Advertisement

ಜಾರ್ಜ್‌ ರಾಜೀನಾಮೆ ನೀಡದಿದ್ರೆ 26ರಿಂದ ಧರಣಿ

11:40 AM Sep 17, 2017 | Team Udayavani |

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ಬಗ್ಗೆ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್‌ ಆದೇಶಿಸಿರುವ ಹಿನ್ನೆಲೆಯಲ್ಲಿ ಕೆ.ಜೆ.ಜಾರ್ಜ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ಶನಿವಾರ ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ಅಲ್ಲದೆ, ಜಾರ್ಜ್‌ಅವರನ್ನು ಸಚಿವ ಸ್ಥಾನದಿಂದ ಕೈಬಿಡದಿದ್ದಲ್ಲಿ ಸೆ. 26ರಿಂದ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ನಡೆಸಲು ತೀರ್ಮಾನಿಸಿದೆ.

Advertisement

ಡಿವೈಎಸ್ಪಿ ಗಣಪತಿ ಅನುಮಾನಾಸ್ಪದ ಸಾವು ಪ್ರಕರಣದಲ್ಲಿ ಸಿಐಡಿ ತನಿಖೆ ಸರಿಯಾಗಿ ತನಿಖೆ ನಡೆಸಿಲ್ಲ ಮತ್ತು ಸಾಕ್ಷಿಗಳನ್ನು
ಮುಚ್ಚಿಹಾಕಲಾಗಿದೆ ಎಂಬ ಕಾರಣಕ್ಕೆ ಸುಪ್ರೀಂಕೋರ್ಟ್‌ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಿದೆ. ಈ ಪ್ರಕರಣದಲ್ಲಿ
ಆರೋಪಿಯಾಗಿರುವ ಕೆ.ಜೆ.ಜಾರ್ಜ್‌ಗೆ ಸಚಿವ ಸ್ಥಾನದಲ್ಲಿ ಮುಂದುವರಿಯಲು ನೈತಿಕ ಹಕ್ಕಿಲ್ಲ. ಅಲ್ಲದೆ, ಬೆಂಗಳೂರು
ನಗರಾಭಿವೃದ್ಧಿ ಸಚಿವರಾಗಿರುವ ಅವರ ಮೂಗಿನ ಕೆಳಗೆ ಸಾಕಷ್ಟು ಅಕ್ರಮಗಳು ನಡೆದಿವೆ. ಆದ್ದರಿಂದ ಕೂಡಲೇ ಸಚಿವ
ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬೆಂಗಳೂರಿನ ಆನಂದರಾವ್‌ ವೃತ್ತದ ಬಳಿಕ ಇರುವ ಗಾಂಧಿ ಪ್ರತಿಮೆ ಎದುರು ಮತ್ತು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.

ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಜಾರ್ಜ್‌ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು, ಗಣಪತಿ ಆತ್ಮಹತ್ಯೆ
ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸಿಐಡಿ ಪೊಲೀಸರನ್ನು ಮುಂದಿಟ್ಟುಕೊಂಡು ಸಾಕ್ಷ್ಯನಾಶ ಮಾಡಿ ಜಾರ್ಜ್‌ಗೆ ಕ್ಲೀನ್‌
ಚಿಟ್‌ ನೀಡಿದೆ. ಸಿಬಿಐ ತನಿಖೆ ನಡೆಯುತ್ತಿರುವಾಗ ಅವರು ಅಧಿಕಾರದಲ್ಲಿ ಮುಂದುವರಿದರೆ ಸಾಕ್ಷ್ಯನಾಶ ಮಾಡುವ
ಸಾಧ್ಯತೆಯಿದ್ದು, ತನಿಖೆ ದಾರಿತಪ್ಪಿಸಲಿದ್ದಾರೆ. ಆದ್ದರಿಂದ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲೇ ಬೇಕೆಂದು ಆಗ್ರಹಿಸಿದರು.

ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, “ರಾಜ್ಯ ಸರ್ಕಾರಕ್ಕೆ ಕಿಂಚಿತ್ತು ಮಾನ-ಮರ್ಯಾದೆ ಇದ್ದರೆ ಹಾಗೂ ಬಿಜೆಪಿಯವರು ಮತ್ತೆ ಹೋರಾಟಕ್ಕೆ ಇಳಿಯಬಾರದು ಎಂದಾದರೆ ತಕ್ಷಣ ಸಚಿವ ಜಾರ್ಜ್‌ ಅವರನ್ನು ಮಂತ್ರಿಮಂಡಲದಿಂದ ಕೈಬಿಡಬೇಕು. ರಾಜೀನಾಮೆ ಪಡೆಯುವವರೆಗೆ ಬಿಜೆಪಿ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾದ ಜಗದೀಶ ಶೆಟ್ಟರ್‌, ಕೆ.ಎಸ್‌.ಈಶ್ವರಪ್ಪ,ಸಂಸದರಾದ ಶೋಭಾ ಕರಂದ್ಲಾಜೆ, ಪ್ರತಾಪ್‌ ಸಿಂಹ,ಮುಖಂಡರಾದ ಅರವಿಂದ ಲಿಂಬಾವಳಿ, ಬಿ.ಸೋಮಶೇಖರ್‌, ಗೋವಿಂದ ಕಾರಜೋಳ ಸೇರಿ ಶಾಸಕರು, ಮಾಜಿ ಶಾಸಕರು, ಸಂಸದರು, ಪಕ್ಷದ ಮುಖಂಡರು, ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Advertisement

ಸಿಎಂ ಸಿದ್ದರಾಮಯ್ಯ ಅವರ ವಿಧಾನಸೌಧದ ಕಚೇರಿ ಬಾಗಿಲು ಮತ್ತು ಸಚಿವ ಸಂಪುಟ ಕೊಠಡಿಯ ಬಾಗಿಲಲ್ಲಿ ಗೂಬೆ ಕೂತ ಮೇಲೆ ಏನೇನು ಘಟನೆಗಳಾಗಿವೆ ಎಂಬುದನ್ನು ಮುಖ್ಯಮಂತ್ರಿಗಳು ಅರಿಯಬೇಕು. ಮುಖ್ಯಮಂತ್ರಿಗಳು ಪ್ರಯಾಣಿಸುತ್ತಿದ್ದ ಬಸ್‌ ಕೆಟ್ಟುಹೋಗಿದ್ದು ಇದಕ್ಕೊಂದು ಉದಾಹರಣೆ. ಮುಖ್ಯಮಂತ್ರಿಗಳ ಪಾಪದ ಕೊಡ ತುಂಬಿದೆ.
– ಬಿ.ಎಸ್‌.ಯಡಿಯೂರಪ್ಪ,
ಬಿಜೆಪಿ ರಾಜ್ಯಾಧ್ಯಕ್ಷ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಚಿವ ಜಾರ್ಜ್‌ ಅವರು ಬೇಕಾದಾಗಲೆಲ್ಲ ಹಣ ಒದಗಿಸುವ ಎಟಿಎಂ ಇದ್ದಂತೆ. ಹೀಗಾಗಿ ಅವರ ರಾಜೀನಾಮೆ ಪಡೆಯುತ್ತಿಲ್ಲ. ಗಣಪತಿ ಪ್ರಕರಣದಲ್ಲಿ ಜಾರ್ಜ್‌ ಅವರಿಗೆ ಕ್ಲೀನ್‌ಚಿಟ್‌ ಕೊಡಿಸುವಲ್ಲಿ ಕೆಂಪಯ್ಯ ಪಾತ್ರವೂ ಇದೆ. ಅದಕ್ಕಿಂತ ಮುಖ್ಯವಾಗಿ ಅಂದು ಸಿಐಡಿಯಲ್ಲಿದ್ದ ಹೇಮಂತ್‌ ನಿಂಬಾಳ್ಕರ್‌ ತಮ್ಮ ಸ್ವಾರ್ಥಕ್ಕಾಗಿ ಈ ವರದಿ ನೀಡಿದ್ದಾರೆ. ಅವರ ಪತ್ನಿ ಅಂಜಲಿ ನಿಂಬಾಳ್ಕರ್‌ ಖಾನಾಪುರ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಲು ಅಣಿಯಾಗಿದ್ದಾರೆ. ಅವರಿಗೆ ಟಿಕೆಟ್‌ ಕೊಡಿಸಲು ನಿಂಬಾಳ್ಕರ್‌ ಅವರು ಜಾರ್ಜ್‌ ಪರವಾಗಿ ಬಿ ರಿಪೋರ್ಟ್‌ ಹಾಕಿಸಿದರು.
– ಜಗದೀಶ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷ ನಾಯಕ

