ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಅವರು 2016ರಲ್ಲಿ ಕೈಗೊಂಡಿದ್ದ ನೋಟು ಅಮಾನ್ಯ ಕ್ರಮಕ್ಕೆ ಎರಡು ವರ್ಷ ತುಂಬಿರುವ ಈ ಸಂದರ್ಭದಲ್ಲಿ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಕಟುವಾಗಿ ಆ ಕ್ರಮವನ್ನು ಮತ್ತೂಮ್ಮೆ ಟೀಕಿಸಿದ್ದಾರೆ. ”ನೋಟು ಅಮಾನ್ಯ ಕ್ರಮದ ದುಷ್ಪರಿಣಾಮದಿಂದ ದೇಶದ ಆರ್ಥಿಕತೆಯ ಮೇಲೆ ಉಂಟಾಗಿರುವ ಗಾಯದ ಕಲೆಗಳು ಕಾಲ ಕಳೆದಂತೆ ಈಗ ಸ್ಪಷ್ಟವಾಗಿ ಗೋಚರಿಸುತ್ತಿವೆ” ಎಂದು ಹೇಳಿದ್ದಾರೆ.
”ನೋಟು ಅಮಾನ್ಯ ಕ್ರಮವು ಅತ್ಯಂತ ದುರದೃಷ್ಟದ, ಅವಿವೇಕದ ಕ್ರಮ ಎಂದು ಟೀಕಿಸಿರುವ ಡಾ. ಸಿಂಗ್, ನೋಟು ಅಮಾನ್ಯದಂತಹ ಆರ್ಥಿಕ ದುಸ್ಸಾಹಸಗಳು ದೀರ್ಘಾವಧಿಯಲ್ಲಿ ದೇಶವನ್ನು ಸಂಪೂರ್ಣವಾಗಿ ಹಳಿ ತಪ್ಪಿಸಿ ಸರ್ವನಾಶಕ್ಕೆ ಕಾರಣವಾಗುತ್ತವೆ” ಎಂದು ಹೇಳಿದ್ದಾರೆ.
“ನೋಟು ಅಮಾನ್ಯದ ಅವಿವೇಕದ ಕ್ರಮಕ್ಕೆ ಎರಡು ವರ್ಷ ತುಂಬಿರುವ ಈ ದಿನದಂದು ನಾವು ಆರ್ಥಿಕ ದುಸ್ಸಾಹಸಗಳು ಹೇಗೆ ದೀರ್ಘಾವಧಿಯಲ್ಲಿ ದೇಶದ ಅಭಿವೃದ್ಧಿಯ ವಿನಾಶಕ್ಕೆ ಕಾರಣವಾಗುತ್ತವೆ ಎಂಬುದನ್ನು ಸದಾ ಕಾಲ ನೆನಪಿನಲ್ಲಿ ಇರಿಸಿಕೊಳ್ಳಬೇಕಾಗಿದೆ. ನೋಟು ಅಮಾನ್ಯ ಕ್ರಮವು ಭಾರತೀಯ ಆರ್ಥಿಕತೆಯ ಮೇಲೆ ಮತು ಸಮಗ್ರ ದೇಶದ ಮೇಲೆ ಮಾಡಿರುವ ವಿನಾಶದ ದುಷ್ಪರಿಣಾಮ ಈಗ ಸ್ಪಷ್ಟವಾಗಿ ಕಂಡು ಬರುತ್ತಿದೆ…”
”…ನೋಟ್ ಬಂದಿ ಕ್ರಮ ದೇಶದ ಪ್ರತಿಯೋರ್ವ ಪ್ರಜೆಯನ್ನು ತೀವ್ರವಾಗಿ ಬಾಧಿಸಿದೆ; ಸಾಮಾನ್ಯವಾಗಿ ಕಾಲವೇ ನಮ್ಮ ದುರಿತಗಳನ್ನು ಶಮನ ಮಾಡುತ್ತದೆ ಎಂಬ ನಂಬಿಕೆ ಇದೆ; ಆದರೆ ನೋಟು ಅಮಾನ್ಯದ ಸಂದರ್ಭದಲ್ಲಿ ಕಾಲ ಸರಿದಂತೆ ನಾವು ದೇಶದ ಆರ್ಥಿಕತೆ ಮತ್ತು ಜನರ ಮೇಲೆ ಆಗಿರುವ ಅದರ ಘೋರ ದುಷ್ಪರಿಣಾಮಗಳನ್ನು ಸ್ಪಷ್ಟವಾಗಿ ಕಾಣುವಂತಾಗಿದೆ” ಎಂದು ಡಾ.ಸಿಂಗ್ ಹೇಳಿದರು.