Advertisement

Dendoor Katte: ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 2 ಹಸು, 1 ಕರು ಪತ್ತೆ

03:14 PM Jun 17, 2024 | Team Udayavani |

ಕಾಪು: ಪ್ರತ್ಯೇಕ ಪ್ರಕರಣಗಳಲ್ಲಿ ಮಹೀಂದ್ರಾ ಪಿಕಪ್ ವಾಹನ ಮತ್ತು ಮಾರುತಿ ಆಮ್ನಿ ಕಾರಿನಲ್ಲಿ 2 ಹಸು ಮತ್ತು ಕರುವೊಂದನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗಿಸುತ್ತಿರುವುದನ್ನು ಕಾಪು ಪೊಲೀಸರು ಮಣಿಪುರ ದೆಂದೂರಕಟ್ಟೆ ಚೆಕ್ ಪೋಸ್ಟ್ ಬಳಿ ರವಿವಾರ ಮಧ್ಯಾಹ್ನ ಪತ್ತೆ ಹಚ್ಚಿದ್ದಾರೆ.

Advertisement

ಕಟಪಾಡಿಯಿಂದ ಮಣಿಪುರಕ್ಕೆ ಬರುತ್ತಿದ್ದ ಪಿಕಪ್ ವಾಹನವನ್ನು ಕಾಪು ಎಸ್ಸೈ ಅಬ್ದುಲ ಖಾದರ್ ನೇತೃತ್ವದಲ್ಲಿ ದೆಂದೂರಕಟ್ಟೆ ಬಳಿಯ ಚೆಕ್‌ಪೋಸ್ಟ್ ತಪಾಸಣೆಗೊಳಪಡಿಸಿದ್ದು ಈ ವೇಳೆ ಕ್ಯಾಬಿನ್‌ನ ಹಿಂಬದಿಯಲ್ಲಿ ಗಿರ್ ತಳಿಯ 2 ದೇಸಿ ಹಸುಗಳನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿರುವುದು ಪತ್ತೆಯಾಗಿದೆ.

ಈ ಬಗ್ಗೆ ವಾಹನ ಚಾಲಕ ಕನಕಪ್ಪ ವೈ. ಮತ್ತು ಮಾಲಕಿ ಗೀತಾ ಅವರನ್ನು ವಿಚಾರಣೆಗೊಳಪಡಿಸಿರುವ ಪೊಲೀಸರು ನಿಬಂಧನೆಗಳನ್ನು ಉಲ್ಲಂಘಿಸಿ ಹಿಂಸಾತ್ಮಕ ರೀತಿಯಲ್ಲಿ ವಾಹನದಲ್ಲಿ ದನಗಳನ್ನು ತುಂಬಿಸಿಕೊಂಡು ಸಾಗಿಸುತ್ತಿರುವ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಮಾರುತಿ ಆಮ್ನಿ ಕಾರಿನಲ್ಲಿ ಗಂಡು ಕರುವೊಂದನ್ನು ಹಿಂಸಾತ್ಮಕವಾಗಿ ಕಟ್ಟಿಕೊಂಡು ಸಾಗಿಸುತ್ತಿರುವುದನ್ನು ರವಿವಾರ ಸಂಜೆ ಪತ್ತೆ ಹಚ್ಚಿದ್ದಾರೆ.

ಮಣಿಪಾಲದ ಕಡೆಯಿಂದ ಬಂದ ಮಾರುತಿ ಆಮ್ನಿ ಕಾರಿನಲ್ಲಿ ಆಪಾದಿತ ಪ್ರಶಾಂತ್ ಎಂಬಾತ ಹಿಂಬದಿಯ ಸೀಟ್ ಗಳನ್ನು ಮಡಚಿ 1 ಗಂಡು ಕರುವನ್ನು ಹಿಂಸಾತ್ಮಕ ರೀತಿಯಲ್ಲಿ ತುಂಬಿಸಿ, ಕುತ್ತಿಗೆಗೆ ಬಿಗಿಯಾಗಿ ಹಗ್ಗವನ್ನು ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾಗಿದೆ.

Advertisement

ವಾಹನದ ಪರವಾನಿಗೆಯ ನಿಬಂಧನೆಗಳನ್ನು ಉಲ್ಲಂಘಿಸಿ ಹಿಂಸಾತ್ಮಕ ರೀತಿಯಲ್ಲಿ ಕರುವನ್ನು ವಾಹನದಲ್ಲಿ ತುಂಬಿಸಲಾಗಿದ್ದು ಕರು ಮತ್ತು ಆಮ್ನಿ ಕಾರನ್ನು ಸ್ವಾಧೀನಪಡಿಸಿಕೊಂಡು ಚಾಲಕ ಪ್ರಶಾಂತ್ ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಎರಡೂ ಪ್ರಕರಣಗಳಿಗೆ ಸಂಬಂಧಿಸಿ ಪಂಚರುಗಳ ಸಮಕ್ಷಮದಲ್ಲಿ ಮಹಜರು ನಡೆಸಲಾಗಿದ್ದು ಪ್ರಾಣಿ ಹಿಂಸೆ ಪ್ರತಿಬಂಧಕ ಕಾಯಿದೆ-1960 ರಂತೆ ಪ್ರಕರಣ ದಾಖಲಿಸಿಕೊಂಡಿರುವ ಕಾಪು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next