Advertisement

ಪ್ರತೀ ರವಿವಾರ “ಡೆಂಗ್ಯೂ ಡ್ರೈವ್ ಡೇ’ಆಚರಣೆ

01:09 PM Jul 29, 2019 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಯಾದ್ಯಂತ ತಿಂಗಳ ಪ್ರತೀ ರವಿವಾರ ಡೆಂಗ್ಯೂ ಡ್ರೈವ್‌ ಡೇ ಆಚರಣೆ ಮುಂದುವರಿಸಲು ಜಿಲ್ಲಾ ಡಳಿತ ತೀರ್ಮಾನಿಸಿದೆ.

Advertisement

ಮಂಗಳೂರು ನಗರದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಜು. 28ರಂದು ಮನೆಮನೆಗಳಲ್ಲಿ ಡ್ರೈವ್‌ ಡೇ ಆಚರಿಸಲು ಜಿಲ್ಲಾಡಳಿತ ಮತ್ತು ಮಹಾನಗರ ಪಾಲಿಕೆ ಈಗಾಗಲೇ ತೀರ್ಮಾನಿಸಿದ್ದವು. ಇದನ್ನು ಜಿಲ್ಲೆಯ ಎಲ್ಲ ಭಾಗಗಳಿಗೆ ವಿಸ್ತರಿಸಿ ಮುಂದಿನ ಕೆಲವು ತಿಂಗಳುಗಳ ಕಾಲ ಪ್ರತೀ ರವಿವಾರವೂ ಆಚರಿಸಲು ಜಿಲ್ಲಾಡಳಿತ ತೀರ್ಮಾನಿಸಿದೆ.

ಡೆಂಗ್ಯೂ ಮತ್ತು ಮಲೇರಿಯಾ ವಾಹಕಗಳು ಸೊಳ್ಳೆಗಳು. ಇವು ಮೊಟ್ಟೆಯಿರಿಸಿ ಲಾರ್ವಾ ಉತ್ಪತ್ತಿ ಯಾದ ಹಂತದಲ್ಲಿ ನಾಶಪಡಿಸುವುದು ರೋಗ ಪ್ರಸಾರ ನಿಯಂತ್ರಣದಲ್ಲಿ ಪರಿಣಾಮಕಾರಿ ಕ್ರಮ ವಾಗಿದೆ. ಮನೆ ಸುತ್ತಮುತ್ತಲಿನ ಪರಿಸರದಲ್ಲಿ ನಿಂತ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆ ಇರಿಸಿ ಲಾರ್ವಾಗಳು ಉತ್ಪತ್ತಿ ಯಾಗುತ್ತವೆ. ಈ ಹಿನ್ನೆಲೆಯಲ್ಲಿ ಮನೆ ಸುತ್ತಮುತ್ತ ತೆಂಗಿನ ಚಿಪ್ಪು, ಬಕೆಟ್‌, ಪ್ಲಾಸ್ಟಿಕ್‌, ಹೂಕುಂಡ ಅಥವಾ ಇನ್ಯಾವುದೇ ಕಡೆಗಳಲ್ಲಿ ನೀರು ನಿಂತಿದ್ದರೆ ಅದನ್ನು ಚೆಲ್ಲಿ ಶುಚಿಗೊಳಿಸುವ ಮೂಲಕ ಡೆಂಗ್ಯೂ ನಿರ್ಮೂಲನೆಗಾಗಿ ಪ್ರತೀ ರವಿವಾರ ಡೆಂಗ್ಯೂ ಡ್ರೈವ್‌ ಡೇ ಆಚರಣೆ ಮಾಡಲು ನಿರ್ಧರಿಸಲಾಗಿದೆ.

ಡಿಸಿ ವಸತಿಗೃಹದಿಂದಲೇ ಚಾಲನೆ
ಡೆಂಗ್ಯೂ ಡ್ರೈವ್‌ ಡೇ ಕಾರ್ಯಕ್ರಮಕ್ಕೆ ರವಿವಾರ ಡಿಸಿ ಶಶಿಕಾಂತ ಸೆಂಥಿಲ್‌ ತಮ್ಮ ನಿವಾಸದಲ್ಲಿ ಚಾಲನೆ ನೀಡಿದ್ದಾರೆ. ಜಿಪಂ ಸಿಇಒ ಡಾ| ಆರ್‌. ಸೆಲ್ವಮಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ರಾಮಕೃಷ್ಣ ರಾವ್‌, ಪಾಲಿಕೆ ಉಪಾಯುಕ್ತೆ ಗಾಯತ್ರಿ ನಾಯಕ್‌ ಸೇರಿದಂತೆ ಮತ್ತಿತರರು ಸಹಭಾಗಿಗಳಾಗಿದ್ದರು. ಜಿ.ಪಂ. ಕಟ್ಟಡ ಮತ್ತು ಸಮೀಪದ ವಸತಿಗೃಹದ ಆವರಣದಲ್ಲಿ ಲಾರ್ವಾ ಪತ್ತೆ ಹಚ್ಚಿ ನಾಶಪಡಿಸಲಾಯಿತು. ನಗರದ ಪ್ರಮುಖ ಮಾಲ್‌ಗ‌ಳಲ್ಲಿ ಡೆಂಗ್ಯೂ ವಿರುದ್ಧ ಸಹಿ ಸಂಗ್ರಹ ಕೂಡ ನಡೆಯಿತು. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳು ಈ ಕಾರ್ಯದಲ್ಲಿ ಕೈ ಜೋಡಿಸಿವೆ. ಜಿಲ್ಲೆಯ ಎಲ್ಲ ತಾಲೂಕು ಮಟ್ಟದಲ್ಲಿಯೂ ಡೆಂಗ್ಯೂ ಡ್ರೈವ್‌ ಡೇ ಕಾರ್ಯಕ್ರಮ ನಡೆಸಲಾಗಿದೆ.

