Advertisement

ಗೋದಿಗೆ ವಿದೇಶದಲ್ಲಿ ಬೇಡಿಕೆ ಸೃಷ್ಟಿಸಿದ ಯುದ್ಧ

11:33 AM May 10, 2022 | Team Udayavani |

ಬೆಂಗಳೂರು: ಉಕ್ರೇನ್‌ ಮತ್ತು ರಷ್ಯಾ ಯುದ್ಧ ಸಂಘರ್ಷ ಆಹಾರ ಧಾನ್ಯಗಳ ಬೆಲೆ ಏರಿಕೆ ಮೇಲೂ ಪ್ರಭಾವ ಬೀರಿದ್ದು, ಅಡುಗೆ ಎಣ್ಣೆ ಸೇರಿದಂತೆ ವಿವಿಧ ಸಾಮಗ್ರಿಗಳ ದರ ಏರಿಕೆ ಬೆನ್ನಲ್ಲೇ ಇದೀಗ ಗೋದಿ ಹಿಟ್ಟಿನ ಬೆಲೆ ಏರಿಕೆಯಾಗಿದೆ. ವಿದೇಶದಲ್ಲಿ ಗೋದಿ ಹಿಟ್ಟಿನ ಅಭಾವ ಸೃಷ್ಟಿಯಾಗಿದ್ದು ಬೇಡಿಕೆ ಹೆಚ್ಚಾಗಿದೆ.

Advertisement

ಇದರಿಂದಾಗಿ ಗೋದಿ ಹಿಟ್ಟಿನ ಬೆಲೆಯಲ್ಲಿ ಪ್ರತಿ ಕೆ.ಜಿ.ಗೆ 2 ರೂ. ಹೆಚ್ಚಳವಾಗಿದೆ. ಯಶವಂತಪುರ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 29ರೂ.ಗೆ ಮಾರಾಟವಾಗುತ್ತಿದ್ದ ಗೋದಿ ಹಿಟ್ಟು ಇದೀಗ 31 ರೂ.ಗೆ ಮಾರಾಟವಾಗುತ್ತಿದೆ. ಒಂದು ವಾರದಿಂದ ಗೋದಿಹಿಟ್ಟಿನ ಬೆಲೆಯಲ್ಲಿ ದಿಢೀರ್‌ ಏರಿಕೆ ಕಂಡು ಬಂದಿದೆ. ಈ ಹಿಂದೆ ಉಕ್ರೇನ್‌ನಿಂದ ಭಾರತಕ್ಕೆ ಆಮದು ಆಗುತ್ತಿದ್ದ ಸೂರ್ಯಕಾಂತಿ ಎಣ್ಣೆ ಪೂರೈಕೆ ನಿಂತ ಹಿನ್ನೆಲೆಯಲ್ಲಿ ಹಲವು ಅಡುಗೆ ಎಣ್ಣೆಯ ದರಗಳಲ್ಲಿ ದಿಢೀರ್‌ ಏರಿಕೆ ಕಂಡು ಬಂದಿತ್ತು. ಇದೀಗ ಗೋದಿ ಹಿಟ್ಟಿನ ಬೆಲೆಯಲ್ಲೂ 2 ರೂ.ಏರಿಕೆ ಆಗಿದ್ದು ಮುಂದಿನ ದಿನಗಳಲ್ಲಿ ಇನ್ನೂ ಕೆಲವು ವಸ್ತುಗಳ ಬೆಲೆಯಲ್ಲಿ ಏರಿಕೆ ಆಗುವ ಸಾಧ್ಯತೆ ಇದೆ. ರಷ್ಯಾ ಮತ್ತು ಉಕ್ರೇನ್‌ ಯುದ್ಧ ಸಂಘರ್ಷದ ಹಿನ್ನೆಲೆಯಲ್ಲಿ ಭಾರತದ ಗೋದಿಗೆ ಬಹಳಷ್ಟು ಬೇಡಿಕೆ ಇದೆ.

