ವಿಜಯಪುರ : ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಅಲಿಯಾಬಾದ್ ಗ್ರಾಮ ಪಂಚಾಯತ್ ಪಿಡಿಓ 9 ತಿಂಗಳಿಂದ ತಮಗೆ ಸಂಬಳ ನೀಡದೇ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಂಚಾಯತ್ ನ ಓರ್ವ ವಾಟರ್ ಮ್ಯಾನ್ ಕುಟುಂಬ ಜಿಲ್ಲಾಧಿಕಾರಿ ಕಛೇರಿ ಎದುರು ತಲೆಮೇಲೆ ಕಲ್ಲು ಹೊತ್ತು ಅನಿರ್ಧಿಷ್ಟಾವಧಿ ಧರಣಿ ಆರಂಭಿಸಿದೆ.
ಅಲಿಯಾಬಾದ ವಾಟರ್‍ಮನ್ ಗಣಪತಿ ಶಿವಾಜಿ ತರಸೆ ಎಂಬವರೇ ತಮ್ಮ ಪಂಚಾಯತ್‍ನ ಪಿ.ಡಿ.ಓ. ಸಂಬಳ ನೀಡದೇ ಕಿರುಕುಳ ನೀಡುತ್ತಿರುವ ಜಯಶ್ರೀ ಪವಾರ್ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ತಮಗೆ ಸಂಬಳ ಕೊಡಿಸಬೇಕು ಎಂದು ಕುಟುಂಬ ಸಮೇತ ತಲೆ ಮೇಲೆ ಕಲ್ಲು ಹೊತ್ತು ನಿಂತಿದ್ದಾರೆ. ನ್ಯಾಯ ಸಿಗುವ ವರೆಗೆ ಈ ಹೋರಾಟ ಮುಂದುವರೆಯಲಿದೆ ಎಂದು ಗಣಪತಿ ತರಸೆ ತಿಳಿಸಿದ್ದಾರೆ.
2007- 08 ರಿಂದ ಅಲಿಯಾಬಾದ್ ಗ್ರಾಮ ಪಂಚಾಯತ್‍ನಲ್ಲಿ ಧನವಾಡಹಟ್ಟಿ ವಾಟರ್ ಮ್ಯಾನ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಸದರಿ ಪಂಚಾಯತ್ ಪಿಡಿಓ ಜಯಶ್ರೀ ತಮಗೆ ಕಳೆದ 9 ತಿಂಗಳಿಂದ ವೇತನ ಪಾವತಿಸದೇ ತೊಂದರೆ ಕೊಡುತ್ತಿದ್ದಾರೆ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂದು ದೂರಿದರು.
ಅಲಿಯಾಬಾದ್ ಭೂ ಕಂದಾಯ ಬಾಕಿ ವಸೂಲಿಗೆ ಜಪ್ತಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದ್ದರೂ ಕ್ರಮ ಕೈಗೊಳ್ಳದ ಪಿಡಿಓ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಜನವರಿ 2020 ರಿಂದ ಈ ವರೆಗೆ ಅಲಿಯಾಬಾದ್ ಪಂಚಾಯತ್‍ನ ಇತರೆ ಸಿಬ್ಬಂದಿ ಹಲವು ಬಾರಿ ಸಂಬಳ ನೀಡಿದ್ದರೂ ನನಗೆ ಮಾತ್ರ ಸಂಬಳ ನೀಡುತ್ತಿಲ್ಲ ಎಂದು ದೂರಿದರು.
ಸಿಬ್ಬಂದಿ ವೇತನ ಪಾವತಿ ವಿಷಯದಲ್ಲಿ ಕರ್ತವ್ಯ ಲೋಪ ಎಸಗಿರುವ ಪವಾರ್ ವಿರುದ್ಧ ಕ್ರಮ ಕೈಗೊಳ್ಳುಯವಂತೆ ಆಗ್ರಹಿಸಿ ಇದೀಗ ನ್ಯಾಯಕ್ಕಾಗಿ ತಲೆಯ ಮೇಲೆ ಕಲ್ಲು ಹೊತ್ತು ನಿಲ್ಲುವ ಹಂತಕ್ಕೆ ಬಂದಿದೆ ಎಂದು ಪಿಡಿಓ ವಿರುದ್ಧ ಹರಿಹಾಯ್ದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ್, ಸಮಸ್ಯೆ ಪರಿಹಾರಕ್ಕೆ ಸಂಬಂಧಿಸಿದವರೊಂದಿಗೆ ಚರ್ಚಿಸುವುದಾಗಿ ಭರವಸೆ ನೀಡಿ, ಧರಣಿ ಹಿಂಪಡೆಯಲು ಮನವಿ ಮಾಡಿದರು.