Advertisement
ಒಂದು ಪ್ರಕರಣ ಹೊರತುಪಡಿಸಿದರೆ, ಉಳಿದೆಲ್ಲ ಪ್ರಕರಣಗಳಲ್ಲಿ ಆರೋಪಿಗಳನ್ನು ಬಂಧಿಸಲಾಗಿಲ್ಲ. ಕಾರಿಗೆ ಬೆಂಕಿ ಹಚ್ಚುವ ಹಿಂದಿನ ಉದ್ದೇಶವೂ ತಿಳಿಯುತ್ತಿಲ್ಲ. ಆದರೆ, ನಿರಂತರವಾಗಿ ಕೃತ್ಯಗಳು ನಡೆಯುತ್ತಲೇ ಇವೆ. ಇದರಿಂದಾಗಿ ಇಡೀ ಕಲಬುರಗಿ ನಗರದ ಕಾರು, ಬೈಕು ಹೊಂದಿರುವ ಜನರು ಮಾತ್ರ ನಿದ್ದೆಗೆಡುತ್ತಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚುವ ಪ್ರಕರಣ ಇಡೀ ಪೊಲೀಸ್ ಇಲಾಖೆಗೆ ಯಕ್ಷ ಪ್ರಶ್ನೆಯಾಗಿದೆ. ಇಲಾಖೆಯಲ್ಲಿ ಹಿಂದಿನ ಎಲ್ಲ ಪ್ರಕರಣಗಳು ಅವುಗಳ ನಡೆಯುವ ರೀತಿ ಮತ್ತು ಬಳಕೆ ಮಾಡಿರುವ ವಸ್ತುಗಳು, ಭಾಗಿಯಾಗಿರುವ ವ್ಯಕ್ತಿಗಳ ಗುರುತು ಪತ್ತೆ ಮಾಡಲು ಹರ ಸಾಹಸ ಪಡುತ್ತಿದ್ದಾರೆ. ಇಡೀ ಕಲಬುರಗಿ ಕ್ರೈಂ ಬ್ರಾಂಚ್ ಅಧಿಕಾರಿಗಳು ಹುಡುಕುತ್ತಿದ್ದಾರೆ. ಪ್ರಕರಣ ಅಷ್ಟು ಸಂಕೀರ್ಣವಾಗಿದೆ.
Related Articles
Advertisement
ಎಸ್‌ಪಿಯಿಂದ ವಿಡಿಯೋ ಬಿಡುಗಡೆ: ಕಳೆದ ಎರಡು ದಿನಗಳಲ್ಲಿ ನಡೆದ ಘಟನಾವಳಿಗಳ ಕುರಿತು ಎಸ್‌ಪಿ ಎನ್. ಶಶಿಕುಮಾರ ಅವರು ಶನಿವಾರ ಯುನೈಟೆಡ್ ಆಸ್ಪತ್ರೆ ಮುಂದೆ ನಿಲ್ಲಿಸಿದ ಕಾರಿಗೆ ಬೆಂಕಿ ಹಚ್ಚಿರುವ ಕುರಿತು ಸಿಸಿ ಕ್ಯಾಮೈರಾದಲ್ಲಿ ಸೆರೆಯಾದ ವಿಡಿಯೋವನ್ನು ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ.
ವಿಡಿಯೋದಲ್ಲಿ ವ್ಯಕ್ತಿಯೊಬ್ಬ ರಸ್ತೆಯಲ್ಲಿ ಕಾರುಗಳ ಪಕ್ಕದಲ್ಲಿ ತಲೆ ಮುಚ್ಚುವ ಚಾಕೆಟ್ ಹಾಕಿಕೊಂಡು ಓಡಿ ಹೋಗುತ್ತಿರುವ ದೃಶ್ಯವಿದೆ. ಈತನೇ ಕಾರಿಗೆ ಬೆಂಕಿ ಹಚ್ಚಿದನೇ? ಅಥವಾ ಈತ ಕಾರುಗಳನ್ನು ಸರ್ವೆ ಮಾಡಿಕೊಂಡು ಹೋಗುತ್ತಿದ್ದನೆ? ಅವನ ಬಳಿಕ ಇತರೆ ವ್ಯಕ್ತಿ ಅಥವಾ ವ್ಯಕ್ತಿಗಳು ಬಂದು ಕಾರಿಗೆ ಬೆಂಕಿ ಹೆಚ್ಚಿದರೇ ಎನ್ನುವುದು ತಿಳಿದಿಲ್ಲ. ಆದರೂ, ರಾತ್ರಿಯಲ್ಲಿ ಆ ವ್ಯಕ್ತಿ ಅನುಮಾನಾಸ್ಪದವಾಗಿ ಓಡಾಡಿರುವುದರಿಂದ ಈತನೇ ಆ ಆಗಂತುಕನಾಗಿರಬೇಕು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.
