Advertisement

Democracy Day ವಿಶ್ವದಾಖಲೆಯ ಪುಟ ಸೇರಿದ ಬೃಹತ್‌ ಮಾನವ ಸರಪಳಿ

12:01 AM Sep 16, 2024 | Team Udayavani |

ಬೆಂಗಳೂರು: ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬೀದರ್‌ನ ಬಸವ ಕಲ್ಯಾಣದಿಂದ ಚಾಮರಾಜನಗರ
ದವರೆಗೆ ಏಕಕಾಲದಲ್ಲಿ ನಿರ್ಮಾಣ ಗೊಂಡ ವಿಶ್ವದ ಅತಿದೊಡ್ಡ ಮಾನವ ಸರಪಳಿ ರವಿವಾರ ನಿರೀಕ್ಷೆಯಂತೆ ವಿಶ್ವದಾಖಲೆಯ ಪುಟ ಸೇರಿತು.

Advertisement

ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ ಒಳಗೊಂಡಂತೆ ವಿವಿಧ ಇಲಾಖೆಗಳು, ಬೃಹತ್‌ ಬೆಂಗಳೂರು ಮಹಾ ನಗರ ಪಾಲಿಕೆ (ಬಿಬಿಎಂಪಿ) ಸೇರಿದಂತೆ ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಪ್ರಜಾಪ್ರಭುತ್ವದ ಅರಿವಿಗಾಗಿ ನಿರ್ಮಿಸಲಾದ ಮಾನವ ಸರಪಳಿಗೆ ವಿದ್ಯಾರ್ಥಿಗಳು, ಸರಕಾರಿ ನೌಕರರು, ಸಾರ್ವಜನಿಕರು, ಮಹಿಳೆಯರು ಹೀಗೆ ನಾನಾ ವಲಯದಿಂದ ನೋಂದಣಿ ಮಾಡಿಸಿಕೊಂಡು ಕೈಜೋಡಿಸಿದರು.

ಈ ಮೂಲಕ ಇದೊಂದು “ಸೌಹಾರ್ದ ಸರಪಳಿ’ಯಾಗಿ ರೂಪುಗೊಂಡಿತು.ಮೊದಲೇ ಯಾವ ಮಾರ್ಗದಲ್ಲಿ ಹಾದುಹೋಗಬೇಕು ಎಂಬುದನ್ನೂ ನಿರ್ಧರಿಸಿ, ಮಾನವ ಸರಪಳಿ ನಿರ್ಮಾಣದಲ್ಲಿ ಭಾಗವಹಿಸುವವರಿಗೆ ನಕ್ಷೆ ಪ್ರಕಾರ ಬಂದು ನಿಲ್ಲುವಂತೆ ಸೂಚಿಸಲಾಗಿತ್ತು. ಈ ಸಂಬಂಧ ಆಯಾ ಜಿಲ್ಲೆಗಳ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಪೂರಕ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಸೂಚಿಸಲಾಗಿತ್ತು. ಅಂದಾಜು 2,500 ಕಿ.ಮೀ. ಉದ್ದದ ಈ ಸರಪಳಿಯಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದರು. ಇದಕ್ಕಾಗಿ ಗಿನ್ನೆಸ್‌ ಬುಕ್‌ ಆಫ್ ರೆಕಾರ್ಡ್ಸ್‌ನಿಂದ ಸರ್ಕಾರಕ್ಕೆ ಪ್ರಶಂಸೆ ಪ್ರಮಾಣಪತ್ರ ಕೂಡ ಪ್ರದಾನ ಮಾಡಲಾಯಿತು.

ಈ ಅಪರೂಪದ ಮಾನವ ಸರಪಳಿಗೆ ವಿಧಾನಸೌಧದ ಮುಂಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದರು.
ಪ್ರಜಾಪ್ರಭುತ್ವ ದಿನಾಚರಣೆಯ ರಾಯಭಾರಿ ಹರೇಕಳ ಹಾಜಬ್ಬ, ಪೌರಕಾರ್ಮಿಕರಾದ ನಾಗಲಕ್ಷ್ಮೀ, ಮಂಜುಳಾ, ತೃತೀಯ ಲಿಂಗಿ ಪ್ರಿಯಾಂಕಾ, ಇಬ್ಬರು ಅಂಗವಿಕಲ ವಿದ್ಯಾರ್ಥಿಗಳು ಸಿದ್ದರಾಮಯ್ಯ ಅವರ ಎರಡೂ ಬದಿಯಲ್ಲಿ ನಿಂತು ಅರ್ಥಪೂರ್ಣಗೊಳಿಸಿದರು.

ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಸಚಿವರಾದ ಎಚ್‌.ಸಿ. ಮಹದೇವಪ್ಪ, ಕೆ.ಜೆ. ಜಾರ್ಜ್‌, ಪ್ರಿಯಾಂಕ್‌ ಖರ್ಗೆ, ದಿನೇಶ್‌ ಗುಂಡೂ ರಾವ್‌ ಮೊದಲಾದವರಿದ್ದರು.

Advertisement

ಸಮಾನತೆ ಹಾದಿಯಲ್ಲಿ ಸರಕಾರ: ಸಿಎಂ
ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ 10 ಲಕ್ಷ ಸಸಿ ನೆಡುವ ಕಾರ್ಯಕ್ರಮಕ್ಕೂ ಇದೇ ವೇಳೆ ಚಾಲನೆ ನೀಡಲಾಯಿತು. ಅನಂತರ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಜಾಪ್ರಭುತ್ವದ ಮೂಲ ಉದ್ದೇಶವೇ ಸಮಸಮಾಜ ನಿರ್ಮಾಣ. ಹಾಗಾಗಿಯೇ ಇಲ್ಲಿ ರಾಷ್ಟ್ರಪತಿಯಾಗಲಿ ಅಥವಾ ಪ್ರಧಾನಿಯಾಗಲಿ ಅಥವಾ ಸಫಾಯಿ ಕರ್ಮಚಾರಿಯಾಗಲಿ ಎಲ್ಲರಿಗೂ ಒಂದೇ ವೋಟು. ನಮ್ಮ ಸರಕಾರವೇನೋ ಸಮಾನತೆ ಸಾಧಿಸಿಬಿಟ್ಟಿದ್ದೇವೆ ಅಂತ ನಾನು ಹೇಳುವುದಿಲ್ಲ. ಆದರೆ ಆ ದಿಕ್ಕಿನಲ್ಲಿ ಸಾಗಲು ನಾವು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next