Advertisement

ಪ್ರಜಾತಂತ್ರದ ಪಂಚಾಂಗದಲ್ಲಡಗಿದೆ ದೇಶದ ಭವಿಷ್ಯ

11:15 PM Jan 20, 2022 | Team Udayavani |

ಯಾವುದೇ ಸುಂದರ, ಸದೃಢ ಕಟ್ಟಡ ಭದ್ರವಾದ ಪಂಚಾಂಗವನ್ನೇ ಆಧರಿಸಿ ತಲೆ ಎತ್ತಿ ನಿಲ್ಲುತ್ತದೆ. ಅದೇ ರೀತಿ ವಿಶ್ವದ ಜನಸಂಖ್ಯಾತ್ಮಕ ಪ್ರಪ್ರಥಮ ಪ್ರಜಾತಂತ್ರ ವ್ಯವಸ್ಥೆ ಎನಿಸಿದ ನಮ್ಮ ಭಾರತದ ಸಮಗ್ರ ಪ್ರಚಲಿತ ಹಾಗೂ ಭವಿಷ್ಯದ ರೂವಾರಿತನದ ಹೊಣೆಗಾರಿಕೆ ಪಂಚಾಂಗವನ್ನೇ ಆಧರಿಸಿದೆ. ಈ ಪಂಚ ಅಂಗಗಳ ಮಹತ್ವವನ್ನು ಇಬ್ಬರು ರಾಷ್ಟ್ರೀಯ ನಾಯಕರ ಮಾತುಗಳಲ್ಲಿ ವಿವರಿಸಬಹುದಾಗಿದೆ. “ರಾಷ್ಟ್ರದ ಅಭ್ಯುದಯ ಆಡಳಿತವನ್ನು ಅವಲಂಬಿಸಿದೆ. ಆರಿಸಲ್ಪಟ್ಟ ಪ್ರತಿನಿಧಿಗಳು ನೈತಿಕ ಹಾಗೂ ನೈಷ್ಟಿಕ ವ್ಯಕ್ತಿಗಳಾದರೆ ಲೋಪಯುಕ್ತ ಸಂವಿಧಾನದಿಂದಲೂ ಉತ್ತಮ ಫ‌ಲ ದೊರಕಿಸಬಲ್ಲರು. ವಾಸ್ತವಿಕವಾಗಿ ಸಂವಿಧಾನ ಒಂದು ನಿರ್ಜೀವ ಯಂತ್ರದಂತೆ. ಅದು ಜೀವ ತುಂಬಿಕೊಳ್ಳುವುದೇ ಅದನ್ನು ಯಥಾವತ್ತಾಗಿ ಬಳಸುವುದರಿಂದ. ಇದೀಗ ಭಾರತ ಬಯಸುವುದು ತಮ್ಮ ಹಿತಾಸಕ್ತಿಯಿಂದ, ರಾಷ್ಟ್ರೀಯ ಹಿತಾಸಕ್ತಿಯನ್ನೇ ಮುಂದಿರಿಸುವ ಪ್ರಾಮಾಣಿಕ ವ್ಯಕ್ತಿಗಳ ತಂಡವನ್ನು’- ಇದು 1949 ನವೆಂಬರ್‌ 26 ರಂದು ಭಾರತದ ನೂತನ ರಾಜ್ಯಾಂಗ ಘಟನೆಯನ್ನು ಸಂವಿಧಾನ ರಚನಾ ಸಭೆ ಅಂಗೀಕರಿಸುವ ಶುಭ ಸಂದರ್ಭದಲ್ಲಿ ಅಧ್ಯಕ್ಷ ಪೀಠದಿಂದ ಡಾ| ಬಾಬು ರಾಜೇಂದ್ರ ಪ್ರಸಾದರು ಮಾಡಿದ ಭಾಷಣದ ಅಂಶ.

