Advertisement

ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕಲು ಆಗ್ರಹ

05:26 PM Aug 23, 2018 | Team Udayavani |

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂಕಿನ ಮಲಪ್ರಭಾ ನದಿ ವ್ಯಾಪ್ತಿಯ ಮರಳು ಬ್ಲಾಕ್‌ನಲ್ಲಿ ಅಕ್ರಮ ವ್ಯವಹಾರ ಮಿತಿ ಮೀರಿದೆ. ಸರ್ಕಾರ ನಿಗದಿಪಡಿಸಿದ ದರಕ್ಕೆ ಮರಳು ಕೊಡದೇ ಲೀಜ್‌ದಾರರು ಅಕ್ರಮದಲ್ಲಿ ತೊಡಗಿದ್ದಾರೆ. ಈ ಕುರಿತು ಜಿಲ್ಲಾಡಳಿತ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಲವು ಬಾರಿ ಹೇಳಿದರು ಪ್ರಯೋಜನವಾಗುತ್ತಿಲ್ಲ. ಕೂಡಲೇ ಮರಳು ಅಕ್ರಮ ದಂಧೆಗೆ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಜೈ ಹನುಮಾನ ಟಿಪ್ಪರ್‌ ಮಾಲೀಕರ ಸಂಘದ ಅಧ್ಯಕ್ಷ ಮಹಾದೇವ ದೊಡಮನಿ ಎಚ್ಚರಿಕೆ ನೀಡಿದರು. 

Advertisement

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾದಾಮಿ ತಾಲೂಕಿನ ಜಾಲಿಹಾಳ, ನಶಬಿ, ಹೆಬ್ಬಳ್ಳಿ ಬಳಿ ಇರುವ ಮರಳು ಬ್ಲಾಕ್‌ನಲ್ಲಿ ಸರ್ಕಾರ ನಿಗದಿಪಡಿಸಿದ ರೂ. 4800 ಮೊತ್ತಕ್ಕೆ ಕೊಡದೇ ಮನಸೋ ಇಚ್ಛೆಯಂತೆ ಮರಳು ಕೊಡುತ್ತಿದ್ದಾರೆ. ಒಂದು ಕ್ಯೂಬಿಕ್‌ ಮೀಟರ್‌ ಗೆ ಸರ್ಕಾರ ದರ ನಿಗದಿ ಮಾಡಿದ್ದರೂ 12 ಸಾವಿರದಿಂದ 14 ಸಾವಿರ ಮೊತ್ತಕ್ಕೆ ಅಕ್ರಮವಾಗಿ ಮರಳು ಮಾರಾಟ ಮಾಡಲಾಗುತ್ತಿದೆ. ಇದರಿಂದ ಸಾಮಾನ್ಯ ಜನರಿಗೆ ಮರಳು ಸಿಗದಂತಾಗಿದೆ ಎಂದರು.

ಮರಳು ಬ್ಲಾಕ್‌ನ ಲೀಜ್‌ ಪಡೆದಿರುವ ವ್ಯಕ್ತಿಗಳು, ತಮಗೆ ಬೇಕಾದವರಿಗೆ ಬೇಕಾದಂತೆ ದರ ನೀಡುತ್ತಿದ್ದು, ಬಾಗಲಕೋಟೆಯಿಂದ ಹೋಗುವ ನಮ್ಮ ಟಿಪ್ಪರ್‌ಗಳಿಗೆ ನಾಲ್ಕೈದು ದಿನಗಳಾದರೂ ಮರಳು ಕೊಡಲ್ಲ. ಅದು ಹೆಚ್ಚಿನ ಬೆಲೆಗೆ ನೀಡುತ್ತಿದ್ದಾರೆ. ಇದರಿಂದ ಮುಳುಗಡೆ ಸಮಸ್ಯೆಯಿಂದ ನಲುಗಿದ ಸಂತ್ರಸ್ತರು ಮನೆ ಕಟ್ಟಿಕೊಳ್ಳಲು ಪರದಾಡುವಂತಾಗಿದೆ ಎಂದು ತಿಳಿಸಿದರು.

ಲೀಜ್‌ದಾರರು, ಸರ್ಕಾರ ನಿಗದಿಪಡಿಸಿದ ದರದಂತೆ ಮರಳು ಕೊಡಲು ಜಿಲ್ಲಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕು. ಅಲ್ಲದೇ ಮರಳು ಬ್ಲಾಕ್‌ಗಳಲ್ಲಿ ಕಡ್ಡಾಯವಾಗಿ ಸಿಸಿ ಕ್ಯಾಮರಾ ಅಳವಡಿಸಬೇಕು. ಬಾಗಲಕೋಟೆ ಮುಳುಗಡೆ ಜಿಲ್ಲೆಯಾಗಿದ್ದರಿಂದ ಮನೆ ಕಟ್ಟಿಕೊಳ್ಳುವ ಸಾಮಾನ್ಯ ಜನರು ಹೆಚ್ಚಿದ್ದಾರೆ. ಅವರಿಗೆ ಕಡಿಮೆ ದರದಲ್ಲಿ ಮರಳು ಸಿಗುವಂತಾಗಬೇಕು. ಇಲ್ಲದಿದ್ದರೆ ನಮ್ಮ ಟಿಪ್ಪರಗಳ ಸಮೇತ ಜಿಲ್ಲಾಡಳಿತದ ಎದುರು ಧರಣಿ ನಡೆಸುತ್ತೇವೆ. ಮರಳು ಅಕ್ರಮ ದಂಧೆ ತಡೆಯುವ ಜತೆಗೆ ಸರ್ಕಾರ ನಿಗದಿಪಡಿಸಿದ ದರಕ್ಕೆ ಮರಳು ಕೊಡುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಜೈ ಹನುಮಾನ ಟಿಪ್ಪರ ಮಾಲೀಕರ ಸಂಘದ ಉಪಾಧ್ಯಕ್ಷ ಗೋಪಾ ಲಮಾಣಿ, ಎಚ್‌.ಆರ್‌. ಹುಣಸಿಕಟ್ಟಿ, ಸುರೇಶ ಲಮಾಣಿ, ಎಸ್‌.ಬಿ. ಪುರಾಣಿಕಮಠ ಮುಂತಾದವರು ಉಪಸ್ಥಿತರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next