ಶಿವಮೊಗ್ಗದಲ್ಲಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಕೂಗಿದವರ ವಿರುದಟಛಿ ಮೊಕದ್ದಮೆ ಹೂಡಲು ಅವಕಾಶ ನೀಡದ ದೇಶದ್ರೋಹಿ ಸಚಿವ ಕೆ.ಜೆ.ಜಾರ್ಜ್‌ ಅಂಥವರನ್ನಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಆಡಳಿತ ನಡೆಸುತ್ತಿದ್ದಾರೆ. ಅವರ ಮೇಲೆ ಆರೋಪ ಬಂದಾಗ ಸಿಐಡಿಯಿಂದ ಕ್ಲೀನ್‌ ಚಿಟ್‌ ಕೊಡಿಸುತ್ತಿದ್ದಾರೆ. ಇಂತಹ ಸಚಿವರು ಮತ್ತು ಮುಖ್ಯಮಂತ್ರಿ ರಾಜ್ಯದಲ್ಲಿರುವುದು ದುರ್ದೈವ.
– ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣದಲ್ಲಿ ಆರೋಪಿಯಾಗಿರುವ ಜಾರ್ಜ್‌ ಸಿಐಡಿ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬರುವ ಮೊದಲೇ ಸಿಐಡಿಯಿಂದ ಕ್ಲೀನ್‌ಚಿಟ್‌ ಪಡೆದಿದ್ದಾರೆ. ಕೆಂಪೇಗೌಡರು ಕಟ್ಟಿದ ಬೆಂಗಳೂರನ್ನು ಹಾಳು ಮಾಡಲು ಅವರನ್ನು ಸಚಿವ ಸ್ಥಾನದಲ್ಲಿ ಮುಂದುವರಿಸಲಾಗಿದೆ. ಅದಕ್ಕಾಗಿ ಜಾರ್ಜ್‌ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ರಾಜೀನಾಮೆ ನೀಡಬೇಕು.
– ವಿ. ಸೋಮಣ್ಣ, ವಿಧಾನ ಪರಿಷತ್‌ ಸದಸ್ಯ

ಮಹಿಳಾ ಮೋರ್ಚಾ ಕಾಳಜಿ ವಹಿಸಿದ್ರೆ ಬಿಜೆಪಿ ಅಧಿಕಾರಕ್ಕೆ
ಬೆಂಗಳೂರು:
“ಸಂಘಟನೆಯಲ್ಲಿ ಮುಂಚೂಣಿಯಲ್ಲಿರುವ ಬಿಜೆಪಿ ಮಹಿಳಾ ಮೋರ್ಚಾ ವಿಶೇಷ ಕಾಳಜಿ ವಹಿಸಿದರೆ 2018ರಲ್ಲಿ
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಂಡಿತ’ ಎಂದು ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷೆ ವಿಜಯ್‌ ರಾಹಟ್ಕರ್‌ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಶನಿವಾರ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಅವರು
ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ತಮ್ಮ ಸಂಪುಟದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಮೂಲಕ ದೇಶ ಕಟ್ಟುವಲ್ಲಿ ಮಹಿಳೆಯರ ಪಾತ್ರ ಕೂಡದೊಡ್ಡದು ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ. ಅದಕ್ಕೆ ಸಾಕ್ಷಿ ವಿದೇಶಾಂಗ ಹಾಗೂ ರಕ್ಷಣಾ ಖಾತೆಯನ್ನು ಸುಷ್ಮಾ ಸ್ವರಾಜ್‌, ನಿರ್ಮಲಾ ಸೀತಾರಾಮನ್‌ ಅವರಿಗೆ ನೀಡಿರುವುದು. ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಇದೇ ಪ್ರಾತಿನಿಧ್ಯ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next