Advertisement

ಈ ನಮ್ಮ ಸಂವಿಧಾನದ ಅಂಗೀಕಾರದ ಒಂದು ದಿನದ ಮುಂಚಿತವಾಗಿ ಅಂದರೆ ನವೆಂಬರ್‌ 25ರಂದು ಡಾ| ಬಿ.ಆರ್‌.ಅಂಬೇಡ್ಕರ್‌ ಸಂವಿಧಾನ ರಚನಾ ಸಭೆಯನ್ನು ಉದ್ದೇಶಿಸಿ ಮಾಡಿದ ಸುದೀರ್ಘ‌ ಭಾಷಣದ ಕೆಲವು ಅಂಶಗಳಿವು. “ಭಾರತಕ್ಕೆ ಪ್ರಜಾತಂತ್ರ ಹೊಸತೇನಲ್ಲ, ಪ್ರಾಚೀನ ಭಿಕ್ಷು ಸಂಘಗಳು ಆಧುನಿಕ ಜನತಂತ್ರದ, ಪ್ರತಿನಿಧಿ ಸಭೆಗಳ ವಿಧಿವಿಧಾನಗಳನ್ನೇ ಹೊಂದಿದ್ದವು. ಆದರೆ ಈ ಪ್ರಜಾತಂತ್ರೀಯ ವಿಧಾನಗಳು ಇತಿಹಾಸದ ಗರ್ಭಕ್ಕೆ ಸಂದವು…ಇದೀಗ ಇನ್ನೊಂದು ಬಾರಿ ತೀರಾ ಹೊಸದೇನೋ ಎಂಬಂತೆ ಅವುಗಳನ್ನು ರೂಢಿಸಿಕೊಳ್ಳಲು ಹೊರಟಿದ್ದೇವೆ. ಆದರೆ…ಇತಿಹಾಸ ಮರುಕಳಿಸೀತೆ? ಈ ನಮ್ಮ ಪ್ರಜಾಪ್ರಭುತ್ವ ನಿರಂಕುಶತ್ವಕ್ಕೆ ಕುಸಿದು ಬಿಟ್ಟರೆ, ಈ ಬಾರಿಯ ಹೊಡೆತ ಅತ್ಯಂತ ಭೀಕರ ಎನಿಸೀತು. ನಮ್ಮೆಲ್ಲ ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳಿಗೆ ಸಾಂವಿಧಾನಿಕ ಪರಿಹಾರದ ವಿಧಿಗಳೇ ಇರುವಾಗ ಕಾನೂನುಭಂಗ, ಅಸಹಕಾರದಂತಹ ಚಳವಳಿಗಳು ಅರಾಜಕತೆಯ ವ್ಯಾಕರಣಗಳೇ ಆದಾವು. ನಮ್ಮ ರಾಜಕೀಯ ಜನತಂತ್ರವನ್ನು ಸಾಮಾಜಿಕ ಜನತಂತ್ರದೊಂದಿಗೆ ಸಮೀಕರಿಸಬೇಕು-ಹೀಗೆ ಅತ್ಯಂತ ಗಂಭೀರವಾಗಿ ವೈಚಾರಿಕ ಲಹರಿಯನ್ನು ಡಾ| ಬಿ.ಆರ್‌.ಅಂಬೇಡ್ಕರ್‌ ಹರಿಸಿದ್ದರು.

