Advertisement

ಬಡಗು ತಿಟ್ಟು ಯಕ್ಷ ರಂಗದಲ್ಲಿ “ಬಣ್ಣದ ವೇಷ”ವೈಭವ ಕಳೆದುಕೊಳ್ಳುತ್ತಿರುವುದೇಕೆ?

05:48 PM Sep 07, 2022 | ವಿಷ್ಣುದಾಸ್ ಪಾಟೀಲ್ |

ಯಕ್ಷಗಾನ ರಂಗದಲ್ಲಿ ”ಬಣ್ಣದ ವೇಷ” ತನ್ನದೇ ಆದ ಸ್ಥಾನಮಾನ, ವೈಶಿಷ್ಟ್ಯವನ್ನು ಹೊಂದಿದೆ. ಬಣ್ಣ ಅಂದರೆ ಸಾಮಾನ್ಯವಾಗಿ ಪರಿಗಣಿಸಿದರೆ ರಂಗದ ಮೇಲೆ ಬರುವ ಬಾಲ ಗೋಪಾಲ, ಸ್ತ್ರೀ ವೇಷಗಳಿಂದ ಹಿಡಿದು ಎಲ್ಲವೂ ಬಣ್ಣದ ವೇಷಗಳೇ, ಆದರೆ ವರ್ಣ ವಿಸ್ತಾರ ಇರುವುದರಿಂದ ಯಕ್ಷ ರಂಗದಲ್ಲಿ ರಾಕ್ಷಸ ವೇಷಗಳಿಗೆ ಬಣ್ಣದ ವೇಷ, ವೇಷಧಾರಿಗಳಿಗೆ ಬಣ್ಣದ ವೇಷಧಾರಿಗಳು ಎನ್ನುವ ಹೆಸರು ಇದೆ.

Advertisement

ಯಕ್ಷ ಪರಂಪರೆಯಲ್ಲಿ ತೆಂಕು ತಿಟ್ಟು ಮತ್ತು ಬಡಗು ತಿಟ್ಟಿನಲ್ಲಿ ಪೌರಾಣಿಕ ಪ್ರಸಂಗಗಳ ರಾಕ್ಷಸ ಪಾತ್ರಗಳು ತನ್ನದೇ ಆದ ಕಲ್ಪನೆ ಮತ್ತು ವಿಶಿಷ್ಟತೆಗಳೊಂದಿಗೆ ಜನಮಾನಸದಲ್ಲಿ ನೆಲೆಯಾಗಿದ್ದವು. ಬಣ್ಣದ ವೇಷಧಾರಿಗಳಿಗೆ ವಿಶೇಷ ಪ್ರಾಧಾನ್ಯತೆ ನೀಡಲಾಗಿತ್ತು. ಗೌರವದ ಸ್ಥಾನಮಾನವನ್ನೂ ನೀಡಲಾಗಿತ್ತು.

ಕೆಲ ದಶಕಗಳಿಂದ ರೂಪಾಂತರಗೊಳ್ಳುವ ಸಮಯದಲ್ಲಿ ಹಲವು ಮೂಲ ಸ್ವರೂಪ ಮತ್ತು ಅಭ್ಯಾಸಗಳಲ್ಲಿ ದೊಡ್ಡ ಮತ್ತು ಹಠಾತ್ ಬದಲಾವಣೆಯ ಪ್ರಕ್ರಿಯೆ ಆರಾಧನಾ ಕಲೆಯಲ್ಲಿ ನಡೆದು ಹೋಗಿದೆ. ತೆಂಕಿನ ಬಹುಪಾಲು ಅಂಶಗಳು ಈಗ ಬಡಗಿನ ಬಣ್ಣದ ವೇಷಗಳಲ್ಲಿ ಕಾಣಬಹುದಾಗಿದೆ. ವಿಶೇಷವಾಗಿ ಆಹಾರ್ಯ, ಮುಖವರ್ಣಿಕೆ ಸೇರಿ ರಂಗ ಪ್ರಸ್ತುತಿಯಲ್ಲೂ ತೆಂಕು ತಿಟ್ಟಿನ ಶೈಲಿಯೇ ಬಡಗು ತಿಟ್ಟಿನಲ್ಲಿ ಸೇರಿಕೊಂಡು ಮೇಳೈಸುತ್ತಿದೆ.

