Advertisement

ಜೀವನ ಯೋಗ್ಯ ನಿವೃತ್ತಿ ವೇತನಕ್ಕೆ ಆಗ್ರಹ

09:54 AM May 27, 2022 | Team Udayavani |

ಧಾರವಾಡ: ನಿವೃತ್ತಿ ಅಂಚಿನಲ್ಲಿರುವ ಬಿಸಿಯೂಟ ಕಾರ್ಮಿಕರಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಜಿಲ್ಲಾ ಘಟಕದಿಂದ ತಹಶೀಲ್ದಾರ್‌ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

Advertisement

ಯಾವುದೇ ಪರಿಹಾರ ನೀಡದೇ 12 ಸಾವಿರ ಅಕ್ಷರ ದಾಸೋಹ ಕಾರ್ಮಿಕರನ್ನು ನಿವೃತ್ತಿಗೊಳಿಸಿ ಹೊರಡಿಸಿರುವ ಸರ್ಕಾರದ ಆದೇಶ ಕೂಡಲೇ ಹಿಂಪಡೆಯಬೇಕು. ನಿವೃತ್ತಿಯಾಗುವ ಅಕ್ಷರ ದಾಸೋಹ ಕಾರ್ಮಿಕರಿಗೆ ಜೀವನ ಯೋಗ್ಯ ನಿವೃತ್ತಿ ವೇತನ ಅಥವಾ ಕನಿಷ್ಟ 5 ಲಕ್ಷ ಇಡಿಗಂಟು ಘೋಷಣೆ ಮಾಡಬೇಕು. ನಿವೃತ್ತಿಯಾಗುವ ಅಕ್ಷರ ದಾಸೋಹ ಕಾರ್ಮಿಕರು ಇಚ್ಛಿಸಿದಲ್ಲಿ ಅವರನ್ನೇ ಕೆಲಸದಲ್ಲಿ ಮುಂದುವರಿಸಬೇಕು. ಅಂಗನವಾಡಿ ಮಾದರಿಯಂತೆ ಅವರ ಹುದ್ದೆಯಲ್ಲಿ ಅವರ ಕುಟುಂಬ ಸದಸ್ಯರನ್ನು ನೇಮಿಸಿ ಮುಂದುವರಿಸಬೇಕು ಎಂದು ಆಗ್ರಹಿಸಲಾಯಿತು.

ಜಿಲ್ಲಾಧ್ಯಕ್ಷ ಗಂಗಾಧರ ಬಡಿಗೇರ ಮಾತನಾಡಿ, ಸುಮಾರು 20 ವರ್ಷಗಳ ಕಾಲ ರಾಜ್ಯಾದ್ಯಂತ ಮಕ್ಕಳ ಹಸಿವನ್ನು ನೀಗಿಸಿದ ಬಿಸಿಯೂಟ ಕಾರ್ಯಕರ್ತೆಯರಿಗೆ ನಿವೃತ್ತಿ ವೇತನ ಅಥವಾ ಇಡಿಗಂಟು ಯಾವುದೊಂದೂ ಕೊಡದೇ ಕೆಲಸದಿಂದ ಹೊರಹಾಕಲು ಸರ್ಕಾರ ಆದೇಶ ನೀಡಿರುವುದು ಅತ್ಯಂತ ಅಮಾನವೀಯ. ಇತರೆ ಸ್ಕೀಮ್‌ ಕಾರ್ಯಕರ್ತೆಯರಿಗೆ ಕೆಲಸ ಬಿಟ್ಟರೆ ಅಥವಾ ನಿವೃತ್ತಿಯಾದರೆ ಇಡಿಗಂಟು ನೀಡಲಾಗುತ್ತಿದೆ. ಆದರೆ ಇವರಿಗೆ ಮಾತ್ರ ಯಾವುದೇ ಪರಿಹಾರ ನಿಗದಿ ಮಾಡಿಲ್ಲ. ಆದ್ದರಿಂದ ಈ ಕಾರ್ಯಕರ್ತೆಯರ ವಿಶ್ರಾಂತ ಜೀವನದ ಭದ್ರತೆಗಾಗಿ, ಜೀವನ ಯೋಗ್ಯ ನಿವೃತ್ತಿ ವೇತನ ಅಥವಾ 5 ಲಕ್ಷ ಇಡಿಗಂಟು ನಿಗದಿ ಮಾಡಿ ಘೋಷಣೆ ಮಾಡಬೇಕು. ಈ ನಿರ್ಧಾರ ಮಾಡುವವರೆಗೆ ಕೆಲಸದಿಂದ ತೆಗೆದು ಹಾಕದೇ ಸೇವೆಯಲ್ಲಿ ಮುಂದುವರಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಉಪಾಧ್ಯಕ್ಷೆ ಭುವನಾ ಬಳ್ಳಾರಿ, ಮುಖಂಡರಾದ ರುದ್ರಕಾಂತ್‌ ವಾಣಿ, ಸದಸ್ಯರಾದ ರಾಜಮ್ಮ, ಜೀನತ್‌ ಹಾರ್ನಳ್ಳಿ, ರತ್ನಾ ಕಮ್ಮಾರ, ಗೌರವ್ವ ಮಳೆಪ್ಪನವರ, ಪಾರ್ವತಿ ಕಿಳ್ಳೀಕೇತರ, ರಮೇಜಾ ಶೇಕ್‌, ಶಶಿಕಲಾ ಕಾಲವಾಡ, ರತ್ನಾ ದೇವರಹುಬ್ಬಳ್ಳಿ, ಡಿ.ಎಂ ಅಡಗವಾಡಿ, ರೇಣುಕಾ ಸಿಂದೋಗಿ, ಲಕ್ಷ್ಮೀ ಹಬ್ಬಣ್ಣವರ್‌, ನೀಲವ್ವ ಪಟದಾರಿ ಇನ್ನಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next