ಪ್ರಾಚೀನ ಭಾರತದ ರಾಜವ್ಯವಸ್ಥೆಯ ಬಗೆಗೆ ಗ್ರೀಕರಷ್ಟೇ ಅತ್ಯಂತ ಸಾಮಾಜಿಕ ರಾಜಕೀಯ ಸೂತ್ರಗಳ ಬಗ್ಗೆ ಚಿಂತನ-ಮಂಥನ ನಮ್ಮ ಭಾರತೀಯರಲ್ಲೂ ದಾಖಲಿತವಾಗಿದೆ. ಕೌಟಿಲ್ಯ ತನ್ನ ಅರ್ಥಶಾಸ್ತ್ರ ಗ್ರಂಥದಲ್ಲಿ ಪ್ರಬಲ ರಾಜ್ಯದ ಸಪ್ತಾಂಗ ಸಿದ್ಧಾಂತವನ್ನು ರಾಜ, ಅಮಾತ್ಯ ವರ್ಗ, ಜನಪದ, ದುರ್ಗ, ಕೋಶ, ದಂಡ ಅರ್ಥಾತ್‌ ಸೈನ್ಯ ಹಾಗೂ ಮಿತ್ರ ಅಂದರೆ ಉತ್ತಮ ನೆರೆರಾಜ್ಯಗಳು ಎಂಬುದಾಗಿ ವಿಶದೀಕರಿಸುತ್ತಾನೆ. ಆಧುನಿಕ ರಾಜ್ಯಶಾಸ್ತ್ರಜ್ಞರು ಒಂದು ರಾಷ್ಟ್ರ ವ್ಯವಸ್ಥೆ ಅಲ್ಲಿನ ಜನಸಮುದಾಯ, ಭೂಭಾಗ, ಸರಕಾರ ಹಾಗೂ ಸಾರ್ವಭೌಮತೆ- ಈ ನಾಲ್ಕು ಅಂಶಗಳನ್ನು ಆಧರಿಸಿವೆ ಎಂದು ವ್ಯಾಖ್ಯಾನಿಸುತ್ತಾರೆ. ವಿಶ್ವದ ಸುದೀರ್ಘ‌ ಸಂವಿಧಾನ ಎನ್ನುವ ಹೆಗ್ಗಳಿಕೆಯ ನಮ್ಮ ಭಾರತದ ರಾಜ್ಯಾಂಗ ಘಟನೆಯ ಸಿಂಹಾವಲೋಕನಗೈದು ತಣ್ತೀ, ಸತ್ವ ಸಂಗ್ರಹಣೆಗೆ ಹೊರಟಾಗ 5 ಮೂಲ ತಂತುಗಳು ಅರ್ಥಾತ್‌ ಪಂಚಾಂಗ (ಪಂಚ+ಅಂಗಗಳು) ಎದ್ದು ಕಾಣುತ್ತಿವೆ. ನಮ್ಮ ಸಾಂವಿಧಾನಿಕ ಪ್ರಸ್ತಾವನೆಯೇ ಶ್ರುತ ಪಡಿಸುವಂತೆಯೇ ಪ್ರಜಾಪ್ರಭುತ್ವದ ಮೇಲೆಯೇ ನಮ್ಮಿ ಸಮಗ್ರ ವ್ಯವಸ್ಥೆ ಆಧರಿತಗೊಂಡಿದೆ. ನೇರ ಪ್ರಜಾತಂತ್ರದ ಸಾಧ್ಯತೆಗಳಿಗೆ ಕದ ತೆರೆಯದೆ ಪ್ರಜಾ ಸಮುದಾಯ ಉತ್ತಮರನ್ನೇ ಆಯ್ಕೆಗೊಳಿಸಿ, ತನ್ಮೂಲಕ ಅಧಿಕಾರ ಹಸ್ತಾಂತರಿಸಬೇಕು ಎಂದುದು ಇಲ್ಲಿನ ಸರಳ ನಿರೂಪಣೆ. ಅದರೊಂದಿಗೇ ತಮ್ಮ ದಿನದಿನದ ಬದುಕಿನ ಉಪಯುಕ್ತ ಮೂಲಭೂತ ಹಕ್ಕುಗಳನ್ನು ತಮ್ಮಲ್ಲೇ ಇರಿಸಿ, ಸ್ವತಂತ್ರ ಬದುಕಿನ ತಂಗಾಳಿ ಅಸ್ವಾದಿಸಬೇಕು. ಆದರೆ ಭಾರತೀಯ ಬೃಹತ್‌ ಜನಸಮುದಾಯ “ಸ್ವಾತಂತ್ರ್ಯದ ಗೆರೆ ಮೀರಿ “ಸ್ವೇಚ್ಛೆ’ಯ ಅರಾಜಕತೆಗೆ ದಾಪುಗಾಲು ಹಾಕಬಾರದು ಎಂಬುದೂ ಇಲ್ಲಿನ ಭಾವತರಂಗ. ಅದೇ ರೀತಿ ಹಕ್ಕುಗಳೊಂದಿಗೆ, ಮೂಲಭೂತ ಕರ್ತವ್ಯಗಳ ಛಾಪು ಮೂಡಿಸಿಕೊಂಡು, ವ್ಯಕ್ತಿಗತ ಹಾಗೂ ಸಾಮುದಾಯಿಕ ಬದುಕಿನ ಬಳ್ಳಿ ಈ ನೆಲದಲ್ಲಿ ಪಸರಿಸಬೇಕು. ಅಂತಹ ಪ್ರಬುದ್ಧ, ಕಾರ್ಯಶೀಲ ವಿಶಾಲ ಜನಪದವೇ ಭಾರತದ ಸಮಗ್ರ ವ್ಯವಸ್ಥೆಯ ಪ್ರಪ್ರಥಮ ಅಂಗ.

