ರಾಯಚೂರು: ವೈಟಿಪಿಎಸ್ ಭೂ ಸಂತ್ರಸ್ತರ ಬೇಡಿಕೆ ಈಡೇರಿಕೆಗೆ ಸರ್ಕಾರ ಪಡೆದಿದ್ದ ಗಡುವು ಮುಗಿದಿದ್ದು, ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ವೈಟಿಪಿಎಸ್ ಎದುರು ಭೂ ಸಂತ್ರಸ್ತರ ಹೋರಾಟ ಸಮಿತಿ ಸದಸ್ಯರು ಗುರುವಾರ ಅಹೋರಾತ್ರಿ ಧರಣಿ ನಡೆಸಿದರು.
ಕೇಂದ್ರದ ಎದುರು ಧರಣಿ ನಡೆಸಿದ ಸಂತ್ರಸ್ತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಭೂ ಸಂತ್ರಸ್ತರಿಗೆ ಉದ್ಯೋಗಕ್ಕೆ ನೇರ ನೇಮಕಾತಿ ಮಾಡುವಂತೆ ಬೇಡಿಕೆಯೊಡ್ಡಿ ಕೆಲ ತಿಂಗಳಿಂದ ಹೋರಾಟ ನಡೆಸುತ್ತಿದ್ದೇವೆ. ಈ ಕುರಿತು ಅಧಿಕಾರಿಗಳು ಸಭೆ ನಡೆಸಿ ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಗೊಳಿಸುವ ಭರವಸೆ ನೀಡಿದ್ದರು. ಆದರೆ, ಅಧಿಕಾರಿಗಳು ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸ್ಥಾಪನೆಗಾಗಿ ಏಗನೂರು, ವಡ್ಮೂರು ಚಿಕ್ಕಸುಗೂರು, ಕುಕನೂರು, ಯರಮರಸ್ ಸೇರಿ ವಿವಿಧ ಗ್ರಾಮಗಳ ರೈತರಿಂದ 1100 ಎಕರೆಗೂ ಹೆಚ್ಚು ಭೂಮಿ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಭೂ ಸಂತ್ರಸ್ತರ ಕುಟುಂಬದವರಿಗೆ ಉದ್ಯೋಗ ನೀಡಲು ಸರ್ಕಾರ ನಾನಾ ನೆಪಗಳನ್ನು ಹೇಳುತ್ತಿದೆ. ಅನಗತ್ಯ ನಿಯಮಗಳನ್ನು ಹೇರುತ್ತಿದೆ ಎಂದು ದೂರಿದರು.
ಭೂ ಸಂತ್ರಸ್ತರೊಂದಿಗೆ ಮಾತುಕತೆ ನಡೆಸಿದ್ದ ಕೆಪಿಸಿ ಅಧಿಕಾರಿಗಳು ಸಭೆ ನಡೆಸಿ ತೀರ್ಮಾನಿಸುವುದಾಗಿ ತಿಳಿಸಿದ್ದರು. ನ.28ರಂದು ಆಡಳಿತ ಮಂಡಳಿ ಸಭೆ ನಡೆಸುವ ಬಗ್ಗೆ ತಿಳಿಸಲಾಗಿತ್ತು. ಆದರೆ, ಸಭೆ ಕರೆಯದೆ ನಮ್ಮ ಬೇಡಿಕೆ
ಕಡೆಗಣಿಸಲಾಗಿತ್ತು. ನಂತರ ಮಾತುಕತೆ ನಡೆಸಿ ಮತ್ತದೆ ಹುಸಿ ಭರವಸೆ ಮಾತ್ರ ಸಿಕ್ಕಿತ್ತು. ಆದರೆ, ಈಗ ಬೇರೆ ಭಾಗದ ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳುತ್ತಿದ್ದು, ಸ್ಥಳೀಯರನ್ನು ವಂಚಿಸಲಾಗುತ್ತಿದೆ ಎಂದು ದೂರಿದರು.
ಭೂ ಸಂತ್ರಸ್ತರ ಸಮಸ್ಯೆ ಹಾಗೂ ಬೇಡಿಕೆಗಳ ಕುರಿತು ಹಿಂದಿನ ಜಿಲ್ಲಾಧಿಕಾರಿ ಸಲ್ಲಿಸಿದ ಪ್ರಸ್ತಾವನೆಯನ್ನೇ ಜಾರಿಗೊಳಿಸಬೇಕು. ಭೂ ಸಂತ್ರಸ್ತರಿಗೆ ಯಾವುದೇ ಕಾರಣಕ್ಕೂ ಉದ್ಯೋಗ ಕೈತಪ್ಪದಂತೆ ನೋಡಿಕೊಳ್ಳಬೇಕು. ಈಗ ಹೇರಿದ ಅನಗತ್ಯ ನಿಯಮ ಸಡಿಲಿಸಿ ಉದ್ಯೋಗ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಸತ್ಯನಾರಾಯಣ, ಸದಸ್ಯರಾದ ವೈ.ನರಸಪ್ಪ, ಶ್ರೀನಿವಾಸ, ವಡ್ಮೂರು ರವಿ, ರಾಮನಗೌಡ, ಬಾಬುರಾವ್, ರಘು, ನಾಗರಾಜ್ ಸೇರಿ ಅನೇಕರು ಧರಣಿಯಲ್ಲಿ ಪಾಲ್ಗೊಂಡಿದ್ದರು.