ಜಿ.ಪಂ. ಸಿಇಒ ಡಾ| ಆರ್‌. ಸೆಲ್ವಮಣಿ ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ ಜಿಲ್ಲಾ ವ್ಯಾಪ್ತಿಯ ಎಲ್ಲ ಸರಕಾರಿ ಕಚೇರಿಗಳಲ್ಲಿ ಮತ್ತು ವಸತಿಗೃಹಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು. ಪ್ರತೀ ರವಿವಾರ ಡೆಂಗ್ಯೂ ಡ್ರೈವ್‌ ಡೇ ಆಚರಣೆ ಮಾಡಬೇಕು ಎಂಬುದಾಗಿ ಈಗಾಗಲೇ ಸುತ್ತೋಲೆ ಕಳುಹಿಸಲಾಗಿದೆ ಎಂದಿದ್ದಾರೆ.

Advertisement

ಮಲ್ಪೆ: ಮುಂದುವರಿದ ಫಾಗಿಂಗ್‌
ಉಡುಪಿ: ಜಿಲ್ಲೆಯಲ್ಲಿ ಜು. 27ರ ವರೆಗೆ ಒಟ್ಟು 97 ಡೆಂಗ್ಯೂ ಮತ್ತು 50 ಮಲೇರಿಯಾ ಪ್ರಕರಣಗಳು ಪತ್ತೆಯಾಗಿವೆ. ಮಲ್ಪೆ ಭಾಗದಲ್ಲಿ ಮಲೇರಿಯಾ ಹೆಚ್ಚಾಗಿ ಕಂಡುಬಂದಿವೆ.  ಮಲ್ಪೆ ಭಾಗದಲ್ಲಿ ಸೊಳ್ಳೆಗಳು ಮೊಟ್ಟೆ ಇರಿಸಿ ಲಾರ್ವಾ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಿಸುತ್ತಿದ್ದ ಕೆಲವು ಮೀನಿನ ತೊಟ್ಟಿಗಳನ್ನು ನಾಶ ಮಾಡಲಾಗಿದ್ದು, ಇನ್ನೂ ಕೆಲವೊಂದಕ್ಕೆ ಲಾರ್ವಾ ಉತ್ಪತ್ತಿಯಾಗದಂತೆ ರಾಸಾಯನಿಕ ಹಾಕಲಾಗಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಸಿಬಂದಿ ರಜಾದಿನವಾದ ರವಿವಾರವೂ ಬಂದರಿನಲ್ಲಿ ಫಾಗಿಂಗ್‌ ಕಾರ್ಯದಲ್ಲಿ ಭಾಗವಹಿಸಿದ್ದಾರೆ ಎಂದು ಉಡುಪಿ ಜಿಲ್ಲಾ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ಪ್ರಶಾಂತ್‌ ಭಟ್‌ ಅವರು ತಿಳಿಸಿದ್ದಾರೆ.

ದ.ಕ.: 27 ಮಂದಿ ಆಸ್ಪತ್ರೆಗೆ
ಮಂಗಳೂರು: ಜ್ವರದ ಹಿನ್ನೆಲೆ ಯಲ್ಲಿ ರವಿವಾರ ಜಿಲ್ಲೆಯ ವಿವಿಧ ಭಾಗಗಳಲ್ಲಿ 27 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ದಾಖಲಾದ ಯಾರಲ್ಲೂ ಡೆಂಗ್ಯೂ ಜ್ವರ ಪತ್ತೆಯಾಗಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಲಾರ್ವಾ ನಾಶದ ಮೂಲಕ ಡೆಂಗ್ಯೂ ನಿಯಂತ್ರಣ ಕುರಿತು ಶಾಲಾ ಕಾಲೇಜುಗಳಲ್ಲಿ ಅಭಿಯಾನ ನಡೆಸುವ ಸಲುವಾಗಿ ಜಿಲ್ಲೆಯ ಪ್ರಾಂಶುಪಾಲರು ಮತ್ತು ಮುಖ್ಯೋಪಾಧ್ಯಾಯರ ಸಭೆ ಸೋಮವಾರ ಬೆಳಗ್ಗೆ 10ಕ್ಕೆ ನಗರದ ಪುರಭವನದಲ್ಲಿ ನಡೆಯಲಿದೆ.

ಸಾರ್ವಜನಿಕರ ಸಹಕಾರ ಅಗತ್ಯ
ಜಿಲ್ಲೆಯಲ್ಲಿ ಪ್ರತಿಕೂಲ ಹವಾಮಾನ ಇದ್ದು, ಇದೇ ಕಾರಣದಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಡೆಂಗ್ಯೂ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳು ಇಲ್ಲದಂತೆ ನೋಡಿಕೊಳ್ಳುವುದು ಪರಿಣಾಮಕಾರಿ ಕ್ರಮ. ಈ ನಿಟ್ಟಿನಲ್ಲಿ ಸಾರ್ವಜನಿಕರು ನಮ್ಮೊಂದಿಗೆ ಕೈಜೋಡಿಸಬೇಕು.
– ಶಶಿಕಾಂತ ಸೆಂಥಿಲ್‌, ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next