ತುಲನಾತ್ಮಕವಾಗಿ ಪರಿಗಣಿಸಿದರೆ ತೆಂಕುತಿಟ್ಟಿನಲ್ಲಿ ಬಣ್ಣದ ವೇಷಗಳು ಇಂದಿಗೂ ಜೀವಂತಿಕೆ ಉಳಿಸಿಕೊಂಡಿವೆ ಮತ್ತು ಹಲವು ಮಂದಿ ಪರಂಪರೆಯನ್ನು ತಿಳಿದಿರುವ ಸಮರ್ಥ ಬಣ್ಣದ ವೇಷಧಾರಿಗಳನ್ನು ಗುರುತಿಸಬಹುದಾಗಿದೆ. ಆದರೆ ಬಡಗು ತಿಟ್ಟಿನಲ್ಲಿ ಬಹುಪಾಲು ಬದಲಾದ ವಾತಾವರಣದಲ್ಲಿ ಬಡಗುತಿಟ್ಟಿನ ಸಮರ್ಥ ಬಣ್ಣದ ವೇಷಧಾರಿಗಳನ್ನು ಗುರುತಿಸುವುದು ಕಷ್ಟವಾಗಿದೆ ಎನ್ನುವುದು ಯಕ್ಷ ವಿದ್ವಾಂಸರ ಅಭಿಪ್ರಾಯ.

ರಂಗದಲ್ಲಿ ಅಬ್ಬರಿಸುವ ದೈತ್ಯ ವೇಷಗಳಿಗೆ ಕಲಾವಿದನಿಗೆ ಪ್ರಮುಖವಾಗಿ ಬೇಕಾಗಿದ್ದು ದೇಹದಾರ್ಢ್ಯತೆ, ರಕ್ಕಸನಾಗಿ ಅಬ್ಬರಿಸುವಲ್ಲಿ ಸ್ವರಭಾರವೂ ಪ್ರಮುಖವಾಗಿ ಬೇಕಾಗುತ್ತದೆ. ಆರ್ಭಟವನ್ನು ತೋರಬೇಕಾಗುವುದು ರಕ್ಕಸ ಪಾತ್ರಧಾರಿಗೆ ಅಗತ್ಯವಾದ ಅಂಶಗಳಲ್ಲಿ ಒಂದು. ಹಿಂದೆ ಹಲವು ಮಂದಿ ಸಮರ್ಥ ಬಣ್ಣದ ವೇಷಧಾರಿಗಳು ರಂಗವನ್ನುಆಳಿ ಮರೆಯಾಗಿದ್ದಾರೆ.

Advertisement

ಬಡಗುತಿಟ್ಟಿನ ಇತಿಹಾಸದಲ್ಲಿ ಸಮರ್ಥ ಬಣ್ಣದ ವೇಷಧಾರಿಗಳ ಹೆಸರನ್ನು ನೆನಪಿಸಿ ಕೊಂಡರೆ ಸೂರಾಲು ಅಣ್ಣಪ್ಪ, ಅನಂತಯ್ಯ, ಕೊಳಕೆಬೈಲು ಕುಷ್ಟ ಗಾಣಿಗ, ಬಳೆಗಾರ ಸುಬ್ಬಣ್ಣ, ಪುಟ್ಟಯ್ಯ, ಬಣ್ಣದ ಸಂಜೀವಯ್ಯ, ಕುಕ್ಕಿಕಟ್ಟೆ ಆನಂದ ಮಾಸ್ಟರ್, ಬಣ್ಣದ ಸಕ್ಕಟ್ಟು ಲಕ್ಷ್ಮೀನಾರಾಯಣ ಅವರ ಹೆಸರುಗಳು ಯಕ್ಷಗಾನ ರಂಗದಲ್ಲಿ ದಾಖಲಾಗಿವೆ.

ಬಡಗಿಗೇಕೆ ಬಣ್ಣ ಬೇಡವಾಯಿತು?
ಬಡಗಿನಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿದ್ದ ಬಣ್ಣದ ವೇಷಗಳು ಈಗ ತೆಂಕಿನ ಪ್ರಭಾವಕ್ಕೆ ಸಿಲುಕಿ ತನ್ನತನವನ್ನು ಕಳೆದುಕೊಂಡಿವೆ. ಒಂದೆಡೆ ಇದಕ್ಕೆ ಕಲಾವಿದರೂ ಕಾರಣವಾದರೂ, ಇನ್ನೊಂದೆಡೆ ಪ್ರೇಕ್ಷಕರಲ್ಲಿ ತೆಂಕಿನ ರಾಕ್ಷಸ ವೇಷಗಳೇ ಬಡಗಿಂತ ಹೆಚ್ಚು ವೈಭವಯುತವಾಗಿ ಕಾಣುತ್ತದೆ, ಆ ರಂಗ ಪ್ರಸ್ತುತಿಯೇ ಹೆಚ್ಚು ಸೊಬಗು ಎನ್ನುವ ಅಭಿಪ್ರಾಯ ಬಂದಿರುವುದು ಕಾರಣ ಎನ್ನುತ್ತಾರೆ ಹಲವು ಯಕ್ಷ ಪ್ರೇಮಿಗಳು.

ಮುಂದುವರಿಯುವುದು…

ವಿಷ್ಣುದಾಸ್ ಪಾಟೀಲ್

Advertisement

Udayavani is now on Telegram. Click here to join our channel and stay updated with the latest news.

Next