ಬೇಲೂರು: ಪಟ್ಟಣದ ಬಾರ್ ಮಾಲಿಕರು ತಾಲೂಕಿನ ದಲಿತ ಜನಾಂಗ ವಾಸಿಸುವ ಕಾಲೋನಿಗಳಿಗೆ ಅಕ್ರಮವಾಗಿ ಮದ್ಯಸಾಗಿಸಿ, ಚಿಲ್ಲರೆ ಅಂಗಡಿಗಳಲ್ಲಿ ಮಾರಾಟ ಮಾಡಿಸು ತ್ತಿದ್ದರೂ ಅಬಕಾರಿ ಇಲಾಖೆ ಅಧಿಕಾರಿಗಳು ಕ್ರಮಕೈಗೊಳ್ಳದೆ ಮೌನ ವಹಿಸಿದ್ದಾರೆ. ಶಾಸಕರು ಕೂಡಲೇ ಅಕ್ರಮಮದ್ಯ ಮಾರಾಟ ತಡೆಗೆ ಕ್ರಮಕೈಗೊಳ್ಳಬೇಕು ಎಂದು ದಲಿತ ಮುಖಂಡ ಈಶ್ವರ ಪ್ರಸಾದ್ ಆಗ್ರಹಿಸಿದರು.
ಸಮಾಜ ಕಲ್ಯಾಣ ಇಲಾಖೆ ಸಭಾಂಗಣದಲ್ಲಿನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಹಿತ ರಕ್ಷಣ ಸಮಿತಿ ಸಭೆಯಲ್ಲಿ ಮಾತನಾಡಿ,ತಾಲೂಕಿನ ಪ್ರತಿ ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ. ಇದಕ್ಕೆ ಪಟ್ಟಣದಲ್ಲಿರುವಬಾರ್ ಮಾಲಿಕರು ಭಯವಿಲ್ಲದೆ ಹಳ್ಳಿ ಹಳ್ಳಿಗಳಿಗೆ ಮದ್ಯ ಸರಾಬರಾಜು ಮಾಡುತ್ತಿದ್ದಾರೆ. ಇದರಿಂದ ಹಳ್ಳಿಗಳಲ್ಲಿ ಜನ ಜೀವನ ವ್ಯತ್ಯಯವಾಗಿದ್ದು,ಅಬಕಾರಿ ಇಲಾಖೆ ಅಧಿಕಾರಿಗಳು ಅಕ್ರಮ ಮದ್ಯಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಹೇಳಿದರು.
ಕೋಳಿ ಅಂಗಡಿ ತೆರವುಗೊಳಿಸಿ: ತಾಪಂ ಮಾಜಿ ಸದಸ್ಯ ಮಂಜುನಾಥ್ ಮಾತನಾಡಿ, ಪಟ್ಟಣದ ಅಂಬೇಡ್ಕರ್ ಭವನದ ಪಕ್ಕದಲ್ಲಿ ಕೋಳಿ ಅಂಗಡಿಗಳಿದ್ದು, ಈ ಹಿಂದೆ ಶಾಸಕ ಕೆ.ಎಸ್. ಲಿಂಗೇಶ್ ಭವನದ ಪಕ್ಕದಲ್ಲಿರುವ ಕೋಳಿ ಅಂಗಡಿ ತೆರವುಗೊಳಿಸುವ ಭರವಸೆ ನೀಡಿದ್ದರು. ಕೂಡಲೇ ಕೋಳಿ ಅಂಗಡಿ ತೆರವಿಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜನರ ಹಿತ ಕಾಯಲು ಬದ್ಧ: ಶಾಸಕ ಕೆ.ಎಸ್. ಲಿಂಗೇಶ್ ಮಾತನಾಡಿ, ತಾಲೂಕಿನಲ್ಲಿ ಜನರ ಹಿತ ಕಾಯಲು ಬದ್ಧವಾಗಿದ್ದು, ಅಭಿವೃದ್ಧಿಗೆ ಸರ್ಕಾರದ ಹಲವು ಯೋಜನೆಗಳಿಂದ ಸೌಲಭ್ಯ ನೀಡಲಾಗಿದೆ. ಇಲಾಖೆ ಅಧಿಕಾರಿಗಳು ಸರ್ಕಾರಿ ಸೌಲಭ್ಯಗಳನ್ನು ಫಲಾನುಭವಿಗಳಿಗೆ ವಿತರಿಸಬೇಕು. ಸರ್ಕಾರದಿಂದ ಸುಮಾರು 23 ಕೋಟಿ ರೂ. ವೆಚ್ಚದಲ್ಲಿ ಅಂಬೇಡ್ಕರ್, ಇಂದಿರಾ ವಸತಿ ಶಾಲೆಗಳ ಕಾಮಾಗಾರಿ ಪ್ರಗತಿಯಲ್ಲಿದೆ. ಪಟ್ಟಣದಲ್ಲಿ ಅಂಬೇಡ್ಕರ್ ಭವನ ಸೇರಿದಂತೆ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ತಹಶೀಲ್ದಾರ್ ಮೋಹನ್‌ಕುಮಾರ್, ವೃತ್ತ ನಿರೀಕ್ಷರ ಯೋಗೀಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿದೇಶಕ ಮೋಹನ್ ಕುಮಾರ್, ಪುರಸಭೆ ಅಧ್ಯಕ್ಷ ಸಿ.ಎನ್.ದಾನಿ, ಜಿಪಂ ಮಾಜಿ ಸದಸ್ಯೆ ಲತಾ ಮಂಜೇಶ್ವರಿ, ತಾಪಂ ಮಾಜಿ ಅಧ್ಯಕ್ಷ ಪರ್ವತಯ್ಯ, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ಎಂ.ಅರ್.ವೆಂಕಟೇಶ್, ಮುಖಂಡ ಮರಿಯಪ್ಪ ಸೇರಿದಂತೆ ಅನೇಕರು ಹಾಜರಿದ್ದರು.