ಆ ಹಿನ್ನೆಲೆಯಲ್ಲಿ ಭಾರತದ ಗೋದಿ ದಾಸ್ತಾನುದಾರರು ವಿದೇಶಗಳಿಗೆ ರಫ್ತು ಮಾಡುತ್ತಿರುವ ಕಾರಣ ನಮ್ಮಲ್ಲಿ ಗೋದಿ ಅಭಾವ ಉಂಟಾಗಿದೆ ಎಂದು ಎಫ್ಕೆಸಿಸಿಐನ ಉಪಾಧ್ಯಕ್ಷ ರಮೇಶ್ಚಂದ್ರ ಲಹೋಟಿ ಹೇಳುತ್ತಾರೆ. ಗೋದಿ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳ ಕಂಡು ಬಂದಿದೆ. ವಿದೇಶಗಳಿಗೆ ಅಧಿಕ ಪ್ರಮಾಣ ದಲ್ಲಿ ಗೋದಿ ರಫ್ತಾಗುತ್ತಿದೆ. ಈ ಹಿಂದೆ ಭಾರತದಿಂದ ಹೊರ ರಾಷ್ಟ್ರಗಳಿಗೆ ಗೋದಿ ರಫ್ತು ಆಗುತ್ತಿರಲ್ಲಿ. ಉಕ್ರೇನ್‌ ಹೆಚ್ಚಿನ ಗೋದಿ ಬೆಳೆದು ಇತರ ರಾಷ್ಟ್ರಗಳಿಗೆ ಪೂರೈಕೆ ಮಾಡುತ್ತಿತ್ತು. ಆದರೆ ಅಲ್ಲಿ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ಅಲ್ಲಿಂದ ಗೋದಿ ವಿವಿಧ ದೇಶಗಳಿಗೆ ಪೂರೈಕೆ ಆಗುತ್ತಿಲ್ಲ. ಆ ಹಿನ್ನೆಲೆಯಲ್ಲಿ ಗೋದಿ ಕೊರತೆ ಉಂಟಾಗಿದ್ದು ಬೇಡಿಕೆ ಉಳ್ಳ ದೇಶಗಳಿಗೆ ಭಾರತದಿಂದ ಗೋದಿ ಪೂರೈಕೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡುತ್ತಾರೆ.

ವಿದೇಶಗಳಿಗೆ ರಫ್ತು: ವಿವಿಧ ದೇಶಗಳಲ್ಲಿ ಈಗಾಗಲೇ ಭಾರಿ ಪ್ರಮಾಣದಲ್ಲಿ ಬೇಡಿಕೆ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಹೊಸ ಗೋದಿ ಬೆಳೆ ಶೇ.16ರಿಂದ 18ರಷ್ಟು ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಾಗಿದೆ ಎಂದು ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡುತ್ತಾರೆ. ಪಂಜಾಬ್‌, ಉತ್ತರ ಪ್ರದೇಶ, ಹರಿಯಾಣ ಸೇರಿದಂತೆ ಉತ್ತರ ಭಾರತದ ರಾಜ್ಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಗೋದಿ ಬೆಳೆಯಲಾಗುತ್ತದೆ. ಈ ಭಾಗದಿಂದಲೇ ನೇರವಾಗಿ ವಿದೇಶಗಳಿಗೆ ಈಗಾಗಲೇ ಪೂರೈಕೆ ಆಗಿದೆ ಎನ್ನುತ್ತಾರೆ.

ಉಕ್ರೇನ್‌-ರಷ್ಯಾ ಯುದ್ಧ ಸಂಘರ್ಷದ ಹಿನ್ನೆಲೆಯಲ್ಲಿ ವಿವಿಧ ರಾಷ್ಟ್ರಗಳಲ್ಲಿ ಗೋದಿ ಅಭಾವ ಉಂಟಾಗಿದೆ.ಆ ಹಿನ್ನೆಲೆಯಲ್ಲಿ ಇದೀಗ ಭಾರತ ಗೋದಿಗೆ ಬೇಡಿಕೆ ಬಂದಿದೆ. ಭಾರತ ವಿದೇಶಗಳಿಗೆ ಗೋದಿ ರಫ್ತು ಮಾಡುವ ಪ್ರಮಾಣ ಶೂನ್ಯವಾಗಿತ್ತು. ಇದೀಗ ಶೇ.16 ರಷ್ಟು ಗೋದಿ ವಿದೇಶಗಳಿಗೆ ಪೂರೈಕೆ ಆಗಿದೆ. -ರಮೇಶ್ಚಂದ್ರ ಲಹೋಟಿ, ಎಫ್ಕೆಸಿಸಿಐ ಉಪಾಧ್ಯಕ್ಷ

Advertisement

 

-ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next