ಆಗಂತುಕ ಸಿರಿವಂತರ ಪುತ್ರ?: ಕಳೆದ ಐದು ವರ್ಷಗಳಿಂದ ಕಲಬುರಗಿ ನಗರದಲ್ಲಿ ವರ್ಷಕ್ಕೆ ಒಂದೋ.. ಎರಡೋ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಗಳು ನಡೆಯುತ್ತಿರುವುದರ ಹಿಂದಿನ ಕಾರಣಗಳನ್ನು ಅರಿಯಲು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ವರ್ಗಾವಣೆಗೆ ಮುಂಚೆಯೇ ತಮ್ಮ ಆಪ್ತರ ಬಳಿಯಲ್ಲಿ ಹೇಳಿಕೊಂಡಿದ್ದರು ಎನ್ನಲಾಗಿದೆ. ಇದರಿಂದಾಗಿ ಆ ವ್ಯಕ್ತಿ ಯಾರು..? ಆತನನ್ನು ಬಂಧಿಸಿದರೆ ಆಗುವ ತೊಂದರೆ ಕುರಿತು ಅಧಿಕಾರಿಗಳು ಆಲೋಚನೆ ಮಾಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾರು ಸುಡಲು ಕರ್ಪೂರ ಬಳಕೆ: ಇಡೀ ಪ್ರಕರಣಗಳನ್ನು ಗಮನಿಸುವುದೇ ಆದರೆ, ಆಗಂತುಕರ ತಂಡ ಈ ಕೃತ್ಯಗಳನ್ನು ಮಾಡುತ್ತಿದೆಯೇ.. ಅಥವಾ ಒಬ್ಬ ವ್ಯಕ್ತಿ ಅಥವಾ ಇಬ್ಬರು ಬೆಂಕಿ ಹಚ್ಚುತ್ತಿದ್ದಾರೆಯೇ ಎನ್ನುವುದು ಈಗ ಕಲಬುರಗಿ ಕ್ರೈಂ ಬ್ರ್ಯಾಂಚ್ ಅಧಿಕಾರಿಗಳ ನಿದ್ದೆಗೆಡಿಸಿದೆ. ಶನಿವಾರ ಕಾರುಗಳಿಗೆ ಟೈರ್‌ಗಳನ್ನಿಟ್ಟು ಬೆಂಕಿ ಹಚ್ಚಿದರೆ, ಆನಂದನಗರದಲ್ಲಿನ ಕಾರಿಗೆ ಕರ್ಪೂರ ಇಟ್ಟು ಬೆಂಕಿ ಹಚ್ಚಲಾಗಿದೆ. ಸರಣಿ ಬೆಂಕಿ ಹಚ್ಚುವ ಕೃತ್ಯಗಳನ್ನು ಗಮನಿಸಿದರೆ ಒಂದೇ ಗುಂಪಿನ ಕೈವಾಡದ ಕುರಿತು ಶಂಕೆ ಇದೆ. ಇಲ್ಲಿಯವರೆಗೆ ಕೊಲೆ, ಸುಲಿಗೆ, ದರೋಡೆಗೆ ಪ್ರಕರಣಗಳಿಗೆ ಸಂಬಂಧಿಸಿದಂತೆ ರೌಡಿಗಳನ್ನು ಮಟ್ಟ ಹಾಕುವ ಮೂಲಕ ಸಾರ್ವಜನಿಕ ವಲಯದಲ್ಲಿ ಅಲ್ಪ ನೆಮ್ಮದಿ ಮೂಡುತ್ತಿದ್ದ ಸಂದರ್ಭದಲ್ಲಿಯೇ ಈಗ ಕಾರುಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳು ಸಾರ್ವಜನಿಕರನ್ನು, ಅದರಲ್ಲಿಯೂವಾಹನಗಳ ಮಾಲಿಕರನ್ನು ನಿದ್ದೆಗೆಡಿಸುವಂತಾಗಿದೆ. ಶೇ.99ರಷ್ಟು ಕಾರು ಹೊರಗೆ: ಕಲಬುರಗಿಯಲ್ಲಿ ಒಟ್ಟು 1 ಲಕ್ಷ ಹತ್ತಿರದಷ್ಟು ಕಾರುಗಳು ಇವೆ ಎನ್ನಲಾಗುತ್ತಿದೆ. ಇವುಗಳಲ್ಲಿ 60 ಸಾವಿರಕ್ಕೂ ಹೆಚ್ಚು ಕಾರುಗಳು ಐಶಾರಾಮಿಯಾಗಿವೆ. ಬೆಂಕಿಗೆ ಗುರಿಯಾಗಿರುವ ಬಹುತೇಕ ಕಾರುಗಳು ಐಶಾರಾಮಿಯಾಗಿವೆ. ಅಲ್ಲದೆ ವೈದ್ಯರ ಕಾರುಗಳಿವೆ. ಇವುಗಳಲ್ಲಿ ಶೇ. 99 ರಷ್ಟು ಕಾರುಗಳು ಮನೆಯ ಮುಂದಿನ ರಸ್ತೆಗಳಲ್ಲಿರುತ್ತವೆ. ನಗರದಲ್ಲಿರುವ 3 ಲಕ್ಷದಷ್ಟಿರುವ ಮನೆಗಳಲ್ಲಿ 10-15ರಷ್ಟು ಮಾತ್ರವೇ ಪಾರ್ಕಿಂಗ್ ವ್ಯವಸ್ಥೆ ಹೊಂದಿವೆ. ಉಳಿದಂತೆ ಬಹುತೇಕ ಮನೆಗಳ ಪಾರ್ಕಿಂಗ್ ರಸ್ತೆಯಲ್ಲಿಯೇ ಇರುತ್ತದೆ. ಮನೆಯ ಮುಂದೆ ಬೈಕು ಮತ್ತು ಕಾರುಗಳನ್ನು ನಿಲ್ಲಿಸಲಾಗುತ್ತಿದೆ. ಯಾವಾಗ ಎಷ್ಟು ವಾಹನಕ್ಕೆ ಬೆಂಕಿ: ಡಿ.2, 2017ರಂದು ಎಂ.ಬಿ.ನಗರದಲ್ಲಿನ ಮಹಿಳಾ ಪಿಜಿ ಮುಂದೆ ನಿಲ್ಲಿಸಿದ್ದ 8 ಬೈಕುಗಳಿಗೆ ಬೆಂಕಿ ಹಚ್ಚಲಾಗಿದೆ. ಇವು ವೈದ್ಯಕೀಯ ವಿದ್ಯಾರ್ಥಿನಿಗಳ ಬೈಕುಗಳಾಗಿದ್ದವು. ಡಿ. 22, 2017ರಂದು ಖಾಜಾ ಕಾಲೋನಿಯ ಮನೆ ಮುಂದೆ ನಿಂತಿದ್ದ 5 ಬೈಕುಗಳು ಒಂದು ಆಟೋಕ್ಕೆ ಬೆಂಕಿ ಹಚ್ಚಲಾಗಿತ್ತು. 2016 ನವೆಂಬರ್‌ನಲ್ಲಿ ನರ್ಗಿಸ್ ವಸತಿ ಸಮ್ಮುಚ್ಚಯದ ಬಳಿಯಲ್ಲಿ ನಿಲ್ಲಿಸಿದ್ದ ಮಾರುತಿ ಸಿಫ್ಟ್ ಕಾರಿಗೆ ಬೆಂಕಿ ಹಚ್ಚಲಾಗಿತ್ತು.
ರೋಜಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಟೋ ಮತ್ತು ಬೈಕೇಗೆ, 2016 ಕೊನೆಯಲ್ಲಿ ಗೋದುತಾಯಿ ನಗರ, ಖೂಬಾ ಪ್ಲಾಟ್‌ಗಳಲ್ಲಿ ಕಾರಿಗೆ ಕಲ್ಲು ಎಸೆದು ಪುಡಿಪುಡಿ ಮಾಡಲಾಗಿತ್ತು. ಅವು ಐಶಾರಾಮಿ ಕಾರುಗಳಾಗಿದ್ದವು. 14 ಜನವರಿ 2018ರಂದು 8 ಮತ್ತು 15ರಂದು 2 ಕಾರುಗಳಿಗೆ ಬೆಂಕಿ ಹಚ್ಚಲಾಗಿದೆ. ಬೆಚ್ಚಿ ಬೀಳಿಸುತ್ತಿದೆ ಘಟನೆ ಕಲಬುರಗಿ ನಗರದಲ್ಲಿ ಏನು ನಡೆಯುತ್ತಿದೆ ಎನ್ನುವುದು ಗೊತ್ತಾಗುತ್ತಿಲ್ಲ. ಪ್ರತಿಯೊಂದು ರಾತ್ರಿ ತುಂಬಾ ಕಳವಳಕಾರಿಯಾಗುತ್ತಿದೆ. ಜನರು ಮನೆ ಮುಂದಿನ ಬೈಕು ಮತ್ತು ಕಾರುಗಳನ್ನು ಪಾಡಿಕೊಳ್ಳದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ತುಂಬಾ ದುಬಾರಿ ಕಾರುಗಳನ್ನು ಗುರಿಯಾಗಿಸಲಾಗುತ್ತಿದೆ. ಕಾರಿಗೆ ಬೆಂಕಿ ಹಚ್ಚುವ ವ್ಯಕ್ತಿ ಸೈಕೋ ಇರಬೇಕು ಅಥವಾ ಆತನಿಗೆ ವೈದ್ಯರಿಂದ ತೊಂದರೆಯಾಗಿರಬೇಕು. ಇದರಿಂದಾಗಿ ಆತ ಅಥವಾ ಅವರು ವೈದ್ಯರು ಹಾಗೂ ದುಬಾರಿ ಕಾರುಗಳಿಗೆ ಬೆಂಕಿ ಇಡುತ್ತಿರಬಹುದು. ಇದರಿಂದಾಗಿ ಪೊಲೀಸರೇ ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು. ಲಿಂಗರಾಜ ಸಿರಗಾಪುರ, ಜಯನಗರ ನಿವಾಸಿ ಬೆಳಗಿನ ಜಾವ ಕೃತ್ಯ ಕಲಬುರಗಿ ನಗರದಲ್ಲಿ ನಡೆಯುತ್ತಿರುವ ಕಾರಿಗೆ ಬೆಂಕಿ ಹಚ್ಚುವ ಪ್ರಕರಣಗಳು ಎಲ್ಲವೂ ಬೆಳಗಿನ ಜಾವದಲ್ಲಿ ನಡೆಯುತ್ತಿವೆ. ರಾತ್ರಿ ಗಸ್ತಿನಲ್ಲಿರುವ ಪೊಲೀಸರು ಮಧ್ಯ ರಾತ್ರಿ ಮೂರು ಗಂಟೆಗೆ ಬಹುತೇಕ ಗಸ್ತುಗಳನ್ನು ಮುಗಿಸುತ್ತಾರೆ. ಅದಾದ ಬಳಿಕ ಕಾರುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಇದರ ಮಧ್ಯೆಯೂ ಸರಕಾರ ತಪ್ಪು ಮಾಡಿದೆ. ಅಪರಾಧವನ್ನು ಹತ್ತಿಕ್ಕಿದ್ದ ಐಜಿ ಅಲೋಕಕುಮಾರ ಅವರನ್ನು ವರ್ಗಾವಣೆ ಮಾಡಿದೆ. ಇದರಿಂದಾಗಿ ಈಗ ಪುನಃ ಕಲಬುರಗಿ ಜನತೆಗೆ ನೆಮ್ಮದಿಯಿಂಧ ರಾತ್ರಿ ಕಳೆಯಲು ಸಾಧ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಹಿರೇಮಠ ಆರ್‌ಟಿಐ ಕಾರ್ಯಕರ್ತ ಯಾರು ಎಂದು ತಿಳಿದಿಲ್ಲ ನಗರದಲ್ಲಿ ಬೈಕು ಮತ್ತು ಕಾರುಗಳಿಗೆ ಬೆಂಕಿ ಹಚ್ಚಲಾಗುತ್ತಿದೆ. ಹಲವು ಕಡೆಗಳಲ್ಲಿ ಕೃತ್ಯ ಎಸಗಿದವರ ಚಹರೆ ಮತ್ತು ಚಲನವಲನಗಳು ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಅದರ ಆಧಾರದಲ್ಲಿ ಹುಡುಕಾಟ ಶುರು ಮಾಡಲಾಗಿದೆ. ಬಹುತೇಕ ಒಂದೇ ಗುಂಪಿನ ಕೃತ್ಯದಂತೆ ಕಾಣುತ್ತಿವೆ. ಆದರೆ, ವ್ಯಕ್ತಿಯೋ ಅಥವಾ ಬಹಳಷ್ಟು ಜನರ ಕೃತ್ಯವೋ ಎನ್ನುವುದು ಪತ್ತೆ ಹಚ್ಚಲಾಗುತ್ತಿದೆ. ಕಳೆದ ಮೂರ್‍ನಾಲ್ಕು ವರ್ಷಗಳಿಂದ ಇದು ನಡೆಯುತ್ತಿದೆ. ಆದಷ್ಟು ಬೇಗ ಪತ್ತೆ ಹಚ್ಚಲಾಗುವುದು. ಎಸ್.ಎಸ್.ಹುಲ್ಲೂರ, ಗ್ರಾಮೀಣ ಡಿವೈಎಸ್‌ಪಿ ಸಿಸಿ ಕ್ಯಾಮೆರಾ ಹಾಕಿ ಕಾರುಗಳಿಗೆ ಬೆಂಕಿ ಹಚ್ಚಿರುವ ಪ್ರದೇಶ ಮತ್ತು ವ್ಯಕ್ತಿಗಳ ಚಲನವಲನ ಗಮನಿಸಿದರೆ ಅವರು ರಾತ್ರಿವೇಳೆಯಲ್ಲಿ ತುಂಬಾ ಸಕ್ರೀಯವಾಗಿ ಇರುತ್ತಾರೆ ಎಂದು ಕಾಣುತ್ತದೆ. ಬೆಂಕಿ ಹಚ್ಚಿರುವ ಪ್ರದೇಶಗಳು ರೋಜಾ, ಎಂ.ಬಿ. ನಗರ, ಸ್ಟೇಷನ್ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆಯತ್ತಿವೆ. ಇದರಿಂದಾಗಿ ಈ ಪ್ರದೇಶಗಳ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮೆರಾಗಳನ್ನು ಹುಡುಕಬೇಕು ಮತ್ತು ಶೀಘ್ರವೇ ನಗರದಲ್ಲಿ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಹಾಕುವ ಪೊಲೀಸರ ಯೋಜನೆಗೆ ಕಾರ್ಯಗತವಾಗಬೇಕು. ಜನರಿಗೆ ರಾತ್ರಿಗಳಲ್ಲಿ ನೆಮ್ಮದಿ ಕೊಡಬೇಕು. ಈ ನಿಟ್ಟಿನಲ್ಲಿ ನಮ್ಮ ಪೊಲೀಸರು ಶಸಕ್ತರಿದ್ದು, ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ರಾಮು ಗುಮ್ಮಟ, ಬಿಜೆಪಿ ಮುಖಂಡ ಗುರುತು ಪತ್ತೆಗೆ ಮನವಿ
ನಗರದಲ್ಲಿ ಕಾರುಗಳಿಗೆ ಬೆಂಕಿ ಹಚ್ಚಿ ಪರಾರಿ ಆಗುತ್ತಿರುವ ವ್ಯಕ್ತಿಯ ವಿಡಿಯೋ ಒಂದು ಸಿಕ್ಕಿದೆ. ಇದು ಟಿ.ಎ. ಪಾಟೀಲ ಆಸ್ಪತ್ರೆ ಹತ್ತಿರದ ರಸ್ತೆಯಲ್ಲಿ ಓಡುತ್ತಿರುವ ವ್ಯಕ್ತಿಯದ್ದಾಗಿದೆ. ಇಂತಹ ವ್ಯಕ್ತಿಗಳ ಸುಳಿವು ಸಿಕ್ಕರೆ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿ. ಪ್ರಕರಣ ಸಂಕೀರ್ಣವಾಗಿದ್ದು, ಬೇಧಿಸಲು ಪ್ರಯತ್ನ ಮಾಡುತ್ತಿದ್ದೇವೆ. ಸಾರ್ವಜನಿಕರ
ಸಹಕಾರಬೇಕು. ಶೀಘ್ರದಲ್ಲಿಯೇ ಆರೋಪಿಗಳನ್ನು ಬಂಧಿಸಲಾಗುವುದು.
ಎನ್.ಶಶಿಕುಮಾರ, ಎಸ್‌ಪಿ ಕಲಬುರಗಿ ಸೂರ್ಯಕಾಂತ ಎಂ. ಜಮಾದಾರ