ಪ್ರತಿನಿಧಿತ್ವ ಪ್ರಚಲಿತ ಜಗದಗಲದ ರಾಜಕೀಯ ಬದುಕಿನ ಜೀವಾಳ; ಭಾರತದ ವರ್ತಮಾನದ ವರ್ತಮಾನಗಳ ಒಳಪದರ ಕೂಡ. ಹಳ್ಳಿಯಿಂದ ದಿಲ್ಲಿಯವರೆಗೆ, ನಮ್ಮ ನಾಡಿನ ಆರೋಗ್ಯಕರ ನಾಡಿ ಬಡಿತಕ್ಕೆ ಮಿಡಿಯುವಲ್ಲಿ ಗ್ರಾಮ ಪಂಚಾಯತ್‌ನಿಂದ ಹಿಡಿದು ಸಂಸತ್ತಿನ ವರೆಗೆ ಆರೋಗ್ಯಕರ ಪ್ರಜಾತಂತ್ರೀಯ ವ್ಯವಸ್ಥೆಗೆ ಜೀವಧಾತು ಒದಗಿಸಬೇಕಾದುದೇ ಈ ಜನಪ್ರತಿನಿಧಿ ಸಭೆಗಳು. ನಿರಂಕುಶತ್ವದ ದಾರಿ ತೊರೆದು, ಜನಹಿತದ ಪಥದಲ್ಲಿ ಸಾಗಲು ಇಂತಹ ಜನಪ್ರತಿನಿಧೀಕರಣ ಆವಶ್ಯಕತೆ ನಮ್ಮಿà ರಾಷ್ಟ್ರಕ್ಕೆ ತೀರಾ ಅತ್ಯಗತ್ಯ, ಸಭ್ಯ, ಸುಸಂಸ್ಕೃತ ಶಾಸಕಾಂಗ ಅತ್ಯಂತ ಆವಶ್ಯಕ ದ್ವಿತೀಯ ಅಂಗ. ಪ್ರಾಚೀನ ಭಾರತದ ರಾಜವ್ಯವಸ್ಥೆ ಅಥವಾ ಅರಸೊತ್ತಿಗೆ ನಿರಂಕುಶತೆಯೆಡೆಗೆ ಸಾಗದಂತೆ ಆ ದಿನಗಳಲ್ಲಿಯೂ ಧರ್ಮ ಸೂತ್ರಗಳು, ರಾಜಗುರು ಪರಂಪರೆ, ಅಮಾತ್ಯಗಡಣ- ಈ  ಎಲ್ಲ ಬಂಧಗಳನ್ನು ಯಥೇತ್ಛವಾಗಿ ಹೆಣೆಯಲಾಗಿತ್ತು. ಜನಪರ ಚಿಂತನೆ ಹಾಗೂ ಕಾರ್ಯ ವರ್ತುಲ ಕಿರೀಟಧಾರಣೆ ಮಾಡಿದ ಸಿಂಹಾಸನಾಧಿಪತಿಗೆ ಆ ದಿನಗಳಲ್ಲಿ ರೂಪುಗೊಂಡಿತ್ತು. ನಿರ್ದಿಷ್ಟ ಕಾಲಮಿತಿ ಹಾಗೂ ಕಾರ್ಯಮಿತಿಯ, ಸಾಂವಿಧಾನಿಕ ಗೆರೆಗಳ ಮಧ್ಯೆ ವ್ಯವಹರಿಸುವ ಪ್ರಚಲಿತ ಕಾರ್ಯಾಂಗ ಈ ನೆಲದ ಕಾಲಮಾನ್ಯ ಪ್ರಬಲ ಅಂಗ. ನಿರಂಕುಶತ್ವದೆಡೆಗೆ ಮುಖ ಮಾಡದ ಪ್ರಜಾಭಿಪ್ರಾಯ ಪ್ರತಿಫ‌ಲಿಸುವ ಜನೋಪಯೋಗಿ ಯೋಚನೆ, ಯೋಜನೆಗೆ ಧಾವಿಸುವ ಕಾರ್ಯಾಂಗದ ಮೇಲೆಯೇ ನಮ್ಮ ನಾಡಿನ ಪ್ರಗತಿ ಆಧರಿಸಿದೆ. ಈ ಕಾರ್ಯಾಂಗದಲ್ಲಿಯೂ ಮೇಲ್‌ಸ್ಥರದ ಚುನಾವಣಾಧಾರಿತ ರಾಜಕೀಯದ ಕಾರ್ಯಾಂಗ ಹಾಗೂ ಶಾಶ್ವತ ಕಾರ್ಯ ಪ್ರವರ್ತನ ಪಡೆ ಪ್ರಗತಿಯ ಬಂಡಿಯ ಜೋಡೆತ್ತುಗಳಂತೆ ತಮ್ಮದೇ ಪ್ರಮುಖ ಭೂಮಿಕೆ ಹೊಂದಿವೆ.

