ಗಜೇಂದ್ರಗಡ: ಕಾರ್ಮಿಕ ವಿರೋಧಿ ನಿಲುವು ತಾಳುವ ಮೂಲಕ ದುಡಿಯುವ ವರ್ಗದ ಜೊತೆ ಕೇಂದ್ರ ಸರ್ಕಾರ ಚೆಲ್ಲಾಟವಾಡುತ್ತಿದೆ. ಆದರೀಗ ಉದ್ದೇಶಿತ ಸಾಮಾಜಿಕ ಸುರಕ್ಷಾ (ಸಂಹಿತೆ) ಕಲ್ಯಾಣ ಮಸೂದೆ ಕೈಬಿಡಲು ಮುಂದಾಗದಿದ್ದರೆ ರಾಷ್ಟ್ರವ್ಯಾಪಿ ಕಾರ್ಮಿಕ ಸಂಘಟನೆಗಳು ಬೀದಿಗಿಳಿದು ಹೋರಾಟ ಮಾಡುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾಧ್ಯಕ್ಷ ಪೀರು ರಾಠೊಡ ಹೇಳಿದರು.
ಪಟ್ಟಣದ ಸಂಘಟನೆ ಕಾರ್ಯಾಲಯದಲ್ಲಿ ರವಿವಾರ ಪೋಸ್ಟರ್ ಬಿಡುಗಡೆ ಮಾಡಿ, ಮಾತನಾಡಿದ ಅವರು, ಈಗಾಗಲೇ ನೋಟು ಅಮಾನ್ಯೀಕರಣ ಹಾಗೂ ಜಿಎಸ್‌ಟಿ ನೀತಿಗಳನ್ನು ಜಾರಿ ಮಾಡಿ ಕೋಟ್ಯಂತರ ಕಟ್ಟಡ ಕಾರ್ಮಿಕರನ್ನು ನಿರುದ್ಯೋಗಿಗಳನ್ನಾಗಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಇದೀಗ ಸಾಮಾಜಿಕ ಸುರಕ್ಷತಾ ಮಸೂದೆ-2018ರನ್ನು ಜಾರಿಗೊಳಿಸಲು ಹೊರಟಿದೆ. ಈಗಾಗಲೇ ವೃತ್ತಿ ಆಧಾರಿತ ಸುರಕ್ಷಾ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತಾದ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿ ಪಾಸು ಮಾಡಿಕೊಂಡಿದೆ. ಇದರಿಂದ ನಾಲ್ಕು ಕೋಟಿ ಕಟ್ಟಡ ನಿರ್ಮಾಣ ಕಾರ್ಮಿಕರು ಪಡೆಯುತ್ತಿರುವ ಹಲವು ಸೌಲಭ್ಯಗಳಿಂದ ವಂಚಿತರಾಗಲಿದ್ದಾರೆ. ಸದ್ಯ ತಿದ್ದುಪಡಿ ಮಾಡಲು ಹೊರಟಿರುವ ಕಾನೂನು ತಿದ್ದುಪಡಿಗಳಲ್ಲಿ ದೇಶದ ಕೋಟ್ಯಂತರ ಕಟ್ಟಡ ನಿರ್ಮಾಣ ಕಾರ್ಮಿಕರು ಬದುಕು ಅಡಗಿದೆ ಎಂದರು.
ಸಾಮಾಜಿಕ ಭದ್ರತೆ, ಕಲ್ಯಾಣ ಮಸೂದೆ ಹಾಗೂ ವೃತ್ತಿ ಆಧಾರಿತ ಸುರಕ್ಷಾ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿ ಕುರಿತಾದ ಎರಡು ಕೋಡ್‌ಗಳು ಜಾರಿಯಾದರೆ ಈಗಿರುವ, 1996ರಲ್ಲಿ ಜಾರಿಯಾದ ಕಟ್ಟಡ ಕಾರ್ಮಿಕ ಕಾನೂನು ಹಾಗೂ ಸೆಸ್ ಕಾನೂನುಗಳೆರಡು ಅಲ್ಲದೇ, ಕರ್ನಾಟಕದ 20 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರು ಸೇರಿ ದೇಶದ 4 ಕೋಟಿ ಕಾರ್ಮಿಕರ ಗುರುತಿನ ಚೀಟಿಗಳು ರದ್ದಾಗುತ್ತದೆ. ಇಂತಹ ಕಾರ್ಮಿಕ ವಿರೋಧಿ ನೀತಿಗಳನ್ನು ಕೈ ಬಿಡಬೇಕಿದೆ.
ಕಾರ್ಮಿಕರು ಹಲವು ವರ್ಷಗಳ ಕಾಲ ಹೋರಾಟ ನಡೆಸಿದ ಫಲವಾಗಿ ದೊರೆಯುತ್ತಿರುವ ಕಾನೂನುಗಳನ್ನು ಮತ್ತು ಅದರಡಿ ಸೌಲಭ್ಯಗಳನ್ನು ಇಲ್ಲದಂತೆ ಮಾಡುವ ಹುನ್ನಾರದ ವಿರುದ್ಧ ಕಟ್ಟಡ ಕಾರ್ಮಿಕ ಕಾನೂನು-1996 ಉಳಿಸಿ ಕಟ್ಟಡ ಕಾರ್ಮಿಕ ಮಂಡಳಿ ಹಾಗೂ ಕಾರ್ಮಿಕರ ಬದುಕನ್ನು ರಕ್ಷಿಸಿ ಎನ್ನುವ ಬಹುದೊಡ್ಡ ಆಂದೋಲನ ಹಮ್ಮಿಕೊಳ್ಳಲಾಗಿದೆ. ಅದರ ಭಾಗವಾಗಿ ಸೆ.19ರಂದು ವಿಧಾನಸೌಧ ಚಲೋ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಇದಕ್ಕೂ ಕೇಂದ್ರ ಸರ್ಕಾರ ಸ್ಪಂದಿಸದಿದ್ದರೆ, ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಸಂಸತ್ ಮುತ್ತಿಗೆ ಹಾಕಲಾಗುವುದು ಎಂದರು.
ಸರಸ್ವತಿ ರಾಠೊಡ, ರಾಮಪ್ಪ ಚವ್ಹಾಣ, ಪ್ರೇಮಾ ರಾಠೊಡ, ಕಸ್ತೂರೆವ್ವ ಮಾಳವತ್ತರ, ಕಳಕಪ್ಪ ಹೊಸಮನಿ, ಮಹಬೂಬಸಾಬ ಹವಾಲ್ದಾರ್, ರೇವಣಪ್ಪ ರಾಠೊಡ, ಶರಣಪ್ಪ ವಡ್ಡರ, ಅಂದಪ್ಪ ಕುರಿ, ಮುತ್ತಪ್ಪ ಸಾಳುಂಕಿ, ದೇವಲೆಪ್ಪ ರಾಠೊಡ, ಕೃಷ್ಣಪ್ಪ ರಾಠೊಡ, ಕನಕವ್ವ ಮಾದರ ಸೇರಿ ಇತರರು ಪಾಳ್ಗೊಂಡಿದ್ದರು.