Advertisement

Dengue Cases; ಒಂದು ದಿನ ಗೈರಾದರೆ ಒಂದು ತಿಂಗಳ ವೇತನ ತಡೆ: ಬೇಳೂರು ಸೂಚನೆ

04:30 PM Jul 10, 2024 | Shreeram Nayak |

ಸಾಗರ: ಡೆಂಗ್ಯೂ ಹೆಚ್ಚುತ್ತಿರುವ ಈ ತುರ್ತು ಸಂದರ್ಭದಲ್ಲಿ ವೈದ್ಯರು ಒಂದು ದಿನ ಕರ್ತವ್ಯಕ್ಕೆ ಗೈರಾದರೆ ಅವರ ಒಂದು ತಿಂಗಳ ವೇತನ ತಡೆ ಹಿಡಿಯುವಂತೆ ಶಾಸಕ ಗೋಪಾಲಕೃಷ್ಣ ಬೇಳೂರು ಸಿವಿಲ್ ಸರ್ಜನ್‌ಗೆ ಆದೇಶ ಮಾಡಿದ್ದಾರೆ.

Advertisement

ಇಲ್ಲಿನ ಉಪವಿಭಾಗೀಯ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಡೆಂಗ್ಯೂ ಪೀಡಿತ ರೋಗಿಗಳ ವಾರ್ಡ್‌ನ ಸೌಲಭ್ಯ ಪರಿಶೀಲನೆ ನಡೆಸಿ ಮಾತನಾಡಿದ ಅವರು, ವೈದ್ಯರು ಯಾವುದೇ ಕಾರಣಕ್ಕೂ ಕರ್ತವ್ಯಕ್ಕೆ ಗೈರಾಗುವುದು, ವಿಳಂಬವಾಗಿ ಹಾಜರಾಗುವುದು ಮಾಡಬೇಡಿ. ಸಾರ್ವಜನಿಕರು ವೈದ್ಯಸಿಬ್ಬಂದಿಗಳ ಸೇವೆಯನ್ನು ಪಡೆಯಬೇಕು. ಅನಗತ್ಯ ಗೊಂದಲ ಸೃಷ್ಟಿ ಮಾಡಬಾರದು ಎಂದು ತಿಳಿಸಿದರು.

ತಾಲೂಕಿನಲ್ಲಿ ಡೆಂಗ್ಯೂ ಪೀಡಿತರ ಸಂಖ್ಯೆ ಕಡಿಮೆಯಾಗಿದ್ದು, ಅಕ್ಕಪಕ್ಕದ ತಾಲೂಕುಗಳಿಂದ ಹೆಚ್ಚಿನ ರೋಗಿಗಳು ಉತ್ತಮ ಸೇವೆ ಸಿಗುತ್ತದೆ ಎಂದು ಬರುತ್ತಿದ್ದಾರೆ. ಎಲ್ಲರಿಗೂ ಉತ್ತಮವಾದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಉಪವಿಭಾಗೀಯ ಆಸ್ಪತ್ರೆಗೆ1.85ಕೋಟಿ ರೂ., ತಾಯಿಮಗು ಆಸ್ಪತ್ರೆಗೆ 1.65ಕೋಟಿ ರೂ. ತುರ್ತು ಅನುದಾನ ಬಿಡುಗಡೆಯಾಗಿದೆ. ಈ ಹಣದಲ್ಲಿ ಆಸ್ಪತ್ರೆ ಮೂಲಭೂತ ಸೌಲಭ್ಯ ಉದ್ಯಾನವನ, ಸುತ್ತಲೂ ಮೆಸ್ ಅಳವಡಿಕೆ ಮಾಡಲಾಗುತ್ತಿದೆ. ಡಯಾಲಿಸಿಸ್ ಘಟಕ ನಾನು ಬರುವಾಗ ನಾಲ್ಕು ಯಂತ್ರ ಹೊಂದಿತ್ತು. ಈಗ 16 ಯಂತ್ರ ಅಳವಡಿಸಲಾಗಿದ್ದು, ಸಂಸ್ಥೆಯೊಂದು ಉತ್ತಮವಾಗಿ ನಡೆಸಿಕೊಂಡು ಹೋಗುತ್ತಿದೆ ಎಂದು ಹೇಳಿದರು.

ಎರಡೂ ಆಸ್ಪತ್ರೆಯನ್ನು ಮೇಲ್ದರ್ಜೆಗೆ ಏರಿಸಲು ಸಚಿವರಿಗೆ ಮನವಿ ಮಾಡಲಾಗಿದೆ. ರೋಗಿಗಳಿಗೆ ಕೊಡುವ ಆಹಾರದಲ್ಲೂ ಗುಣಮಟ್ಟ ಕಾಪಾಡುವಂತೆ ಸೂಚನೆ ನೀಡಲಾಗಿದೆ. ಗ್ರಾಮೀಣ ಆಸ್ಪತ್ರೆಗಳ ಅಭಿವೃದ್ಧಿಗೂ ಹಣ ಬಂದಿದೆ. ಬಡ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು ಯಾವುದೇ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. 14 ವೈದ್ಯರು ಉಪವಿಭಾಗೀಯ ಆಸ್ಪತ್ರೆ, 6 ವೈದ್ಯರು ತಾಯಿಮಗು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದು ವೈದ್ಯರ ಕೊರತೆ ಇಲ್ಲ. ಈ ಹಿಂದೆ ಸಾಗರ ನಂ. 1 ಆಸ್ಪತ್ರೆ ಎಂದು ರಾಜ್ಯದಲ್ಲಿ ಗುರುತಿಸಿಕೊಂಡಿದ್ದು ಈ ಬಾರಿ ಸಹ ಸಾಗರ ಆಸ್ಪತ್ರೆ ನಂ. 1 ಸ್ಥಾನಕ್ಕೆ ಹೋಗುವುದು ಖಚಿತ. ವಿಶೇಷವಾಗಿ ಡೆಂಗ್ಯೂ ಪೀಡಿತರ ಬೆಡ್‌ಗಳಿಗೆ ಸೈಂಟಿಫಿಕ್ ಸೊಳ್ಳೆ ಪರದೆಯನ್ನು ಅಳವಡಿಸಲಾಗಿದೆ. ಪರದೆ ಮೇಲೆ ಸೊಳ್ಳೆ ಕುಳಿತರೆ ಅದು ತಾನಾಗಿಯೇ ಸತ್ತು ಹೋಗುತ್ತದೆ. ಒಟ್ಟಾರೆ ಡೆಂಗ್ಯೂ ನಿಯಂತ್ರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸಿವಿಲ್ ಸರ್ಜನ್ ಡಾ. ಪರಪ್ಪ ಕೆ., ಪ್ರಮುಖರಾದ ಚೇತನರಾಜ್ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ, ಹೊಳೆಯಪ್ಪ, ಕಲಸೆ ಚಂದ್ರಪ್ಪ, ತಾರಾಮೂರ್ತಿ, ಸುರೇಶಬಾಬು, ಡಿ. ದಿನೇಶ್, ಗಣಪತಿ ಮಂಡಗಳಲೆ, ನಾರಾಯಣಪ್ಪ ಇನ್ನಿತರರು ಹಾಜರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next