ನವದೆಹಲಿ: ಆರ್‌ಬಿಐ ಜತೆಗೆ ಸಮಗ್ರ ಮಾತುಕತೆಗಳನ್ನು ನಡೆಸಿದ ಬಳಿಕವೇ 2016ರ ನವೆಂಬರ್‌ನಲ್ಲಿ ನೋಟು ಅಮಾನ್ಯ ನಿರ್ಧಾರವನ್ನು ಜಾರಿಗೊಳಿಸಲಾಯಿತು. ಕಪ್ಪುಹಣದ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿಯೇ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ನಲ್ಲಿ ಸಮರ್ಥಿಸಿಕೊಂಡಿದೆ.
ನೋಟು ಅಮಾನ್ಯ ಪ್ರಶ್ನೆ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಕೆ ಮಾಡಲಾಗಿರುವ ವಿಚಾರಣೆಗಳ ವೇಳೆ ಕೇಂದ್ರ ಈ ಪ್ರತಿಪಾದನೆ ಮಾಡಿದೆ. ನಿರ್ಧಾರ ಜಾರಿ ಮಾಡುವುದಕ್ಕೆ ಮೊದಲು ಎಲ್ಲಾ ರೀತಿಯ ಸಿದ್ಧತೆಗಳನ್ನೂ ಮಾಡಲಾಗಿತ್ತು ಎಂದು ಪ್ರತಿಪಾದಿಸಿದೆ. ಉಗ್ರರಿಗೆ ವಿತ್ತೀಯ ನೆರವು, ಕಪ್ಪುಹಣದ ಹಾವಳಿ ತಡೆ, ನಕಲಿ ನೋಟುಗಳು ಚಲಾವಣೆಯಲ್ಲಿ ಇರುವುದನ್ನು ತಡೆಯಲು ನೋಟು ಅಮಾನ್ಯ ಕ್ರಮ ಅನಿವಾರ್ಯವಾಗಿತ್ತು ಎಂದು ಕೇಂದ್ರ ಸರ್ಕಾರ ಹೇಳಿದೆ.
ಆರ್‌ಬಿಐ ಸಲ್ಲಿಸಿರುವ ಪ್ರತ್ಯೇಕ ಅಫಿಡವಿಟ್‌ನಲ್ಲಿ 500 ರೂ., 1 ಸಾವಿರ ರೂ. ಮುಖಬೆಲೆಯ ನೋಟುಗಳನ್ನು ವಾಪಸ್ ಪಡೆದುಕೊಂಡದ್ದನ್ನು ಸಮರ್ಥಿಸಿಕೊಂಡಿದೆ. ಜನರಿಗೆ ಅನಾನುಕೂಲವಾಗಿತ್ತು ಎಂಬ ಕಾರಣ ಮುಂದಿಟ್ಟುಕೊಂಡು ಅರ್ಜಿದಾರರು ಮಾಡಿದ ಆಕ್ಷೇಪ ಸರಿಯಲ್ಲ ಎಂದು ಅದು ಪ್ರತಿಪಾದಿಸಿದೆ. ನ್ಯಾ.ಎಸ್.ಎ.ನಜೀರ್ ನೇತೃತ್ವದ ಸಾಂವಿಧಾನಿಕ ಪೀಠ ಪ್ರಕರಣ ವಿಚಾರರಣೆ ನಡೆಸುತ್ತಿದ್ದು, ನ.24ಕ್ಕೆ ಪ್ರಕರಣವನ್ನು ಮುಂದೂಡಿದೆ.