ಎಲ್ಲಿ ನ್ಯಾಯ ಕೇಳುವ ಅಥವಾ ನೀಡುವ ತಕ್ಕಡಿ ಇಲ್ಲವೋ ಅಲ್ಲಿ ಶಾಂತಿ, ಸಹಬಾಳ್ವೆ ಎಲ್ಲವೂ ಕದಡಿದ ಕೊಳದಂತಾಗಿ ಬದುಕು ದುಸ್ತರವಾಗುತ್ತದೆ. ಅದಕ್ಕಾಗಿಯೇ ನಾಲ್ಕನೆಯ ಅಂಗ ಎಂಬುದಾಗಿ ನಾವು ನ್ಯಾಯಾಂಗದ ಎತ್ತರ, ಬಿತ್ತರ ಹಾಗೂ ಸಮದರ್ಶಿತ್ವವನ್ನು ಗುರುತಿಸಬೇಕಾಗಿದೆ. “ಉಪ್ಪು ಸ್ವತಃ ತನ್ನತನವನ್ನೇ ಕಳೆದುಕೊಂಡರೆ, ಅದಕ್ಕೇನಿದೆ ಪರ್ಯಾಯ?’ ಎಂಬ ನಾಣ್ಣುಡಿಯಂತೆ, ನ್ಯಾಯದೇಗುಲವೇ ಅನ್ಯಾಯದ ಕತ್ತಲೆ ಕಳೆಯುವ ಬೆಳಕು ನೀಡದಿದ್ದರೆ ಜನಸಾಮಾನ್ಯರ ಬದುಕಿನ ಸೊಲ್ಲೇ ಕ್ಷೀಣವಾಗಬಲ್ಲದು. ಈ ನಿಟ್ಟಿನಲ್ಲಿ ಸಂವಿಧಾನಾತ್ಮಕ ನ್ಯಾಯಾಂಗದ ತಂಪುಗಾಳಿ ನಮ್ಮಿà ಭಾರತದ ಉದ್ದಗಲದಲ್ಲಿ ಮುಂಬರುವ ದಿನಗಳಲ್ಲಿ ಬೀಸುತ್ತಿರುವಿಕೆಯೇ ನಮ್ಮ ಭವಿಷ್ಯದ ಆಶಾಜ್ಯೋತಿ. ನ್ಯಾಯಕ್ಕೇ ಅನ್ಯಾಯವಾದಾಗ ಆಗ ಪ್ರಚಲಿತ ವ್ಯವಸ್ಥೆಯೇ ಪತನಗೊಂಡೀತು.

Advertisement

ಇನ್ನು ವರ್ತಮಾನದ ಸಮಗ್ರ ರಾಷ್ಟ್ರೀಯ ಬದುಕಿನಲ್ಲಿ ಬಹುರೂಪಿ ಮಾಧ್ಯಮಗಳ ಪಾತ್ರ ಬಹಳ ಹಿರಿದು. ಈ ನೆಲೆಯಲ್ಲಿಯೇ ಸುದ್ದಿ ಸಂಸ್ಥೆಗಳು, ವರ್ತಮಾನ ಪತ್ರಿಕೆಗಳು, ಪ್ರಸಾರ ಸಾಧನಗಳು ಜಾಗೃತಿಯ ರಾಯ ಭಾರಿಗಳಂತೆ ನಿರ್ಭೀತಿಯ, ನಿಷ್ಪಕ್ಷಪಾತ ದೃಷ್ಟಿಯ, ಸತ್ಯ ಶೋಧಕತೆಯ ಅಂತೆಯೇ ಚಿಕಿತ್ಸಕ ಮನೋಭೂಮಿಕೆಯ ಪಾತ್ರ ತಮ್ಮದಾಗಿಸಿಕೊಳ್ಳಬೇಕಾಗಿದೆ. ಹೀಗೆ ಜವಾ ಬ್ದಾರಿಯುತ ಜನಪದ, ಸದ್ವೈತನೆಯ ಪ್ರತಿನಿಧೀಕರಣ, ಉತ್ತಮಿಕೆಯ ಕಾರ್ಯ ಪರಿಧಿಯ ಕಾರ್ಯಾಂಗ, ಸಮದರ್ಶಿತ್ವದ ನ್ಯಾಯಾಂಗ ಹಾಗೂ ಕ್ರಿಯಾತ್ಮಕ ಪೂರಕ, ಪ್ರೇರಕ ಪ್ರಸಾರಾಂಗ- ಈ ಐದು ಸದೃಢ ಅಂಶಗಳನ್ನು ಆಧರಿಸಿ ನಮ್ಮ ನಾಡು ಸಾಗಲಿ ಎಂದು ಶುಭ ಹಾರೈಸೋಣ.

 

 -ಡಾ| ಪಿ.ಅನಂತಕೃಷ್ಣ ಭಟ್‌, ಮಂಗಳೂರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next