಐಸಿಯುಗೆ ದಾಖಲಾದಂತಿದೆ ಎಂದು ಟೀಕಿಸಿದರು. ಎಲ್ಲ ಜಿಲ್ಲೆಗಳಲ್ಲಿ ಡೆಂಗ್ಯೂ ಮಹಾಮಾರಿ ಇದೆ. ಒಂದು ತಿಂಗಳಿನಿಂದ ಅದು ರಾಜ್ಯವನ್ನೇ ಆವರಿಸಿದೆ. ಮಲೇರಿಯಾ, ವೈರಲ್‌ ಜ್ವರ ಸಾಮಾನ್ಯವಾಗಿ ಋತುವಿಗೆ ಅನುಗುಣವಾಗಿ ಬರುತ್ತವೆ. ಸರಕಾರ ಇದರ ಕುರಿತು ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ಕೇವಲ ಪ್ರವಾಸದಲ್ಲಿ ಇರುತ್ತಾರೆ. ತಮ್ಮ ಇಲಾಖೆಯ ಜವಾಬ್ದಾರಿ ಕಡೆ ಗಮನ ಹರಿಸುತ್ತಿಲ್ಲ ಎಂದು ಆಕ್ಷೇಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next